ಮಂಗಳವಾರ, ಡಿಸೆಂಬರ್ 10, 2019
18 °C
ಮೆಜೆಸ್ಟಿಕ್‌, ಗಾಂಧಿನಗರ, ಕೆ.ಆರ್. ಮಾರ್ಕೆಟ್‌ ಸುತ್ತಮುತ್ತ ರಸ್ತೆಗಳ ಅಭಿವೃದ್ಧಿಗೆ ಮುಂದಾದ ಬಿಬಿಎಂಪಿ

ಆರು ರಸ್ತೆಗಳಿಗೆ ಟೆಂಡರ್‌ ಶ್ಯೂರ್‌ ಸ್ಪರ್ಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆರು ರಸ್ತೆಗಳಿಗೆ ಟೆಂಡರ್‌ ಶ್ಯೂರ್‌ ಸ್ಪರ್ಶ

ಬೆಂಗಳೂರು: ಮೆಜೆಸ್ಟಿಕ್‌, ಗಾಂಧಿನಗರ ಹಾಗೂ ಕೆ.ಆರ್‌.ಮಾರ್ಕೆಟ್‌ ಸುತ್ತಮುತ್ತಲಿನ ಪ್ರಮುಖ ರಸ್ತೆಗಳನ್ನು ಬಿಬಿಎಂಪಿ ‘ಟೆಂಡರ್‌ ಶ್ಯೂರ್‌ ಮಾದರಿ’ಯಲ್ಲಿ ಅಭಿವೃದ್ಧಿಪಡಿಸಲು ಮುಂದಾಗಿದೆ.

ಕೆಂಪೇಗೌಡ ಬಸ್‌ ನಿಲ್ದಾಣ, ಕೆಂಪೇಗೌಡ ಮೆಟ್ರೊ ರೈಲು ನಿಲ್ದಾಣ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ, ಬಿಎಂಟಿಸಿ ಬಸ್‌ ನಿಲ್ದಾಣ ಒಂದೇ ಕಡೆ ಇರುವುದರಿಂದ ಲಕ್ಷಾಂತರ ಪ್ರಯಾಣಿಕರು ಸುತ್ತಮುತ್ತಲಿನ ರಸ್ತೆ ಮತ್ತು ಪಾದಚಾರಿ ಮಾರ್ಗಗಳನ್ನು ಬಳಸುತ್ತಾರೆ. ಈ ನಿಲ್ದಾಣಗಳ ಸುತ್ತಮುತ್ತಲಿನ ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಪಾಲಿಕೆಯ ಮುಖ್ಯ ಎಂಜಿನಿಯರ್‌ (ರಸ್ತೆ) ಕೆ.ಟಿ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘6 ರಸ್ತೆಗಳನ್ನು ಅಂದಾಜು ₹130 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಟೆಂಡರ್‌ ಪ್ರಕ್ರಿಯೆ  ಅಂತಿಮಗೊಳಿಸಲಾಗಿದೆ. ‘ಅಮೃತ ಕನ್‌ಸ್ಟ್ರಕ್ಷನ್‌ ಪ್ರೈವೆಟ್‌ ಲಿಮಿಟೆಡ್‌’ ಸಂಸ್ಥೆ ಕಾಮಗಾರಿ ಗುತ್ತಿಗೆಗೆ ಆಯ್ಕೆಯಾಗಿದೆ. ಸಚಿವ ಸಂಪುಟ ಒಪ್ಪಿಗೆ ನೀಡಿದ ನಂತರ ಕಾಮಗಾರಿ ಆರಂಭವಾಗಲಿದೆ. ಕಾಮಗಾರಿ ಪೂರ್ಣಗೊಳಿಸಲು 2 ವರ್ಷ ಕಾಲಮಿತಿ ನಿಗದಿಪಡಿಸಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ಸುಬೇದಾರ್‌ ಛತ್ರ, ಗುಬ್ಬಿ ತೋಟದಪ್ಪ ರಸ್ತೆ,  ಧನ್ವಂತರಿ ರಸ್ತೆ, ಹನುಮಂತಪ್ಪ ರಸ್ತೆ, ಕೆ.ಆರ್‌.ಮಾರುಕಟ್ಟೆ ಸುತ್ತಮುತ್ತಲ ಮುಖ್ಯ ರಸ್ತೆ ಮತ್ತು ಅಡ್ಡ ರಸ್ತೆ, ಅಣ್ಣಮ್ಮ ದೇವಸ್ಥಾನದಿಂದ ಕನಕದಾಸ ವೃತ್ತದವರೆಗಿನ ಮುಖ್ಯ ರಸ್ತೆ, ಸಪ್ನಾ ಬುಕ್‌ಹೌಸ್‌ ಎದುರಿನ ರಸ್ತೆ, ಯಾತ್ರಿ ನಿವಾಸ್‌ ರೆಸ್ಟೋರಂಟ್‌ ಮುಂದಿನ ರಸ್ತೆ, ಸಾಯಿರಾಂ ರೆಸಿಡೆನ್ಸಿ, ಸಂಗಂ ಲಾಡ್ಜ್‌, ಗಾಂಧಿನಗರ ಸುತ್ತಮುತ್ತಲಿನ ಎಲ್ಲ ಅಡ್ಡ ರಸ್ತೆಗಳು ಟೆಂಡರ್‌ ಶ್ಯೂರ್‌ ಮಾನದಂಡದಲ್ಲಿ ಅಭಿವೃದ್ಧಿಯಾಗಲಿವೆ.

ಈ ರಸ್ತೆಗಳಲ್ಲಿ ಯೂನಿಫಾರಂ ಕ್ಯಾರೇಜ್‌ ವೇ (ಏಕಅಳತೆಯ ವಾಹನ ಸಂಚಾರ ಪಥ) ನಿರ್ಮಿಸುವ ಜತೆಗೆ, ಕಾಂಕ್ರೀಟ್‌ ಅಥವಾ ವೈಟ್‌ ಟಾಪಿಂಗ್‌ ಮಾಡಲಾಗುತ್ತದೆ. ಮಳೆ ನೀರಿಗೆ, ಕುಡಿಯುವ ನೀರಿನ ಪೈಪ್‌ಲೈನ್‌ಗೆ, ವಿದ್ಯುತ್‌ ಹಾಗೂ ದೂರವಾಣಿ ಕೇಬಲ್‌ಗೆ ಪ್ರತ್ಯೇಕ ಡಕ್ಟ್‌ ನಿರ್ಮಿಸುತ್ತೇವೆ. ಜತೆಗೆ ವಿಶಾಲ ಫುಟ್‌ಪಾತ್‌, ಕಾರು ಮತ್ತು ಬೈಕ್‌ ಪಾರ್ಕಿಂಗ್‌ ಸೌಲಭ್ಯ ಕಲ್ಪಿಸುತ್ತೇವೆ. ಸೈಕಲ್‌ ಸವಾರರಿಗೂ ಪ್ರತ್ಯೇಕ ಸೈಕಲ್‌ ಪಥ, ಬಸ್‌ ಬೇ, ಬಸ್‌ ತಂಗುದಾಣ, ಮೀಡಿಯನ್ಸ್‌ ಕೂಡ ಇರಲಿವೆ ಎಂದು ಅವರು ಮಾಹಿತಿ ನೀಡಿದರು.

ರಸ್ತೆ ಕುಗ್ಗಿಸಬೇಡಿ: ವಾಣಿಜ್ಯ ಚಟುವಟಿಕೆ ಕೇಂದ್ರಿತ ರಸ್ತೆಗಳು ವಾಹನ ದಟ್ಟಣೆಯಿಂದ ನಲುಗುತ್ತಿವೆ. ಇಂತಹ ರಸ್ತೆಗಳನ್ನು ಟೆಂಡರ್‌ ಶ್ಯೂರ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸುವಾಗ ರಸ್ತೆಯ ವಿಸ್ತೀರ್ಣ ಕುಗ್ಗಿಸಬಾರದು. ವಾಹನ ಸಂಚಾರಕ್ಕೆ ಮೀಸಲಾದ ರಸ್ತೆಯನ್ನು ವಿಶಾಲ ಪಾದಚಾರಿ ಮಾರ್ಗ ನುಂಗಿದರೆ ಟ್ರಾಫಿಕ್‌ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತದೆ ಎನ್ನುತ್ತಾರೆ ನಗರದ ಸಾರಿಗೆ ತಜ್ಞ ಎಸ್‌. ನರೇಶ್‌ ಕುಮಾರ್‌.

***

ರಸ್ತೆ ಅಭಿವೃದ್ಧಿಪಡಿಸುವಾಗ ವಾಹನ ಮತ್ತು ಪಾದಚಾರಿಗಳ ಸಂಖ್ಯೆ ಪರಿಗಣಿಸಿ ಯೋಜನೆ ರೂಪಿಸಬೇಕು. ಹಣದ ಲೂಟಿಗಾಗಿ  ಟೆಂಡರ್‌ ಶ್ಯೂರ್‌ ಮಾದರಿ ಹೇರಬಾರದು

ಎಸ್‌. ನರೇಶ್‌ ಕುಮಾರ್, ಸಾರಿಗೆ ಪರಿಣತ

***

ಟೆಂಡರ್‌ ಶ್ಯೂರ್‌ನಡಿ 6 ರಸ್ತೆಗಳನ್ನು ವಿಶ್ವದರ್ಜೆ ಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಆಗಸ್ಟ್‌ನಲ್ಲಿ ಕಾಮಗಾರಿ ಆರಂಭಿಸುವ ನಿರೀಕ್ಷೆ ಇದೆ

ಕೆ.ಟಿ.ನಾಗರಾಜ್‌, ಪಾಲಿಕೆ ಮುಖ್ಯ ಎಂಜಿನಿಯರ್‌

ಪ್ರತಿಕ್ರಿಯಿಸಿ (+)