ಬುಧವಾರ, ಫೆಬ್ರವರಿ 19, 2020
24 °C

ಒಂದೇ ಸೂರಿನಡಿ ವಿವಿಧ ತಳಿಯ ‘ಸಸ್ಯ ರಾಶಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಒಂದೇ ಸೂರಿನಡಿ ವಿವಿಧ ತಳಿಯ ‘ಸಸ್ಯ ರಾಶಿ’

ಶಿವಮೊಗ್ಗ: ತೋಟಗಾರಿಕೆ ಹಾಗೂ ಮನೆಯ ಮುಂದಿನ ಕೈತೋಟದಲ್ಲಿ ಬೆಳೆಯುವ ಅಲಂಕಾರಿಕ ಗಿಡಗಳು ಗ್ರಾಹಕರಿಗೆ ಒಂದೇ ಸೂರಿನಡಿ ದೊರೆಯುತ್ತಿವೆ ಎಂದು ಜಿಲ್ಲಾ ಪಂಚಾಯ್ತಿ ಸಿಇಒ ಡಾ.ಕೆ.ರಾಕೇಶ್ ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು. ತೋಟಗಾರಿಕಾ ಇಲಾಖೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಸ್ಯಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಾಗರಿಕರು ಸಸ್ಯಸಂತೆ ಕಾರ್ಯಕ್ರಮದ ಪ್ರಯೋಜನ ಪಡೆದರೆ ಎಲ್ಲರ ಮನೆ ಕೈತೋಟಗಳು ಹಸಿರಿನಿಂದ ನಳನಳಿಸಲಿವೆ. ಮನೆ ಎದುರು ಸುಂದರ ವಾತಾವರಣ ನಿರ್ಮಾಣವಾಗಲಿದೆ. 

ನಿತ್ಯ ಉಪಯೋಗಿಸುವ ತರಕಾರಿ, ಸಾಂಬಾರ, ಹೂವು ಬೆಳೆ ಬೆಳೆಯಲು ಸಸ್ಯಸಂತೆ ಉತ್ತೇಜನ ನೀಡುತ್ತದೆ. ತೋಟದ ಮಣ್ಣಿನ ಗುಣ, ವಾತಾವರಣಕ್ಕೆ ಹೊಂದಿಕೊಳ್ಳುವ ತೋಟಗಾರಿಕಾ ಬೆಳೆಗಳ ಸಸ್ಯಗಳನ್ನು ರೈತರು ಈ ಸಂತೆಯಲ್ಲಿ ಖರೀದಿಸಬಹುದು. ಬೆಳೆ ಪದ್ಧತಿಯ ಮಾಹಿತಿಯೂ ಉಚಿತವಾಗಿ ಲಭ್ಯವಿದೆ ಎಂದರು.

ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಡಾ.ಎಂ. ವಿಶ್ವನಾಥ್ ಮಾತನಾಡಿ, ಸಸ್ಯಸಂತೆಯಲ್ಲಿ 80ಕ್ಕೂ ಹೆಚ್ಚಿನ ಬಗೆಯ ಹಾಗೂ ಉತ್ತಮ ತಳಿಯ ತೋಟಗಾರಿಕೆ ಕಸಿ ತಳಿಗಳು, ವಿಭಿನ್ನ ಸಸಿಗಳು ಲಭ್ಯ ಇವೆ. ಕಾಳುಮೆಣಸು, ಮಾವು, ಸಪೋಟ, ತೆಂಗು, ಕರಿಬೇವು, ನಿಂಬೆ, ಸೀಬೆ, ಅಲಂಕಾರಿಕ ಗಿಡ, ಸಾಂಬಾರ ಗಿಡ, ಹೂವು, ಹಣ್ಣಿನ ಗಿಡಗಳನ್ನು ಸಾರ್ವಜನಿಕರಿಗೆ ಅತ್ಯಂತ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸಸ್ಯಸಂತೆಯಲ್ಲಿ ಜೈವಿಕ ಪೀಡೆ ನಾಶಕಗಳು ದೊರೆಯುತ್ತವೆ. ಇಲಾಖೆ ನಿಗದಿಪಡಿಸಿದ ದರದಲ್ಲಿ ಜೈವಿಕ ಗೊಬ್ಬರ ಮಾರಾಟ ಮಾಡಲಾಗುತ್ತಿದೆ. ಇನ್ನೂ ವೈವಿಧ್ಯಮಯ ಗಿಡಗಳಿಗೆ ರೈತರು ಬೇಡಿಕೆಗೆ ಸಲ್ಲಿಸಿದರೆ ಅವುಗಳನ್ನು ನರ್ಸರಿಯಲ್ಲಿ ಬೆಳೆಸಿ, ನಂತರ ಒದಗಿಸಲಾಗುವುದು ಎಂದರು.

ರೈತರು, ಸಾರ್ವಜನಿಕರಿಗೆ ತೋಟಗಾರಿಕೆ ಬೆಳೆ, ಕೈತೋಟ ಮತ್ತು ತಾರಸಿ ತೋಟಗಳ ನಿರ್ಮಾಣ, ನಿರ್ವಹಣೆ ಕುರಿತು ತಾಂತ್ರಿಕ ಮಾಹಿತಿ ನೀಡಲಾಗುವುದು. ರೈತರು ಹಾಗೂ ಆಸಕ್ತರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ರಿಯಾಯಿತಿ ದರದಲ್ಲಿ  ಗಿಡಗಳು
ಸಸ್ಯಸಂತೆಯಲ್ಲಿ ಸ್ಥಳೀಯ ಅಡಿಕೆ ತಳಿ, ತೆಂಗು- ಅರಸೀಕೆರೆ, ತಿಪಟೂರು ಟಾಲ್, ಕಾಳುಮೆಣಸು- ಮಲ್ಲಿಗೆಸರ, ಕರಿಮುಂಡ, ಪನ್ನಿಯೂರ್ 1 ಹಾಗೂ 4, ಕೊಕೊ ಎಫ್, ಮಲ್ಲಿಕಾ, ರಸಪೂರಿ, ಬಾದಾಮಿ, ಅಪ್ಪೆಮಿಡಿ ಮಾವಿನ ತಳಿ, ಸಪೋಟ, ಕ್ರಿಕೆಟ್‌ಬಾಲ್ ತಳಿಯ ಗಿಡ, ಅಂಗಾಂಶ ಕೃಷಿ ಬಾಳೆ ಸಸಿ, ಅಣಬೆ ಬೀಜ ಮತ್ತು ರೆಡಿ ಟು ಫ್ರೂಟ್ ಅಣಬೆ ಬ್ಯಾಗ್‌, ಜೈವಿಕ ಗೊಬ್ಬರ ಮತ್ತು ನಿಯಂತ್ರಕ, ಎರೆಹುಳು ಗೊಬ್ಬರ, ಬಯೊಮಿಕ್ಸ್‌ಗಳು ರಿಯಾಯಿತಿ ದರದಲ್ಲಿ ದೊರೆಯಲಿವೆ.
ಜುಲೈ 14ರವರೆಗೆ 10 ದಿನಗಳ ಕಾಲ ಸಸ್ಯಸಂತೆ ನಡೆಯುತ್ತದೆ.

* * 

ನಗರ, ಗ್ರಾಮೀಣ ಪ್ರದೇಶದ ಜನರಿಗೆ ಅತ್ಯಂತ ಅಗತ್ಯ ಇರುವ ಎಲ್ಲ ರೀತಿಯ ಗಿಡಗಳನ್ನೂ ಸಸ್ಯಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ.
–ಡಾ.ಕೆ.ರಾಕೇಶ್ ಕುಮಾರ್,
ಸಿಇಒ, ಜಿಲ್ಲಾ ಪಂಚಾಯ್ತಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)