ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗುಮಾನ ಬಿಟ್ಟು ಸೌಟು ಹಿಡಿದರು!

Last Updated 5 ಜುಲೈ 2017, 5:27 IST
ಅಕ್ಷರ ಗಾತ್ರ

ದಾವಣಗೆರೆ: ಎಂಎಸ್ಸಿ, ಬಿಎಸ್ಸಿ, ಬಿಸಿಎ, ಬಿಎ, ಬಿ.ಇಡಿ, ಡಿ.ಇಡಿ, ಡಿಪ್ಲೊಮಾ, ಹೀಗೆ ಪದವಿ, ಸ್ನಾತಕೋತ್ತರ ಪದವಿ ಮಾಡಿದ  ಅಭ್ಯರ್ಥಿಗಳು ಕೈಯಲ್ಲಿ ಸೌಟು ಹಿಡಿದು ಅಡುಗೆ ತಯಾರಿಯಲ್ಲಿ ಮಗ್ನರಾಗಿದ್ದರು. ಬಗೆಬಗೆಯ ಖಾದ್ಯ ತಯಾರಿಸುತ್ತಲೇ ಭವಿಷ್ಯ ಕಟ್ಟಿಕೊಳ್ಳುವ ತವಕದಲ್ಲಿದ್ದರು.

ಕುಂದವಾಡ ರಸ್ತೆಯಲ್ಲಿರುವ ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿ ಮಂಗಳವಾರ ಅಡುಗೆ ಸಹಾಯಕರ ಹುದ್ದೆಗೆ ನಡೆದ ಪ್ರಾಯೋಗಿಕ ಪರೀಕ್ಷೆಯಲ್ಲಿ ಕಂಡುಬಂದ ದೃಶ್ಯಗಳಿವು.

ಚನ್ನಗಿರಿ ತಾಲ್ಲೂಕಿನ ಕರೆಕಟ್ಟೆ ಗ್ರಾಮದ ಕಾಶೀನಾಥ್‌ ಎಂ.ಎಸ್ಸಿ (ಭೌತ ವಿಜ್ಞಾನ) ವ್ಯಾಸಂಗ ಮಾಡಿದ್ದಾರೆ. ಎಸ್ಸೆಸ್ಸೆಲ್ಸಿಯಲ್ಲಿ ಶೇ 71ಅಂಕ ಪಡೆದಿದ್ದಾರೆ. ಆದರೂ, ಅಡುಗೆ ಮಾಡುವವರ ಹಾಗೂ ಸಹಾಯಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರು.

‘ಉನ್ನತ ವಿದ್ಯಾಭ್ಯಾಸ ಪಡೆದರೂ ಉದ್ಯೋಗ ಸಿಕ್ಕಿಲ್ಲ. ಈಗಾಗಲೇ ಐಎಎಸ್‌, ಕೆಎಎಸ್‌, ಪಿಡಿಒ ಸೇರಿದಂತೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದೇನೆ. ನೌಕರಿ ಸಿಗುವವರೆಗೂ ಕಾಯಲು ಸಾಧ್ಯವಿಲ್ಲ. ‘ಡಿ’ ದರ್ಜೆಯ ನೌಕರಿಯಾದರೂ ಸಿಗಲಿ’ ಎಂದು ಅರ್ಜಿ ಹಾಕಿದ್ದೇನೆ ಎಂದರು ಕಾಶೀನಾಥ್‌.

ಬಿಎಸ್ಸಿ, ಬಿಇಡಿ ಪದವಿ ಪಡೆದು ಇನ್ಫೊಸಿಸ್ ಕಂಪೆನಿಯ ಬಿಪಿಒ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ರಮೇಶ್‌ ಮಾತನಾಡಿ, ‘ಬೆಂಗಳೂರಿನಲ್ಲಿ ದುಡಿಮೆ ಸಾಲುವುದಿಲ್ಲ. ಖಾಸಗಿ ಕಂಪೆನಿಗಳಲ್ಲಿ ಕೆಲಸದ ಒತ್ತಡ ಹೆಚ್ಚು. ಪೋಷಕರು ಹಾಗೂ ಪತ್ನಿ ದಾವಣಗೆರೆಯಲ್ಲೇ ಇರುವುದರಿಂದ ಇಲ್ಲಿಯೇ ಕೆಲಸ ಮಾಡಲು ನಿರ್ಧರಿಸಿದ್ದೇನೆ. ಮೊದಲ ದಿನ ಪುಳಿಯೋಗರೆ ಮಾಡಿದ್ದೆ. ಇಂದು (ಮಂಗಳವಾರ) ಅಡುಗೆ ಮಾಡಲು ಕಾಯುತ್ತಿದ್ದೇನೆ’ ಎಂದರು.

ಸಂತೆಬೆನ್ನೂರಿನ ಕಾಕನೂರು ಗ್ರಾಮದ ಜೆ.ಡಿ.ವೀಣಾ ಎರಡು ತಿಂಗಳ ಹಸುಗೂಸಿನೊಂದಿಗೆ ಬಂದು ಅಡುಗೆ ತಯಾರಿಸಿದರು. ಬಿ.ಎಸ್ಸಿ, ಡಿ.ಇಡಿ ಓದಿರುವ ವೀಣಾ ಎಸ್ಸೆಸ್ಸೆಲ್ಸಿಯಲ್ಲಿ ಶೇ 79 ಅಂಕ ಪಡೆದಿದ್ದಾರೆ. ಸದ್ಯ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿದ್ದು, ಸರ್ಕಾರಿ ನೌಕರಿ ಪಡೆಯುವ ಆಶಾಭಾವ ಹೊಂದಿದ್ದಾರೆ. ‘ಎರಡೂ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದೇನೆ, ಮೊದಲ ದಿನ ರಸಂ ಮಾಡಿದ್ದೆ. ಎರಡನೇ ದಿನ ಉಪ್ಪಿಟ್ಟು ಮಾಡಿದ್ದೇನೆ’ ಎನ್ನುತ್ತಾರೆ ಅವರು.

ಚನ್ನಗಿರಿ ತಾಲ್ಲೂಕಿನ ಗೋಪನಾಳ್‌ ಗ್ರಾಮದ ಎಂಎಸ್ಸಿ, ಬಿ,ಇಡಿ ಪದವೀಧರ ಉಮೇಶ್‌, ‘ತರಕಾರಿ ಪಲ್ಯ ಮಾಡಿ ಗಮನ ಸೆಳೆದರು. ಉಚ್ಚಂಗಿದುರ್ಗ ಸಮೀಪದ ದಿದ್ದಿಗೆ ಗ್ರಾಮದ ಸಂತೋಷ್‌ ನಾಯ್ಕ್‌ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್‌) ಮಾಡಿದ್ದು, ಮುದ್ದೆ ಮಾಡಿದರು. ಹಗರಿಬೊಮ್ಮನ ಹಳ್ಳಿಯ ಡಿ.ಇಡಿ ಪದವೀಧರೆ ಲಕ್ಷ್ಮೀ ತರಕಾರಿ ಸಾಂಬಾರ್ ಮಾಡಿದರು. ಚನ್ನಗಿರಿ ತಾಲ್ಲೂಕಿನ ಮದಮಂಜಿ ತಾಂಡಾದ ಕೃಷಿ ಡಿಪ್ಲೊಮಾ ಮಾಡಿರುವ  ಸುಪ್ರೀತಾ  ಪುಳಿಯೋಗರೆ ಮಾಡಿದರು.

ಪ್ರತಿ ಕೊಠಡಿಗೆ ಒಬ್ಬರು ನೋಡಲ್ ಅಧಿಕಾರಿ, ಹೋಂ ಸೈನ್ಸ್ ವಿಭಾಗದ ಪ್ರಾಂಶುಪಾಲರು, ವಿಸ್ತರಣಾಧಿಕಾರಿ ಹಾಗೂ ವಾರ್ಡನ್‌ ನೇಮಿಸಲಾಗಿದೆ. ಇದೇ ಮೊದಲ ಬಾರಿಗೆ ರಾಜ್ಯದಾದ್ಯಂತ ಏಕಕಾಲದಲ್ಲಿ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಮನ್ಸೂರ್ ಪಾಷಾ ಹೇಳಿದರು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ನಜ್ಮಾ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಬೇಬಿ ಸುನೀತಾ, ಪ್ರಾಂಶುಪಾಲರು, ಮೇಲ್ವಿಚಾರಕರು ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯ್ತಿ ಸಿಇಒ ಅಶ್ವತಿ ಅಡುಗೆಯ ರುಚಿ ನೋಡಿದರು.

ಸ್ನಾತಕೋತ್ತರ ಪದವೀಧರರೂ ಅರ್ಜಿದಾರರು
ಹಾಸ್ಟೆಲ್‌ಗಳಲ್ಲಿ ಅಡುಗೆ ಮಾಡುವವರ ಹಾಗೂ ಸಹಾಯಕರ ಹುದ್ದೆಗಳನ್ನು ಸರ್ಕಾರ ‘ಡಿ’ ದರ್ಜೆ ಹುದ್ದೆಗಳು ಎಂದು ಪರಿಗಣಿಸಿದ್ದು ಉತ್ತಮ ವೇತನ ನೀಡುತ್ತಿದೆ. ಹಾಗಾಗಿ, ಕನಿಷ್ಠ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ನಿಗದಿಮಾಡಿದ್ದರೂ ಪದವಿ, ಸ್ನಾತಕೋತ್ತರ ಪದವಿ ಪಡೆದವರೂ ಅರ್ಜಿ ಹಾಕಿದ್ದಾರೆ ಎನ್ನುತ್ತಾರೆ ಅಧಿಕಾರಿಗಳು.

ಪ್ರಾಯೋಗಿಕ  ಪರೀಕ್ಷೆ
ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಖಾಲಿಯಿರುವ ‘ಡಿ’ ಗ್ರೂಪ್‌ ದರ್ಜೆಯ 92 ಅಡುಗೆ ಸಹಾಯಕರ ಹುದ್ದೆಗಳಿಗೆ 227 ಉದ್ಯೋಗಾಕಾಂಕ್ಷಿಗಳು ಹಾಜರಾಗಿ ಪ್ರಾಯೋಗಿಕ ಪರೀಕ್ಷೆ ಎದುರಿಸಿದರು. ಇವರ ಪೈಕಿ 1:3 ಅನುಪಾತದಲ್ಲಿ ಆಯ್ಕೆ ನಡೆಯಲಿದೆ ಎಂದು ನೋಡೆಲ್‌ ಅಧಿಕಾರಿ ನಜ್ಮಾ ಮಾಹಿತಿ ನೀಡಿದರು.

ಅಡುಗೆ ಮಾಡಲು ಮೂರು ಕೊಠಡಿ ವ್ಯವಸ್ಥೆ ಮಾಡಿ, ಒಂದು ಕೊಠಡಿಯಲ್ಲಿ 20 ಮಂದಿಗೆ ಸ್ಥಳಾವಕಾಶ ಮಾಡಿಕೊಡಲಾಗಿತ್ತು. ಜತೆಗೆ, ಗ್ಯಾಸ್‌ ಸ್ಟೌ, ಅಡುಗೆ ಮಾಡಲು ಪದಾರ್ಥಗಳನ್ನು ನೀಡಿ 30 ನಿಮಿಷ ಕಾಲಾವಕಾಶ ನೀಡಲಾಗಿತ್ತು ಎಂದು ಅವರು ತಿಳಿಸಿದರು.

ಎಷ್ಟು ಹುದ್ದೆಗಳು; ಅರ್ಜಿ ಹಾಕಿದವರು ಎಷ್ಟು
56ಅಡುಗೆ ಸಹಾಯಕರ  ಹುದ್ದೆ

2,197ಅರ್ಜಿ ಸಲ್ಲಿಸಿದವರು

92ಅಡುಗೆ ಸಹಾಯಕರ ಹುದ್ದೆ

4,688 ಅರ್ಜಿ ಸಲ್ಲಿಸಿದವರು

1:3ಅನುಪಾತದಲ್ಲಿಆಯ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT