ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದವಾಡ ಕೆರೆಗೆ ಜಾಕ್‌ವೆಲ್‌ ನೀರು

Last Updated 5 ಜುಲೈ 2017, 5:31 IST
ಅಕ್ಷರ ಗಾತ್ರ

ದಾವಣಗೆರೆ: ಮುಂಗಾರು ಕ್ಷೀಣವಾಗಿರುವುದರಿಂದ ಭದ್ರಾ ನಾಲೆಗೆ ನೀರು ಹರಿಯುವುದು ತಡವಾಗುತ್ತಿದೆ. ಹೀಗಾಗಿ ಹರಿಹರ ಸಮೀಪದ ರಾಜನಹಳ್ಳಿ ಜಾಕ್‌ವೆಲ್‌ನಿಂದಲೇ ನೀರು ಹರಿಸಿ ಕುಂದವಾಡ ಕೆರೆ ತುಂಬಿಸಲು ಪಾಲಿಕೆ ಮುಂದಾಗಿದೆ.

ರಾಜನಹಳ್ಳಿ ಜಾಕ್‌ವೆಲ್‌ನಿಂದ ಕುಂದವಾಡ ಕೆರೆಗೆ ಕೊಳವೆ ಮಾರ್ಗ ಅಳವಡಿಸಿದ್ದರೂ ಪೂರ್ಣ ಪ್ರಮಾಣದಲ್ಲಿ ಅದನ್ನು ಬಳಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ರಾಜನಹಳ್ಳಿ ಪಂಪ್‌ಹೌಸ್‌ನಿಂದ ಹಗಲೂ ರಾತ್ರಿ ನೀರು ಸರಬರಾಜು ಮಾಡಲಾಗುತ್ತಿದೆ.

ಕುಂದವಾಡ ಕೆರೆ ಅಭಿವೃದ್ಧಿಪಡಿಸಿದಾಗಿನಿಂದಲೂ ಭದ್ರಾ ನಾಲೆ ನೀರೇ ಅದಕ್ಕೆ ಆಧಾರವಾಗಿತ್ತು. ಇಷ್ಟು ವರ್ಷ ಕೆರೆಯ ಒಡಲು ತುಂಬಿ ಹರಿಯುವಷ್ಟು ನೀರು ನಾಲೆಯಲ್ಲಿ ಹರಿಯುತ್ತಿತ್ತು. ಆದರೆ, ಸತತ ಬರ ಎದುರಾಗಿದ್ದರಿಂದ ಕಳೆದ ವರ್ಷ ಕೆರೆ ಭರ್ತಿಮಾಡಲು ಸಾಕಾಗುವಷ್ಟು ನೀರು ನಾಲೆಯಲ್ಲಿ ಸಿಗಲಿಲ್ಲ. ಹೀಗಾಗಿ ಕಳೆದ ಬೇಸಿಗೆಯಲ್ಲಿ ನಗರದಲ್ಲಿ ನೀರಿಗೆ ಹಾಹಾಕಾರ ಸೃಷ್ಟಿಯಾಗಿತ್ತು.ಇಂತಹ ಸ್ಥಿತಿ ಮತ್ತೆ ಬಾರದಿರಲಿ ಎಂದು ಮುನ್ನೆಚ್ಚರಿಕೆ ವಹಿಸಿರುವ ಪಾಲಿಕೆ ಅಧಿಕಾರಿಗಳು ಕುಂದವಾಡ ಕೆರೆ ತುಂಬಿಸಲು ರಾಜನಹಳ್ಳಿ ಜಾಕ್‌ವೆಲ್‌ನತ್ತ ಚಿತ್ತ ನೆಟ್ಟಿದ್ದಾರೆ.

2 ಕೋಟಿ ಲೀಟರ್‌ ನೀರು ಪೂರೈಕೆ: ರಾಜನಹಳ್ಳಿ ಜಾಕ್‌ವೆಲ್‌ನಿಂದ ನಿತ್ಯವೂ 2 ಕೋಟಿ ಲೀಟರ್‌ ನೀರನ್ನು ನಗರಕ್ಕೆ ಪೂರೈಕೆ ಮಾಡಲಾಗುತ್ತಿದೆ. ಜಾಕ್‌ ವೆಲ್‌ನಿಂದ ಎರಡು ಕೊಳವೆ ಮಾರ್ಗಗಳ ಮೂಲಕ ಮೊದಲು ಬಾತಿ ಜಲ ಶುದ್ಧೀಕರಣ ಕೇಂದ್ರಕ್ಕೆ ನೀರು ಹರಿಸಲಾಗುತ್ತಿದೆ. ಅಲ್ಲಿಂದ ಅರ್ಧದಷ್ಟು ನೀರನ್ನು ಶುದ್ಧೀಕರಿಸಿ ನೇರವಾಗಿ ನಗರಕ್ಕೆ ಸರಬರಾಜು ಮಾಡಲಾಗುತ್ತಿದೆ. ಉಳಿದ ನೀರನ್ನು ಕುಂದವಾಡ ಕೆರೆಗೆ ಹರಿಬಿಡಲಾಗುತ್ತಿದೆ.

ಕುಂದವಾಡ ಕೆರೆಯಿಂದ 20 ಕಿ.ಮೀ ದೂರದಲ್ಲಿರುವ ರಾಜನಹಳ್ಳಿ ಜಾಕ್‌ವೆಲ್‌ನಲ್ಲಿ 1,000 ಎಚ್‌.ಪಿ ಸಾಮರ್ಥ್ಯದ ಎರಡು ಹಾಗೂ 500 ಎಚ್‌.ಪಿ ಸಾಮರ್ಥ್ಯದ ಮೂರು ಮೋಟಾರ್‌ಗಳಿವೆ. ಡಿಸೆಂಬರ್‌ ಕೊನೆವರೆಗೂ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಇದ್ದೇ ಇರುತ್ತದೆ. ನಿರಂತರವಾಗಿ ನೀರು ಪಂಪ್‌ ಮಾಡಿದರೆ ಖಂಡಿತವಾಗಿಯೂ ಕುಂದವಾಡ ಕೆರೆ ತುಂಬಿಸಬಹುದು ಎಂದು ವಿಶ್ವಾಸದಿಂದ ಹೇಳುತ್ತಾರೆ ನಗರ ಪಾಲಿಕೆ ನೀರು ಸರಬರಾಜು ವಿಭಾಗದ ಎಇಇ ಮಂಜುನಾಥ.

‘ಕುಂದವಾಡ ಕೆರೆಯಲ್ಲಿ ಸಂಗ್ರಹವಾಗುವ ನೀರನ್ನು 18ನೇ ವಾರ್ಡ್‌ನಿಂದ 41ನೇ ವಾರ್ಡ್‌ವರೆಗೆ ಪೂರೈಕೆ ಮಾಡಬಹುದು. ಸದ್ಯಕ್ಕೆ ಬಾತಿಯಿಂದಲೇ ನೇರವಾಗಿ ನೀರು ಪೂರೈಕೆ ಮಾಡಲಾಗುತ್ತಿದೆ. ಕುಂದವಾಡ ಕೆರೆಯ ನೀರನ್ನು ಬಳಸಿಕೊಳ್ಳುತ್ತಿಲ್ಲ. ವಿದ್ಯುತ್‌ ವ್ಯತ್ಯಯ ಇಲ್ಲವೇ ಕೊಳವೆ ಮಾರ್ಗದಲ್ಲಿ ತಾಂತ್ರಿಕ ತೊಂದರೆಯಾದರೆ ಮಾತ್ರ ಕುಂದವಾಡ ಕೆರೆಯ ನೀರನ್ನು ಸರಬರಾಜು ಮಾಡಲು ನಿರ್ಧರಿಸಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ ಮಂಜುನಾಥ.

‘ಕುಂದವಾಡ ಕೆರೆಯಲ್ಲಿ 240 ಕೋಟಿ ಲೀಟರ್‌ ನೀರು ಸಂಗ್ರಹಿಸಬಹುದು. ಇಷ್ಟು ನೀರು ನಾಲ್ಕು ತಿಂಗಳುಗಳಿಗೆ ಸಾಕಾಗುತ್ತದೆ. ಮುಂದೆ ನಾಲೆ ನೀರು ಸಿಕ್ಕರೆ ಇನ್ನಷ್ಟು ನೀರನ್ನು ಟಿ.ವಿ ಸ್ಟೇಷನ್‌ ಕೆರೆಯಲ್ಲಿ ಸಂಗ್ರಹಿಸಬಹುದು. ಸಾಧ್ಯವಾದರೆ ಕುಂದವಾಡ ಕೆರೆಗೂ ಪೂರೈಕೆ ಮಾಡುತ್ತೇವೆ’ ಎನ್ನುತ್ತಾರೆ ಅವರು.

ಬಾತಿಯಿಂದಲೇ ನೀರು ಪೂರೈಕೆ ಯಾಗುತ್ತಿರುವುದರಿಂದ ನಗರದಲ್ಲಿರುವ ಪಾಲಿಕೆಗೆ ಸೇರಿದ ಕೊಳವೆಬಾವಿಗಳಿಂದ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಲಾಗಿದೆ. ಅಲ್ಪ ಪ್ರಮಾಣದಲ್ಲಿ ಮಳೆಯಾಗುತ್ತಿರುವುದರಿಂದ ನೀರಿನ ಬೇಡಿಕೆಯೂ ಸ್ವಲ್ಪ ಪ್ರಮಾಣದಲ್ಲಿ ತಗ್ಗಿದೆ ಎಂದು ಹೇಳುತ್ತಾರೆ ಮಂಜುನಾಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT