ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ 300 ವಿದ್ಯಾರ್ಥಿಗಳ ದಾಖಲಾತಿ!

Last Updated 5 ಜುಲೈ 2017, 5:44 IST
ಅಕ್ಷರ ಗಾತ್ರ

ಹೊಳಲ್ಕೆರೆ: ‘ಖಾಸಗಿ ಶಾಲೆಗಳ ಅಬ್ಬರದಲ್ಲಿ ಸರ್ಕಾರಿ ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುವುದಿಲ್ಲ. ಅಲ್ಲಿ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಇದಕ್ಕೆಂದೇ ಪೋಷಕರು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವುದಿಲ್ಲ’ ಎಂದು ಮೂಗು ಮುರಿಯುವವರೇ ಹೆಚ್ಚು.

ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಇಲ್ಲಿನ  ಸರ್ಕಾರಿ ಶಾಲೆಯೊಂದರಲ್ಲಿ  ವಿದ್ಯಾರ್ಥಿಗಳ  ದಾಖಲಾತಿ 300ರ ಗಡಿ ದಾಟುತ್ತಿದೆ. ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಎದುರು ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ಹಿರಿಮೆಗೆ ಪಾತ್ರವಾಗಿದೆ. ಈ ಮೂಲಕ ಇದು ತಾಲ್ಲೂಕಿನಲ್ಲೇ ಅತಿಹೆಚ್ಚು ವಿದ್ಯಾರ್ಥಿಗಳಿರುವ ಸರ್ಕಾರಿ ಪ್ರಾಥಮಿಕ ಶಾಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಖಾಸಗಿ ಶಾಲೆಯಿಂದ 50 ವಿದ್ಯಾರ್ಥಿಗಳು: ತಾಲ್ಲೂಕಿನ ವಿವಿಧೆಡೆ ಖಾಸಗಿ ಶಾಲೆಗಳಲ್ಲಿ ಓದುತ್ತಿದ್ದ ಸುಮಾರು 50 ವಿದ್ಯಾರ್ಥಿಗಳು ಈ ಸರ್ಕಾರಿ ಶಾಲೆಗೆ ದಾಖಲಾತಿ ಪಡೆದಿದ್ದಾರೆ. ತಾಲ್ಲೂಕಿನ ಮಲಸಿಂಗನಹಳ್ಳಿ, ಶಿರಾಪನಹಳ್ಳಿ, ಚೀರನಹಳ್ಳಿ, ಶಿವಲಿಂಗಪ್ಪ ನಗರ, ಅವಳಿಹಟ್ಟಿ, ಹೊಳಲ್ಕೆರೆ ಲಂಬಾಣಿ ಹಟ್ಟಿ, ಕುಡಿನೀರಕಟ್ಟೆ ಲಂಬಾಣಿ ಹಟ್ಟಿ, ಲೋಕದೊಳಲು ಸೇರಿದಂತೆ ದೂರದ ಗ್ರಾಮಗಳಿಂದಲೂ ವಿದ್ಯಾರ್ಥಿಗಳು ಇಲ್ಲಿಗೆ ಬರುತ್ತಾರೆ. ಕಳೆದ ವರ್ಷ 258 ವಿದ್ಯಾರ್ಥಿಗಳು ಶಾಲೆಯಲ್ಲಿ ಓದುತ್ತಿದ್ದರು ಎನ್ನುತ್ತಾರೆ ಮುಖ್ಯಶಿಕ್ಷಕಿ ಬಿ.ಎಚ್.ಗಾಯತ್ರಿ.

‘ನಾವು ಯಾವುದೇ ಖಾಸಗಿ ಶಾಲೆಗಿಂತ ಕಡಿಮೆ ಇಲ್ಲದಂತೆ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸುತ್ತೇವೆ. ಕ್ರೀಡೆ, ಪ್ರವಾಸ, ವಾರ್ಷಿಕೋತ್ಸವ ಮತ್ತಿತರ ಸಹಪಠ್ಯ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತೇವೆ. ವಿದ್ಯಾರ್ಥಿಗಳ ಬಗ್ಗೆ ವೈಯಕ್ತಿಕ ಗಮನ ಕೊಡುತ್ತೇವೆ. 6ನೇ ತರಗತಿಯಲ್ಲಿ ಎರಡು ಸೆಕ್ಷನ್ ಮಾಡಿ ಬೋಧನೆ ಮಾಡುತ್ತಿದ್ದೇವೆ. ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್, ಇಂಗ್ಲಿಷ್ ಕಾರ್ನರ್, ವಿಜ್ಞಾನ ಪ್ರಯೋಗಾಲಯ ಸೌಲಭ್ಯಗಳಿವೆ. ಇದರಿಂದ ಹೆಚ್ಚು ವಿದ್ಯಾರ್ಥಿಗಳು ದಾಖಲಾಗಿದ್ದಾರೆ’ ಎಂದು ಶಿಕ್ಷಕ ಆರ್.ರುದ್ರಪ್ಪ ಹೇಳುತ್ತಾರೆ.

ಕನ್ನಡ, ಆಂಗ್ಲ ಮಾಧ್ಯಮ
ಶಾಲೆಯಲ್ಲಿ ಒಂದರಿಂದ 7ನೇ ತರಗತಿಯವರೆಗೆ ಕನ್ನಡ, 6 ಮತ್ತು 7ನೇ ತರಗತಿಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಬೋಧನೆ ಮಾಡಲಾಗುತ್ತಿದೆ. ಒಂದರಿಂದ ಐದನೇ ತರಗತಿಯವರೆಗೆ 124, ಆರನೇ ತರಗತಿಗೆ 91, ಏಳನೇ ತರಗತಿಗೆ 71 ಸೇರಿದಂತೆ ಈಗಾಗಲೇ 286 ವಿದ್ಯಾರ್ಥಿಗಳು ದಾಖಲಾಗಿದ್ದಾರೆ!
ಶಾಲೆಗೆ ಇನ್ನೂ 20 ವಿದ್ಯಾರ್ಥಿಗಳು ಹಾಜರಾಗುತ್ತಿದ್ದು, ಅವರು ಹಿಂದೆ ಓದುತ್ತಿದ್ದ ಶಾಲೆಯಿಂದ ವರ್ಗಾವಣೆ ಪತ್ರ ಬರಬೇಕಿದೆ.

9 ಶಿಕ್ಷಕರು
ಶಾಲೆಯಲ್ಲಿ ಒಟ್ಟು 16 ಕೊಠಡಿಗಳಿದ್ದು, ವಿಷಯ ಶಿಕ್ಷಕರು ಸೇರಿದಂತೆ 9 ಶಿಕ್ಷಕರು ಕರ್ತವ್ಯದಲ್ಲಿದ್ದಾರೆ.

* * 

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಸಿಗುವುದಿಲ್ಲ ಎಂಬುದು ತಪ್ಪು ಕಲ್ಪನೆ. ಈ ಶಾಲೆಗೆ 300 ವಿದ್ಯಾರ್ಥಿಗಳು ದಾಖಲಾಗಿರುವುದೇ ಇದಕ್ಕೆ ಉತ್ತಮ ಉದಾಹರಣೆ.
ಡಿ.ಎ.ತಿಮ್ಮಣ್ಣ
ಕ್ಷೇತ್ರ ಶಿಕ್ಷಣಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT