ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ನಿರ್ಮಿಸಲು ಮುಂದಾದ ಗ್ರಾಮಸ್ಥರು

Last Updated 5 ಜುಲೈ 2017, 5:53 IST
ಅಕ್ಷರ ಗಾತ್ರ

ಹುಣಸಗಿ: ಗ್ರಾಮಸ್ಥರ ಕಾರ್ಯಕ್ಕೆ ಸಂಘ, ಸಂಸ್ಥೆಗಳ ಸಹಾಯ, ಸಹಕಾರ, ಮಾರ್ಗದರ್ಶನ ಸಿಕ್ಕರೆ ಸಾಧನೆ ಸಾಧ್ಯ ಎನ್ನುವುದಕ್ಕೆ ಕೋಳಿಹಾಳ ಗ್ರಾಮ ಸಾಕ್ಷಿಯಾಗಿದೆ.
ಯಾದಗಿರಿ ಜಿಲ್ಲೆಯ ಹುಣಸಗಿ ಸಮೀಪದ ಕೋಳಿಹಾಳ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ.

ಈ ಗ್ರಾಮದ  ಕೂಗಳತೆ ದೂರದಲ್ಲಿ ಸುಮಾರು 10 ಸಾವಿರ ಕ್ಯೂಸೆಕ್ ನೀರು ಹರಿಸುವ ಸಾಮರ್ಥ್ಯದ ನಾರಾಯಣಪುರ ಎಡದಂಡೆ ಮುಖ್ಯ ಕಾಲುವೆ ಹರಿದು ಹೋಗಿದ್ದರೂ ಪ್ರತಿ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಪರದಾಡುವ ಪರಿಸ್ಥಿತಿ ಮಾತ್ರ ತಪ್ಪಿಲ್ಲ. ಇಂಥ ಗ್ರಾಮದಲ್ಲಿ ಈಗ ಕೆರೆ ಅಭಿವೃದ್ಧಿ ಕಾರ್ಯಗಳು ನಡೆದಿದೆ.

ಗ್ರಾಮಸ್ಥರ ನೇತೃತ್ವದಲ್ಲಿ ನಡೆದಿರುವ ಈ ಭಗೀರಥ ಪ್ರಯತ್ನಕ್ಕೆ ಧರ್ಮಸ್ಥಳ ಗ್ರಾಮೀಣಾ ಭಿವೃದ್ಧಿ ಸಂಸ್ಥೆ ಕೈಜೋಡಿಸಿದೆ. ಇದರಿಂದ ಕೆರೆ ನಿರ್ಮಿಸುವ ಕಾರ್ಯಕ್ಕೆ ಮತ್ತಷ್ಟೂ ಬಲ ಬಂದಿದ್ದು ಗ್ರಾಮಸ್ಥರ ಹರ್ಷಕ್ಕೆ ಕಾರಣವಾಗಿದೆ.

ಕೆರೆ ನಿರ್ಮಾಣಕ್ಕೆ ಯೋಜನೆ ರೂಪಿಸಲು ತಿಂಗಳ ಹಿಂದೆ ಧರ್ಮಸ್ಥಳ ಮಂಜುನಾಥೇಶ್ವರ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಸಭೆ ನಡೆಸಿದಾಗ ಇಷ್ಟು ದೊಡ್ಡ ಕಾಮಗಾರಿ ನಡೆಸುವುದರ ಕುರಿತು ಗ್ರಾಮಸ್ಥರಲ್ಲಿ ಅನುಮಾನವಿತ್ತು.

ಕೆಲವರಿಗೆ ವಿಶ್ವಾಸವಿರಲಿಲ್ಲ. ಆದರೆ, ಕೆರೆ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ಸಲ್ಲಿಸಿದ ಬಳಿಕ ಗ್ರಾಮದ ಪ್ರಮುಖರೇ ಈ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ.

ಕೆರೆ ನಿರ್ಮಾಣದಿಂದ ನಮ್ಮ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಸಿಗಲಿದೆ. ಅಲ್ಲದೇ ಕೆಲ ಭಾಗಗಳಿಗೆ ನೀರಾವರಿ ಮಾಡಲು ಅನುಕೂಲವಾಗಲಿದೆ ಎಂದು ಗ್ರಾಮದ ಬಸನಗೌಡ ಪಾಟೀಲ ಹಾಗ ನಿಂಗಣ್ಣ ಪೂಜಾರಿ ಹೇಳುತ್ತಾರೆ.

ಅಂದಾಜು ₹12 ಲಕ್ಷ ವೆಚ್ಚ: ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಯಾದಗಿರಿ ಜಿಲ್ಲೆಯಲ್ಲಿ ಪ್ರಥಮವಾಗಿ ಗ್ರಾಮದ ಹೊರವಲ ಯದಲ್ಲಿ ಅಂದಾಜು 6 ಎಕರೆ ವಿಸ್ತೀರ್ಣದ ಪ್ರದೇಶದಲ್ಲಿ ಕೆರೆ ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಧರ್ಮಸ್ಥಳ ಸಂಸ್ಥೆ ಮಣ್ಣು ತೆಗೆಯಲು  ಅಂದಾಜು ₹12 ಲಕ್ಷ ವೆಚ್ಚ ಮಾಡಿದೆ. ಕಳೆದ 15 ದಿನಗಳಿಂದಲೂ ಕೆರೆ ನಿರ್ಮಾಣ ಕಾಮಗಾರಿ ಭರದಿಂದ ನಡೆದಿದೆ. ಶೇ 75 ರಷ್ಟು ಕಾಮಗಾರಿ ಪೂರ್ಣ ಗೊಂಡಿದೆ ಎಂದು ಕೆರೆ ನಿರ್ಮಾಣ ಕಾಮಗಾರಿಯ ಕಾರ್ಯದರ್ಶಿ ಡಿ.ಸಂದೀಪ್ ಮಾಹಿತಿ ನೀಡಿದರು.

‘ಗ್ರಾಮಸ್ಥರಿಂದ ಸುಮಾರು 50 ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ನಿತ್ಯ ಕೆರೆಯ ಮಣ್ಣು ಸಾಗಿಸುವ ಕಾರ್ಯದಲ್ಲಿ ನಿರತ ವಾಗಿವೆ. ಪ್ರತಿದಿನ ₹1 ಲಕ್ಷ ಅಂದಾಜು ಖರ್ಚು ಬರುತ್ತಿದೆ. ಈಗಾಗಲೇ 1,500ಕ್ಕೂ ಹೆಚ್ಚು ಟ್ರಿಪ್ ಮಣ್ಣು ಸಾಗಿಸಲಾಗಿದೆ’ ಎಂದು ಗ್ರಾಮದ ಹಿರಿಯ ಮುಖಂಡ ಸಿದ್ದಣ್ಣ ಸಾಹುಕಾರ, ಸಂಗನಗೌಡ ಪಾಟೀಲ ತಿಳಿಸಿದರು.

ಕೆರೆ ನಿರ್ಮಾಣದಿಂದ ಅಂತರ್ಜಲ ವೃದ್ಧಿಯಾಗುವ ಮೂಲಕ ಗ್ರಾಮದ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವಾಗಲಿದೆ ಎಂದು ಗ್ರಾಮದ ನಿವೃತ್ತ ಶಿಕ್ಷಕ ಬಸವರಾಜ ಬೆಳ್ಳಿ ಹೇಳುತ್ತಾರೆ.

* * 

ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳ ಮಂಜುನಾಥೇಶ್ವರ ಸಂಸ್ಥೆ ಮಾಡುತ್ತಿದೆ. ಕೆರೆ ಕಟ್ಟುವ ಕೆಲಸಕ್ಕೆ ಗ್ರಾಮಸ್ಥರು ತೊಡಗಿಕೊಂಡಿರುವುದು ಶ್ಲಾಘನೀಯ.
ಬಸವರಾಜಸ್ವಾಮಿ ಸ್ಥಾವರಮಠ
ಜಿಲ್ಲಾ ಪಂಚಾಯಿತಿ ಸದಸ್ಯ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT