ಸೋಮವಾರ, ಡಿಸೆಂಬರ್ 9, 2019
26 °C

ಚಪಾತಿ ಲಟ್ಟಿಸಿದ ಸ್ನಾತಕೋತ್ತರ ಪದವೀಧರರು

ಚಂದ್ರಕಾಂತ ಮಸಾನಿ Updated:

ಅಕ್ಷರ ಗಾತ್ರ : | |

ಚಪಾತಿ ಲಟ್ಟಿಸಿದ ಸ್ನಾತಕೋತ್ತರ ಪದವೀಧರರು

ಬೀದರ್: ಜಿಲ್ಲೆಯ ಹಿಂದುಳಿದ ವರ್ಗಗಳ ಇಲಾಖೆಯ(ಬಿಸಿಎಂ) ಹಾಸ್ಟೆಲ್‌ಗಳಿಗೆ ಅಡುಗೆ ಸಹಾಯಕರ ನೇಮಕಕ್ಕೆ ನಗರದ ಬಿಸಿಎಂ ಹಾಸ್ಟೆಲ್‌ನಲ್ಲಿ ಮಂಗಳವಾರ ನಡೆದ ಪ್ರಾಯೋಗಿಕ ಪರೀಕ್ಷೆಯಲ್ಲಿ ಸ್ನಾತಕೋತ್ತರ ಪದವೀಧರರು, ಪದವೀಧರರು ಹಾಗೂ ಡಿಪ್ಲೊಮಾ ಅಭ್ಯರ್ಥಿಗಳೂ ಪಾಲ್ಗೊಂಡರು. ಕೆಲ ಪುರುಷ ಅಭ್ಯರ್ಥಿಗಳು ಪ್ರಯಾಸಪಟ್ಟು ಜೋಳದ ರೊಟ್ಟಿ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು.

ಭೌತವಿಜ್ಞಾನದಲ್ಲಿ ಎಂ.ಎಸ್ಸಿ ಸ್ನಾತಕೋತ್ತರ ಪದವಿ ಪಡೆದ ಕಲಬುರ್ಗಿಯ ಅಕ್ಷತಾ ಅವರು ಪ್ರಾಯೋಗಿಕ ಪರೀಕ್ಷೆಯಲ್ಲಿ ಉಪ್ಪಿಟ್ಟು ಮಾಡಿದರೆ, ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಹಿಂದೂಸ್ತಾನಿ ಸಂಗೀತ ವಿದ್ವತ್‌ ಪರೀಕ್ಷೆಯಲ್ಲಿ ಪಾಸಾಗಿರುವ ಔರಾದ್‌ ತಾಲ್ಲೂಕಿನ ಸಂತಪುರದ ಮಹಾನಂದಾ ಬೇವಿನಕೊಪ್ಪ ಅವರು ಶೀರಾ ಸಿದ್ಧಪಡಿಸಿದರು.

ಗುಲಬರ್ಗಾ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ ಹಾಗೂ ಬಿ.ಇಡಿ ಪರೀಕ್ಷೆಯಲ್ಲಿ ಪಾಸಾಗಿರುವ ಔರಾದ್‌ನ ರಾಜಶ್ರೀ ಕೋಟಗಿರೆ ಅವರು ಸಲೀಸಾಗಿ ಚಪಾತಿ ತಯಾರಿಸಿ, ನೇಮಕಾತಿಯ ಮುಂದಿನ ಹಂತದ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಅರ್ಹತೆ ಪಡೆದರು.

ಬಿ.ಎಸ್ಸಿ, ಬಿ.ಇಡಿ ಕೋರ್ಸ್‌ ಮುಗಿಸಿದ ಭಾಲ್ಕಿ ತಾಲ್ಲೂಕಿನ ತೇಗಂಪುರದ ಆಶಾರಾಣಿ, ಬೀದರ್‌ನ ಶ್ರೀಕಾಂತ ಶರಣಪ್ಪ, ಬಿಎಎಂಎಸ್‌ ಓದುತ್ತಿರುವ ಬೀದರ್‌ ತಾಲ್ಲೂಕಿನ ಚಿಲ್ಲರ್ಗಿಯ ಮೇಘಾ ಎಚ್‌. ಅವರು ಅಡುಗೆ ಸಿದ್ಧಪಡಿಸಿ ಪರೀಕ್ಷರಿಗೆ ಕೈರುಚಿ ತೋರಿಸಿದರು.

ಪರೀಕ್ಷಕರು ಸ್ಥಳದಲ್ಲೇ ಅಭ್ಯರ್ಥಿಗಳು ಸಿದ್ಧಪಡಿಸಿದ  ಬಿಸಿ ಬಿಸಿ ಶೀರಾ, ಉಪ್ಪಿಟ್ಟು, ಸೂಸಲ ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಅಡುಗೆಯವರ ನೇಮಕಕ್ಕೆ ಸೋಮವಾರ ನಡೆದ ಪ್ರಾಯೋಗಿಕ ಪರೀಕ್ಷೆಗೆ ಹಾಜರಾದ ಪದವೀಧರರು ಮಂಗಳವಾರ ನಡೆದ ಅಡುಗೆ ಸಹಾಯಕರ ಪ್ರಾಯೋಗಿಕ ಪರೀಕ್ಷೆಗೂ ಹಾಜರಾದದ್ದು ಕಂಡು ಬಂದಿತು.

‘ಜಿಲ್ಲೆಯಲ್ಲಿ ಖಾಲಿ ಇರುವ 50 ಅಡುಗೆಯವರು ಹಾಗೂ 66 ಅಡುಗೆ ಸಹಾಯಕರ ಹುದ್ದೆಗಳಿಗೆ 5,700 ಅರ್ಜಿಗಳು ಬಂದಿವೆ.  ಸೋಮವಾರ ನಡೆದ ಪ್ರಾಯೋಗಿಕ ಪರೀಕ್ಷೆಯಲ್ಲಿ 131 ಅಭ್ಯರ್ಥಿಗಳು ಉತ್ತೀರ್ಣರಾಗಿದ್ದಾರೆ. ಮಂಗಳವಾರ 58 ಮಹಿಳೆಯರು ಹಾಗೂ 170 ಪುರುಷರು ಪ್ರಾಯೋಗಿಕ ಪರೀಕ್ಷೆ ನೀಡಿದ್ದಾರೆ’ ಎಂದು ಹಿಂದುಳಿದ ವರ್ಗಗಳ ಇಲಾಖೆಯ ಉಪ ನಿರ್ದೇಶಕ ವೆಂಕಟೇಶ ಉಗಿಬಂಡಿ ತಿಳಿಸಿದರು.

‘ಮೊದಲ ದಿನ ಮೂವರು ಎಂಜಿನಿಯರ್‌ಗಳು ಪರೀಕ್ಷೆಗೆ ಹಾಜರಾಗಿದ್ದರು. ಎರಡನೇ ದಿನ ಎಂ.ಎಸ್ಸಿ,  ಎಂ.ಎ, ಬಿ.ಎಸ್ಸಿ ಪಾಸಾದವರೇ ಅಧಿಕ ಸಂಖ್ಯೆಯಲ್ಲಿದ್ದರು’ ಎಂದು ಹೇಳಿದರು. ‘ಬೀದರ್‌ ಜಿಲ್ಲೆಯಲ್ಲಿರುವ ಶಿಕ್ಷಣ ಸಂಸ್ಥೆಗಳು ಪ್ರೌಢಶಾಲಾ ಶಿಕ್ಷಕರಿಗೆ ಹಾಗೂ ಕಾಲೇಜು ಉಪನ್ಯಾಸಕರಿಗೆ ತಿಂಗಳಿಗೆ ಕೇವಲ ₹ 3,000 ವೇತನ ಕೊಡುತ್ತವೆ. ಬೇಸಿಗೆಯಲ್ಲಿ ಮಾರ್ಚ್‌ ಹಾಗೂ ಏಪ್ರಿಲ್‌ ನಲ್ಲಿ ವೇತನ ಪಾವತಿಸುವುದಿಲ್ಲ’ ಎಂದು ಬಿ.ಎಸ್ಸಿ ಪದವೀಧರರು ತಿಳಿಸಿದರು.

ದಸರಾ ರಜಾ ಅವಧಿಯ ವೇತನವನ್ನೂ ಕಡಿತ ಮಾಡುತ್ತವೆ. ವಿದ್ಯಾರ್ಥಿಗಳಿಂದ ಪೂರ್ಣ ಶುಲ್ಕ ಪಡೆಯುತ್ತಿವೆ. ಶಿಕ್ಷಣ ಸಂಸ್ಥೆಗಳಲ್ಲೇ ಪ್ರಾಮಾಣಿಕತೆ ಉಳಿದಿಲ್ಲ. ಹೀಗಾಗಿ ಅಡುಗೆ ಸಹಾಯಕರ ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿದ್ದೇವೆ’ ಎಂದು ಅವರು ತಿಳಿಸಿದರು.\

ಪದವೀಧರರು ಎಷ್ಟು?

‘ಅಡುಗೆಯವರು ಹಾಗೂ ಅಡುಗೆ ಸಹಾಯಕರ ಹುದ್ದೆಗೆ ಎಸ್ಸೆಸ್ಸೆಲ್ಸಿ ವಿದ್ಯಾರ್ಹತೆ ನಿಗದಿಪಡಿಸಲಾಗಿದೆ. ಎಂ.ಎ, ಎಂ. ಎಸ್ಸಿ,  ಬಿ.ಇಡಿ, ಡಿ.ಇಡಿ ಕೋರ್ಸ್‌ ಮುಗಿಸಿದವರು ಪ್ರಾಯೋಗಿಕ ಪರೀಕ್ಷೆಗೆ ಹಾಜರಾಗಿದ್ದರು. ಅರ್ಜಿ ಸಲ್ಲಿಸುವಾಗ ವಿದ್ಯಾರ್ಹತೆ ಕಾಲಂನಲ್ಲಿ ಎಸ್ಸೆಸ್ಸೆಲ್ಸಿ ಎಂದಷ್ಟೇ ಬರೆದಿದ್ದಾರೆ. ಹೀಗಾಗಿ ಎಂಜಿನಿಯರ್, ಸ್ನಾತಕೋತ್ತರ ಪದವಿ ಪಡೆದವರು ಎಷ್ಟು ಅಭ್ಯರ್ಥಿಗಳು ಇದ್ದಾರೆ ಎನ್ನು ವುದು ನಿಖರವಾಗಿ ತಿಳಿದಿಲ್ಲ’ ಎಂದು ನೋಡೆಲ್‌ ಅಧಿಕಾರಿ ಮೊಹ್ಮದ್‌ ಗುಲ್ಶಿನ್‌ ಹೇಳಿದರು.

* * 

ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ತಿಂಗಳಿಗೆ ₹ 3,000 ವೇತನ ನೀಡುತ್ತಿವೆ. ಅಡುಗೆ ಸಹಾಯಕರಿಗೆ ಉತ್ತಮ ವೇತನವಿದೆ. ಅದಕ್ಕೆ ಪ್ರಾಯೋಗಿಕ ಪರೀಕ್ಷೆಗೆ ಬಂದಿರುವೆ.

ಆಶಾರಾಣಿ

ಅಭ್ಯರ್ಥಿ

ಪ್ರತಿಕ್ರಿಯಿಸಿ (+)