ಶುಕ್ರವಾರ, ಡಿಸೆಂಬರ್ 6, 2019
17 °C

ಪ್ರಗತಿ ಕಾಣದ ₹ 50 ಲಕ್ಷ ಮೊತ್ತದ ರಸ್ತೆ ಕಾಮಗಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಗತಿ ಕಾಣದ ₹ 50 ಲಕ್ಷ ಮೊತ್ತದ ರಸ್ತೆ ಕಾಮಗಾರಿ

ಚಿಟಗುಪ್ಪ: ಸಮರ್ಪಕ ರಸ್ತೆ ಸೌಕರ್ಯವಿರದ ಕಾರಣ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸರ್ಕಾರಿ ಮೆಟ್ರಿಕ್ ನಂತರ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳು ಹಾಗೂ ಅಗ್ನಿ ಶಾಮಕ ಠಾಣೆ ಸಿಬ್ಬಂದಿ ಮಳೆಗಾಲದಲ್ಲಿ ಸಂಕಷ್ಟ ಎದುರಿಸುವಂತಾಗಿದೆ.

ಹುಮನಾಬಾದ್ ರಸ್ತೆ ಪಕ್ಕದಲ್ಲಿ ಬಾಲಕರ ವಸತಿನಿಲಯ ಮತ್ತು ಅಗ್ನಿಶಾಮಕ ಠಾಣೆಯಿದ್ದು, ಎರಡು ವರ್ಷಗಳಿಂದ ಕಾಡುತ್ತಿರುವ ರಸ್ತೆ ಸೌಕರ್ಯ ಸಮಸ್ಯೆ ಇದುವರೆಗೆ ಪರಿಹಾರಗೊಂಡಿಲ್ಲ. ಎರಡೂ ಕಟ್ಟಡಗಳ ಎದುರು ಪಟ್ಟಣದ ದೊಡ್ಡ ಹಳ್ಳ ಇದ್ದು, ಮಳೆ ಬಂದಾಗಲೆಲ್ಲ ನೀರು ತುಂಬಿ ಹರಿಯುತ್ತದೆ.

ಆ ನೀರು ಕಟ್ಟಡದೊಳಗೆ ನುಗ್ಗುವುದರಿಂದ ವಿದ್ಯಾರ್ಥಿಗಳು ಮತ್ತು ಠಾಣಾ ಸಿಬ್ಬಂದಿ ಅನಿವಾರ್ಯವಾಗಿ ಕಟ್ಟಡದ ಛಾವಣಿ ಹೋಗುತ್ತಾರೆ. ನೀರಿನ ಪ್ರಮಾಣ ಕಡಿಮೆಯಾದ ನಂತರವಷ್ಟೇ ಅವರು ಕೆಳಗಿಳಿದು ಬರುತ್ತಾರೆ.

‘ಮಳೆ ನೀರು ಹರಿದು ಹೋಗುವುದರಿಂದ ಹಳ್ಳದ ದಡದಲ್ಲಿ ಇರುವ ಕಚ್ಚಾ ರಸ್ತೆಯಲ್ಲಿ ನಡೆಯಲು ಕಷ್ಟವಾಗುತ್ತದೆ. ಎಲ್ಲೆಡೆ ಕೆಸರು ಆವರಿಸಿಕೊಳ್ಳುತ್ತದೆ. ತುರ್ತು ಪರಿಸ್ಥಿತಿ ನಿಭಾಯಿಸಲು ಕರೆ ಬಂದ ಸ್ಥಳಗಳಿಗೆ ಹೋಗಲು ಠಾಣೆಯಿಂದ ವಾಹನಗಳನ್ನು ಹೊರಗಡೆ ತರಲು ಸಾಧ್ಯವಾಗುವುದಿಲ್ಲ’ ಎಂದು ಠಾಣಾ ಸಿಬ್ಬಂದಿ ತಿಳಿಸುತ್ತಾರೆ.

‘ಮಳೆಗಾಲದಲ್ಲಿ ವಸತಿ ನಿಲಯದಲ್ಲಿ ಉಳಿಯಲು ಭಯವಾಗುತ್ತದೆ. ಮಳೆ ನೀರು ಕೊಠಡಿಯೊಳಗೆ ನುಗ್ಗುವುದರಿಂದ ಬಟ್ಟೆ, ಪುಸ್ತಕ ಮತ್ತು ನಿತ್ಯ ಬಳಕೆ ವಸ್ತುಗಳು ನೀರು ಪಾಲಾಗುವುದೆಂದು ಭಯವಾಗುತ್ತದೆ’ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ.

‘ಅಧಿಕಾರಿಗಳು ಈ ಸಮಸ್ಯೆ ಗಂಭೀರವಾಗಿ ಪರಿಗಣಿಸಿ, ಬೇಗನೇ ನಿವಾರಿಸಬೇಕು. ಠಾಣೆ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿ ಕೊಡಬೇಕು’ ಎಂದು ಪುರಸಭೆ ಮಾಜಿ ಸದಸ್ಯ ಲಕ್ಷ್ಮಣರಾವ್, ಪಿಕೆಪಿಎಸ್ ಮಾಜಿ ಅಧ್ಯಕ್ಷ ವಿಠಲರಾವ ಪಟ್ಟಣಕರ್ ಆಗ್ರಹಿಸಿದ್ದಾರೆ.

‘ನಗರೋತ್ಥಾನ ಯೋಜನೆ–2ರಡಿ ಪಟ್ಟಣದಲ್ಲಿ ₹ 10 ಕೋಟಿ ಮೊತ್ತದಲ್ಲಿ 10 ಕಾಮಗಾರಿಗಳು ನಡೆಸಲಾಗುತ್ತಿದೆ. ಈವರೆಗೆ 8 ಕಾಮಗಾರಿಗಳು ಪೂರ್ಣವಾಗಿದ್ದು. ಅಗ್ನಿ ಶಾಮಕ ಠಾಣೆ ಹಾಗೂ ವಸತಿ ನಿಲಯಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ನಿರ್ಮಾಣಕ್ಕೆ ₹ 50 ಲಕ್ಷ ಮೊತ್ತದ ಟೆಂಡರ್ ಗುತ್ತಿಗೆದಾರರಿಗೆ ನೀಡಲಾಗಿದೆ’ ಎಂದು ಪುರಸಭೆ ಅಧ್ಯಕ್ಷೆ ಗೌರಮ್ಮ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮೂರು ಡೆಸ್ಕ್ ಸ್ಲ್ಯಾಬ್ ಅಳವಡಿಕೆ ಹೊರತುಪಡಿಸಿದರೆ ಕಾಮಗಾರಿ ಪ್ರಗತಿ ಕಂಡಿಲ್ಲ. ಗುತ್ತಿಗೆದಾರರಿಗೆ ಅಧಿಕಾರಿಗಳ ಮೂಲಕ ಎಚ್ಚರಿಕೆ ನೀಡಲಾಗುವುದು. ತ್ವರಿತ ಗತಿಯಲ್ಲಿ ರಸ್ತೆ ನಿರ್ಮಿಸುವಂತೆ ಸೂಚಿಸಲಾಗುವುದು. ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ತಿಳಿಸಿದರು.

* * 

₹ 50 ಲಕ್ಷ ಮೊತ್ತದ ಟೆಂಡರ್ ಗುತ್ತಿಗೆದಾರರಿಗೆ ವಹಿಸಲಾಗಿದೆ.  ಪ್ರಗತಿ ಕಂಡು ಬಂದಿಲ್ಲ. ತಕ್ಷಣವೇ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗುವುದು.

ಹೂಸಾಮೊದ್ದೀನ್

ಮುಖ್ಯಾಧಿಕಾರಿ, ಪುರಸಭೆ

ಪ್ರತಿಕ್ರಿಯಿಸಿ (+)