ಭಾನುವಾರ, ಡಿಸೆಂಬರ್ 15, 2019
18 °C

‘ವಾರದ ರಜೆ’ ಕೊಡಿಸಲು ಒಕ್ಕೊರಲ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ವಾರದ ರಜೆ’ ಕೊಡಿಸಲು ಒಕ್ಕೊರಲ ಆಗ್ರಹ

ಕಲಬುರ್ಗಿ: ‘ಮಳೆ, ಚಳಿ, ಬಿಸಿಲನ್ನು ಲೆಕ್ಕಿಸದೇ ವರ್ಷವಿಡೀ ಕೆಲಸ ಮಾಡುವ ನಮಗೆ ವಾರಕ್ಕೊಂದು ರಜೆ ಕೊಡ­ಬೇಕು’ ಎಂದು ಪಾಲಿಕೆ ಪೌರ ಕಾರ್ಮಿಕರು ಒಕ್ಕೊರಲಿನಿಂದ ಇಲ್ಲಿ ಆಗ್ರಹಿಸಿದರು. ನಗರದ ಇಂದಿರಾ ಸ್ಮಾರಕ ಭವನ (ಟೌನ್ ಹಾಲ್)ದಲ್ಲಿ ಕರ್ನಾಟಕ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಆರ್.ವೆಂಕಟೇಶ ಅಧ್ಯಕ್ಷತೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಈ ಬೇಡಿಕೆ ಇಟ್ಟರು.

‘ಭವಿಷ್ಯ ನಿಧಿ (ಪಿಎಫ್‌), ಇಎಸ್‌ಐ ಸೌಲಭ್ಯ ಕಲ್ಪಿಸಬೇಕು. ಬ್ಯಾಂಕ್ ಖಾತೆಗೆ ಜಮಾ ಆಗುವ ಸಂಬಳದಲ್ಲಿ ಕಮಿಷನ್ ಕೇಳುವ ಗುತ್ತಿಗೆದಾರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’ ಎಂದರು. ಪಾಲಿಕೆ ಆಯುಕ್ತ ಪಿ.ಸುನಿಲ್‌ ಕುಮಾರ ಮಾತನಾಡಿ, ‘ಕಮಿಷನ್ ಕೇಳುವ ಗುತ್ತಿಗೆದಾರರ ವಿರುದ್ಧ ದೂರು ಕೊಟ್ಟರೆ ಖಂಡಿತ ಕ್ರಮಕೈಗೊಳ್ಳಲಾಗುವುದು.

ನೀವು ದುಡಿದ ಹಣ ನಿಮ್ಮ ಖಾತೆಗೆ ಸೇರಬೇಕು ಎಂಬ ಕಾರಣಕ್ಕೆ ಬಯೋಮೆಟ್ರಿಕ್ ಹಾಜರಾತಿ ವ್ಯವಸ್ಥೆ ಜಾರಿಗೆ ತರಲಾಗಿದೆ. ಅಲ್ಲದೆ ಸಂಬಳವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತಿದೆ. ಪಿಎಫ್, ಇಎಸ್‌ಐ ಸೌಲಭ್ಯ ಕೂಡ ಕಲ್ಪಿಸಲಾಗಿದೆ’ ಎಂದು ಹೇಳಿದರು.

‘ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆಯಡಿ 848 ಗುತ್ತಿಗೆ ಪೌರ ಕಾರ್ಮಿಕರಿಗೆ ಐದು ವರ್ಷಗಳಿಗೆ ವಿಮೆ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಲಾಗಿದೆ. ಮುಂದಿನ ಒಂಬತ್ತು ತಿಂಗಳ ಸಂಬಳ ಪಾವತಿಗೆ ₹16 ಕೋಟಿ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡಲಾಗಿದೆ. ಕೆಲಸದಿಂದ ಕೈಬಿಟ್ಟಿರುವ 40 ಪೌರ ಕಾರ್ಮಿಕರನ್ನು ದಿನಗೂಲಿ ಆಧಾರದ ಮೇಲೆ ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವ ಬಗ್ಗೆ ಚಿಂತನೆ ನಡೆದಿದೆ’ ಎಂದರು.

ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ ಮಾತನಾಡಿ, ‘ಪೌರ ಕಾರ್ಮಿ ಕರಿಗೆ ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಬಳ ನೀಡಲಾಗುತ್ತಿದೆ. 1000 ಜನ ಪೌರ ಕಾರ್ಮಿಕರನ್ನು ವಿದೇಶ ಪ್ರವಾಸಕ್ಕೆ ಕಳುಹಿಸಲಾಗಿದೆ. 10 ಸಾವಿರ ಪೌರ ಕಾರ್ಮಿಕರನ್ನು ಕಾಯಂ ಮಾಡಲು ಯೋಜನೆ ರೂಪಿಸಲಾಗಿದೆ. ವಾರದ ರಜೆ ಕೊಡಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ

‘ಸಫಾಯಿ ಕರ್ಮಚಾರಿಗಳ ಅಭಿವೃದ್ಧಿ ನಿಗಮದಿಂದ ಪೌರ ಕಾರ್ಮಿಕರಿಗೆ ಸಾಲ ಸೌಲಭ್ಯ ನೀಡಲಾಗುವುದು’ ಎಂದು ಆಯೋಗದ ಅಧ್ಯಕ್ಷ ಎಂ.ಆರ್. ವೆಂಕಟೇಶ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿದ ಅವರು, ‘ಗೃಹಭಾಗ್ಯ ಯೋಜನೆಯಡಿ ಕಾಯಂ ಪೌರ ಕಾರ್ಮಿಕರಿಗೆ ₹6 ಲಕ್ಷ ಹಾಗೂ ಗುತ್ತಿಗೆ ಪೌರ ಕಾರ್ಮಿಕರಿಗೆ ₹4 ಲಕ್ಷ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗುವುದು. 

ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದ ಪೌರ ಕಾರ್ಮಿಕರ ಮಕ್ಕಳಿಗೆ ಸರ್ಕಾರದ ಪ್ರತಿಷ್ಠಿತ ಶಾಲೆಗಳಲ್ಲಿ ಶಿಕ್ಷಣದ ವ್ಯವಸ್ಥೆ ಮಾಡಲಾಗಿದೆ. ಸಫಾಯಿ ಕರ್ಮಚಾರಿಗಳ ಕಾಲೊ ನಿಗಳ ಅಭಿವೃದ್ಧಿಗೆ ₹100 ಕೋಟಿ ಅನುದಾನ ಮೀಸಲಿರಿಸಲಾಗಿದೆ’ ಎಂದು ತಿಳಿಸಿದರು.

ಅನುದಾನ ಬಳಕೆಗೆ ಸೂಚನೆ

‘ಪೌರ ಕಾರ್ಮಿಕರ ಕಲ್ಯಾಣಕ್ಕೆ ಬಿಡುಗಡೆಯಾದ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಳ್ಳ ಬೇಕು. ಪೌರ ಕಾರ್ಮಿಕರಿಗೆ ಸರ್ಕಾರದ ಯೋಜನೆಗಳ ಲಾಭ ದೊರೆಯುವಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು’ ಎಂದು ಎಂ.ಆರ್.ವೆಂಕಟೇಶ ಸೂಚಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಇರುವ ಬಗ್ಗೆ ಸರಿಯಾಗಿ ಸಮೀಕ್ಷೆ ನಡೆಸಬೇಕು. ಅವರಿಗೆ ಪುನರ್ವಸತಿ ಸೌಲಭ್ಯ ಕಲ್ಪಿಸಲು ಕ್ರಮಕೈಗೊಳ್ಳಬೇಕು. ಮ್ಯಾನುಯಲ ಸ್ಕ್ಯಾವೆಂಜರ್ಸ್‌ಗಳಿಗೆ ಪರಿಹಾರ ನೀಡಲು ಕೇಂದ್ರ ಸರ್ಕಾರ ₹70 ಕೋಟಿ ಅನುದಾನ ಬಿಡುಗಡೆ ಮಾಡಿದ್ದು, ಅದನ್ನು ಬಳಕೆ ಮಾಡಿ ಕೊಳ್ಳಬೇಕು’ ಎಂದು ಸೂಚಿಸಿದರು.

ಆಯೋಗದ ಸದಸ್ಯ ಗೋಕುಲನಾರಾಯಣಸ್ವಾಮಿ, ಜಿಲ್ಲಾಧಿಕಾರಿ ಉಜ್ವಲ್‌ಕುಮಾರ ಘೋಷ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಪಾಲಿಕೆ ಆಯುಕ್ತ ಪಿ.ಸುನಿಲ್‌ಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಶಶಿಕುಮಾರ್ ಇದ್ದರು.

ಅಂಕಿ–ಅಂಶ

45 ಗುತ್ತಿಗೆ ಪೌರ  ಕಾರ್ಮಿಕರಿಗೆ ಮನೆ ನಿರ್ಮಾಣ

85ಪೌರ ಕಾರ್ಮಿಕರಿಗೆ ಗ್ಯಾಸ್ ಸ್ಟೌ ವಿತರಣೆ

40 ಕಾಯಂ ಪೌರ ಕಾರ್ಮಿಕರಿಗೆ ಜೀವ ವಿಮೆ

ಪ್ರತಿಕ್ರಿಯಿಸಿ (+)