ಸೋಮವಾರ, ಡಿಸೆಂಬರ್ 16, 2019
23 °C

ದೇಶದ ಅಭಿವೃದ್ಧಿಗೆ ಜಿಎಸ್‌ಟಿ ಪೂರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇಶದ ಅಭಿವೃದ್ಧಿಗೆ ಜಿಎಸ್‌ಟಿ ಪೂರಕ

ರಾಯಚೂರು: ಹೊಸ ತೆರಿಗೆ ನೀತಿ ‘ಸರಕು ಮತ್ತು ಸೇವಾ ತೆರಿಗೆ’ (ಜಿಎಸ್‌ಟಿ) ಜಾರಿಯಿಂದ ದೇಶದಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಸಾಧಿಸುವುದಕ್ಕೆ ಪೂರಕ ವ್ಯವಸ್ಥೆ ನಿರ್ಮಾಣವಾಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಕಲಬುರ್ಗಿ ವಿಭಾಗದ ಜಂಟಿ ಆಯುಕ್ತ ಪದ್ಮಾಕರ ಕುಲಕರ್ಣಿ ಮನವರಿಕೆ ಮಾಡಿದರು.

ಕೃಷಿ ವಿಶ್ವವಿದ್ಯಾಲಯದ ಪ್ರೇಕ್ಷಾಗೃಹದಲ್ಲಿ ವಾಣಿಜ್ಯ ತೆರಿಗೆಗಳ ಇಲಾಖೆ, ರಾಯಚೂರು ವಾಣಿಜ್ಯೋಮಗಳ ಸಂಘ (ಆರ್‌ಸಿಸಿಐ) ಹಾಗೂ ರಾಯಚೂರು ಟ್ಯಾಕ್ಸ್‌ ಬಾರ್‌ ಅಸೋಸಿಯೇಷನ್‌ನಿಂದ ಮಂಗಳವಾರ ಏರ್ಪಡಿಸಿದ್ದ ‘ಸರಕು ಮತ್ತು ಸೇವಾ ತೆರಿಗೆಯ ಪ್ರಾತ್ಯಕ್ಷಿಕೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜಿಎಸ್‌ಟಿ ಜಾರಿಯಿಂದ ಜನರು ಪ್ರತ್ಯೇಕ್ಷವಾಗಿ ಹಾಗೂ ಪರೋಕ್ಷವಾಗಿ ಹೆಚ್ಚುವರಿಯಾಗಿ ಪಾವತಿಸುತ್ತಿದ್ದ ತೆರಿಗೆಯು ಕಡಿಮೆಯಾಗುತ್ತದೆ. ಈ ಬಗ್ಗೆ ಯಾರೂ ಗೊಂದಲ ಮಾಡಿಕೊಳ್ಳಬಾರದು. ವರ್ತಕರೆಲ್ಲ ಗೊಂದಲಗಳನ್ನು ನಿವಾರಿಸಿಕೊಂಡು ಜಿಎಸ್‌ಟಿಗೆ ನೋಂದಣಿ ಮಾಡಿಸಿಕೊಳ್ಳಬೇಕು. ಸದ್ಯಕ್ಕೆ ₹20 ಲಕ್ಷದವರೆಗಿನ ವ್ಯವಹಾರಕ್ಕೆ ಜಿಎಸ್‌ಟಿ ಅನ್ವಯಿಸುವುದಿಲ್ಲ ಎಂದು ಸರ್ಕಾರ ಘೋಷಿಸಿದೆ ಎಂದು ತಿಳಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಎರಡೂ ತೆರಿಗೆ ಇದರಲ್ಲೆ ಇರುತ್ತದೆ. ಅಂತರರಾಜ್ಯದಲ್ಲಿ ಏನಾದರೂ ಖರೀದಿಸಿದರೆ ಮಾತ್ರ ಇನ್‌ಪುಟ್‌ ಟ್ಯಾಕ್ಸ್‌ ಭರಿಸಬೇಕಾಗುತ್ತದೆ. ₹25 ಲಕ್ಷ ಮೇಲ್ಪಟ್ಟು ವ್ಯವಹಾರ ನಡೆಸುವ ರೆಸ್ಟೊರೆಂಟ್‌ಗಳು ಶೇ 5ರಷ್ಟು ತೆರಿಗೆ ಕಟ್ಟಬೇಕಾಗುತ್ತದೆ ಎಂದು ಹೇಳಿದರು.

ಉತ್ಪಾದಕರು, ಖರೀದಿದಾರ ಹಾಗೂ ಪೂರೈಕೆದಾರರಿಗೆ ಈ ಮೊದಲು ಭಿನ್ನಭಿನ್ನ ತೆರಿಗೆಗಳನ್ನು ವಿಧಿಸಲಾಗುತ್ತಿತ್ತು. ಈಗ ಒಂದೇ ಕಡೆಯಲ್ಲಿ ತೆರಿಗೆ ವಿಧಿಸುವುದರಿಂದ ಗೊಂದಲವಿಲ್ಲದೆ ವ್ಯವಹಾರ ಮಾಡಬಹುದಾಗಿದೆ. ದೇಶದ ಯಾವುದೇ ಭಾಗದಲ್ಲಿ ವಸ್ತು ಖರೀದಿಸಿದರೂ ಒಂದೇ ದರ ಇರುತ್ತದೆ. ದರಗಳ ಬಗ್ಗೆ ಜನರಲ್ಲಿದ್ದ ಗೊಂದಲ ಈ ಮೂಲಕ ನಿವಾರಣೆಯಾಗಿದೆ ಎಂದು ತಿಳಿಸಿದರು.

ಪ್ರತಿಯೊಬ್ಬರೂ ಅಧಿಕೃತ ವ್ಯಾಪಾರ, ವಹಿವಾಟು ನಡೆಸುವ ಮೂಲಕ ದೇಶದ ಅಭಿವೃದ್ಧಿಗೆ ಕೊಡುಗೆ ನೀಡಬೇಕಿದೆ. ಹೊಸ ತೆರಿಗೆ ನೀತಿ ತುಂಬಾ ವಿಶೇಷವಾಗಿದೆ. ಮೊಲದ ಹಂತದಲ್ಲಿ ಜಿಎಸ್‌ಟಿ ನೋಂದಣಿಗೆ ಮಹತ್ವ ನೀಡಲಾಗುತ್ತಿದೆ. ತೆರಿಗೆ ಅನುಷ್ಠಾನಕ್ಕೆ ಬೇಕಾಗಿರುವ ಪೂರ್ವ ಸಿದ್ಧತೆಗಳನ್ನು ಇಲಾಖೆ ಮಾಡಿಕೊಂಡಿದೆ. ಎಲ್ಲರ ಗೊಂದಲಗಳನ್ನು ನಿವಾರಿಸಲಾಗುವುದು ಎಂದು ಹೇಳಿದರು.

ರಾಯಚೂರು ವಾಣಿಜ್ಯೋದ್ಯಮಿಗಳ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಶಿ  ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಯಚೂರು ಟ್ಯಾಕ್ಸ್‌ ಬಾರ್‌ ಅಸೋಸಿಯೇಷನ್‌ ಅಧ್ಯಕ್ಷ ಮಹಾವೀರ ಸಿಂಘ್ವಿ, ರಾಮಚಂದ್ರ ಪ್ರಭು, ಕಮಲಕುಮಾರ ಜೈನ್‌, ಜಂಬಣ್ಣ ಯಕ್ಲಾಸಪುರ, ಅಮರೇಶ್ವರ, ಮೊಹ್ಮದ್‌ ಇರ್ಫಾನ್‌ ಇದ್ದರು.

* * 

ಸಾಕಷ್ಟು ಪೂರ್ವ ತಯಾರಿ ಮಾಡಿಕೊಂಡು ಜಿಎಸ್‌ಟಿ ಜಾರಿಗೊಳಿಸಲಾಗಿದೆ. ವ್ಯಾಪಾರಿಗಳ ಗೊಂದಲಗಳನ್ನು  ಇಲಾಖೆ ಅಧಿಕಾರಿಗಳು ಪರಿಹರಿಸುತ್ತಿದ್ದಾರೆ.

ತ್ರಿವಿಕ್ರಮ ಜೋಶಿ

ಆರ್‌ಸಿಸಿಐ ಅಧ್ಯಕ್ಷ

ಪ್ರತಿಕ್ರಿಯಿಸಿ (+)