ಭಾನುವಾರ, ಡಿಸೆಂಬರ್ 8, 2019
21 °C

ಬರಕ್ಕೆ ಸೆಡ್ಡು ಹೊಡೆದ ಬರಗು

ಶರತ್‌ ಹೆಗ್ಡೆ Updated:

ಅಕ್ಷರ ಗಾತ್ರ : | |

ಬರಕ್ಕೆ ಸೆಡ್ಡು ಹೊಡೆದ ಬರಗು

ಕೊಪ್ಪಳ: ‘ಈ ಫಸಲು ಉತ್ತಮವಾಗಿ ಬರುತ್ತದೆ ಎಂದು ಭಾವಿಸಿರಲಿಲ್ಲ. ಕೃಷಿ ಇಲಾಖೆಯವರು ಪ್ರೇರೇಪಿಸಿದರು. ಇರಲಿ ಎಂದು ಒಂದು ಎಕರೆಯಲ್ಲಿ ಬೆಳೆದೆ’. ಇದು ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ಬರಗು ಬೆಳೆ ಬೆಳೆದು ನಳನಳಿಸುವ ಫಸಲಿನ ನಡುವೆ ಖುಷಿ ಯಿಂದ ಮಾತನಾಡಿದ ರೈತ ಶಿವಬಾಬು ಅವರ ಮಾತು.

‘ಬರಗು ನವಣೆ ಜಾತಿಗೆ ಸೇರಿದ ಅಪರೂಪದ ಸಿರಿಧಾನ್ಯ. ಹಿಂದೆ ನವಣೆಯಂತೆಯೇ ಇದರ ಅನ್ನವನ್ನೂ ತಯಾರಿಸಲಾಗುತ್ತಿತ್ತು. ಸಾಕಷ್ಟು ಕಬ್ಬಿಣಾಂಶ ಮತ್ತು ನಾರಿನ ಅಂಶ ಹೊಂದಿದ ಧಾನ್ಯವನ್ನು ಪ್ರಾಯೋಗಿ ಕವಾಗಿ ಬೆಳೆದಿದ್ದೇನೆ’ ಎಂದರು ಶಿವಬಾಬು.

‘ಈ ಪ್ರಯೋಗಕ್ಕೆ ಕೃಷಿ ಇಲಾಖೆ ಉಚಿತವಾಗಿ ಬಿತ್ತನೆ ಬೀಜ ಒದಗಿಸಿದೆ. ರಾಯಚೂರು ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಸ್ತರಣಾ ಶಿಕ್ಷಣ ಘಟಕದ ಮುಂದಾಳು ಡಾ.ಎಂ.ಬಿ.ಪಾಟೀಲ ಮತ್ತು ಅವರ ತಂಡ ಮಾರ್ಗದರ್ಶನ ನೀಡಿದೆ.

ಬೇಸಿಗೆಯಲ್ಲಿ ಬಿತ್ತಿದ್ದೇನೆ. ಮೂರು ತಿಂಗಳಲ್ಲಿ ಕೇವಲ ಮೂರು ಬಾರಿ ನೀರು ಹಾಯಿಸಿದ್ದೇನೆ. ಕಳೆಯ ನ್ನೂ ಕಿತ್ತಿಲ್ಲ. ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಕೆಯಂತೂ ದೂರದ ಮಾತು. ಭೂಮಿ ವಿಷವಾಗುವುದೂ ಇಲ್ಲ. ಯಾವುದೇ ನಿರ್ವಹಣೆ ಇಲ್ಲದೇ ಪ್ರತಿ ಎಕರೆಗೆ 8 ಕ್ವಿಂಟಲ್‌ ಬೆಳೆ ಸಿಗುವ ನಿರೀಕ್ಷೆ ಇದೆ’ ಎಂದು ಶಿವಬಾಬು ಹೇಳಿದರು.

ಮಾರುಕಟ್ಟೆ: ‘ಗಂಗಾವತಿಯಲ್ಲಿ ಇದಕ್ಕೆ ಮಾರುಕಟ್ಟೆ ಇದೆ. ಸದ್ಯ ಬರಗಿನ ಬೆಲೆ ಕ್ವಿಂಟಲ್‌ಗೆ ₹ 2,500 ಇದೆ. ಇದೇ ರೀತಿ ಎಲ್ಲೆಡೆ ಬರಗು ಬಳಕೆ ಬಗ್ಗೆ ಜಾಗೃತಿ ಮೂಡಿದರೆ ಈ ಬೆಲೆ ₹ 4 ಸಾವಿರ ತಲುಪಲೂಬಹುದು’ ಎಂದು ಅವರು ಹೇಳಿದರು.

‘ಮಾರುಕಟ್ಟೆಯಲ್ಲಿ ಬರಗಿನ ಅಕ್ಕಿ ಪ್ರತಿ ಕೆಜಿಗೆ ₹ 100 ಇದೆ. ಮಧುಮೇಹ ಸೇರಿದಂತೆ ಹಲವು ರೋಗಗಳನ್ನು ನಿಯಂತ್ರಿಸುವ ಗುಣ ಈ ಅಕ್ಕಿಗೆ ಇದೆ’ ಎಂದು ಶಿವಬಾಬು ವಿವರಿಸಿದರು.

ಈ ಕೃಷಿಗೆ ಮಾರ್ಗದರ್ಶನ ನೀಡಿದ ವಿಸ್ತರಣಾ ಮುಂದಾಳು ಡಾ.ಎಂ.ಬಿ. ಪಾಟೀಲ ಅವರು, ‘ಇದು ಸಿರಿಧಾನ್ಯಗಳ ವರ್ಷ. ಎಲ್ಲ ರೈತರು ಸಿರಿಧಾನ್ಯಗಳನ್ನು ಬೆಳೆದು, ಅದರಿಂದ ತಯಾರಿಸಿದ ಆಹಾರ ಸೇವಿಸುವುದು ಒಳ್ಳೆಯದು. ನೀರಿನ ಕೊರತೆ, ಪ್ರತಿಕೂಲ ಹವಾಮಾ ನದ ಪರಿಸ್ಥಿತಿಗೆ ಹೊಂದಿಕೊಳ್ಳುವಂತಹ ಬೆಳೆಗಳನ್ನು ಬೆಳೆಯಲು ಮುಂದಾಗಬೇಕು’ ಎಂದು ಅವರು ಸಲಹೆ ನೀಡಿದರು.

ನಾಳೆ ಮಾಹಿತಿ ಕಾರ್ಯಕ್ರಮ

ಶಿವಬಾಬು ಅವರ ಗದ್ದೆಯಲ್ಲಿ ಜುಲೈ 6ರಂದು ಬರಗು ಬೆಳೆಯ ನೇರ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ. ವಿವರಗಳಿಗೆ ಶಿವಬಾಬು ಅವರ ಮೊಬೈಲ್‌: 9945363677ನ್ನು ಸಂಪರ್ಕಿಸಬಹುದು ಎಂದು ಡಾ.ಪಾಟೀಲ್‌ (ಮೊ. 94486 90684) ತಿಳಿಸಿದ್ದಾರೆ.

 

ಪ್ರತಿಕ್ರಿಯಿಸಿ (+)