ಭಾನುವಾರ, ಡಿಸೆಂಬರ್ 8, 2019
19 °C

ಮಾಸ್ತಿಗುಡಿ ಸಿನಿಮಾ ನಟರನ್ನು ಮೇಲೆತ್ತಿದ್ದ ತಂಡ

ಮನೋಜಕುಮಾರ ಗುದ್ದಿ Updated:

ಅಕ್ಷರ ಗಾತ್ರ : | |

ಮಾಸ್ತಿಗುಡಿ ಸಿನಿಮಾ ನಟರನ್ನು ಮೇಲೆತ್ತಿದ್ದ ತಂಡ

ಹುಬ್ಬಳ್ಳಿ: ದುನಿಯಾ ವಿಜಯ್‌ ನಟಿಸಿದ ‘ಮಾಸ್ತಿಗುಡಿ’ ಸಿನಿಮಾದ ಚಿತ್ರೀಕರಣದ ವೇಳೆ ಹೆಲಿಕಾಪ್ಟರ್‌ನಿಂದ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಮುಳುಗಿ ಈಜು ಬಾರದೇ ದುರಂತ ಸಾವಿಗೀಡಾದ ನಟರಾದ ಅನಿಲ್‌ ಮತ್ತು ಉದಯ್‌ ಶವವನ್ನು ಹೊರತೆಗೆದ ತಂಡವೇ ಪಾಳೆ ಗ್ರಾಮದ ಕ್ವಾರಿಯಲ್ಲಿ ಬಿದ್ದ ಬಾಲಕನನ್ನೂ ಮೇಲಕ್ಕೆತ್ತಿದೆ.

ವೃತ್ತಿಪರ ಈಜುಗಾರರ ತಂಡವನ್ನು ಹೊಂದಿರುವ ಕಾರವಾರದ ಸೀಬರ್ಡ್‌ ನೌಕಾನೆಲೆಯ ಕ್ಲಿಯರನ್ಸ್‌ ಡೈವಿಂಗ್‌ ತಂಡವು ಬಂಡೆಯಡಿ ಸಿಲುಕಿಕೊಂಡಿದ್ದ ವಿದ್ಯಾಸಾಗರ್‌ ಹನುಮಕ್ಕನವರ್‌ ಎಂಬ ಬಾಲಕನ ಶವವನ್ನು ನೀರಿಗಿಳಿದ 15 ನಿಮಿಷಗಳಲ್ಲೇ ಮೇಲಕ್ಕೆತ್ತುವಲ್ಲಿ ಯಶಸ್ವಿಯಾಯಿತು.

ಭಾನುವಾರ ಸಂಜೆಯಿಂದಲೇ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಹರಿಹರದಿಂದ ಬಂದಿದ್ದ ನುರಿತ ಈಜುಗಾರರು ಗಂಟೆಗಟ್ಟಲೇ ಇಡೀ ಕ್ವಾರಿಯ ಆಳದಲ್ಲಿ ಹುಡುಕಿದರೂ ಬಾಲಕನ ಶವ ಪತ್ತೆಯಾಗಿರಲಿಲ್ಲ. ಸೋಮವಾರ ಗ್ರಾಮಸ್ಥರು ಸಿಕ್ಕಿಕೊಂಡ ಕೂಡಲೇ ಚರ್ಮ ಕಿತ್ತು ಬರುವಷ್ಟು ಅಪಾಯಕಾರಿಯಾದ ‘ಇಪ್ಪಿ’ ಮುಳ್ಳನ್ನು ನೀರಿನಲ್ಲಿ ಬಿಟ್ಟು ಹುಡುಕಿದರೂ ಶವ ಪತ್ತೆಯಾಗಿರಲಿಲ್ಲ.

ಅಂತಿಮ ಪ್ರಯತ್ನವೆಂಬಂತೆ ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ಅವರು ಉತ್ತರ ಕನ್ನಡ ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಅವರನ್ನು ಸಂಪರ್ಕಿಸಿ ಪರಿಸ್ಥಿತಿಯನ್ನು ವಿವರಿಸಿ ರಕ್ಷಣಾ ತಂಡವನ್ನು ಕಳಿಸಿಕೊಡುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿದ್ದ ನಕುಲ್‌, ‘ಕ್ಲಿಯರನ್ಸ್‌ ಡೈವಿಂಗ್‌ ತಂಡ’ವನ್ನು ಕಳಿಸಿಕೊಟ್ಟಿದ್ದರು.

ಮಂಗಳವಾರ ಬೆಳಿಗ್ಗೆ 8.15ರ ಸುಮಾರಿಗೆ ನೀರಿಗೆ ಇಳಿದ ತಂಡದ ಸದಸ್ಯ ಜೋಗಿಂದರ್‌ ಆಮ್ಲಜನಕ, ನೀರು ಸೇರಿಕೊಳ್ಳದಂತೆ ತಡೆಯುವ ಮುಖಕವಚ ಹಾಗೂ ನೀರಿನಾಳದಲ್ಲಿ ಹೋದಾಗ ಬೆಳಕು ಬೀರುವ ಬ್ಯಾಟರಿಯನ್ನು ತಲೆಗೆ ಕಟ್ಟಿಕೊಂಡು ಹುಡುಕಾಟ ನಡೆಸಿದರು.

10 ನಿಮಿಷದ ಹುಡುಕಾಟ ನಡೆಸಿದ ಬಳಿಕ ಮೇಲೆ ಬಂದು ತಂಡದ ಇತರ ಸದಸ್ಯರೊಂದಿಗೆ ಚರ್ಚಿಸಿ ಬಾಲಕ ಸಿಲುಕಿರುವ ಜಾಗವನ್ನು ಖಚಿತಪಡಿಸಿಕೊಂಡರು. ನಂತರ ಮತ್ತೊಂದು ಮುಳುಗು ಹಾಕಿ ಸುಮಾರು 10 ಅಡಿ ಆಳದ ಬಂಡೆಯಡಿ ಸಿಲುಕಿದ್ದ ಬಾಲಕನ ಶವವನ್ನು ಎತ್ತಿ ತಂದರು.

‘ಜಿಲ್ಲೆಯಲ್ಲಿ ರಕ್ಷಣಾ ತಂಡಕ್ಕೆ ತರಬೇತಿ’

‘ಇಂತಹ ಅವಘಡಗಳು ನಡೆದಾಗ ಬೇರೆ ಜಿಲ್ಲೆಯಿಂದಲೇ ಮುಳುಗು ತಜ್ಞರನ್ನು ಕರೆಸಬೇಕಾಗಿದೆ. ಇದನ್ನು ತಪ್ಪಿಸುವ ಉದ್ದೇಶದಿಂದ ಜಿಲ್ಲಾಡಳಿತದಿಂದಲೇ ಸೂಕ್ತ ತರಬೇತಿ ಕೊಡಿಸಿ, ಸೂಕ್ತ ಪರಿಕರಗಳನ್ನು ತಂಡವೊಂದಕ್ಕೆ ಒದಗಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬಾಲಕನ ಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ಪರಿಹಾರ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡಲಿದ್ದೇನೆ. ಆಟವಾಡುವ ವಯಸ್ಸಿನಲ್ಲಿ ಆಡಬೇಡಿ ಎಂದು ಮಕ್ಕಳನ್ನು ತಡೆಯಲಾಗುವುದಿಲ್ಲ. ಆದರೆ, ಇಂತಹ ಅಪಾಯಕಾರಿ ಕ್ವಾರಿಯಲ್ಲಿ ಈಜಬಾರದು. ದುರಂತ ಘಟಿಸಿ ಹೋಗಿದೆ. ಇದಕ್ಕೆ ಯಾರನ್ನೂ ಹೊಣೆ ಮಾಡಲಾಗುವುದಿಲ್ಲ’ ಎಂದು ಹೇಳಿದರು

ಬಾಲಕನ ಮೃತದೇಹ ಹೊರಕ್ಕೆ

ಹುಬ್ಬಳ್ಳಿ: ಭಾನುವಾರ ಮಧ್ಯಾಹ್ನ ತಾಲ್ಲೂಕಿನ ಪಾಳೆ ಗ್ರಾಮದ ಹೊರವಲಯದ ಕ್ವಾರಿಯಲ್ಲಿ ಈಜುವ ಸಂದರ್ಭದಲ್ಲಿ ಮುಳುಗಿದ್ದ ಬಾಲಕ ವಿದ್ಯಾಸಾಗರ ಹನುಮಕ್ಕನವರ್‌ (15) ಶವವನ್ನು ಕಾರವಾರದಿಂದ ಬಂದಿದ್ದ ರಕ್ಷಣಾ ತಂಡ 15 ನಿಮಿಷಗಳಲ್ಲಿ ಹೊರತೆಗೆಯಿತು.

ಮಹಾವೀರ ಪ್ರಸಾದ್‌ ನೇತೃತ್ವದ ನುರಿತ ಮುಳುಗುಗಾರರ ತಂಡವು ಬಾಲಕನನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಯಿತು. ಸಿಲುಕಿದ್ದ ಬಾಲಕನ ಶವವನ್ನು ಹೊರಗೆ ತೆಗೆಯುತ್ತಿದ್ದಂತೆಯೇ ವಿದ್ಯಾಸಾಗರ್‌ ಕುಟುಂಬದವರ ರೋದನ ಮುಗಿಲು ಮುಟ್ಟಿತು.

ನಂತರ ಶವವನ್ನು ಆಂಬುಲೆನ್ಸ್‌ನಲ್ಲಿ ನೂಲ್ವಿ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಮರಣೋತ್ತರ ಪರೀಕ್ಷೆ ನಡೆಸಿ ಮಧ್ಯಾಹ್ನದ ವೇಳೆಗೆ ಸಂಬಂಧಿಕರಿಗೆ ಹಸ್ತಾಂತರಿಸಲಾಯಿತು. ಜಿಲ್ಲಾಧಿಕಾರಿ ಎಸ್‌.ಬಿ. ಬೊಮ್ಮನಹಳ್ಳಿ, ಉಪವಿಭಾಗಾಧಿಕಾರಿ ಮಹೇಶ ಕರ್ಜಗಿ, ತಹಶೀಲ್ದಾರ್‌ ಶಶಿಧರ ಮಾಡ್ಯಾಳ  ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.

* * 

ಇಂಥ ಹಲವು ಕಾರ್ಯಾಚರಣೆ ಕೈಗೊಂಡಿದ್ದೇವೆ. ಒಂದೊಂದು ಬಾರಿ ಎರಡು ದಿನಗಟ್ಟಲೇ ಶವಗಳಿಗಾಗಿ ಶೋಧ ನಡೆಸಿದ್ದೇವೆ. ಬಾಲಕನ ಶವ ಮಾತ್ರ ಕೆಲವೇ ನಿಮಿಷಗಳಲ್ಲಿ ಸಿಕ್ಕಿತು

ಡಿ.ಕೆ. ಷಾ, ಮುುಖ್ಯಸ್ಥ

ಕಾರವಾರದ ಕ್ಲಿಯರನ್ಸ್ ಡೈವಿಂಗ್‌ ತಂಡ

ಪ್ರತಿಕ್ರಿಯಿಸಿ (+)