ಭಾನುವಾರ, ಡಿಸೆಂಬರ್ 8, 2019
21 °C

ರಸ್ತೆ ಸುಧಾರಣೆಗೆ ₹ 104 ಕೋಟಿ ಪ್ರಸ್ತಾವ

ಯೋಗೇಶ್‌ ಮಾರೇನಹಳ್ಳಿ Updated:

ಅಕ್ಷರ ಗಾತ್ರ : | |

ರಸ್ತೆ ಸುಧಾರಣೆಗೆ ₹ 104 ಕೋಟಿ ಪ್ರಸ್ತಾವ

ಮಂಡ್ಯ: ಶ್ರವಣಬೆಳಗೊಳದಲ್ಲಿ ಮುಂದಿನ ವರ್ಷ ನಡೆಯಲಿರುವ ಬಾಹುಬಲಿ ಮಹಾಮಸ್ತಕಾಭಿಷೇಕದ ಅಂಗವಾಗಿ ಜಿಲ್ಲೆಯಿಂದ ಹಾಸನ ಜಿಲ್ಲೆ ಸಂಪರ್ಕಿಸುವ ರಸ್ತೆಗಳ ಸುಧಾರಣೆಗೆ ಲೋಕೋಪಯೋಗಿ ಇಲಾಖೆ ಸರ್ಕಾರಕ್ಕೆ ₹ 104 ಕೋಟಿ ಪ್ರಸ್ತಾವ ಸಲ್ಲಿಸಿದೆ.

ಹಾಸನ ಜಿಲ್ಲೆಯಾದ್ಯಂತ ನೂರಾರು ಕೋಟಿ ವೆಚ್ಚದಲ್ಲಿ ಈಗಾಗಲೇ ಮೂಲ ಸೌಲಭ್ಯ ಅಭಿವೃದ್ಧಿ ಕಾಮಗಾರಿಗಳು ಭರದಿಂದ ಸಾಗಿವೆ. ಶ್ರವಣಬೆಳಗೊಳವನ್ನು ಸಂಪರ್ಕಿಸುವ ಜಿಲ್ಲೆಯ ಪ್ರಮುಖ ರಸ್ತೆಗಳ ಸುಧಾರಣೆಗೆ ಲೋಕೋಪಯೋಗಿ ಇಲಾಖೆಯ ತಾಲ್ಲೂಕುವಾರು ಉಪ ವಿಭಾಗಗಳು ನಗರದ ವಿಭಾಗೀಯ ಕಚೇರಿಗೆ ಪ್ರಸ್ತಾವ ಸಲ್ಲಿಸಿವೆ.

ಮಾರ್ಚ್‌ 3ರಂದೇ ವಿಭಾಗೀಯ ಕಚೇರಿ ಕಡತವನ್ನು ಕೇಂದ್ರ ಕಚೇರಿಗೆ ಸಲ್ಲಿಸಿದೆ. ಸರ್ಕಾರದ ಒಪ್ಪಿಗೆ ಸಿಕ್ಕಿ ಹಣ ಮಂಜೂರಾದರೆ ಜಿಲ್ಲೆಯಾದ್ಯಂತ ಹಲವು ಪ್ರಮುಖ ರಸ್ತೆಗಳಿಗೆ ದುರಸ್ತಿ ಭಾಗ್ಯ ಸಿಗಲಿದೆ.

ಜಿಲ್ಲೆಯ ಗಡಿ ಕೆ.ಆರ್‌.ಪೇಟೆ ತಾಲ್ಲೂಕಿನಿಂದ ಶ್ರವಣಬೆಳಗೊಳ ತಲುಪುವ 2 ರಾಜ್ಯ ಹೆದ್ದಾರಿ ಹಾಗೂ 9 ಜಿಲ್ಲಾ ಮುಖ್ಯರಸ್ತೆಗಳ ಸುಧಾರಣೆಗೆ ಇಲಾಖೆ ₹ 58 ಕೋಟಿ ಪ್ರಸ್ತಾವ ಸಲ್ಲಿಸಿದೆ. ಮಂಡ್ಯ, ಕೆ.ಆರ್‌.ಪೇಟೆ, ಕಿಕ್ಕೇರಿ, ಆನೆಗೊಳ, ಮಂದಗೆರೆ, ಅಕ್ಕಿಹೆಬ್ಬಾಳು, ಗೋವಿಂದನಹಳ್ಳಿ ಮುಂತಾದೆಡೆಯಿಂದ ಶ್ರವಣಬೆಳಗೊಳ ಸಂಪರ್ಕಿಸುವ ಜಿಲ್ಲಾ ಮುಖ್ಯರಸ್ತೆಗಳ ದುರಸ್ತಿಗೆ ಯೋಜನೆ ರೂಪಿಸಲಾಗಿದೆ. ಜತೆಗೆ ಶ್ರೀರಂಗಪಟ್ಟಣ– ಅರಸೀಕೆರೆ ಹಾಗೂ ಬೆಂಗಳೂರು–ಮಂಗಳೂರು ರಾಜ್ಯ ಹೆದ್ದಾರಿ ದುರಸ್ತಿ ಯನ್ನು ಪ್ರಸ್ತಾವದಲ್ಲಿ ಸೇರಿಸಲಾಗಿದೆ.

ನಾಗಮಂಗಲಕ್ಕೆ ₹ 23 ಕೋಟಿ: ನಾಗಮಂಗಲ ತಾಲ್ಲೂಕಿನಿಂದ ಹಾಸನ ಜಿಲ್ಲೆ ಸಂಪರ್ಕಿಸುವ ಮೂರು ಮುಖ್ಯರಸ್ತೆಗಳ ಸುಧಾರಣೆಗಾಗಿ ₹ 23 ಕೋಟಿ ಪ್ರಸ್ತಾವ ಕಳುಹಿಸಲಾಗಿದೆ. ನಾಗಮಂಗಲ, ಬಿಂಡಿಗನವಿಲೆ, ತುರುವೇಕೆರೆ, ಕದಬಳ್ಳಿ, ಬಿಂಡಿಗನವಿಲೆ ಮಾರ್ಗದಲ್ಲಿ ಸಂಚರಿಸುವ ರಸ್ತೆಗಳ ಸುಧಾರಣೆಗೆ ಯೋಜನೆ ಹಾಕಿಕೊಳ್ಳಲಾಗಿದೆ.

ಪಾಂಡವಪುರ ತಾಲ್ಲೂಕಿನಿಂದ ಶ್ರವಣಬೆಳಗೊಳ ಸಂಪರ್ಕಿಸುವ ರಸ್ತೆಗಳ ಸುಧಾರಣೆಗಾಗಿ ₹ 16.5 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ. ಇದರಲ್ಲಿ 2 ಹೆದ್ದಾರಿಗಳು ಹಾಗೂ 2 ಜಿಲ್ಲಾ ಮುಖ್ಯರಸ್ತೆಗಳು ಸೇರಿವೆ. ಶ್ರವಣಬೆಳಗೊಳಕ್ಕೆ ಬರುವ ಪ್ರವಾಸಿಗರು ಮೇಲುಕೋಟೆಗೆ ಭೇಟಿ ನೀಡುವ ಕಾರಣ ಈ ರಸ್ತೆ ಸುಧಾರಣೆಗೆ ವಿಶೇಷ ಆಸಕ್ತಿ ವಹಿಸಲಾಗಿದೆ.

ಮಂಡ್ಯದಲ್ಲಿ ಪ್ರವಾಸಿ ಮಂದಿರ ನಿರ್ಮಾಣ: ಮಹಾಮಸ್ತಕಾಭಿಷೇಕಕ್ಕೆ ಬರುವ ಗಣ್ಯರು ಉಳಿದುಕೊಳ್ಳಲು ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಇನ್ನೊಂದು ಹೊಸ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಪ್ರವಾಸಿಗರ ಕಟ್ಟಡ ಸೇರಿ ನಗರದಿಂದ ಶ್ರವಣಬೆಳಗೊಳ ಸಂಪರ್ಕಿಸುವ ಮುಖ್ಯರಸ್ತೆ ದುರಸ್ತಿಗಾಗಿ ₹ 6.5 ಕೋಟಿ ಪ್ರಸ್ತಾವ ಸಲ್ಲಿಸಲಾಗಿದೆ.

‘ಪ್ರಸ್ತಾವಕ್ಕೆ ಸರ್ಕಾರದಿಂದ ಅನುಮೋದನೆ ಸಿಗಬೇಕು. ಹಣ ಬಿಡುಗಡೆ ಆದ ಕೂಡಲೆ ಸಂಪರ್ಕ ರಸ್ತೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್‌ ಪ್ರಕಾಶ್‌ ತಿಳಿಸಿದರು.

ಹಣ ಶೀಘ್ರ ಬಿಡುಗಡೆಯಾಗಲಿ

‘ಇಷ್ಟು ಹೊತ್ತಿಗಾಗಲೇ ಸಂಪರ್ಕ ರಸ್ತೆಗಳ ಸುಧಾರಣಾ ಕಾರ್ಯ ಆರಂಭವಾಗಬೇಕಾಗಿತ್ತು. ಆದರೆ, ಇನ್ನೂ ಹಣ ಬಿಡುಗಡೆ ಆಗಿಲ್ಲ. ಮಹಾಮಸ್ತಕಾಭಿಷೇಕ ಆರಂಭ ಆಗುವುದರೊಳಗಾಗಿ ಕಾಮಗಾರಿ ಮುಗಿಸಬೇಕು’  ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಪ್ರೇಮಾ ಕುಮಾರಿ ಒತ್ತಾಯಿಸಿದರು.

‘ಅಭಿಷೇಕದ ವೇಳೆ ಶ್ರವಣಬೆಳಗೊಳ– ಕೆ.ಆರ್‌.ಪೇಟೆ ರಸ್ತೆ ಬಲು ಮುಖ್ಯವಾದುದು. ಜೈನ ಮುನಿಗಳು ಈ ರಸ್ತೆಯಲ್ಲಿ ಪಾದಯಾತ್ರೆ ಬರುತ್ತಾರೆ. ಹೀಗಾಗಿ, ಹರಿಯಾಲದಮ್ಮ ಗುಡಿ ಬಳಿ ಪ್ರವಾಸಿ ಮಂದಿರ ನಿರ್ಮಾಣಕ್ಕೆ ಆಗ್ರಹಿಸಿದ್ದೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವಿ ಸಲ್ಲಿಸಿದ್ದೆ. ಆದರೆ, ಅದಾವ ಕೆಲಸಗಳೂ ಆಗಿಲ್ಲ. ಸದ್ಯ ರಸ್ತೆ ಸುಧಾರಣೆಗೆ ಶೀಘ್ರ ಅನುದಾನ ಬಿಡುಗಡೆ ಆಗಬೇಕು’ ಎಂದರು.

ಪ್ರತಿಕ್ರಿಯಿಸಿ (+)