ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರು ತಿಂಗಳು ನಿರಾತಂಕ

Last Updated 5 ಜುಲೈ 2017, 9:58 IST
ಅಕ್ಷರ ಗಾತ್ರ

ಮಂಗಳೂರು: ಕಂಬಳ ಆಚರಣೆಗೆ ಪೂರಕವಾಗಿ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳ ಪ್ರಯತ್ನದಿಂದಾಗಿ ಸುಗ್ರೀವಾಜ್ಞೆ ಮೂಲಕ ಹಸಿರು ನಿಶಾನೆ ಮೂಲಕ ಕರಾವಳಿಯ ಸಾಂಸ್ಕೃತಿಕ ಆಚರಣೆಗೆ ಅವಕಾಶ ದೊರೆತಿರುವುದು ಶ್ಲಾಘನಾರ್ಹ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ  ಶಾಂತಾರಾಮ ಶೆಟ್ಟಿ ಬಾರ್ಕೂರು ಹೇಳಿದರು.

ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಕೇಂದ್ರ ಸಚಿವ  ಡಿ.ವಿ. ಸದಾನಂದ ಗೌಡರು ಮತ್ತು ಸ್ಥಳೀಯ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕಂಬಳದ ಅಸ್ತಿತ್ವ ಉಳಿಸಲು ಪ್ರಯತ್ನ ಮಾಡಿದ್ದಾರೆ. ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರೂ ಕರಾವಳಿಯ ಸಾಂಸ್ಕೃತಿಕ ಆಚರಣೆಯ ಪರವಾಗಿ ನಿಂತು ಕೆಲಸ ಮಾಡಿದ್ದಾರೆ.

ತಮಿಳುನಾಡಿನ ಜಲ್ಲಿಕಟ್ಟು ಮೂಲಕ ಆರಂಭವಾದ ಈ ವಿವಾದ, ಕೊನೆಗೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಆಚರಣೆಗೆ ಅವಕಾಶ ಸಿಕ್ಕರೂ, ಕರಾವಳಿಯ ಕಂಬಳಕ್ಕೆ ಮಾತ್ರ ಅವಕಾಶ ಸಿಗದೇ ಬಹಳ ನಿರಾಸೆಯಾಗಿತ್ತು. ಇದೀಗ ಎಲ್ಲ ಅಡೆತಡೆಗಳೂ ಬಗೆಹರಿದಂತಾಗಿರುವುದು ಸಮಾಧಾನ ತಂದಿದೆ’ ಎಂದು ಹೇಳಿದರು.

ಕರಾವಳಿ ಭಾಗದ ಉತ್ತರದ ಬೈಂದೂರಿನಿಂದ ದಕ್ಷಿಣದ ಕಾಸರಗೋಡಿನವರೆಗೆ ಭತ್ತ ಬೆಳೆಯುವ ಕಂಬಳ ಗದ್ದೆಗಳು ನೂರಾರು. ಪ್ರತಿ ಹಳ್ಳಿಗಳಲ್ಲಿಯೂ ಕಂಬಳಗಳಿವೆ. ಧಾರ್ಮಿಕ ಆಚರಣೆ ಮತ್ತು ನಂಬಿಕೆಯೊಂದಿಗೆ ತಳುಕು ಹಾಕಿಕೊಂಡ ಕಂಬಳಗಳಲ್ಲದೇ, ಆಧುನಿಕವಾಗಿ ಸ್ಪರ್ಧಾತ್ಮಕವಾಗಿ ಆರಂಭವಾಗಿರುವ ಜೋಡುಕರೆ ಕಂಬಳ ಗದ್ದೆಗಳೂ ಹಲವಾರು ಇವೆ. ಅವುಗಳಲ್ಲಿ ಕಂಬಳ ನಡೆಸಲು ಇದೀಗ ಅವಕಾಶ ಸಿಕ್ಕಂತಾಗಿದೆ ಎಂದು ಅವರು ವಿವರಿಸಿದರು.

ಪ್ರಾಣಿ ದಯಾ ಮಂಡಳಿ (ಪೆಟಾ) ಮತ್ತು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯ (ಎಡಬ್ಲ್ಯುಬಿಐ) ಸಂಘಟನೆಗಳ  ಆಕ್ಷೇಪದಿಂದಾಗಿ ಕಳೆದ ವರ್ಷ ಕಂಬಳದ ಆಚರಣೆಯೇ ಆಗಿಲ್ಲ. ರಾಜಕೀಯ, ಜಾತಿ ಅಥವಾ ವಿವಿಧ ಮತಗಳ ನಡುವೆ ಸಂಘರ್ಷವಿಲ್ಲದೆ ಸಾಮರಸ್ಯದಿಂದ ನಡೆಯುವ ಕಂಬಳ ಆಚರಣೆಗೆ ತಡೆ ಬಂದಿರುವುದು ವಿಷಾದನೀಯ. ಆದರೆ ಒಗ್ಗಟ್ಟಿನ ಹೋರಾಟಕ್ಕೆ ಜಯ ದೊರೆತಂತಾಗಿದೆ ಎಂದರು.

ಸಮಿತಿಯ ಗೌರವ ಅಧ್ಯಕ್ಷ ಭಾಸ್ಕರ್‌ ಎಸ್‌. ಕೋಟ್ಯಾನ್‌, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್‌ ಕಂಗಿನ ಮನೆ, ಕೋಶಾಧಿಕಾರಿ ಪಿ. ಆರ್‌. ಶೆಟ್ಟಿ ಕೂಳೂರು ಪೊಯಿಲು ಇದ್ದರು.

ವಿಜಯೋತ್ಸವ: ಕಂಬಳ ಕ್ರೀಡೆಗೆ ಸುಗ್ರೀವಾಜ್ಞೆ ಸಿಕ್ಕಿದ ಸಂಭ್ರಮದಲ್ಲಿ  ಮಂಗಳೂರಿನ ಎಂ.ಜಿ. ರಸ್ತೆಯಲ್ಲಿ ಮಂಗಳವಾರ ಪಟಾಕಿ ಸಿಡಿಸಿ ಸಂಭ್ರಮಾಚರಣೆ ನಡೆಯಿತು.
ಪಟಾಕಿ ಸಿಡಿಸಿದ ಬಳಿಕ ಎಲ್ಲರಿಗೂ ಸಿಹಿತಿಂಡಿ ಹಂಚಿ, ಕುಣಿತದ ಮೂಲಕ ಹರ್ಷ ವ್ಯಕ್ತಪಡಿಸಿ, ಕಂಬಳಕ್ಕಾಗಿ ಹೋರಾಟ ನಡೆಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು. ಇದರಲ್ಲಿ ಕಂಬಳ ಸಮಿತಿ ಪದಾಧಿಕಾರಿಗಳು, ಕಂಬಳಾಭಿಮಾನಿಗಳು ಸೇರಿದ್ದರು.

ಸುಗ್ರೀವಾಜ್ಞೆ ಅವಧಿ ಆರು ತಿಂಗಳು
ಕಂಬಳ ನಡೆಯಲು ಪೂರಕವಾಗಿ ಹೊರಡಿಸಿದ ಸುಗ್ರೀವಾಜ್ಞೆಯ ಅವಧಿ ಆರು ತಿಂಗಳು ಮಾತ್ರ. ಅಷ್ಟರಲ್ಲಿ ಚಳಿಗಾಲದ ಅಧಿವೇಶನದಲ್ಲಿ ಪ್ರಾಣಿಗಳ ಸಂರಕ್ಷಣೆಗೆ ಸಂಬಂಧಿಸಿದ   1956ರ ಕಾಯ್ದೆಗೆ ತಿದ್ದುಪಡಿ ತರುವ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆದುಕೊಳ್ಳ ಲಾಗುವುದು. ರಾಷ್ಟ್ರಪತಿಗಳು ಸುಗ್ರೀವಾಜ್ಞೆಗೆ ಸಹಿ ಹಾಕಿದ್ದು, ತಿದ್ದುಪಡಿ ಮಸೂದೆಯನ್ನು ಅಧಿವೇಶನದಲ್ಲಿ ಮಂಡಿಸಿ ಕೇಂದ್ರಕ್ಕೆ ಸಲ್ಲಿಸುವಂತೆ ತಿಳಿಸಿದ್ದಾರೆ. ಆದ್ದರಿಂದ 2017ರ ಸಾಲಿನಲ್ಲಿ ಕಂಬಳ ಆಚರಣೆಗೆ ಯಾವುದೇ ತೊಡಕು ಇರುವುದಿಲ್ಲ ಎಂದು ಅಶೋಕ್‌ ಕುಮಾರ್‌ ರೈ ವಿವರಿಸಿದರು.

ಒಗ್ಗಟ್ಟಾದ ಕರಾವಳಿ: ಕಂಬಳ ಆಚರಣೆಗೆ ತಡೆ ಉಂಟಾದ ತಕ್ಷಣ ಇಡೀ ಕರಾವಳಿಯೇ ಎಚ್ಚೆತ್ತುಕೊಂಡು ಪ್ರತಿಭಟನೆ ನಡೆಸಿತ್ತು. ತಮಿಳುನಾಡು ರಾಜ್ಯ ಜಲ್ಲಿಕಟ್ಟು ಆಚರಣೆಗೆ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಂತೆಯೇ ಕಂಬಳ ಆಚರಿಸುವ ಸಂಘಟಕರ ಸ್ವಾಭಿಮಾನವನ್ನೇ ಕೆಣಕಿದಂತಾಗಿತ್ತು. ಗ್ರಾಮ, ಪಟ್ಟಣ,ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಮತ್ತು ಸಂಘ ಸಂಸ್ಥೆಗಳು ಕಂಬಳ ಪರವಾದ ನಿರ್ಣಯಗಳನ್ನು ಮಾಡಿ ಸರ್ಕಾರಕ್ಕೆ ಕಳುಹಿಸಲಾಗಿತ್ತು. ಜಿಲ್ಲಾಧಿಕಾರಿ ಮೂಲಕ ಮನವಿಪತ್ರಗಳನ್ನು ಸರ್ಕಾರಕ್ಕೆ ಕಳುಹಿಸಲಾಗಿತ್ತು. ಅವುಗಳನ್ನು ಹೈಕೋರ್ಟ್‌ ಗಮನಕ್ಕೆ ತರುವ ಪ್ರಯತ್ನವನ್ನೂ ನಡೆಸಲಾಗಿತ್ತು ಎಂದು ಶಾಂತಾರಾಮ್‌ ಶೆಟ್ಟಿ ಹೇಳಿದರು.

ಕಂಬಳದ ಅವಧಿ: ಸಾಮಾನ್ಯವಾಗಿ ನವೆಂಬರ್‌ ಮೊದಲ ವಾರದಲ್ಲಿ ಆರಂಭವಾಗುವ ಕಂಬಳ ಆಚರಣೆ ಮಾರ್ಚ್‌ ತಿಂಗಳಾಂತ್ಯದ ವರೆಗೂ ಸಾಗುತ್ತದೆ. ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 60ರಿಂದ 80ರಷ್ಟು ಸಾಂಪ್ರದಾಯಿಕ ಕಂಬಳಗಳು ನಡೆಯುತ್ತವೆ. ಅಂದರೆ ದೈವಗಳ ಅನುಮತಿಯ ಮೇರೆಗೆ ನಡೆಯುವ ಕಂಬಳಗಳಿವು. ಸುಮಾರು ಸುಮಾರು 21 ಜೋಡುಕರೆ ಕಂಬಳಗಳು ನಡೆಯುತ್ತವೆ. ಸ್ಪರ್ಧೆ ಮತ್ತು ಮನರಂಜನೆಯ ಉದ್ದೇಶದಿಂದ ಆರಂಭವಾದ ಕಂಬಳಗಳು ಇವು. ಆದರೆ ಈ ಪೈಕಿ ಕೆಲವು ಧಾರ್ಮಿಕ ಆಚರಣೆಯ ಭಾಗವಾಗಿರುವವೂ ಇವೆ.

ಹೈಕೋರ್ಟ್‌ಗೆ ಮೆಮೋ ಸಲ್ಲಿಕೆ
ಪ್ರಾಣಿದಾಯ ಮಂಡಳಿಯ ಆಕ್ಷೇಪದ ಮೇರೆಗೆ ಸುಪ್ರೀಂ ಕೋರ್ಟ್‌ ಜಲ್ಲಿಕಟ್ಟು ಜತೆಗೆ ಕಂಬಳ ಆಚರಣೆಗೂ ನಿಷೇಧ ಹೇರಿದ್ದ ಕಾರಣ ಕಂಬಳ ಆಚರಿಸ ದಂತೆ ಹೈಕೋರ್ಟ್‌ ಮಧ್ಯಂತರ ತಡೆ ಯಾಜ್ಞೆ ನೀಡಿತ್ತು. ಇದೀಗ ಸುಗ್ರೀ ವಾಜ್ಞೆ ಮಾಹಿತಿಯನ್ನು ಈಗಾಗಲೇ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಆ ಮೂಲಕ ಹೈಕೋರ್ಟ್‌ ತಡೆಯಾಜ್ಞೆ ತೆರವಾಗಲಿದೆ ಎಂದು ಕಾನೂನು ಹೋರಾಟ ಸಮಿತಿಯ ಅಶೋಕ್ ಕುಮಾರ್‌ ರೈ ಹೇಳಿದರು.

* * 

ಸುಗ್ರೀವಾಜ್ಞೆ ಮೂಲಕ ಕಂಬಳ ಆಚರಣೆಗೆ ಅನುಮತಿ ಸಿಕ್ಕಿದೆ. ಆದರೆ ಮಸೂದೆ ಅಂಗೀಕಾರಗೊಂಡರೆ ಮಾತ್ರ ಕರಾವಳಿಯ ಈ ಆಚರಣೆ ನಿರಾತಂಕವಾಗಿ ಸಾಗಲು ಸಾಧ್ಯ.
ಶಾಂತಾರಾಮ್‌ ಶೆಟ್ಟಿ
ಜಿಲ್ಲಾ ಕಂಬಳ ಸಮಿತಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT