ಭಾನುವಾರ, ಡಿಸೆಂಬರ್ 8, 2019
24 °C

ಪೊಲೀಸ್ ಅಧಿಕಾರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡುತ್ತಿರುವ ವಿಡಿಯೊವನ್ನು ನಾಶ ಮಾಡಿದ ಜಮ್ಮು ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೊಲೀಸ್ ಅಧಿಕಾರಿಗೆ ಚಿತ್ರಹಿಂಸೆ ನೀಡಿ ಹತ್ಯೆ ಮಾಡುತ್ತಿರುವ ವಿಡಿಯೊವನ್ನು ನಾಶ ಮಾಡಿದ ಜಮ್ಮು ಸರ್ಕಾರ

ಶ್ರೀನಗರ: ಜಮ್ಮು ಕಾಶ್ಮೀರದಲ್ಲಿ ಉದ್ರಿಕ್ತ ಜನರಿಂದ ಹತ್ಯೆಗೊಳಗಾದ ಡಿವೈಎಸ್‍ಪಿ ಮೊಹಮ್ಮದ್ ಅಯೂಬ್ ಪಂಡಿತ್ ಅವರ ಹತ್ಯೆ ಮಾಡುವ ಮುನ್ನ ಚಿತ್ರಹಿಂಸೆ ನೀಡಿರುವ ವಿಡಿಯೊವನ್ನು ಕಾಶ್ಮೀರ ಸರ್ಕಾರ ನಾಶ ಮಾಡಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ರಾಜಧಾನಿ ಶ್ರೀನಗರದ ನೌಹತ್ತಾ ಪ್ರದೇಶದಲ್ಲಿರುವ ಐತಿಹಾಸಿಕ ಜಾಮಿಯಾ ಮಸೀದಿಯ ಮುಂಭಾಗದಲ್ಲಿ, ಕರ್ತವ್ಯ ನಿರತ ಡಿವೈಎಸ್‌ಪಿ ಮೊಹಮ್ಮದ್ ಅಯೂಬ್ ಪಂಡಿತ್ (57) ಅವರನ್ನು ಉದ್ರಿಕ್ತ ಜನರ ಗುಂಪೊಂದು ಜೂನ್ 23ರಂದು ಹೊಡೆದು ಸಾಯಿಸಿತ್ತು.ಪಂಡಿತ್ ಅವರನ್ನು ಹೊಡೆದು ಸಾಯಿಸುತ್ತಿರುವ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿತ್ತು. ಈ ದೃಶ್ಯಗಳು ತುಂಬಾ ಭಯಾನಕವಾಗಿವೆ. ಈ ವಿಡಿಯೊ ಎಲ್ಲೆಡೆ ಪ್ರಸಾರವಾದರೆ ರಾಜ್ಯದಲ್ಲಿ ಶಾಂತಿಗೆ ಭಂಗವಾಗುವ ಸಾಧ್ಯತೆ ಇದೆ ಎಂಬುದನ್ನು ಅರಿತು ಕಾಶ್ಮೀರ ಸರ್ಕಾರ ಈ ವಿಡಿಯೊವನ್ನು ನಾಶಮಾಡಿದೆ ಎಂದು ಅಲ್ಲಿನ ಅಧಿಕೃತರು ತಿಳಿಸಿರುವುದಾಗಿ ಪತ್ರಿಕೆ ವರದಿಯಲ್ಲಿ ಹೇಳಿದೆ.

ಪಂಡಿತ್ ಅವರನ್ನು ಸಾಯಿಸುವ ಮುನ್ನ ಅವರನ್ನು ವಿವಸ್ತ್ರಗೊಳಿಸಿ ಹಲ್ಲೆ ನಡೆಸಲಾಗಿತ್ತು. ಅವರ ಕೈ ಕಾಲನ್ನು ಕಬ್ಬು ಮುರಿಯುವಂತೆ ಮುರಿಯಲಾಗಿದೆ ಎಂದು ವಿಡಿಯೊ ವೀಕ್ಷಿಸಿದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕಾಶ್ಮೀರ ಕಣಿವೆಯ ನಾಗರಿಕರೊಬ್ಬರು ಈ ವಿಡಿಯೊ ಚಿತ್ರೀಕರಿಸಿದ್ದರು.

ಮರಣೋತ್ತರ ಪರೀಕ್ಷೆಯ ವರದಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಗೆ ಲಭ್ಯವಾಗಿದ್ದು ಪಂಡಿತ್ ಅವರ ಮೇಲೆ ಗಂಭೀರ ಹಲ್ಲೆ ನಡೆದಿದೆ ಎಂದು ವರದಿಯಲ್ಲಿದೆ.

ತಲೆಗೆ ಗಂಭೀರ ಗಾಯಗಳಾಗಿದ್ದು, ದೇಹದ ಬಹು ಅಂಗಾಂಗಗಳು ವೈಫಲ್ಯಕ್ಕೀಡಾಗಿ ಅವರ ಸಾವು ಸಂಭವಿಸಿದೆ ಎಂದು ಮರಣೋತ್ತರ ಪರೀಕ್ಷಾ ವರದಿಯಲ್ಲಿ ಹೇಳಲಾಗಿದೆ.

ರಂಜಾನ್‌ನಲ್ಲಿ ರಾತ್ರಿಯಿಡೀ ಪ್ರಾರ್ಥನೆ ನಡೆಸುವ ‘ಷಬ್‌–ಎ–ಕದೃ’ ಕಾರ್ಯಕ್ರಮ ಮಸೀದಿಯಲ್ಲಿ ನಡೆಯುತ್ತಿತ್ತು. ಪಂಡಿತ್ ಅವರು ಮಸೀದಿಯಿಂದ ಹೊರಬರುತ್ತಿದ್ದವರ ಫೋಟೊ ತೆಗೆಯುತ್ತಿದ್ದರು ಎನ್ನಲಾಗಿದೆ. ಇದನ್ನು ಕಂಡ ಕೆಲವರು ಅವರನ್ನು ಹಿಡಿಯಲು ಯತ್ನಿಸಿದರು. ಆಗ ಪಂಡಿತ್ ತಮ್ಮ ರಿವಾಲ್ವರ್‌ನಿಂದ ಕೆಲವು ಸುತ್ತು ಗುಂಡು ಹಾರಿಸಿದರು. ಇದರಿಂದ ಮೂವರಿಗೆ ಗಾಯಗಳಾದವು.

ಪಂಡಿತ್ ಅವರ ಶವ ಪತ್ತೆಯಾದರೂ ಅವರ ಗುರುತು ಪತ್ತೆ ಹಚ್ಚಲು ಗಂಟೆಗಳೇ ಬೇಕಾಯಿತು. ಜನರು ಅಷ್ಟೊಂದು ಬರ್ಬರವಾಗಿ ಪಂಡಿತ್ ಅವರನ್ನು ಸಾಯಿಸಿದ್ದರು.  ಕ್ಷಮಾದಿನದಂದೇ ಇಷ್ಟೊಂದು ಕ್ರೌರ್ಯ ನಡೆಸಿರುವ ಕಾಶ್ಮೀರದ ಜನರು ಪುನರ್ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಪಂಡಿತ್ ಅವರ ಹತ್ಯೆ ಮಾನವೀಯತೆಯ ಹತ್ಯೆಯಾಗಿದೆ. ಈ ಕೃತ್ಯದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿಪಿ  ಎಸ್.ಪಿ ವೈದ್ ಅವರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)