ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪುಗಳ ತೇರ ಎಳೆದೇವ...

Last Updated 5 ಜುಲೈ 2017, 19:30 IST
ಅಕ್ಷರ ಗಾತ್ರ

ರಂಗ ಬದುಕಿನಲ್ಲಿ ಬಣ್ಣ ತುಂಬಿದ ಜಾತ್ರೆ

ಹುಟ್ಟಿದ್ದು ಮೈಸೂರು. ಅನ್ನ ಕೊಟ್ಟಿದ್ದು ಉತ್ತರ ಕರ್ನಾಟಕ. ಬಹುಪಾಲು ಆಯುಷ್ಯ ಕಳೆದದ್ದು ಉತ್ತರ ಕರ್ನಾಟಕದ ರಂಗಭೂಮಿಯಲ್ಲಿಯೇ. ಹೆಚ್ಚು ಖುಷಿ ಕೊಟ್ಟಿದ್ದು ಜಾತ್ರೆ ನಾಟಕಗಳು. ನಾನಾಗ ಕಮತಗಿ ಹುಚ್ಚೇಶ್ವರ ನಾಟ್ಯ ಸಂಘದಲ್ಲಿ ನಾಯಕ ನಟಿ.

ಇಡೀ ವರ್ಷ ಜಾತ್ರೆಗಳು. ಬಾದಾಮಿ ಬನಶಂಕರಿ ಜಾತ್ರೆಯಲ್ಲಿ ಕ್ಯಾಂಪ್ ಇತ್ತು. ಗೃಹಿಣಿಯರಂತೆ ಮಕ್ಕಳು, ಗಂಡ, ನೆಂಟರೊಂದಿಗೆ ಜಾತ್ರೆ ಮಾಡಬೇಕು. ಜಾತ್ರೆ ದಿನವೇ ಅಡ್ಡಾಡಿ, ಹೊಸಬಳೆ ತೊಟ್ಟು ಹೊಸ ಸೀರೆ ಉಟ್ಟು ಪಂಚ ಫಲಾಹಾರ ಹಾಕಿಸಿಕೊಂಡು, ಬಿಸಿ ಬಜಿ ತಿಂದು ಬರಬೇಕೆಂಬ ಆಸೆಯೇ. ನಮ್ಮ ಪಾಲಿಗೆ ನಾಟಕವೇ ಜಾತ್ರೆ.

ಸಂಜೆ ಆರು ಗಂಟೆಗೆ ಶೋ ಆರಂಭ. ಇಡೀ ರಾತ್ರಿ ಮೂರು ಆಟಗಳು. ಒಂದರ ನಂತರ ಒಂದು. ಜನ ಜಂಗುಳಿ. ಪ್ರೇಕ್ಷಕರ ಕೇಕೆ, ನಗು, ಸಡಗರಕ್ಕೆ ನಾನು ಗರಿ ಬಿಚ್ಚಿದ ನವಿಲು. ಆ ಪ್ರೇಕ್ಷಕರ ರಂಗಾಭಿಮಾನಕ್ಕೆ ಬೆರಗಾಗುತ್ತಿದ್ದೆ.

ಆ ದಿನ ಬನಶಂಕರಿ ಜಾತ್ರೆಯಲ್ಲಿ ಸ್ನಾನಕ್ಕೆ ಹೊಂಡದಲ್ಲಿ ಮುಳುಗಿ ಇನ್ನೇನು ಮೇಲೇಳಬೇಕು. ಜಾರಿ ಬಿದ್ದುಬಿಟ್ಟೆ. ಯಾರೋ ಪುಣ್ಯಾತ್ಮ ಕೈಹಿಡಿದು ಜಗ್ಗಿ ಮೇಲೆ ಎಳೆತಂದ. ಆಗ ನಮ್ಮ ಸಹ ಕಲಾವಿದರು ‘ಅಕ್ಕೋರು ಹೊಂಡದಾಗ ಮುಳುಗಿ ಸತ್ತಿದ್ದರೆ ಮಾಲೀಕರಿಗೆ ಫಜೀತಿತ್ತು. ಹೆಣ ಮೈಸೂರಿಗೆ ಒಯ್ಯಬೇಕೋ ಕಮತಗಿಗೆ ಒಯ್ಯಬೇಕೋ ಅಂತ ದಿಗಿಲಾಗುತ್ತಿತ್ತು’ ಎಂದು ಚಟಾಕಿ ಹಾರಿಸಿದಾಗ, ನಾನು, ಭಯದಲ್ಲಿ ನಡುಗುತ್ತ ನಿಂತವಳೂ ಗೊಳ್ಳ್ ಎಂದು ನಕ್ಕಿದ್ದೆ.

ಅದೂ ಜಾತ್ರೆ ಕ್ಯಾಂಪ್. ನಾ ಪಡೆದ ಮೊದಲ ಮಗು ಜ್ವರದಿಂದ ತೊಡೆ ಮೇಲೆ ನನ್ನೇ ನೋಡ್ತಾ ಕಣ್ಣು ಮುಚ್ಚಿದಾಗ ಕರುಳು ಕಿತ್ತು ಬಂದಿತ್ತು. ಮುಂದೆ ಎರಡೇ ದಿನಕ್ಕೆ ತಿಂತಣಿ ಮೌನೇಶ್ವರ ಜಾತ್ರೆಯಲ್ಲಿ ನಾಟಕದ ಕ್ಯಾಂಪ್. ನೋವನ್ನು ಉಡಿಯಲ್ಲಿ ಕಟ್ಟಿಕೊಂಡೇ ಹೋದೆ. ನಾಟಕದ ಹೆಸರು ‘ಗಂಗೆ ಬಂದಳು ಗೌರಿ ಹೋದಳು’. ಕೆರೆಗೆ ಹಾರವಾಗುವ ತುಂಬಿದ ಬಸುರಿ ಕಥೆ. ಅದೇತಾನೆ ನನ್ನ ಕಂದನನ್ನು ಮಣ್ಣಲ್ಲಿ ಇಟ್ಟು ಬಂದಿದ್ದೆ. ಇಲ್ಲಿ ನೋಡಿದರೆ ಖಾಲಿ ತೊಟ್ಟಿಲು ತೂಗುವ ದೃಶ್ಯ. ಅದೂ ನಾಟಕ ಆಗಿರಲಿಲ್ಲ. ಸಹಜವಾಗಿ ಬಂತೆಂದರು ನೋಡಿದವರು. ಆದರೆ ಒಬ್ಬ ತಾಯಿ ಮಗುವನ್ನು ಕಳೆದುಕೊಂಡು ಬೋರಾಡಿ ಅಳುತ್ತಿದ್ದಳೆಂದು ಅವರಿಗೆ ಹೇಗೆ ತಿಳಿಯಬೇಕು? ಅಲ್ಲಿ ಜಾತ್ರೆ ಕಲೆಕ್ಷನ್ ಭರ್ಜರಿ, ಎಣಸಾಕಾಗಲ್ಲ ಅಂದರು. ಹಾಗೇ ಕರುಳು ಸುಟ್ಟು ಬಂದ ಕಣ್ಣೀರನ್ನೂ ಹಿಡಿಯಲಾಗಲಿಲ್ಲ.

ಬನಶಂಕರಿ ಜಾತ್ರೆಯಲ್ಲಿ ನಮ್ಮ ಕ್ಯಾಂಪ್ ಇತ್ತು. ಪಕ್ಕದಲ್ಲಿಯೇ ಸಿನಿಮಾ ಟೆಂಟ್ ಹಾಕಿದ್ದರು. ನಮ್ಮ ಪಾತ್ರ ಬರುವವರೆಗೆ ಸಿನಿಮಾ ನೋಡುವ ಹುಚ್ಚು. ಮೇಕಪ್‌ನಲ್ಲಿಯೇ ಪರದೆ ಸರಿಸಿ ಸಿನಿಮಾ ನೋಡಲು ನಿಂತೆವು. ಆಗ ಟಿಕೆಟ್ ಹರಿಯುವವ ಬಡಿಗೆ ತಂದು ‘ಯಾರವ್ರು ನಿಮ್ಮೋವ್ರ ಹಂಗss ಬಂದು ಪರದೆ ಸರಿಸಿ ನೋಡೋರು? ಅಲ್ಲಿಯಾದ್ರ ಮೈಸೂರು ಮಾಲತಿಶ್ರೀ ನೋಡಾಕ್ ಮುಂಗಡ ಟಿಕೆಟ್ ತೊಗೋತಾರ. ಇಲ್ಲಿ ಪುಕ್ಕಟೆ ಸಿನಿಮಾ ನೋಡಾಕ್ ಪರದೆ ಸರಿಸ್ತಾರ. ಕಲೆಕ್ಷನ್ ಹೆಂಗ್‌ ಆಗ್ಬೇಕು’ ಎಂದು ಹೊಡೆಯಲು ಬಂದ. ಆಗ ‘ಅಣ್ಣಾ ನಾವು ನಾಟಕದೋರು. ನಾನು ಮಾಲತಿಶ್ರೀ’ ಎಂದಾಗ ಅವನೇ ಬೆಚ್ಚಿಬಿದ್ದ. ಕತ್ತಲಲ್ಲಿಯೇ ನನ್ನ ಕಂಡು ಪಿಳಿ ಪಿಳಿ ಕಣ್ಣು ಬಿಟ್ಟಿದ್ದ. ಈ ಘಟನೆ ನೆನಸಿಕೊಂಡು ನಕ್ಕಿದ್ದೇ ನಕ್ಕಿದ್ದು.

ನಾಟಕದವರೆಂದರೆ ಮನೆ ಬಾಡಿಗೆ ಕೊಡಲು ಹಿಂಜರಿದವರ ಮುಂದೆ ಜಾತ್ರೆಯಲ್ಲಿ ಪ್ರೇಕ್ಷಕರ ಪ್ರೀತಿ ಗರಬಡಿಸಿದೆ. ರೊಟ್ಟಿ ತಿನಿಸಿದ ಅವ್ವ, ಬಳೇ ಹಾಕಿಸಿದ ಅಕ್ಕ, ಫಲಾಹಾರದ ಹೆಣಕಿ ಚೀಲ ಕೊಟ್ಟು ಹೋದ ಅಪ್ಪ, ಕುಂಕುಮ ಭರಣಿ ಕೊಟ್ಟ ಅಣ್ಣ... ಅವರಾರೂ ನನ್ನ ಒಡಹುಟ್ಟಿದವರಲ್ಲ. ಅವರು ತೋರಿದ ವಿಶ್ವಾಸ ಮಾತ್ರ ಜನ್ಮಾಂತರದ್ದು. ಬದುಕಿನ ನಿನ್ನೆಗಳಲ್ಲಿ ಬಣ್ಣವನ್ನೇ ಕಾಣದೇ ಕಳೆದುಹೋದ ದಿನಗಳು ನೂರೆಂಟು. ಅಂಥದರಲ್ಲಿ ಇಂತಹ ಒಂದೆರೆಡು ಜಾತ್ರೆಗಳ ನೆನಪುಗಳು ಅಳಿಸಲಾಗದ ಬಣ್ಣ ತುಂಬಿವೆ. ನೆನಪು ತೋಯಿಸಿವೆ.

ಈ ರಂಗಭೂಮಿಯ ಸಖ್ಯದ ಜಾತ್ರೆ ನೂರೆಂಟು ನೆನಪಿನ ಜೋಳಿಗೆ ಬಿಚ್ಚಿದೆ. ಅದರಲ್ಲಿ ಕೆಲವು ಸಿಹಿ ಬೆಂಡು ಬೆತ್ತಸಾದರೆ, ಇನ್ನೂ ಕೆಲವು ಹರಕೆಯ ಕುರಿಯಂತೆ ನೋವು ಹಿಂಡಿದ ಪ್ರಸಂಗಗಳು.

-ಮಾಲತಿಶ್ರೀ, ಮೈಸೂರು ಬೆಂಗಳೂರು

**

ಕಳಶಕ್ಕೆ ಬಿದ್ದ ಹಣ್ಣು

ಜಾತ್ರೆಗಳೆಂದರೆ ಹಾಗೇ. ಎಲ್ಲಿಲ್ಲದ ಹುರುಪು. ಹಳೆ ಸ್ನೇಹಿತರನ್ನು ಈ ನೆಪದಲ್ಲಾದರೂ ಕೂಡುವ ಒಂದು ಅನನ್ಯ ಗಳಿಗೆ. ಆ ಸಮಯದಲ್ಲಿ ಕೀಟಲೆಗಳೇ ತುಂಬಿರುತ್ತವೆ. ಹಳೆ ಸ್ನೇಹಿತರ ನೆನಪುಗಳು, ಬಿಟ್ಟುಹೋದ ಗೆಳತಿಯರು ಜಾತ್ರೆಗೆ ಬಂದಾಗ ನೋಡುವ ಕಳ್ಳ ನೋಟಗಳು, ಮನೆಯಲ್ಲಿ ಸಿದ್ಧವಾಗಿರುತ್ತಿದ್ದ ಬಗೆಬಗೆಯ ಭಕ್ಷ್ಯಗಳು...

ನಮ್ಮೂರಿನ (ಡ.ಸ. ಹಡಗಲಿ) ಜಾತ್ರೆಗೆ ನಾನು ನನ್ನ ಡಿಗ್ರಿ ಸ್ನೇಹಿತರನ್ನೆಲ್ಲಾ ಕರೆದಿದ್ದೆ. ಯಾವ ಬೀಗರೂ ಬರದ ನಮ್ಮನೆ ಅಂದು ನನ್ನ ಸ್ನೇಹಿತರಿಂದ ತುಂಬಿತ್ತು. ಸಂತೋಷದಿಂದ ಹೊಟ್ಟೆ ತುಂಬಾ ಊಟ ಮಾಡಿಕೊಂಡು ಜಾತ್ರೆ ಕಡೆಗೆ ಹೊರಟೆವು. ನಮ್ಮೂರಿನ ಗಡ್ಡಿತೇರಿನ ಎತ್ತರ ನೋಡಿದ ನನ್ನ ಗೆಳೆಯರು ಆಶ್ಚರ್ಯ ಪಟ್ಟುಕೊಂಡರು. ಜಾತ್ರೆಯಲ್ಲಿ ಬಗೆ-ಬಗೆಯ ಬಣ್ಣ-ಬಣ್ಣದ ಸಾಮಾನುಗಳನ್ನು, ಬಣ್ಣದ ಹೂವುಗಳನ್ನು ನೋಡುತ್ತಾ ಕಣ್ತುಂಬಿಕೊಳ್ಳುತ್ತಾ ನಿಂತೆವು. ನಮ್ಮೂರಿನ ನಾಲ್ಕು ಎಕರೆ ಅಳತೆಯ ತುಂಬಿದ ಸಿಹಿ ನೀರಿನ ಕೆರೆ ನೋಡಿಕೊಂಡು ಸಂಜೆ ಆರು ಗಂಟೆ ಸುಮಾರಿಗೆ ತೇರಿರುವ ಕಡೆ ಬಂದೆವು. ಪೂಜೆ ಎಲ್ಲಾ ಮುಗಿದ ನಂತರ ತೇರು ಎಳೆಯತೊಡಗಿದರು. ಉತ್ತತ್ತಿ, ಬಾಳೆಹಣ್ಣು, ಪ್ಯಾರಲ ಹಣ್ಣು ತೂರಿ ತೂರಿ ಬರತೊಡಗಿದವು. ಅದಕ್ಕೆ ಸವಾಲು ಹಾಕುವಂತೆ ಮೊಸಂಬಿ ಹಣ್ಣುಗಳು ಇನ್ನೂ ವೇಗವಾಗಿ ಬಂದು ಹೊಸ ಅಂಗಿಗಳ ಮೇಲೆ ಬೀಳತೊಡಗಿದವು.

ಜಾತ್ರೆಯಲ್ಲಿ ಗಲಾಟೆಯಾಗಬಾರದು ಎಂದು ಪೊಲೀಸರು ತೇರಿನ ಸುತ್ತಲೂ ನಿಂತಿದ್ದರು. ತೇರಿನ ಸುತ್ತಮುತ್ತ ಉತ್ತತ್ತಿ ಬಾಳೆಹಣ್ಣುಗಳು ಬಹಳ ಬೀಳುತ್ತವೆ ಎಂದು ನಾವು ಅದರ ಸುತ್ತಲೂ ಓಡಾಡತೊಡಗಿದೆವು. ಇದನ್ನು ಕಂಡು ತಲೆಗೆ ಹೆಲ್ಮೆಟ್ ಹಾಕಿದ್ದ ಒಬ್ಬ ಕಾನ್‌ಸ್ಟೆಬಲ್‌, ಉತ್ತರ ಕರ್ನಾಟಕದ ಭಾಷೆಯಲ್ಲಿ ಚಂದವಾಗಿ ಬೈದ! ನಮಗೆ ಎಲ್ಲಿಲ್ಲದ ಸಿಟ್ಟು ಬಂತು. ಅವನಿಗೆ ಏನಾದರೂ ಮಾಡಬೇಕು ಎಂದು ಯೋಚಿಸತೊಡಗಿದೆವು. ಅದೇ ಸಮಯಕ್ಕೆ ಮುಂದೆ ನಿಂತ ನನ್ನ ಸ್ನೇಹಿತನಿಗೆ ಪ್ಯಾರಲ ಹಣ್ಣು ಬಂದು ಬಡಿಯಿತು. ಐಡಿಯಾ ಮಾಡಿದೆವು. ಐದಾರು ಪ್ಯಾರಲ ಹಣ್ಣುಗಳನ್ನು ಖರೀದಿ ಮಾಡಿ ತೇರು ಮತ್ತೆ ತನ್ನ ಗದ್ದುಗೆ ಕಡೆಗೆ ಹೋಗುವುದನ್ನೇ ಕಾಯುತ್ತಾ ನಿಂತೆವು. ಸುತ್ತಲಿನ ಜನರು ಉತ್ತತ್ತಿ ಹಿಡಿಯುವುದರಲ್ಲಿ ಬ್ಯುಸಿಯಾಗಿದ್ದರು. ತೇರು ಸಾಗಿತು. ಮತ್ತೆ ಉತ್ತತ್ತಿ, ಬಾಳೆಹಣ್ಣು ತೂರಿ ಬರತೊಡಗಿದವು. ಇದೇ ಸುಸಂಧಿ ಎಂದುಕೊಂಡು ಒಂದನೇ ಪ್ಯಾರಲ ಹಣ್ಣು ಆ ಕಾನ್‌ಸ್ಟೆಬಲ್‌ಗೆ ಬಿರುಸಾಗಿಯೇ ಎಸೆದೆವು. ಅದು ಅವನ ಹೆಲ್ಮೆಟ್ಟಿಗೆ ಬಡಿಯಿತು, ಎರಡನೆಯದು, ಮೂರನೆಯದು, ನಾಲ್ಕನೆಯದು ಕೂಡ ಅವನ ಹೆಲ್ಮೆಟ್ಟಿಗೆ ಬಡಿದವು. ಐದನೇ ಹಣ್ಣು ಮಾತ್ರ ಅವನ ಕುತ್ತಿಗೆಗೆ ಬಡಿಯಿತು. ಅವನಿಗೆ ಎಂಥಾ ಕೋಪ ಬಂದಿತ್ತೆಂದರೆ ಅವನ ಕಣ್ಣುಗಳೆಲ್ಲಾ ಕೆಂಪಾಗಿದ್ದವು. ಯಾರವರು ಒಗೆದಿದ್ದು ಎಂದು ಹುಡುಕತೊಡಗಿದ. ಅಷ್ಟರಲ್ಲಿ ನಮ್ಮ ಸೇಡು ತೀರಿತ್ತು. ಕೊನೆಯ ಹಣ್ಣನ್ನು ತೇರಿಗೆ ಎಸೆದೆವು. ಅದು ಕಳಶಕ್ಕೆ ಹೋಗಿ ತಾಗಿತು. ಭಕ್ತಿಯಿಂದ ಕೈ ಮುಗಿದೆವು. ಆ ಕಾನ್‌ಸ್ಟೆಬಲ್‌ ನಮ್ಮನ್ನೇ ಅನುಮಾನಿಸಿ ನೋಡತೊಡಗಿದ. ನಾವು ಏನು ಗೊತ್ತಿಲ್ಲದವರಂತೆ ಜನರ ಮಧ್ಯೆ ತೂರಿಕೊಂಡೆವು.

-ರಮೇಶ ಶಿ ಕಂಪ್ಲಿ ಧಾರವಾಡ

**

ಭೂತಗಳ ವರ್ತಮಾನ

ಅಜ್ಜನ ಕಾಲಕ್ಕೆ ಭೂತಗಳಿದ್ದವು. ಅವುಗಳಿಗೆ ಹಸಿವಿತ್ತು, ಹಬ್ಬವೂ ಇತ್ತು, ಅವುಗಳಿಂದ ಅಜ್ಜನಂಥವರಿಗೆ ಗೌರವ ವಿತ್ತು. ಹಾಗಾಗಿಯೇ ಅಜ್ಜ ಹನುಮಂತ ದೇವರಿಗೆ ತೇರುಗಾಲಿ ಗಳನ್ನು ಕಲ್ಲಿನಲ್ಲಿ ಕೆತ್ತಿಸಿಕೊಟ್ಟಿದ್ದ. ಅವುಗಳೋ ಸುಮಾರು ಆರು ಅಡಿ ಎತ್ತರದವು. ಮೇಲೆ ಕಬ್ಬಿಣದ ಹಳಿಗಳು ಬೇರೆ. ಈಗಲೂ ಅವುಗಳು ಅಜ್ಜನ ದಾನಕ್ಕೂ ಭಕ್ತಿಗೂ ದರ್ಪಕ್ಕೂ ಸಂಕೇತದಂತಿವೆ. ಈ ಗಾಲಿಗಳು ಸರಿಸುಮಾರು 80 ವರ್ಷಗಳಷ್ಟು ಹಳೆಯವು. ಇಷ್ಟು ವರ್ಷಗಳೂ ವರ್ಷಕ್ಕೆ ಸಾವಿರಾರು ಹರಕೆಯ ತೆಂಗಿನಕಾಯಿಗಳು ತಮ್ಮ ಹಣೆಗೆ ಬಡಿದು ನುಚ್ಚುನೂರಾದರೂ ಇವು ಜಪ್ಪೆಂದೆದ್ದು ಕಾಣೆ. ಆದರೆ, ಇವುಗಳ ಜೊತೆಗೆ ಹುಟ್ಟಿದ ಅನೇಕರು ಮಣ್ಣು ಸೇರಿದ್ದಾರೆ, ದಂತಕಥೆಯಾಗಿದ್ದಾರೆ. ಅಷ್ಟೇ ಏಕೆ? ಇವುಗಳು ಇಂದು ತುಟಿಯ ಮೇಲೆ ಮೀಸೆ ಕುಡಿಯೊಡೆದ ಯುವಕರಿಗೆ ಬಲಪರೀಕ್ಷೆಯ, ಬುದ್ಧಿಪರೀಕ್ಷೆಯ, ಪ್ರೇಮ ಪರೀಕ್ಷೆಯ ಸಾಧನಗಳಾಗಿವೆ.

ಹಳ್ಳಿಯೆಂದರೆ ಹಾಗೆಯೇ. ನೂರು ಕಷ್ಟಗಳಿಗೆ ನೂರು ಹರಕೆಗಳು, ನೂರಾರು ಸುದ್ದಿಗಳು. ನಾ ಹೇಳ ಹೊರಟದ್ದು, ಈ ಸುದ್ದಿಗಳನ್ನಲ್ಲ; ಭೂತಗಳೆಂದೆನಲ್ಲ, ಅವುಗಳ ಕಥೆಯನ್ನು. ಪ್ರತಿವರ್ಷ ಒಂದಿಪ್ಪತ್ತೈದು ಭೂತಗಳು ಬರುತ್ತಿದ್ದವು ಜಾತ್ರೆಗೆಂದು. ಈ ಭೂತಗಳಿಗೆ ಸೇತುವೆ ಕಣ್ಣಿನಂತಹ ಕಣ್ಣು, ಮರದದಿಮ್ಮಿಯಂತಹ ಮೀಸೆ, ಕೋಡುಗಲ್ಲಿನಂತಹ ಗಲ್ಲ, ಖಡ್ಗದಂತಹ ಬಿಳಿ ಕೋರೆ, ತೆರೆದ ಬಾಯಿಯಿಂದ ಧುಮ್ಮಿಕ್ಕುವ ನಾಲಗೆ, ಮುಖದಲ್ಲಿ ರಕ್ತಕೆಂಪು ಬೇರೆ. ನಮ್ಮ ಬಯಲುಸೀಮೆಯಲ್ಲಿ ದೇವರಿಲ್ಲದ, ದೀಪವಿಲ್ಲದ ಗುಡಿಗಳಿದ್ದಾವು, ಈ ಭೂತಗಳಿಲ್ಲದ ಗುಡಿಗಳಿಲ್ಲ.

ಜಾತ್ರೆಯ ದಿನ ಈ ಭೂತಗಳಿಗೆ ಪ್ರತಿ ಮನೆಯವರು ಎಡೆ ಹಾಕಿಸುತ್ತಾರೆ. ಎಷ್ಟು ಭೂತಗಳಿವೆಯೋ ಅಷ್ಟು ಉದ್ದನೆಯ ಕರಿಕಂಬಳಿ ಅಥವಾ ಬಿಳಿಪಂಚೆಯನ್ನು ಹಾಸಿ ಅದರ ಮೇಲೆ ಅಚ್ಚುಬೆಲ್ಲ, ಹಲಗೆಬೆಲ್ಲ, ಅಂಟುಬೆಲ್ಲ, ಕರಿಬೆಲ್ಲ, ಉಂಡೆಬೆಲ್ಲ, ಪುಡಿಬೆಲ್ಲಕ್ಕೆ ಮಂಡಕ್ಕಿ-ಕೊಬ್ಬರಿ ಬೆರೆಸಿ ಗುಡ್ಡೆ ಹಾಕುತ್ತಾರೆ. ಭೂತಗಳು ಎಡೆಸುತ್ತಲೂ ಕುಣಿಕುಣಿದು, ಕೈಬಳಸದೆಯೇ ಬಾಯಿ ಹಚ್ಚಿ ಅದನ್ನೆಲ್ಲ ತಿನ್ನುತ್ತವೆ. ಪಳಗಿದ ಭೂತಗಳು ಪ್ರತಿ ಮನೆಯಲ್ಲಿ ಎಲ್ಲವನ್ನೂ ತಿನ್ನುತ್ತವೆ. ಬಳಿಕ ನೆಲಕ್ಕೂ ಬಾಯಿ ಹಾಕುತ್ತವೆ. ಮನೆಯವರು ಸೋತು ಮುಂದಿನ ವರ್ಷ ಜಾಸ್ತಿ ಹಾಕಿಸುತ್ತೇವೆ ಎಂದು ಕೈಮುಗಿದರೆ ಹ್ಞಾ, ಹೋ ಎಂದು ಸಣ್ಣ ಹುಡುಗರು ಹೆದರಿ ಉಚ್ಚೆಹೊಯ್ದುಕೊಳ್ಳುವಂತೆ ಕೇಕೆಹಾಕುತ್ತ ಮುಂದೆ ಸಾಗುತ್ತವೆ. ಇಂತಹದ್ದನ್ನು ನೋಡಿಯೇ ಇರಬೇಕು ಕವಿ ಪಂಜೆ ಮಂಗೇಶರಾಯರು ತೆಂಕಣದ ಬಿರುಗಾಳಿಗೆ ‘ಹಸಿವಿನ ಭೂತ ಕೂಯುವ ಕೂವೋ’ ಎಂದದ್ದು! ಊರ ತುಂಬಾ ಹೀಗೆ ಮುಕ್ಕಿದರೂ ಹನುಮಂತದೇವರ ಗುಡಿ ಮುಂದೆ ಹಾಕಿದ ದೊಡ್ಡ ಎಡೆ ತಿನ್ನುವುದಕ್ಕೆ ಆತುರ ಬೇರೆ ಇವಕ್ಕೆ. ಇವುಗಳ ಭೂರಿಭೋಜನದ ವೈಖರಿ ನೋಡಲು ಇವುಗಳಿಗಿಂತಲೂ ಮುಂಚೆಯೇ, ರಜಾಕ್‌ ಸಾಬಿ ಹೊಲಿದ ದೊಗಳೆ ಚಡ್ಡಿಯೊಳಗೆ ತೊಳ್ಳೆನಡಗುತ್ತಿದ್ದರೂ ಆ ಮಣ್ಣು ಗುಡಿಯೇರಿ ಕಣ್ಣಕೀಲಿಸಿಕೊಂಡು ಕೂತಿರುತ್ತಿದ್ದೆವು.

ಬೆಲ್ಲ, ಜೋಳ ಬೆರೆತ ಪಾಯಸಕ್ಕೆ ಹಾಲು, ತುಪ್ಪವಲ್ಲದೆ ಮೇಲೆ ಬಾಳೆಹಣ್ಣು ಬೇರೆ, ಸುಮಾರು 10–15 ಸೇರಿನದು. ಬಿಸಿ ಬಿಸಿ ಪಾಯಸವ ಕುಡಿಬಾಳೆ ಎಲೆಯ ಮೇಲೆ ಓರಣವಾಗಿ ಬಡಿಸಿದ್ದರೆ, ಅದರ ಘಮಲಿಗೆ ನಮಗೂ ಭೂತವಾಗಿ ಕುಣಿಯಬೇಕು ಎನಿಸುತ್ತಿತ್ತು. ಇನ್ನು ಭೂತಗಳಿಗೆ ಕೇಳಬೇಕೆ? ಉರಿಮೆ ತಪ್ಪಡಿಗಳ ಶಬ್ದ ಹೆಚ್ಚಾಗುತ್ತಿದ್ದಂತೆಯೇ ಎಡೆ ತಿನ್ನಲು ಹಾತೊರೆಯುತ್ತಿದ್ದವು.

ಅವುಗಳ ಕುಣಿತ, ಹ್ಞಾ, ಹೋ ಅಬ್ಬರ, ಜನರ ಉದೋ ಎನ್ನುವ ಗದ್ದಲ, ದೇವರ ಮುಂದಿನ ದೊಡ್ಡ ಗಂಟೆಯ ಶಬ್ದ, ಕುಂಕುಮ-ಅರಿಷಿಣ ವಿಭೂತಿ-ಊದುಬತ್ತಿ ಘಮಲು, ಬತ್ತಿಯಾರಿದ ದೀಪದ, ಉರಿದ ಕರ್ಪೂರದ ಕಮಟು, ಕ್ಷಣಾರ್ಧದಲ್ಲಿ ಇಡೀ ವಾತಾವರಣ ಭೂತಮಯ, ಹಸಿವುಮಯ.

ಒಮ್ಮಿಂದೊಮ್ಮೆಲೇ ಅನುಭವಿ ಮುದಿಭೂತವೊಂದು ಎಡೆ ಮುಟ್ಟುವುದೇ ತಡ, ಎಲ್ಲ ಭೂತಗಳು ಅರಚುತ್ತಾ, ಬೊಗಸೆಯಲ್ಲಿ ಪಾಯಸವನ್ನು ಮೊಗೆಮೊಗೆದು ಬಾಯಿಗೆ ಸುರಿದುಕೊಳ್ಳುತ್ತವೆ.

ಅವುಗಳ ಮುಂದಿನ ರಾಶಿರಾಶಿ ಅನ್ನ ನಿಮಿಷಾರ್ಧದಲ್ಲಿ ಖಾಲಿಯಾಗಿ ಇನ್ನೂ ಹಸಿವೆಂದು ಅರಚುತ್ತಾ, ಜನರ ಸಂದಿಯಲ್ಲಿದ್ದ ಗೌಡನನ್ನು ಹಿಡಿದುತಂದು ಅನ್ನಕ್ಕಾಗಿ ಕಾಡುತ್ತವೆ. ಗೌಡ ಏನು ಮಾಡಿಯಾನು?

ಇವುಗಳ ಹಸಿವು ನೀಗಲಾರದಕ್ಕೆ ಜಾತ್ರೆಗೆ ಸೇರಿದ ಜನರ ಮುಖದ ಮೇಲೆ ಕೋಪದ ಬುಗ್ಗೆಗಳೆದ್ದು, ‘ಆ ಗೌಡನಿಗೇನು ದಾಡಿ? ಕೊಟ್ಟಿರ್ಲಿಲ್ವಾ ಚಂದಾನ? ಹಾಕ್ಸಬೇಕಿತ್ತು’ ಎನ್ನುವ ಮಾತುಗಳು ಕತ್ತಲಾದ ಮೇಲೂ ಗೌಡನಿಗೆ ಭೂತವಾಗಿ ಕಾಡುತ್ತವೆ.     

–ಡಾ. ಎಸ್.ಮಾರುತಿ ಚಿತ್ರದುರ್ಗ

**

ನಮ್ಮವರು ಉತ್ಸವ ಮೂರ್ತಿಯಾದಾಗ...

ಪಶುವೈದ್ಯರ ಮಡದಿಯಾಗಿ ಎರಡು ದಶಕಗಳ ಹಿಂದೆ ನೆಲೆಸಿದ್ದು ಹಳ್ಳಿಯೊಂದರಲ್ಲಿ. ಗ್ರಾಮೀಣ ಪರಿಸರ, ಸಂಸಾರಕ್ಕೆ ಹೊಂದಿಕೊಳ್ಳುವಷ್ಟರಲ್ಲಿ ಆ ಊರಿನ ಜಾತ್ರೆ ಬಂದೇ ಬಿಟ್ಟಿತ್ತು. ಬ್ಯಾಂಡ್ ಸೆಟ್ಟಿನ ವಾದ್ಯಗಳ ಹಿಮ್ಮೇಳದಲ್ಲಿ ದೇವರ ಉತ್ಸವ ಮೂರ್ತಿಯ ಮೆರವಣಿಗೆ ಊರಿನ ಮುಖ್ಯ ರಸ್ತೆಯಲ್ಲಿ ಸಾಗುವಾಗ ಪ್ರತಿ ಮನೆಯವರು ಹಣ್ಣು-ಕಾಯಿಯ ನೈವೇದ್ಯ ಒಪ್ಪಿಸುವುದು ಪದ್ಧತಿ.

ಮದುವೆಗೂ ಮುಂಚೆ ಮೂರು ವರ್ಷದಿಂದ ಅಲ್ಲೇ ನೆಲೆಸಿರುವ ನಮ್ಮವರಿಗೆ ಊರ ಜನ ಪರಿಚಿತರು. ಒಳ್ಳೆಯ ಕೈಗುಣ ಹೊಂದಿರುವರು ಮತ್ತು ಮನೆ ಮನೆಗೂ ಹೋಗಿ ಸಕಾಲದಲ್ಲಿ ಸಾಕುಪ್ರಾಣಿಗಳಿಗೆ ಚಿಕಿತ್ಸೆ ನೀಡುವರೆಂಬ ಅಭಿಮಾನ ಊರ ಮಂದಿಯಲ್ಲಿತ್ತು. ದೇವರ ಉತ್ಸವ ನಮ್ಮ ಮನೆಯ ಮುಂಭಾಗಕ್ಕೆ ಬಂದಾಗ ಎಲ್ಲರಂತೆ ನಾನೂ ಹಣ್ಣು-ಕಾಯಿಯೊಂದಿಗೆ ಯಜಮಾನರ ಜೊತೆಯಲ್ಲಿ ಉತ್ಸವದ ಸಮೀಪಕ್ಕೆ ಹೋದೆ. ಹಣ್ಣು-ಕಾಯಿಯ ತಟ್ಟೆಯನ್ನು ಪೂಜಾರಿಗೆ ನೀಡಿ ದೇವರ ಕಾಣಿಕೆಗಾಗಿ ದುಡ್ಡು ತೆಗೆದುಕೊಳ್ಳಲು ನಮ್ಮವರಿದ್ದೆಡೆಗೆ ತಿರುಗಿದರೆ ಅವರೆಲ್ಲಿದ್ದಾರೆ?

ಸುತ್ತಲೂ ಕಾಣದೆ ಗಾಬರಿಯಾಯಿತು! ಹೊಸ ಊರು, ಕರೆಂಟ್ ಬೇರೆ ಇಲ್ಲ. ಎಣ್ಣೆ ದೀವಟಿಗೆಗಳ ಬೆಳಕಿನಲ್ಲಿ ಅತ್ತ ಇತ್ತ ಕಣ್ಣಾಡಿಸಿದರೂ ಸುಳಿವೇ ಇಲ್ಲ. ಅಷ್ಟರಲ್ಲಿ ಸ್ವಲ್ಪ ದೂರದಲ್ಲಿ ಒಂದಷ್ಟು ಯುವಕರು ಯಾರನ್ನೋ ಎತ್ತಿಕೊಂಡು ಬ್ಯಾಂಡ್ ಸೆಟ್ಟಿನ ತಾಳಕ್ಕೆ ಹೆಜ್ಜೆ ಹಾಕುತ್ತಿರುವ ದೃಶ್ಯ ಮಸುಕಾಗಿ ಕಾಣಿಸಿತು. ದಿಟ್ಟಿಸಿ ನೋಡಿದರೆ ಅದು ನಮ್ಮವರೇ!

ಅವರನ್ನು ಮೇಲೆತ್ತಿ ಹಿಡಿದು ಆ ಯುವಕರು ಉತ್ಸಾಹದಿಂದ ನೃತ್ಯ ಮಾಡುತ್ತಿದ್ದರು. ಆ ದೃಶ್ಯ ಕಂಡು ಗಾಬರಿಯಾದೆ. ನಮ್ಮವರು ಗಡಿಬಿಡಿಯಲ್ಲಿ ಲುಂಗಿಯಲ್ಲೇ ದೇವರ ಉತ್ಸವಕ್ಕೆ ಹಣ್ಣು-ಕಾಯಿ ನೀಡಲು ನನ್ನೊಂದಿಗೆ ಬಂದಿದ್ದರು. ಇವರ ಹುಚ್ಚಾಟದಲ್ಲಿ ಲುಂಗಿ ಬಿಚ್ಚಿ ಹೋದರೆ ಗತಿ ಏನಪ್ಪಾ? ದೇವರೇ ಕಾಪಾಡು ಎಂದು ಪ್ರಾರ್ಥಿಸುವಷ್ಟರಲ್ಲಿ ಇವರನ್ನು ಕೆಳಗಿಳಿಸಿ ಜೋರಾಗಿ ಜೈಕಾರ ಹಾಕುತ್ತಾ ಮುಂದೆ ಸಾಗಿದರು. ಅಬ್ಬಾ! ಎಂದು ನಿಟ್ಟುಸಿರುಬಿಟ್ಟೆ. ಆಮೇಲೆ ಹಲವು ಊರುಗಳಲ್ಲಿ ನೆಲೆಸಿದರೂ ಅಲ್ಲಿಯ ಜಾತ್ರೆಯ ಉತ್ಸವ ಮನೆ ಮುಂದೆ ಬಂದಾಗಲೆಲ್ಲಾ ಹಳೆಯ ಘಟನೆ ಪಕ್ಕನೆ ನೆನಪಾಗಿ ಮೋಜೆನಿಸುತ್ತದೆ. ಯಜಮಾನರು ಈಗ ಜಾಗೃತರಾಗಿದ್ದಾರೆ, ಪ್ಯಾಂಟ್ ಧರಿಸಿಯೇ ಉತ್ಸವಕ್ಕೆ ಬರುತ್ತಾರೆ!

-ವಿನುತ ಮುರಳೀಧರ ಶಿವಮೊಗ್ಗ

**

ಮತ್ತೆ ಪಡೆಯುವಾಸೆ

ನಮ್ಮೂರು ಮಲ್ಲಾಪುರ. ನಮ್ಮ ಪಕ್ಕದ ಊರು ಹತ್ತೂರು. ಜಾತ್ರೆ ಇರುತ್ತಿದ್ದುದೂ ಅಲ್ಲಿ. ಜಾತ್ರೆಗೆ ಹೋಗಲು ಹಿಂದಿನ ದಿನದಿಂದಲೇ ತಯಾರಿ ಶುರು. ಹಬ್ಬಕ್ಕೆಂದು ಎರಡು ದಿನ ಮುಂಚೆಯೇ ಬಂದ ನೆಂಟರು. ಅಣ್ಣ–ತಮ್ಮ, ಅತ್ತೆಯ ಮಕ್ಕಳು. ಎಲ್ಲರಿಗೂ ಸಂಭ್ರಮ.

ಹುಡುಗಿಯರೆಲ್ಲ ಹಿಂದಿನ ರಾತ್ರಿ ಕೈತುಂಬ ಮದರಂಗಿ ಹಾಕಿಸಿಕೊಳ್ಳಲು ಮೆಹಂದಿ ಹಾಕುವವರ ಮುಂದೆ ಕ್ಯೂ ನಿಲ್ಲುತ್ತಿದ್ದರು. ನಂತರ ಅದು ಅಳಿಸದಂತೆ ರಾತ್ರಿಯೆಲ್ಲಾ ಕಣ್ಣರಳಿಸಿ ಕಾದರೂ ಅಲ್ಲಲ್ಲಿ ಅಳಿಸಿರುತ್ತಿತ್ತು. ಹಂಗೂ ಬೆಳಗಿನ ಜಾವ ಐದು ಗಂಟೆಗೆ ಎದ್ದು ಮನೆ ಮುಂದೆ ಸಗಣಿ ಸಾರಿಸಿ ಕೊಟ್ಟ ನಂತರ ರಂಗೋಲಿ ಬಿಡಿಸಲು ಮತ್ತೆ ಪೈಪೋಟಿ. ನಂತರ ಸ್ನಾನಮಾಡಿ ಅಪ್ಪ ತಂದ ಬಣ್ಣಬಣ್ಣದ ಬಟ್ಟೆ ಉಟ್ಟು ಮತ್ತೆ ಜಾತ್ರೆಯಲ್ಲಿ ಆಟಿಕೆಗಳನ್ನು ಕೊಳ್ಳಲು ದುಡ್ಡಿಗಾಗಿ ಅಪ್ಪನ ಮುಂದೆ ಕ್ಯೂ.

ದುಡ್ಡು ತೆಗೆದುಕೊಂಡು ಮನೆಯವರೊಟ್ಟಿಗೆ ನಮ್ಮೂರಿನಿಂದ ಅರ್ಧ ಮೈಲು ದೂರದ ಊರಿಗೆ ಪಯಣ. ಆ ಪಯಣವೇ ಒಂದು ಸೊಗಸು. ಈಗಿನಂತೆ ಆಗ ಬೈಕು, ಟ್ರ್ಯಾಕ್ಟರ್, ಕಾರುಗಳಲ್ಲಿ ಹೋಗುತ್ತಿರಲಿಲ್ಲ. ನಡೆದುಕೊಂಡೇ ಪಯಣ. ದಾರಿಯ ತುಂಬಾ ಹೋಗುತ್ತಿದ್ದ ಕಲರ್ ಕಲರ್ ನೀರೆಯರನ್ನು ನೋಡುವುದೇ ಚೆಂದ. ಇನ್ನು ಹತ್ತೂರು ತಲುಪಿದಾಗ ಅಮ್ಮಂದಿರು ತಿಮ್ಮಪ್ಪನ ದರ್ಶನಕ್ಕೆ ಹಾತೊರೆದರೆ ನಾವು ಮಾತ್ರ ತೇರಿಗೆ ಹಣ್ಣು ಮೆಣಸಿನಕಾಳು ಎಸೆದು ಅಮ್ಮ ತಿರುಗಿ ನೋಡುವಷ್ಟರಲ್ಲಿ ಆಟಿಕೆ ಖರೀದಿಸಲು ಪರಾರಿ!

ಆಟಿಕೆ ಖರೀದಿಸುವಾಗ ಕಣ್ಣಿಗೆ ಕಂಡಿದ್ದೆಲ್ಲಾ ಖರೀದಿಸುವಾಸೆ. ಆದರೆ ಅಪ್ಪ ಕೊಟ್ಟಿರುವ ದುಡ್ಡಲ್ಲಿ ಎರಡೋ ಮೂರೋ ಆಟಿಕೆ ಕೊಂಡು ನಂತರ ಮತ್ತೆ ಅಮ್ಮನ ಕಾಡಿ ಐದು ರೂಪಾಯಿ ತೆಗೆದುಕೊಂಡು ಮಂಡಕ್ಕಿ, ಖಾರ, ಬೆಂಡು, ಬತಾಸು ಕೊಂಡುಕೊಂಡು, ಜಾತ್ರೆಯಲ್ಲಿ ಕೊಂಡ ಕನ್ನಡಕವನ್ನ ಹಾಕೊಂಡು ಮಂಡಕ್ಕಿ ತಿನ್ನುತ್ತಾ ಊರಿಗೆ ವಾಪಸಾಗುತ್ತಿದ್ದೆವು. ಆ ದಿನಗಳನ್ನೀಗ ಮತ್ತೆ ಪಡೆಯುವಾಸೆ.

-ನೇತ್ರಾವತಿ ಜಿ. ಎಸ್. ಮಲ್ಲಾಪುರ (ಹೊನ್ನಾಳಿ)

**

ಮಾವಿನ ತೋಪಿನ ಕೆಳಗೆ...

ಬೀದರ ಹತ್ತಿರದ ಚೌಳಿ ಗ್ರಾಮದಲ್ಲಿ ಚೌಳಿ ಮುತ್ಯಾ ಅಂತ ಇದ್ದ. ಆಗ ಈಗಿರುವಷ್ಟು ತಿಳುವಳಿಕೆ ನಮ್ಮಗಿರಲಿಲ್ಲ. ಸುಮಾರು ಏಳು ದಿನ ಪ್ರವಚನ ನಡೀತಾ ಇತ್ತು. ನಂತರ ಗೋಧಿ ಹುಗ್ಗಿ ಊಟ. ಹತ್ತೂರ ಜನ ಎಲ್ಲಾ ಸೇರುತ್ತಿದ್ದರು. ಬಗೆ ಬಗೆಯ ತಿಂಡಿ ತಿನಿಸುಗಳು, ಆಧುನಿಕ ಮಕ್ಕಳಾಟಿಕೆಯ ಯಂತ್ರಗಳು ಯಾವುದೂ ಇಲ್ಲದ ಕಾಲವದು.

ಜಾತ್ರೆ ಎಂದರೆ ಸರಳದರಲ್ಲಿಯೇ ಸಂಭ್ರಮ. ಜನ ಆ ಸಮಯದಲ್ಲಿ ಊಟಕ್ಕೆ ಕೊಟ್ಟಷ್ಟು ಮಹತ್ವವನ್ನು ಬೇರೆಯದಕ್ಕೆ ನೀಡುತ್ತಿರಲಿಲ್ಲ. ದೊಡ್ಡಪ್ಪನ ಬೆರಳು ಹಿಡಿದು ಪ್ರಸಾದ ತಿನ್ನುವ ಜನರನ್ನು ನೋಡುವಾಗ ಏಕೋ ಮನಸ್ಸಿಗೆ ಕಸಿವಿಸಿಯಾಗುತ್ತಿತ್ತು. ಎಲ್ಲಿ ಊಟ ಖಾಲಿ ಆಗುವುದೋ ಅನ್ನುವ ರೀತಿಯಲ್ಲಿ ತಿಂತಾ ಇದ್ರು.

ಹೆಚ್ಚೆಂದರೆ ಬಲೂನ್, ರಟ್ಟಿನ ಖಡ್ಗ, ಬಳೆಗಳು, ಮಡಿಕೆಗಳು ಇರುತ್ತಿದ್ದವು. ಗೃಹ ಬಳಕೆಯ ಕೈತಯಾರಿಕೆ ವಸ್ತುಗಳೇ ಹೇರಳವಾಗಿ ಸಿಗುತ್ತಿದ್ದವು. ಜನರ ಅವಶ್ಯಕತೆ ಸಹ ಅದಾಗಿತ್ತು. ಮಾವಿನ ತೋಪಿನ ಕೆಳಗೆ ಬಯಲು ವ್ಯಾಪಾರ ನಡೆಯುತ್ತಿತ್ತು.

ತೇರು ಎಳೆಯುತ್ತಿರಲಿಲ್ಲ. ಅಲ್ಲಿನ ಗಣೇಶ ಸ್ವಾಮಿಗಳ ಆರಾಧನೆಯೇ ಜೋರಾಗಿ ನಡೀತಾ ಇತ್ತು. ಜಾತ್ರೆ ಅಂದ್ರೆ ಸಾಕು, ತಟ್ಟನೆ ನೆನಪಾಗುವುದು ಒಂದೇ ಘಟನೆ.

ನಮ್ಮಪ್ಪನ ಅಣ್ಣ ಒಬ್ಬರು ಇದ್ರು. ಅಂದ್ರೆ ನನಗೆ ದೊಡ್ಡಪ್ಪ. ಕೃಷಿ ಮಾಡುವ ಉತ್ಕಟ ಬಯಕೆಯ ಜೊತೆಗೆ ಗಾಂಜಾದ ಸಹವಾಸದಿಂದ ಹಾಳಾದವರು. ಆಗಿನ್ನೂ ನಾನು ತುಂಬಾ ಚಿಕ್ಕವನಿದ್ದೆ. ಮೂರನೇ ಕ್ಲಾಸ್ ಇರಬಹುದು. ಚೌಳಿ ಜಾತ್ರೆ ಬಂದಿತು. ನಮ್ಮೂರಿಂದ ನಾಲ್ಕು ಕರಿಹೊಲ ದಾಟಿದರೆ ಸಾಕು ಆ ಗುಡಿ ಬರುತ್ತದೆ. ಆಗ ಈ ನಮ್ಮ ದೊಡ್ಡಪ್ಪ ತಲೆ ಓಡಿಸಿದರು. ಒಂದು ಚೀಲ ಮಂಡಕ್ಕಿ ತಂದು ಅದಕ್ಕೆ ಮಗಳಿಂದ ಖಾರ, ಉಪ್ಪು, ಎಣ್ಣೆ ಹಾಕಿಸಿದರು, ಅಲ್ಲಲ್ಲಿ ಒಂದಿಷ್ಟು ಶೇಂಗಾ, ಪುಠಾಣಿ ಸಹ ಕಾಣುತ್ತಿದವು. ಏನೋ ಒಂದು ರೀತಿಯ ’ಚುಡುವಾ’ ತಯಾರಿಸಿದರು.

ನಮ್ಮ ದೊಡ್ಡಪ್ಪ ಮತ್ತಷ್ಟು ತಲೆ ಓಡಿಸಿದ ಯಾರಾದರೂ ಜೊತೆಗೆ ಸಿಕ್ಕರೆ ತಾನು ಕಾಡು ಹರಟೆ ಹೊಡೆಯುವುದಕ್ಕೆ ಅನುಕೂಲವಾಗಲಿ ಅಂತ ಜಾತ್ರೆಗೆ ಮಂಡಕ್ಕಿ ಮಾರಲು ನನ್ನನ್ನೂ ಕರೆದೊಯ್ದ. ಸಂಜೆ ಆಗಿತ್ತು. ಮಣ್ಣು ಅಳಿಯಂತೆ ಹದವಾಗಿತ್ತು. ಪಾದಗಳಿಟ್ಟರೆ ಸಾಕು ಕಾಲಿನಾಕೃತಿಯ ಗುಂಡಿ ಅಲ್ಲಿ ಮೂಡುತ್ತಿತ್ತು. ಹೇಗೊ ತಲುಪಿದೆವು. ಮಾರಾಟಕ್ಕೆ ಕೂತೆ. ದೊಡ್ಡಪ್ಪ ಎಲ್ಲಿಗೋ ಹೋದ.

ಸುಮಾರು ಎರಡು ತಾಸು ಕಳೆಯಿತು. ಒಬ್ಬರೂ ಮಂಡಕ್ಕಿ ಮೂಸಿ ನೋಡಲಿಲ್ಲ. ಕೊನೆಗೆ ಒಂದಿಬ್ಬರು ಖರೀದಿಸಿದರು. ಹತ್ತೊ ಇಪ್ಪತ್ತೊ ರೂಪಾಯಿ ಬಂತು. ಎಲ್ಲೆಲ್ಲೂ ಸುತ್ತಾಡಿ ಬಂದ ದೊಡ್ಡಪ್ಪ ನಿನ್ನಲ್ಲಿ ಚೂರೂ ವ್ಯಾಪಾರದ ಚಾಣಾಕ್ಷತನವಿಲ್ಲವೆಂದು ಬೈದು ಕೈಗೆ ಐದು ರೂಪಾಯಿ ಇಟ್ಟು ಮನೆಗೆ ಹೊರಟು ಹೋಗೆಂದ.

ಆ ಕತ್ತಲಲ್ಲಿ ನಾನೊಬ್ಬನೇ ಮನೆ ಸೇರುವುದು ಅಸಾಧ್ಯವಾಗಿತ್ತು. ಅವನೇ ಜತೆಗೆ ಬಂದ. ಯಾಕೋ ನಿರ್ಲಿಪ್ತನಾಗಿದ್ದ. ಕೂತು ಗಾಂಜಾ ಸೇದಿದ. ಪುಟ್ಟ ಮಕ್ಕಳಿಗೆ ಉಚಿತವಾಗಿ ಮಂಡಕ್ಕಿ ಕೊಟ್ಟ, ಅಗಲವಾದ ಬಾಯಿಂದ ನಕ್ಕ. ವಾಪಸ್ ಮನೆಗೆ ಬಂದಾಗ...ನನ್ನಪ್ಪನ ಕೈಯಲ್ಲಿ ಬೆತ್ತ ಇತ್ತು!

-ಕಪಿಲ ಪಿ ಹುಮನಾಬಾದೆ ಕಲಬುರ್ಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT