ಶುಕ್ರವಾರ, ಡಿಸೆಂಬರ್ 6, 2019
17 °C

ಮನುಕುಲಕ್ಕೆ ಹೊಸ ದಿಕ್ಕು ತೋರಿದ ದಿಕ್ಸೂಚಿ!

Published:
Updated:
ಮನುಕುಲಕ್ಕೆ ಹೊಸ ದಿಕ್ಕು ತೋರಿದ ದಿಕ್ಸೂಚಿ!

ಜಗತ್ತನ್ನು ಬದಲಾಯಿಸಿದ ಆವಿಷ್ಕಾರಗಳಲ್ಲಿ ದಿಕ್ಸೂಚಿ ಉಪಕರಣವೂ (ಕಂಪಾಸ್‌) ಒಂದು. ದಿಕ್ಕಿನ ದಾರಿ ತೋರುವ ಅಥವಾ ಪಥದರ್ಶನ (ನ್ಯಾವಿಗೇಷನ್‌) ಮಾಡುವ ಈ ಸಾಧನವು ಮನುಕುಲಕ್ಕೆ ನೀಡಿದ ಕೊಡುಗೆ ಅಪಾರವಾದದ್ದು. ಜಗತ್ತಿನಲ್ಲಿ ‘ಪತ್ತೆ ಯುಗ’ಕ್ಕೆ (ಏಜ್‌ ಆಫ್‌ ಡಿಸ್ಕವರಿ) ನಾಂದಿ ಹಾಡಿದ ಕೀರ್ತಿ ಸಲ್ಲುವುದು ದಿಕ್ಸೂಚಿಗೆ. ಭೂಗ್ರಹದಲ್ಲಿ ಸಾಗರದ ಮಧ್ಯೆ ಹರಡಿಕೊಂಡಿದ್ದ ಭೂ ಭಾಗಗಳನ್ನು ಪತ್ತೆ ಮಾಡುವಲ್ಲಿ ಈ ಪುಟ್ಟ ಸಾಧನ ನಿರ್ವಹಿಸಿದ ಪಾತ್ರ ಅಭೂತಪೂರ್ವವಾದುದು. ಇದರ ಅನ್ವೇಷಣೆ ಆಗದಿದ್ದರೆ ಈಗ ಈ ಜಗತ್ತು ಹೇಗಿರುತ್ತಿತ್ತೋ ಏನೋ? ಊಹಿಸಲು ಸಾಧ್ಯವಿಲ್ಲ.

ಹೆಸರೇ ಹೇಳುವಂತೆ ಇದು ದಿಕ್ಕನ್ನು ಸೂಚಿಸುವ ಸಾಧನ. ಹಿಂದಿನ ಜನರ ಸಮುದ್ರಯಾನ, ಪ್ರಪಂಚ ಪರ್ಯಟನೆಗಳಿಗೆ ದಾರಿದೀಪವಾಗಿದ್ದು ಇದೇ ಉಪಕರಣ. ಇದಕ್ಕೆ ಸರಿ ಸುಮಾರು ಎರಡು ಸಾವಿರ ವರ್ಷಗಳ ಸುದೀರ್ಘ ಇತಿಹಾಸ ಇದೆ. ಈ ಜಗತ್ತಿಗೆ ದಿಕ್ಸೂಚಿಯ ಕೊಡುಗೆ ಕೊಟ್ಟಿದ್ದು ಚೀನಾ. ಕ್ರಿ.ಪೂ 2ನೇ ಶತಮಾನ ಮತ್ತು ಕ್ರಿ.ಶ ಒಂದನೇ ಶತಮಾನದ ನಡುವೆ ಹನ್ ರಾಜವಂಶದ ಆಡಳಿತದಲ್ಲಿ ಇದರ ಆವಿಷ್ಕಾರ ಆಯಿತು.

ಆರಂಭದಲ್ಲಿ ಇದನ್ನು ಪಥದರ್ಶನದ ಉದ್ದೇಶಕ್ಕೆ ಬಳಸುತ್ತಿರಲಿಲ್ಲ. ಆಗ ಇದು ಅಲ್ಲಿನ ಜ್ಯೋತಿಷರ ಕೈಯಲ್ಲಿತ್ತು. ಜನರ ಭವಿಷ್ಯ ಹೇಳಲು ಇದನ್ನು ಬಳಸುತ್ತಿದ್ದರು! ಅಲ್ಲದೇ, ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ- ದಿಕ್ಕುಗಳ ಆಧಾರದಲ್ಲಿ ಅವುಗಳನ್ನು ಸಮರೇಖೆಗೆ ತರಲು ದಿಕ್ಸೂಚಿಯನ್ನು ಬಳಸುತ್ತಿದ್ದರು. ಪ್ರಯಾಣದ ಸಂದರ್ಭದಲ್ಲಿ ದಿಶೆ ತೋರಲು ಇದನ್ನು ಬಳಸಬಹುದು ಎಂಬ ಸಂಗತಿ ಜನರಿಗೆ ಹೊಳೆದದ್ದು ಆ ನಂತರವೇ.

ಹಾಗಾದರೆ, ದಿಕ್ಸೂಚಿ ಕಂಡು ಹಿಡಿಯುವುದಕ್ಕೂ ಮೊದಲು ಜನರು ನೌಕಾಯಾನ ಅಥವಾ ಭೂ ಮಾರ್ಗದಲ್ಲಿ ದೀರ್ಘ ಪ್ರಯಾಣ ಮಾಡುತ್ತಿರಲಿಲ್ಲವೇ?

ಮಾಡುತ್ತಿದ್ದರು. ಆದರೆ, ದಿಕ್ಕುಗಳನ್ನು ಪತ್ತೆ ಹಚ್ಚಲು ಅವರು ಮಾಡುತ್ತಿದ್ದ ಕಸರತ್ತು ಅಷ್ಟಿಷ್ಟಲ್ಲ. ಭೂಭಾಗವನ್ನು ಗುರುತು ಮಾಡಿಕೊಂಡು ತಾವು ಸಾಗಬೇಕಾದ ಹಾದಿಗಳನ್ನು ಅಂದಿನವರು ನಿರ್ಧರಿಸುತ್ತಿದ್ದರು. ಇಲ್ಲವೇ ಸೂರ್ಯ ಹಾಗೂ ಇನ್ನಿತರ ಆಕಾಶಕಾಯಗಳು ಇರುವ ಸ್ಥಾನವನ್ನು ಪರಿಗಣಿಸಿ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದರು. ಸೂರ್ಯ ದರ್ಶನ ಆಗದಿದ್ದಾಗ ಪಥದರ್ಶನ ಸವಾಲಿನ ಕೆಲಸವಾಗಿತ್ತು. ದಿಕ್ಸೂಚಿಯ ಆವಿಷ್ಕಾರದಿಂದಾಗಿ ಮೋಡ ಕವಿದ ವಾತಾವರಣ ಇರುವಾಗಲೂ, ರಾತ್ರಿ ವೇಳೆಯಲ್ಲೂ ದಿಕ್ಕುಗಳನ್ನು ಗುರುತಿಸುವುದು ಸರಾಗವಾಯಿತು.

ಚೀನಾದಲ್ಲಿ ರೂಪುಗೊಂಡ ಜಗತ್ತಿನ ಮೊತ್ತ ಮೊದಲ ದಿಕ್ಸೂಚಿಯು ಕಾಂತ ಗುಣ ಹೊಂದಿರುವ ಕಬ್ಬಿಣದ ಅದಿರಿನಿಂದ ಮಾಡಿದ್ದು. ಇದನ್ನು ಕಾಂತೀಯ ದಿಕ್ಸೂಚಿ (ಮ್ಯಾಗ್ನೆಟಿಕ್‌ ಕಂಪಾಸ್‌) ಎಂದೇ ಕರೆಯುತ್ತಾರೆ. ಈಗಲೂ ಕಾಂತೀಯ ದಿಕ್ಸೂಚಿಗಳೇ ಹೆಚ್ಚು ಜನಪ್ರಿಯ. ದಿಕ್ಸೂಚಿ ಎಂದರೆ ಸಾಕು ಅದನ್ನು ಕಾಂತೀಯ ದಿಕ್ಸೂಚಿ ಎಂದೇ ಜನರು ಪರಿಗಣಿಸುತ್ತಾರೆ. ಈ ಮಾದರಿಯ ದಿಕ್ಸೂಚಿಯ ನಿರ್ಮಾಣ ಮತ್ತು

ವಿನ್ಯಾಸದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಆದರೆ, ಅದರ ಕಾರ್ಯನಿರ್ವಹಣೆಯ ಮೂಲ ತತ್ವದಲ್ಲಿ ಒಂದಿಷ್ಟೂ ವ್ಯತ್ಯಾಸವಾಗಿಲ್ಲ.

ಈ ದಿಕ್ಸೂಚಿಯು ಕಾಂತೀಯ ಮುಳ್ಳನ್ನು (ಎರಡು ಕಡೆಯೂ ಚೂಪಾದ ಮೊನೆಯನ್ನು ಹೊಂದಿರುವ ಕಡ್ಡಿ) ಹೊಂದಿರುತ್ತದೆ. ಭೂಮಿಯ ಕಾಂತಕ್ಷೇತ್ರಕ್ಕೆ ಅನುಗುಣವಾಗಿ ಇದನ್ನು ತಿರುಗಿಸಲಾಗುತ್ತದೆ. ಅಂತಿಮವಾಗಿ ಅದು ಭೂಮಿಯ ಉತ್ತರ ದಿಕ್ಕು ಮತ್ತು ದಕ್ಷಿಣ ದಿಕ್ಕಿಗೂ ಮುಖಮಾಡಿ ನಿಲ್ಲುತ್ತದೆ.

ಕಾಂತೀಯ ದಿಕ್ಸೂಚಿಯ ಹಿಂದಿರುವ ಸಿದ್ಧಾಂತವನ್ನು ಯಾವಾಗ ಕಂಡುಹಿಡಿಯಲಾಯಿತು ಎಂಬ ಬಗ್ಗೆ ನಿಖರ ಮಾಹಿತಿ ಇಲ್ಲ. ವಿಜ್ಞಾನಿ ಮತ್ತು ಇತಿಹಾಸಕಾರರಿಗೆ ಅದನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ. ಪುರಾತನ ಗ್ರೀಕರಿಗೆ ಭೂಮಿಯ ಕಾಂತೀಯ ಗುಣದ ಬಗ್ಗೆ ಅರಿವಿತ್ತು ಎಂದು ಹೇಳಲಾಗುತ್ತಿದೆ. ಆದರೆ, ದಿಕ್ಸೂಚಿಯ ಅನ್ವೇಷಣೆ ಅವರ ಕೈಗೆ ಎಟುಕಿರಲಿಲ್ಲ.

(ಮುಂದುವರಿಯುವುದು)

ಪ್ರತಿಕ್ರಿಯಿಸಿ (+)