ಬುಧವಾರ, ಡಿಸೆಂಬರ್ 11, 2019
20 °C

ಕುತೂಹಲವೇ ಕಲಿಕೆಯಾಗಲಿ

Published:
Updated:
ಕುತೂಹಲವೇ ಕಲಿಕೆಯಾಗಲಿ

ಅಶ್ವಿನಿ

‘ಅಮ್ಮನಿಗೆ ನಾನೊಬ್ಬಳೇ ಮಗಳಾಗಿದ್ದರೂ ಚಿಕ್ಕ ವಯಸ್ಸಿನಲ್ಲೇ ಹಾಸ್ಟೆಲ್‌ಗೆ ಸೇರಿಸಿದ್ದರು. ಕಾರಣ, ನಾನು ಮನೆಯಲ್ಲಿದ್ದರೆ ಅವಳ ರಾತ್ರಿ ಜೀವನಕ್ಕೆ ತೊಂದರೆಯಾಗುತ್ತಿತ್ತು ಎಂದು! ಇಂದು ಅವಳು ಬದುಕಿದ್ದರೆ, ಉನ್ನತ ವ್ಯಾಸಂಗಕ್ಕಾಗಿ ನಾನು ವಿದೇಶಕ್ಕೆ ಹೋಗುತ್ತಿರುವುದನ್ನು ಕಂಡು ಖುಷಿಪಡುತ್ತಿದ್ದಳು. ಅಮ್ಮ ಮತ್ತು ಆಕೆಯ ವೃತ್ತಿಯನ್ನು ನಾನು ಈಗಲೂ ಗೌರವಿಸುತ್ತೇನೆ. ಆಕೆ ಬದುಕಿದ್ದರೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದೆ’ ಅಶ್ವಿನಿ ಕಂಬನಿ ಮಿಡಿಯುತ್ತ ನುಡಿದಿದ್ದು ಹೀಗೆ.

ಅಶ್ವಿನಿ ಮುಂಬೈ ನಿವಾಸಿ. ಕಲಾ ಚಿಕಿತ್ಸೆ (ಆರ್ಟ್ ಥೆರಪಿ) ವಿಷಯದಲ್ಲಿ ಉನ್ನತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ಹೋಗುತ್ತಿದ್ದಾರೆ. ಅಮೆರಿಕದ ಸ್ಥಳೀಯ ಕಲಾ ವಿಶ್ವವಿದ್ಯಾಲಯವೊಂದು ಹತ್ತು ಲಕ್ಷ ರೂಪಾಯಿ ವಿದ್ಯಾರ್ಥಿ ವೇತನ ನೀಡಿ ಉನ್ನತ ವ್ಯಾಸಂಗದ ಅವಕಾಶ ಕಲ್ಪಿಸಿದೆ.

ಅಶ್ವಿನಿ ಮುಂಬೈನ ಲೈಂಗಿಕ ಕಾರ್ಯಕರ್ತೆಯ ಮಗಳು. ಹತ್ತನೇ ವಯಸ್ಸಿರುವಾಗ ಹಾಸ್ಟೆಲ್‌ನಿಂದ ತಪ್ಪಿಸಿಕೊಂಡು ರೈಲು ನಿಲ್ದಾಣವೊಂದರಲ್ಲಿ ಕಾಲ ಕಳೆಯುತ್ತಿರುತ್ತಾರೆ. ಈ ವೇಳೆ ‘ಕ್ರಾಂತಿ’ ಸ್ವಯಂ ಸೇವಾ ಸಂಸ್ಥೆಯ ಕಾರ್ಯಕರ್ತರೊಬ್ಬರು ಇವರನ್ನು ರಕ್ಷಿಸಿ ಸಂಸ್ಥೆಗೆ ಕರೆತರುತ್ತಾರೆ.

ನಂತರ ಅದೇ ಸಂಸ್ಥೆಯಲ್ಲೇ ವಸತಿ ಸಹಿತ ವಿದ್ಯಾಭ್ಯಾಸಕ್ಕೆ ಅನುವು ಮಾಡಿಕೊಡುತ್ತಾರೆ.

ಇವರಿಗೆ ಚಿಕ್ಕವಯಸ್ಸಿನಿಂದಲೂ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಹಾಗೂ ಕುತೂಹಲ. ಹತ್ತನೇ ತರಗತಿ ಬಳಿಕ ಚಿತ್ರಕಲೆ ಡಿಪ್ಲೊಮಾಗೆ ಸೇರುತ್ತಾರೆ. ವಿಶೇಷ ಆಸ್ಥೆಯಿಂದ ಚಿತ್ರಕಲೆ ಕಲಿತು ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಾರೆ. ಮುಂದೆ ‘ಆರ್ಟ್‌ ಥೆರಪಿ’ ಅಧ್ಯಯನಕ್ಕಾಗಿ ಪ್ರವೇಶ ಪರೀಕ್ಷೆ ಬರೆದು ಅದರಲ್ಲಿ ಯಶಸ್ವಿಯಾಗಿ ಉಚಿತ ವಿದ್ಯಾರ್ಥಿ ವೇತನ ಪಡೆಯುತ್ತಾರೆ.

ಮಾನಸಿಕ ಕಾಯಿಲೆಯಿಂದ ಬಳಲುತ್ತಿರುವವರ ಎದುರು ಕಲಾಕೃತಿಗಳನ್ನು ರಚಿಸಿ ಅವರ ಮನಸ್ಸಿಗೆ ತುಸು ನೆಮ್ಮದಿ ನೀಡುವುದೇ ಆರ್ಟ್‌ ಥೆರಪಿಯಾಗಿದೆ. ಅಮೆರಿಕ ಸೇರಿದಂತೆ ಯುರೋಪ್ ದೇಶಗಳಲ್ಲಿ ಈ ಆರ್ಟ್ ಥೆರಪಿ ಜನಪ್ರಿಯ. ಈ ಕಲಾ ಚಿಕಿತ್ಸೆಯನ್ನು ಕಲಿತು ಭಾರತದಲ್ಲಿರುವ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಬೇಕು ಎಂಬುದು ಅಶ್ವಿನಿ ಅವರ ಗುರಿ.

**

ಸಿಂಡಿ ಕಿಂಬರ್ಲಿ

ಸಾಮಾಜಿಕ ಜಾಲತಾಣಗಳು ಮನರಂಜನೆ ಮತ್ತು ಮಾಹಿತಿ ವಿನಿಮಯಕ್ಕೆ ಸೀಮಿತವಾಗಿಲ್ಲ, ಇವುಗಳಿಂದ ಹಣ ಸಂಪಾದನೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕೆನಡಾದ ರೂಪದರ್ಶಿ ಹಾಗೂ ಗಾಯಕಿ ಸಿಂಡಿ ಕಿಂಬರ್ಲಿ.

ಕೆನಾಡದಲ್ಲಿ ಸಿಂಡಿ ಜನಪ್ರಿಯ ಹಾಡುಗಾರ್ತಿ. ಹಾಗೇ ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕುವ ಮೂಲಕ ಲಕ್ಷಾಂತರ ಯುವಕರ ಹೃದಯ ಕದ್ದಿದ್ದಾರೆ!

ಚಿತ್ರಗಳೇ ಪ್ರಧಾನವಾಗಿರುವ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಖಾತೆ ತೆರೆದಿರುವ ಇವರು, ಪ್ರತಿ ಗಂಟೆಗೆ ಸಾವಿರಾರು ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ.

‘ಮಾಡೆಲಿಂಗ್‌ನಲ್ಲಿ ಅವಕಾಶಗಳು ಸೀಮಿತ. ಸದಾ ಸ್ಪರ್ಧೆಯಿಂದ ಕೂಡಿರುವ ಈ ಕ್ಷೇತ್ರದಲ್ಲಿ ಹೊಸಬರಿಗೆ ಹೆಚ್ಚು ಹೆಚ್ಚು ಅವಕಾಶಗಳು ಲಭ್ಯ. ಹಾಗಾಗಿ ಹಳಬರು ನಿರುದ್ಯೋಗಿಗಳಾಗುತ್ತಾರೆ. ವರ್ಷದಲ್ಲಿ ಸಿಗುವ ಹತ್ತಾರು ಅವಕಾಶಗಳಿಗೆ ಕಾಯಬೇಕಾಗುತ್ತದೆ. ಅದಕ್ಕಾಗಿಯೇ ನಾನು ಇನ್‌ಸ್ಟಾಗ್ರಾಂ ಖಾತೆ ತೆರೆದು ಹಣ ಸಂಪಾದಿಸುವ ದಾರಿ ಕಂಡುಕೊಂಡೆ’ ಎಂದು ಹೇಳುತ್ತಾರೆ.

ಇವರ ಇನ್‌ಸ್ಟಾಗ್ರಾಂ ಫಾಲೋವರ್‌ಗಳ ಸಂಖ್ಯೆ 30 ಲಕ್ಷ ದಾಟಿದೆ. ಅವರು ಪ್ರತಿನಿತ್ಯ ಹಲವು ಚಿತ್ರಗಳನ್ನು ಅಪ್‌ಲೋಡ್‌ ಮಾಡುತ್ತಾರೆ. ಈ ಚಿತ್ರಗಳನ್ನು ಲಕ್ಷಾಂತರ ಜನರು ನೋಡುವುದರಿಂದ ಇನ್‌ಸ್ಟಾಗ್ರಾಂ ಕಂಪೆನಿ ಗಂಟೆಗಳ ಲೆಕ್ಕದಲ್ಲಿ ಹಣ ನೀಡುತ್ತದೆ. ಕೆಲ ಜಾಹೀರಾತು ಕಂಪೆನಿಗಳು ಇವರ ಖಾತೆಯಲ್ಲಿ ಜಾಹೀರಾತು ಪ್ರಕಟಿಸಿ ಹಣ ನೀಡುತ್ತಾರೆ. ಹೀಗೆ ಸಿಂಡಿ, ದಿನವೊಂದಕ್ಕೆ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದಾರೆ.

‘ಕಾರ್ಯಕ್ರಮಗಳಲ್ಲಿ ಹಾಡಿದರೂ, ರ್‍ಯಾಂಪ್‌ ಮೇಲೆ ಹೆಜ್ಜೆ ಹಾಕಿದರೂ ಇಷ್ಟು ಹಣ ಸಂಪಾದನೆ ಮಾಡಲು ಸಾಧ್ಯವಿಲ್ಲ. ಭಿನ್ನ ಆಲೋಚನೆಯಿಂದ ಸಾಮಾಜಿಕ ಜಾಲತಾಣಗಳ ಮೂಲಕ ಸುಲಭವಾಗಿ ಹಣ ಗಳಿಸಬಹುದು’ ಎಂದು ಹೇಳುತ್ತಾರೆ.

cindykimberlycontact@gmail.com

**

ರಾಹುಲ್ ದುಬೆ

ಉನ್ನತ ಗುರಿಯನ್ನು ಹೊಂದಿರುವವರು ಪ್ರಚಾರವನ್ನು ಬಯಸದೇ ತಳಮಟ್ಟದಿಂದ ಕೆಲಸ ಮಾಡಲು ಆರಂಭಿಸುತ್ತಾರೆ. ಹೀಗೆ ಎಲ್ಲಿಂದಲೋ ಬಂದ ವ್ಯಕ್ತಿಯೊಬ್ಬರು ನಾಲ್ಕು ವರ್ಷಗಳಲ್ಲಿ ಒಂದು ಗ್ರಾಮವನ್ನು ಸರ್ವತೋಮುಖವಾಗಿ ಅಭಿವೃದ್ಧಿ ಮಾಡುವ ಮೂಲಕ ದೇಶದ ಗಮನ ಸೆಳೆದಿದ್ದಾರೆ. ಅವರೇ 26ರ ಹರೆಯದ ರಾಹುಲ್ ದುಬೆ.

ರಾಹುಲ್ ಹುಟ್ಟಿದ್ದು ಉತ್ತರ ಪ್ರದೇಶದ ಝಾನ್ಸಿಯಲ್ಲಿ. ಅವರ ತಂದೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿದ್ದರಿಂದ ಸೈನಿಕ ಶಾಲೆಯಲ್ಲೇ ವಿದ್ಯಾಭ್ಯಾಸ ಪೂರೈಸಿದರು. ದೆಹಲಿಯಲ್ಲಿ ಎಂಜಿನಿಯರಿಂಗ್ ಪದವಿ ಪೂರೈಸಿ ಮನೆಗೆ ಮರಳಿದರು. ಮುಂದೆ ಏನು ಮಾಡಬೇಕೆಂಬ ಆಲೋಚನೆಯಲ್ಲೇ ಒಂದು ವರ್ಷ ಕಳೆದರು. ಈ ವೇಳೆ ‘ಆಲ್ಪಾ’ ಸ್ವಯಂ ಸೇವಾ ಸಂಸ್ಥೆಯ ಮೂರು ವಾರಗಳ ಗ್ರಾಮೀಣಾಭಿವೃದ್ದಿ ಫೆಲೋಶಿಪ್‌ಗೆ ಆಯ್ಕೆಯಾದರು.

ಫೆಲೋಶಿಪ್‌ನ ಕ್ಷೇತ್ರಕಾರ್ಯಕ್ಕಾಗಿ ರಾಹುಲ್ ರಾಜಸ್ಥಾನದ ಉದಯಪುರ ಜಿಲ್ಲೆಯ ಕುಗ್ರಾಮ ಕತ್ವಾರಾಗೆ ಬಂದರು.

ಮೂರು ವಾರಗಳಲ್ಲಿ ಫೆಲೋಶಿಪ್‌ ಮುಗಿದರೂ ಇವರು ಮಾತ್ರ ಆ ಗ್ರಾಮವನ್ನು ತೊರೆಯಲಿಲ್ಲ! ಆ ಹಳ್ಳಿಯ ಜನರೊಂದಿಗೆ ಬೆರೆತರು, ಅಲ್ಲಿನ ಯುವಕರಿಗೆ ಮತ್ತು ಮಕ್ಕಳಿಗೆ ಇಂಗ್ಲಿಷ್ ಮತ್ತು ಗಣಿತ ಕಲಿಸಿದರು. ರೈತರ ಜಮೀನುಗಳಲ್ಲಿ ಉಚಿತವಾಗಿ ದುಡಿದರು.

ದೇವಸ್ಥಾನಗಳಲ್ಲಿ ಮಲಗುತ್ತ ಹಳ್ಳಿಯ ಅಭಿವೃದ್ಧಿಗಾಗಿ ಪಣತೊಟ್ಟರು. ಹೀಗೆ ತಳಮಟ್ಟದಿಂದ ಸಮಾಜ ಸೇವೆ ಆರಂಭಿಸಿದ ರಾಹುಲ್‌ ಉದಯಪುರ ಯೂತ್ ಕೌನ್ಸಿಲ್‌ ಎಂಬ ಸಂಸ್ಥೆಯನ್ನು ಕಟ್ಟಿದರು. ಅದೇ ಗ್ರಾಮದಲ್ಲಿ ವಸತಿ ಶಾಲೆ ಆರಂಭಿಸಿದರು.

ಇದರಿಂದ ಮಕ್ಕಳು ಉತ್ತಮ ಶಿಕ್ಷಣ ಪಡೆದರೆ, ಯುವಕರು ಯೂತ್ ಕೌನ್ಸಿಲ್‌ ಮಾರ್ಗದರ್ಶನದಲ್ಲಿ ಸ್ವಯಂ ಉದ್ಯೋಗ ಮಾಡುವ ಮೂಲಕ ಹೊಸ ಬದುಕು ಕಟ್ಟಿಕೊಂಡರು.

ನಾಲ್ಕು ವರ್ಷಗಳ ಹಿಂದೆ ತೀರಾ ಹಿಂದುಳಿದ ಗ್ರಾಮ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಕತ್ವಾರ ಇಂದು ಮಾದರಿ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಗ್ರಾಮದ ಮತ್ತೊಂದು ವಿಶೇಷ ಎಂದರೆ, ನಿರುದ್ಯೋಗಿಗಳೇ ಇಲ್ಲದಿರುವುದು! ಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಇಲಾಖೆ, ರಾಹುಲ್ ಅವರ ಕೆಲಸವನ್ನು ಮೆಚ್ಚಿ ಪ್ರಶಂಸೆಯ ಪತ್ರ ನೀಡಿದೆ.

https://www.ketto.org

ಪ್ರತಿಕ್ರಿಯಿಸಿ (+)