ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನ್ನನ್ನು ತಾನೇ ದಿಕ್ಕು ತಪ್ಪಿಸಿಕೊಳ್ಳುತ್ತಿರುವ ಮನಸ್ಸು

ಅಕ್ಷರ ಗಾತ್ರ

ಕಾರ್ಲ್‌ ಯೂಂಗ್‌ ಜಗತ್ತಿನ ಶ್ರೇಷ್ಠ ಮನೋತಜ್ಞರಲ್ಲಿ ಒಬ್ಬರು; ಚಿಂತಕರಾಗಿಯೂ ಅವರ ಕೊಡುಗೆ ಹಿರಿದಾದುದು. ಅವರ ಬರಹಗಳು ಇಂದಿಗೂ ಚಿಂತನಾರ್ಹವಾಗಿವೆ. ಅವರ ತುಂಬ ಪ್ರಸಿದ್ಧ ಕೃತಿಗಳಲ್ಲಿ ‘Man and His Symbols’ ಕೂಡ ಒಂದು. ಈ ಕೃತಿಯ ಸಂಪಾದಕರು ಅವರು; ವಿಸ್ತಾರವಾದ ಲೇಖನವನ್ನೂ ಅವರು ಬರೆದಿದ್ದಾರೆ.

ಹತ್ತುಹಲವು ವಿಷಯಗಳ ಬಗ್ಗೆ ಆಯಾ ಕ್ಷೇತ್ರದ ತಜ್ಞರು ಈ ಗ್ರಂಥದಲ್ಲಿ ಬರೆದಿದ್ದಾರೆ. ಆದರೆ ಈ ಎಲ್ಲ ವಿಷಯಗಳೂ ಸಾಧಾರಣ ವ್ಯಕ್ತಿಗಳಿಗೂ ಇಷ್ಟವಾಗುವಂಥವು, ಬೇಕಾದಂಥವು; ಮಾತ್ರವಲ್ಲ, ತಕ್ಕಮಟ್ಟಿಗೆ ಅರ್ಥವೂ ಆಗುವಂಥವು. ನಮ್ಮ ಕಾಲದ ಎಷ್ಟೋ ಪ್ರಶ್ನೆಗಳನ್ನು ಎತ್ತಿಕೊಂಡು, ಅವುಗಳ ಮೂಲವನ್ನು ಹುಡುಕುವ ಕೆಲಸವನ್ನು ಈ ಬರಹಗಳು ಮಾಡಿವೆ. ಪ್ರಕಟವಾಗಿ ಏಳು ದಶಕಗಳೇ ಆಗಿದ್ದರೂ ಈ ಕಾರಣದಿಂದಲೇ ಈ ಗ್ರಂಥ ನಮಗೆ ಇಂದಿಗೂ ಬೇಕಾಗುವುದು. ಇಲ್ಲಿಯ ಬರಹಗಳ ಕೇಂದ್ರವಿಷಯವೇ ಒಂದು ರೀತಿಯಲ್ಲಿ ಸಾರ್ವಕಾಲಿಕವಾದುದು. ‘ಮನಸ್ಸು’– ಮನುಷ್ಯನ ಅಂತರಂಗ – ಇಲ್ಲಿಯ ಎಲ್ಲ ಬರಹಗಳಲ್ಲಿ ನೇರವಾಗಿಯೋ ಬಳಸಾಗಿಯೋ ಕಾಣಿಸಿಕೊಳ್ಳುತ್ತಲೇ ಇರುತ್ತದೆ. ನಮ್ಮ ಮನಸ್ಸು ನಮಗೆ ಕಾಣದು; ಬೇರೆಯವರಿಗೂ ಕಾಣದೆನ್ನಿ! ಆದರೆ ಹಾಗೆ ಕಾಣದ ನಮ್ಮ ಅಂತರಂಗದ ಹಲವು ಪದರಗಳನ್ನು ಕಾಣಿಸಿಕೊಡುವ ಕೆಲಸವನ್ನು ‘Man and His Symbols’ ಮಾಡುತ್ತದೆ.ನಮಗೆಲ್ಲರಿ

ಗೂ ಮನಸ್ಸಿದೆ. ನಮ್ಮ ಎಲ್ಲ ನಡವಳಿಕೆಗಳಿಗೂ ಮನಸ್ಸೇ ಕಾರಣ – ಎಂಬ ಮಾತನ್ನು ಹಲವರು ಹಲವು ವಿಧದಲ್ಲಿ ಹೇಳಿದ್ದಾರೆ. ಆದರೆ ಮನಸ್ಸು ಎಂದರೆ ಏನು – ಎಂದು ಯಾರನ್ನು ಕೇಳಿದರೂ ಅವರಿಂದ ಬರುವ ಉತ್ತರ ನಮ್ಮನ್ನು ತೃಪ್ತಿಗೊಳಿಸದು. ಅದಕ್ಕೆ ಕಾರಣ ಹೇಳುತ್ತಿರುವವನ ಮಿತಿಯಷ್ಟೆ ಅಲ್ಲ, ವಿಷಯದ ವ್ಯಾಪ್ತಿಯೇ ಅಷ್ಟು ವಿಸ್ತಾರವೂ ಆಳವೂ ಆಗಿರುವುದೇ ಹೌದು. ಮನಸ್ಸು ನಮಗೆ ಕಾಣದು; ಆದರೆ ಅದು ನಮ್ಮ ಕಾಣಿಸುವ ಮತ್ತು ಕಾಣಿಸದ– ಎರಡೂ ಜಗತ್ತನ್ನು ಆಳುತ್ತಿರುತ್ತದೆ. ಸಾವಿರಾರು ವರ್ಷಗಳಿಂದಲೂ ‘ಮನಸ್ಸು’ ಎಂದರೇನು – ಎಂಬುದರ ಬಗ್ಗೆ ಹಲವು ಸಂಸ್ಕೃತಿಗಳ ಹಲವು ಚಿಂತಕರು ಆಲೋಚಿಸುತ್ತಲೇ ಬಂದಿದ್ದಾರೆ. ಆದರೆ ಅಷ್ಟೇನೂ ಹೇಳಿಕೊಳ್ಳುವಂಥ ಫಲ ಮಾತ್ರ ಸಿಕ್ಕಿಲ್ಲ.

ಮನಸ್ಸಿಗೆ ಇರುವ ಆಯಾಮಗಳು ಅಸಂಖ್ಯ. ಪ್ರಜ್ಞೆ, ಬುದ್ಧಿ, ಯೋಚನೆ, ಚಿಂತನೆ, ಅಂತಃಕರಣ, ಕನಸು– ಹೀಗೆ ಎಷ್ಟೆಲ್ಲ ವಿಧದಲ್ಲಿ ಮನಸ್ಸು ಕೆಲಸ ಮಾಡುತ್ತಿರುತ್ತದೆ! ಆದರೆ ಇವಾವುದನ್ನೂ ‘ಹೀಗೆ’ ಎಂದು ಖಚಿತವಾಗಿ ವ್ಯಾಖ್ಯಾನಿಸಲು ಸಾಧ್ಯವಿಲ್ಲ. ಆದರೆ ಈ ವಿವರಗಳನ್ನು ಕುರಿತು ನಾವು ಆಲೋಚಿಸದ ಹೊರತು ನಮಗೆ ನಮ್ಮ ಜೀವನದ ಸೊಗಸಾಗಲೀ ಸಂಕೀರ್ಣತೆಯಾಗಲೀ ಗಮನಕ್ಕೆ ಬಾರದು. ಹೀಗೆಂದು ಇವು ನಮ್ಮ ಆಲೋಚನೆಗೆ ಸುಲಭವಾಗಿ ದಕ್ಕುವಂಥವೂ ಅಲ್ಲ. ಹಾಗಾದರೆ ನಮ್ಮ ಮುಂದಿರುವ ದಾರಿಯಾದರೂ ಏನು? ‘Man and His Symbols’ ಅಂಥ ಹಲವು ದಾರಿಗಳ ಬಗ್ಗೆ ನಮಗೆ ಸುಳಿವನ್ನು ನೀಡುತ್ತದೆ. ನಮಗೆ ಗಾಳಿ ಕಣ್ಣಿಗೆ ಕಾಣದು; ಆದರೆ ಅದರ ಇರುವಿಕೆಯನ್ನು ನಾವು ಅನುಭವಿಸಬಹುದು. ಅಂತೆಯೇ ಮನಸ್ಸು ತನ್ನನ್ನು ತಾನು ಹಲವು ನೆಲೆಗಳಲ್ಲಿ ಪ್ರಕಟಿಸಿಕೊಳ್ಳುತ್ತಲೇ ಇರುತ್ತದೆ. ಮನಸ್ಸಿನ ಈ ರೂಪಗಳನ್ನೂ ಗುಣಗಳನ್ನೂ ನಾವು ವಿಶ್ಲೇಷಿಸಲು ಸಾಧ್ಯವಾದರೆ ಆಗ ನಮಗೆ ಮನಸ್ಸಿನ ಸ್ವರೂಪದ ಬಗ್ಗೆಯೂ ಅಲ್ಪ ಸ್ವಲ್ಪ ಅರಿವು ಉಂಟಾಗಬಹುದು. ಈ ಬಗೆಯ ರೂಪಗುಣಾತ್ಮಕವಾದ ಅಭಿವ್ಯಕ್ತಿಯನ್ನು ‘ಸಂಕೇತ’ ಎಂದು ಕರೆಯಬಹುದು.

ಅಂಥ ಹಲವು ಸಂಕೇತಗಳ ಸ್ವಾರಸ್ಯವನ್ನು ಈ ಗ್ರಂಥ ವಿವರಿಸುತ್ತದೆ. ಗ್ರಂಥದ ಶೀರ್ಷಿಕೆಯೇ ಹೇಳುವಂತೆ ‘ಮಾನವ ಮತ್ತು ಅವನ ಸಂಕೇತ’ಗಳ ಅದ್ಭುತ ಲೋಕದ ಪರಿಚಯವನ್ನು ಇದು ತುಂಬ ಸೊಗಸಾಗಿ ಮಾಡಿಕೊಡುತ್ತದೆ. ಈ ಸಂಕೇತಗಳೇ ಮಾನವನ ಜೀವನಕ್ಕೆ ದಿಕ್ಸೂಚಿ. ಇಂದು ಮನುಷ್ಯನ ಮನಸ್ಸು ತನ್ನ ಸಂಕೇತಗಳಿಂದ ತಾನೇ ದೂರ ಸರಿಯುತ್ತಿದೆ. ಹೀಗಾಗಿ ಅದು ಮನುಷ್ಯನ ಜೀವನವನ್ನೇ ದಿಕ್ಕು ತಪ್ಪಿಸುತ್ತಿದೆ. ಹಾಗಾದರೆ ಹೀಗೆ ದಿಕ್ಕು ತಪ್ಪಿದ ಮನಸ್ಸಿನ ದಿಕ್ಕು–ದೆಸೆ ಏನು? ಈ ಪ್ರಶ್ನೆಗೆ ಉತ್ತರ ಬೇಕಿದ್ದವರು ‘Man and His Symbols’ ಓದಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT