ಮಂಗಳವಾರ, ಡಿಸೆಂಬರ್ 10, 2019
17 °C

ಭಾರತದಲ್ಲೂ 7ನೇ ತಲೆಮಾರಿನ ಕಾರು

Published:
Updated:
ಭಾರತದಲ್ಲೂ 7ನೇ ತಲೆಮಾರಿನ ಕಾರು

ಐಷಾರಾಮಿ ಕಾರುಗಳನ್ನು ನಿರ್ಮಿಸುವ ಬಿಎಂಡಬ್ಲ್ಯು ಕಂಪೆನಿ ಭಾರತದ ಮಾರುಕಟ್ಟೆಯನ್ನು ಮತ್ತಷ್ಟು ವಿಸ್ತರಿಸುವತ್ತ ಚಿತ್ತ ಹರಿಸಿದೆ.

ಬಿಎಂಡಬ್ಲ್ಯು–5 ಸರಣಿ ಕಾರುಗಳಿಗೆ ಇನ್ನಷ್ಟು ಅತ್ಯಾಧುನಿಕ ಫೀಚರ್‌ಗಳನ್ನು ಕಂಪೆನಿ ಅಳವಡಿಸಿದೆ. ಈ ಸರಣಿಯ ಏಳನೇ ತಲೆಮಾರಿನ ಐಷಾರಾಮಿ ಕಾರುಗಳೀಗ ಭಾರತದ ಮಾರುಕಟ್ಟೆಯಲ್ಲೂ ಸಿಗಲಿವೆ.

ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಮುಂಬೈನಲ್ಲಿ ಕಳೆದ ವಾರ ನಡೆದ ವರ್ಣರಂಜಿತ ಸಮಾರಂಭದಲ್ಲಿ ಈ ಕಾರುಗಳನ್ನು ಬಿಡುಗಡೆ ಮಾಡಿದರು.

‘ಬಿಎಂಡಬ್ಲ್ಯು 5 ಸರಣಿಯ ಕಾರುಗಳೆಂದರೆ ನನಗೆ ಅಚ್ಚುಮೆಚ್ಚು. ನನ್ನ ಹುಟ್ಟುಹಬ್ಬದ ದಿನ ಪತ್ನಿ ಅಂಜಲಿಗೆ ಈ ಕಾರನ್ನೇ ಉಡುಗೊರೆ ನೀಡಿದ್ದೆ. ಇನ್ನಷ್ಟು ಅತ್ಯಾಧುನಿಕ ಫೀಚರ್‌ಗಳನ್ನು ಅಳವಡಿಸಿರುವ ಈ ಕಾರುಗಳು ಖಂಡಿತಾ ಗ್ರಾಹಕರಿಗೆ ಇಷ್ಟವಾಗಲಿದೆ’ ಎನ್ನುತ್ತಾರೆ ಸಚಿನ್‌.

ಬಿಎಂಡಬ್ಲ್ಯು–5 ಸರಣಿಯ ಏಳನೇ ತಲೆಮಾರಿನ ಪೆಟ್ರೋಲ್‌ ಚಾಲಿತ ‘530 ಐ ಸ್ಪೋರ್ಟ್‌ಲೈನ್‌’ ಹಾಗೂ ಡೀಸೆಲ್‌ ಚಾಲಿತ ‘520 ಡಿ ಸ್ಪೋರ್ಟ್‌ಲೈನ್‌’, ‘520 ಡಿ ಲಕ್ಸುರಿ ಲೈನ್‌’ ಹಾಗೂ ‘530 ಡಿ ಎಂ ಸ್ಪೋರ್ಟ್‌’ ಕಾರುಗಳು ಭಾರತೀಯ ಮಾರುಕಟ್ಟೆಗೂ ಲಗ್ಗೆ ಇಟ್ಟಿವೆ. ಮುಂಗಡ ಕಾದಿರಿಸುವಿಕೆ ಜುಲೈ 1ರಿಂದಲೇ ಆರಂಭವಾಗಿದೆ. ಇವುಗಳ ಎಕ್ಸ್‌ ಶೋರೂಂ ಬೆಲೆಯನ್ನು ಜಿಎಸ್‌ಟಿ ಅನ್ವಯ ನಿಗದಿಪಡಿಸಲಾಗಿದೆ.

‘ಈ ಕಾರುಗಳ ಆಕರ್ಷಕ ವಿನ್ಯಾಸ ಹಾಗೂ ಇದರಲ್ಲಿರುವ ಅತ್ಯಾಧುನಿಕ ನಿಯಂತ್ರಣ ವ್ಯವಸ್ಥೆ ಚಾಲನೆಯ ಹೊಸ ಅನುಭವ ನೀಡುತ್ತದೆ’ ಎನ್ನುತ್ತಾರೆ ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾದ ಅಧ್ಯಕ್ಷ ವಿಕ್ರಮ್‌ ಪಾವಾ.

ಏನಿದರ ವಿಶೇಷ: 7ನೇ ತಲೆಮಾರಿನ ಕಾರುಗಳಲ್ಲಿ ಸಂಜ್ಞೆಗಳ ಮೂಲಕ ನಿಯಂತ್ರಣ (ಗೆಸ್ಚರ್ ಕಂಟ್ರೋಲ್), ಟಚ್‌ ಸ್ಕ್ರೀನ್‌ ಸೌಲಭ್ಯ ಹೊಂದಿರುವ ಡಿಸ್‌ಪ್ಲೇ ಕೀ , ರಿಮೋಟ್ ಕಂಟ್ರೋಲ್ ಪಾರ್ಕಿಂಗ್, ವೈರ್‌ಲೆಸ್‌ ಚಾರ್ಜಿಂಗ್‌ ಹಾಗೂ ವಿಶಾಲವಾದ ಅಡ್ವಾನ್ಸಡ್‌ ಹೆಡ್ ಅಪ್ ಡಿಸ್‌ಪ್ಲೇ ಸೌಲಭ್ಯಗಳನ್ನು ಒದಗಿಸಲಾಗಿದೆ. ಹಿಂದಿನ ತಲೆಮಾರಿನ ಕಾರುಗಳಿಗೆ ಹೋಲಿಸಿದರೆ ಈಗಿನದರ ಡಿಸ್‌ಪ್ಲೇ ಶೇ 70ರಷ್ಟು ಹೆಚ್ಚು ವಿಶಾಲವಾಗಿದೆ.

ಬಿಎಂಡಬ್ಲ್ಯು ಕನೆಕ್ಟೆಡ್‌ ಡ್ರೈವ್‌ ವ್ಯವಸ್ಥೆ ಚಾಲಕನ ಅನೇಕ ಕೆಲಸಗಳನ್ನು ಸುಲಭಗೊಳಿಸಲಿದೆ. ಟಚ್‌ ಸ್ಕ್ರೀನ್‌ ಸೌಲಭ್ಯವೂ ಇದರಲ್ಲಿದ್ದು, ಉಷ್ಣಾಂಶ, ಮೈಲೇಜ್‌ ರೇಂಜ್‌, ಇಂಧನ ಎಷ್ಟಿದೆ ಎಂಬ ವಿವರ ತಿಳಿಯಲು ನೆರವಾಗುತ್ತದೆ.

ಸುತ್ತಮುತ್ತಲಿನ 360 ಡಿಗ್ರಿಯ ಚಿತ್ರಣ ಒದಗಿಸಲು ನಾಲ್ಕು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಕಾರಿನ ಮುಂಭಾಗ ಹಾಗೂ ಹಿಂಭಾಗದಲ್ಲಿ ತಲಾ ಒಂದು ಕ್ಯಾಮೆರಾ ಹಾಗೂ ಮಿರರ್‌ಗಳ ಬಳಿ 2 ಕ್ಯಾಮೆರಾಗಳಿರುತ್ತವೆ. ಇವು ಬೇರೆ ಬೇರೆ ಕೋನದಲ್ಲಿ ಚಿತ್ರೀಕರಿಸಬಲ್ಲವು. ಇತರ ವಾಹನಗಳೊಂದಿಗೆ ಅಂತರ ಕಾಯ್ದುಕೊಳ್ಳಲು, ಅತ್ಯಂತ ಕಡಿಮೆ ಜಾಗದಲ್ಲಿ ವಾಹನ ನಿಲುಗಡೆ ಮಾಡಲು ಇವು ನೆರವಿಗೆ ಬರಲಿದೆ.

ಕಾರಿನಲ್ಲಿ ಮುಂಭಾಗದಲ್ಲಿ ಹಾಗೂ ಹಿಂಭಾಗದಲ್ಲಿ ತಲಾ ಆರು ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ರಿಮೋಟ್‌ ಕಂಟ್ರೋಲ್‌ ಪಾರ್ಕಿಂಗ್‌ ವ್ಯವಸ್ಥೆಯಿಂದಾಗಿ, ಚಾಲಕ ಕಾರಿನಿಂದ ಹೊರಗೆ ಬಂದು ತೀರಾ ಕಡಿಮೆ ಜಾಗ ಲಭ್ಯವಿದ್ದರೂ ಕಾರನ್ನು ಸುರಕ್ಷಿತವಾಗಿ ನಿಲುಗಡೆ ಮಾಡಬಹುದು. ಪಾರ್ಕಿಂಗ್‌ಗೆ ಜಾಗ ಸಾಲದಿದ್ದರೆ ಮುನ್ಸೂಚನೆ ನೀಡುವ ವ್ಯವಸ್ಥೆಯೂ ಇದೆ.

ಬಿಎಂಡಬ್ಲ್ಯು ಆ್ಯಪ್‌, ಬ್ಲೂಟೂತ್, ಯುಎಸ್‌ಬಿ/ಎಯುಎಕ್ಸ್‌ ಬಳಕೆಗೆ ಅವಕಾಶ ಇದೆ. ಎಂಪಿ3 ಪ್ಲೇಯರ್‌ಗೆ ಮೂರು ಹೆಡ್‌ಫೋನ್‌ಗಳನ್ನು ಒದಗಿಸಲಾಗಿದೆ.

ವಿಭಿನ್ನ ಪರಿಸ್ಥಿತಿಯಲ್ಲಿ ಚಾಲನೆಯನ್ನು ಸುಲಲಿತಗೊಳಿಸಲು ಕಂಫರ್ಟ್‌, ಸ್ಪೋರ್ಟ್‌, ಸ್ಪೋರ್ಟ್‌ ಪ್ಲಸ್‌, ಇಕೋ ಹಾಗೂ ಪ್ರೊ ಅಥವಾ ಅಡಾಪ್ಟಿವ್‌ ಮಾದರಿ ಆಯ್ಕೆ ಮಾಡಿಕೊಳ್ಳಬಹುದು.

ವೇಗ: 530 ಡಿ ಕಾರು 3 ಲೀಟರ್‌ ಆರು ಸಿಲಿಂಡರ್‌ ಡೀಸೆಲ್‌ ಎಂಜಿನ್‌ ಹೊಂದಿದ್ದು, ಕೇವಲ 5.7 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 100 ಕಿ.ಮೀ. ವೇಗ ತಲುಪಲಿದೆ. ಇದು ಗಂಟೆಗೆ 250 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲುದು. 530 ಐ ಕಾರು ಎರಡು ಲೀಟರ್‌ ಸಾಮರ್ಥ್ಯದ ನಾಲ್ಕು ಸಿಲಿಂಡರ್‌ ಪೆಟ್ರೋಲ್‌ ಎಂಜಿನ್‌ ಹೊಂದಿದೆ. ಇದು 6.2 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ಪಡೆಯಬಲ್ಲುದು. 520 ಡಿ ಕಾರು ಎರಡು ಲೀಟರ್‌ ಸಾಮರ್ಥ್ಯದ ನಾಲ್ಕು ಸಿಲಿಂಡರ್‌ ಡೀಸೆಲ್‌ ಎಂಜಿನ್‌ ಹೊಂದಿದೆ. 7.5 ಸೆಕೆಂಡ್‌ಗಳಲ್ಲಿ ಸೊನ್ನೆಯಿಂದ 100 ಕಿ.ಮೀ ವೇಗವನ್ನು ತಲುಪುವ ಸಾಮರ್ಥ್ಯ ಇದಕ್ಕಿದೆ.

ಸುರಕ್ಷತೆ: ಸುರಕ್ಷತಾ ವ್ಯವಸ್ಥೆಯನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲಾಗಿದೆ. ಆರು ಏರ್‌ ಬ್ಯಾಗ್‌ಗಳು, ಆ್ಯಂಟಿ ಲಾಕ್‌ ಬ್ರೇಕಿಂಗ್‌ ವ್ಯವಸ್ಥೆ (ಎಬಿಎಸ್‌), ಡೈನಮಿಕ್‌ ಸ್ಟೆಬಿಲಿಟಿ ಕಂಟ್ರೋಲ್‌ (ಡಿಬಿಸಿ), ಡೈನಮಿಕ್‌ ಟ್ರಾಕ್ಷನ್‌ ಕಂಟ್ರೋಲ್‌ (ಡಿಟಿಸಿ), ಕಾರ್ನರಿಂಗ್‌ ಬ್ರೇಕ್‌ ಕಂಟ್ರೋಲ್‌ (ಸಿಬಿಸಿ) ಹಿಲ್‌ ಡೆಸರ್ಟ್‌ ಕಂಟ್ರೋಲ್‌ (ಎಚ್‌ಡಿಸಿ) ಸೌಲಭ್ಯಗಳಿವೆ.

70 ಕೆ.ಜಿ. ಕಡಿಮೆ ತೂಕ: 7ನೇ ತಲೆಮಾರಿನ ಕಾರುಗಳ ತೂಕವನ್ನು ಸರಾಸರಿ 70 ಕೆ.ಜಿ.ಯಷ್ಟು ಕಡಿತಗೊಳಿಸಲಾಗಿದೆ. ಇದು ಇಂಧನ ಕಾರ್ಯಕ್ಷಮತೆ ಹೆಚ್ಚಿಸಲಿದೆ ಎನ್ನುತ್ತಾರೆ ಪಾವಾ.

ಭಾರತದಲ್ಲೇ ನಿರ್ಮಾಣ: ‘ಈ ಕಾರುಗಳ ಶೇ 50ರಷ್ಟು ಬಿಡಿಭಾಗಗಳು ಭಾರತದಲ್ಲೇ ತಯಾರಾಗಿವೆ. ಮೇಕ್‌ ಇನ್‌ ಇಂಡಿಯಾ ಕಾರ್ಯಕ್ರಮದಿಂದ ಉತ್ತೇಜಿತರಾಗಿ ಚೆನ್ನೈನ ಘಟಕದಲ್ಲಿ ಈ ಕಾರುಗಳನ್ನು ನಿರ್ಮಿಸುತ್ತಿದ್ದೇವೆ’ ಎನ್ನುತ್ತಾರೆ ಪಾವಾ.

ಪೂರಕವಾಗಲಿದೆ ಜಿಎಸ್‌ಟಿ: ‘ಜಿಎಸ್‌ಟಿ ಜಾರಿಯಾಗಿರುವುದು ಭಾರತದಲ್ಲಿ ನಮ್ಮ ಮಾರುಕಟ್ಟೆ ವಿಸ್ತರಣೆಗೆ ಪೂರಕವಾಗಿದೆ. 2016ರ ನವೆಂಬರ್‌ನಲ್ಲಿ ನೋಟುಗಳನ್ನು ರದ್ದುಪಡಿಸಿದ್ದರಿಂದ ನಮಗೇನೂ ಹೊಡೆತ ಬಿದ್ದಿಲ್ಲ. ಇದರಿಂದ ಅನುಕೂಲವೇ ಆಗಿದೆ’ ಎನ್ನುತ್ತಾರೆ ಬಿಎಂಡಬ್ಲ್ಯು ಗ್ರೂಪ್‌ ಇಂಡಿಯಾದ ಮಾಧ್ಯಮ ಮತ್ತು ಕಾರ್ಪೊರೇಟ್‌ ಸಂಪರ್ಕಗಳ ನಿರ್ದೇಶಕ ಅಭಯ್‌ ಡಾಂಗೆ.

‘ಭಾರತದಲ್ಲಿ ಮಾರುಕಟ್ಟೆ ವಿಸ್ತರಣೆಗೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದ್ದೇವೆ. ದೇಶದಾದ್ಯಂತ 50 ಕಡೆ ಮಾರಾಟ ಮಳಿಗೆಗಳನ್ನು ಹೊಂದಲಿದ್ದೇವೆ. ಇದಲ್ಲದೇ 50 ಸಂಚಾರ ಮಳಿಗೆಗಳನ್ನೂ ಆರಂಭಿಸಲಿದ್ದೇವೆ’ ಎಂದು ಅವರು ವಿವರಿಸುತ್ತಾರೆ.

**

ಯಾವುದಕ್ಕೆ ಎಷ್ಟು ಬೆಲೆ

530 ಐ ಸ್ಪೋರ್ಟ್‌ಲೈನ್‌ ₹ 49.90 ಲಕ್ಷ

520 ಡಿ ಸ್ಪೋರ್ಟ್‌ಲೈನ್‌ ₹ 49.90 ಲಕ್ಷ

520 ಡಿ ಲಕ್ಸುರಿ ಲೈನ್‌ ₹ 53.60 ಲಕ್ಷ

530 ಡಿ ಎಂ ಸ್ಪೋರ್ಟ್‌ ₹61.30 ಲಕ್ಷ

ಪ್ರತಿಕ್ರಿಯಿಸಿ (+)