ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಕುಪ್ರಾಣಿ ಪ್ರೀತಿ... ಬೇಕು ಮಿತಿ

Last Updated 5 ಜುಲೈ 2017, 19:30 IST
ಅಕ್ಷರ ಗಾತ್ರ

ಮೆಟ್ರೊ ನಗರಗಳಲ್ಲಿ ಸಾಕುಪ್ರಾಣಿಗಳು ಮನೆಯ ಸದಸ್ಯನ ಸ್ಥಾನ ಪಡೆದಿವೆ. ಹೊಸ್ತಿಲ ಹೊರಗೆ ಇರಬೇಕಾದ ನಾಯಿಯೂ ಅಡುಗೆ ಮನೆ, ಮಲಗುವ ಕೋಣೆಗೆ ಬಡ್ತಿ ಹೊಂದಿದೆ. ಈ ಪ್ರೀತಿ ಕೆಲವೊಮ್ಮೆ ಅತಿರೇಕದ ಪರಿಧಿಯನ್ನೂ ದಾಟುವುದಿದೆ.

ಹೌದು, ಪ್ರಾಣಿಗಳೊಂದಿಗೆ ತಿನ್ನುವುದು ಹಾಗೂ ಜೊತೆಯಲ್ಲಿಯೇ ಮಲಗಿಸಿಕೊಳ್ಳುವುದು, ಮೂತಿಗೆ ಮೂತಿ ತಾಗಿಸಿ ಮುದ್ದು ಮಾಡುವುದನ್ನೆಲ್ಲ ಕಾಣುತ್ತೇವೆ. ಆದರೆ ಇಂತಹ ವರ್ತನೆಯಿಂದ ಸಾಕುಪ್ರಾಣಿಗಳಿಂದ ನಮಗೆ ಕೆಲವು ರೋಗಗಳು ಹರಡುವ ಸಾಧ್ಯತೆ ಇರುತ್ತದೆ ಎನ್ನುತ್ತಾರೆ ತಜ್ಞರು.

ಪ್ರಾಣಿಜನ್ಯ ರೋಗಗಳನ್ನು ಝೂನೊಟಿಕ್ ಕಾಯಿಲೆಗಳು ಎಂತಲೂ ಕರೆಯಲಾಗುತ್ತದೆ. ಪ್ರಾಣಿಗಳಿಂದ ಮನುಷ್ಯರಿಗೆ ವೈರಾಣು, ಬ್ಯಾಕ್ಟೀರಿಯಾ, ಶಿಲೀಂಧ್ರಗಳ ಮೂಲಕ ಈ ರೋಗಗಳು ಹರಡುತ್ತವೆ. ಪ್ರಾಣಿಗಳು ಮತ್ತು ಮನುಷ್ಯರ ನಡುವೆ ಅಥವಾ ಪರೋಕ್ಷ ಸಂಪರ್ಕದಿಂದಲೀ ಇವು ಹರಡಬಹುದು.

ಅಂದರೆ ಕೆಲವೊಮ್ಮೆ ಪ್ರಾಣಿಗೆ ಸೋಂಕು ತಗುಲಿದೆ ಎನ್ನುವುದು ಗಮನಕ್ಕೆ ಬಾರದೇ ಅದನ್ನು ಮುದ್ದು ಮಾಡಿದಾಗ, ಬರಿಗೈಯಿಂದ ಅದರ ಮಲ ಅಥವಾ ಮೂತ್ರ ಮುಟ್ಟಿದಾಗ, ಜೊಲ್ಲಿನ ಸಂಪರ್ಕಕ್ಕೆ ಬಂದಾಗ ಮನುಷ್ಯರಿಗೂ ಸೋಂಕು ತಗುಲುತ್ತದೆ. ಕೆಲವೊಮ್ಮೆ ಅಂತಹ ಪ್ರಾಣಿ ನಾವು ವಾಸಿಸುವ ಸ್ಥಳದಲ್ಲಿದ್ದರೂ ಸೋಂಕು ತಗುಲುವ ಸಾಧ್ಯತೆ ಇರುತ್ತದೆ. ಈ ಕಾಯಿಲೆಗಳ ತೀವ್ರತೆ ಮನುಷ್ಯರಲ್ಲಿ ಸೌಮ್ಯವಾಗಿಯೂ ಇರಬಹುದು ಅಪಾಯಕಾರಿಯೂ ಆಗಿರಬಹುದು.

ಪ್ರಾಣಿಗಳ ಚರ್ಮದ ಮೇಲಿರುವ ತೈಲ ಗ್ರಂಥಿಗಳಲ್ಲಿ ಮತ್ತು ಅವುಗಳ ಜೊಲ್ಲಿನಲ್ಲಿರುವ ಜೀವಕಣಗಳಿಂದ ಕೂಡ ಕೆಲವರಿಗೆ ಅಲರ್ಜಿ ಆಗುವ ಸಂಭವವಿರುತ್ತದೆ. ಪ್ರಾಣಿಗಳಿಂದ ದೂರ ಇದ್ದರೂ ಕೂಡ ಈ ಅಲರ್ಜಿ ಲಕ್ಷಣಗಳು ಕಡಿಮೆ ಆಗದಿರಬಹುದು.

ನಾಯಿ, ಬೆಕ್ಕು, ಹಕ್ಕಿ, ಕುದುರೆ, ಹಸು, ಕುರಿ, ಆಡು ಮತ್ತು ಮೊಲ ಸೇರಿದಂತೆ ಬಹುತೇಕ ಎಲ್ಲಾ ಸಾಕುಪ್ರಾಣಿಗಳು ರೋಗಗಳನ್ನು ಹರಡಬಲ್ಲವು. ಆದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರುವ ಸಾಕುನಾಯಿಗಳಿಂದ ರೋಗಗಳು ಹರಡುವುದು ಅಪರೂಪ. ಆದರೂ ಮಾಲೀಕರು ಮೂಲ ನೈರ್ಮಲ್ಯ ಶಿಸ್ತುಗಳನ್ನು ಹಾಗೂ ಸಾಮಾನ್ಯ ಎಚ್ಚರಿಕಾ ಕ್ರಮಗಳನ್ನು ಮರೆತಾಗ ಈ ಅಪಾಯ ಇದ್ದೇ ಇರುತ್ತದೆ.

ಕಿಮೊತೆರಪಿ ಅಥವಾ ವಿಕಿರಣ ಚಿಕಿತ್ಸೆ ಪಡೆಯುವವರು, ವಯಸ್ಸಾದವರು, ದೀರ್ಘಕಾಲದಿಂದ ಕಾಯಿಲೆ ಬಿದ್ದವರು, ಹುಟ್ಟಿನಿಂದಲೇ ಆರೋಗ್ಯದ ಸಮಸ್ಯೆ ಇರುವ ಮಕ್ಕಳು, ಅಂಗ ಅಥವಾ ಮೂಳೆ ಮಜ್ಜೆಯ ಕಸಿಗೆ ಒಳಗಾದವರು ಸಾಕುಪ್ರಾಣಿಗಳ ಸೋಂಕಿಗೆ ಒಳಗಾಗುವ ಸಂಭವ ಹೆಚ್ಚು. ಹಾಗಂತ ಇಂತಹ ಸಮಸ್ಯೆ ಇರುವವರು ಸಾಕುಪ್ರಾಣಿಗಳನ್ನು ಬಿಟ್ಟುಬಿಡಬೇಕು ಎಂದು ಅರ್ಥವಲ್ಲ! ಪ್ರಾಣಿಗಳ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ಮಾಡಬೇಕು. ಮುಟ್ಟಿದ ನಂತರ ಕೈಗಳನ್ನು ತೊಳೆಯುವುದು, ಅವುಗಳ ಮಲ, ಮೂತ್ರದಿಂದ ದೂರ ಇರುವುದು, ಯಾವುದೇ ಅನಾರೋಗ್ಯದ ಚಿಹ್ನೆಗಳು ಕಂಡ ಕೂಡಲೇ ಗುರುತಿಸಿ, ಚಿಕಿತ್ಸೆ ಕೊಡಿಸುವುದು ಇತ್ಯಾದಿ.

**

ನಾಯಿಯಿಂದ ಬರುವ ರೋಗಗಳು
ರಿಂಗ್‌ವರ್ಮ್‌
ಸಾಲ್ಮೊನೆಲೋಸಿಸ್
ಲೆಪ್ಟೊಸ್ಪೈರೋಸಿಸ್
ಲೈಮ್ ರೋಗ
ಕ್ಯಾಂಪಿಲೋಬ್ಯಾಕ್ಟರ್ ಸೋಂಕು
ಗಿಯಾರ್ಡಿಯಾ ಸೋಂಕು
ಕ್ರಿಪ್ಟೊಸ್ಪೊರಿಡಿಯಮ್ ಸೋಂಕು
ರೌಂಡ್‌ವರ್ಮ್‌
ಹುಕ್‌ವರ್ಮ್‌
ಸ್ಕೇಬೀಸ್
ರೇಬಿಸ್

**

ನಿಮ್ಮ ನಾಯಿಗೆ ಯಾವುದೇ ರೋಗದ ಚಿಹ್ನೆ ಕಂಡುಬಂದಲ್ಲಿ ಕೂಡಲೇ ವೈದ್ಯರಿಂದ ತಪಾಸಣೆ ಮಾಡಿಸಿ

ಅಗತ್ಯ ಚಿಕಿತ್ಸೆ ನೀಡಿ ಕಾಯಿಲೆಬಿದ್ದ ನಾಯಿಗೆ ಉಪಚರಿಸಿದ ನಂತರ ತಪ್ಪದೇ ಸ್ವಚ್ಛವಾಗಿ ಕೈಗಳನ್ನು ತೊಳೆಯಿರಿ

ನಾಯಿ, ಬೆಕ್ಕು ಮತ್ತಿತರ ಸಾಕುಪ್ರಾಣಿಗಳನ್ನು ನಿಮ್ಮ ಹಾಸಿಗೆಯಲ್ಲಿಯೇ ಕರೆದುಕೊಂಡು ಮಲಗುವುದು ಬೇಡ.

ಅವುಗಳ ಹಾಸಿಗೆ, ಊಟದ ತಟ್ಟೆ, ನೀರಿನ ತಟ್ಟೆಗಳನ್ನು ಪ್ರತ್ಯೇಕವಾಗಿಡಿ

ಅವುಗಳ ಮಲ ಮೂತ್ರಗಳನ್ನು ಮುಟ್ಟಬೇಡಿ

ಪ್ರಾಣಿಗಳ ಸನಿಹಕ್ಕೆ ಮಕ್ಕಳನ್ನು ಬಿಡಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT