ಮಂಗಳವಾರ, ಡಿಸೆಂಬರ್ 10, 2019
17 °C

ಕೋಳಿ ಮಾಂಸದ ವೈವಿಧ್ಯ ಕೇಳಿ

Published:
Updated:
ಕೋಳಿ ಮಾಂಸದ ವೈವಿಧ್ಯ ಕೇಳಿ

ಚಿಕನ್ ಚಾಪ್ಸ್

ಬೇಕಾಗುವ ಸಾಮಗ್ರಿಗಳು:
ಗಿರಿರಾಜಕೋಳಿ 1/2 ಕೆ.ಜಿ, ಶುಂಠಿ- ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಪುದೀನ ಸೊಪ್ಪು ಸ್ವಲ್ಪ, ದನಿಯಾ ಪುಡಿ 1 ಚಮಚ, ಕಾರದಪುಡಿ 1 ಚಮಚ, ಅರಿಶಿನ ಪುಡಿ ಸ್ವಲ್ಪ, ಗರಂ ಮಸಾಲೆ 1 ಚಮಚ, ಈರುಳ್ಳಿ 3, ಟೊಮೆಟೊ 1, ತೆಂಗಿನಕಾಯಿ 1/2 ಹೋಳು, ಸಾಸಿವೆ, ಎಣ್ಣೆ, ತುಪ್ಪ (ಡಾಲ್ಡಾ), ಉಪ್ಪು.

ತಯಾರಿಸುವ ವಿಧಾನ: ಈರುಳ್ಳಿ, ಕೊತ್ತಂಬರಿ, ಟೊಮೆಟೊ, ಪುದೀನವನ್ನು ಸಣ್ಣಗೆ ಕತ್ತರಿಸಿಕೊಳ್ಳಿ. ಕಡಿಮೆ ನೀರು ಹಾಕಿ ತರಿತರಿಯಾಗಿ ಕಾಯಿಯನ್ನು ರುಬ್ಬಿಟ್ಟುಕೊಳ್ಳಿ.

ಕುಕ್ಕರ್‌ಗೆ ಎಣ್ಣೆ ಮತ್ತು ತುಪ್ಪ (ಡಾಲ್ಡಾ) ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಚೆನ್ನಾಗಿ ತೊಳೆದ ಚಿಕನ್ ಮತ್ತು ಉಪ್ಪನ್ನು ಹಾಕಿ ಚಿಕನ್‌ಗೆ ಉಪ್ಪು ಹಿಡಿಯುವಂತೆ ಸ್ವಲ್ಪ ಬೇಯಿಸಿ. ನಂತರ ಕತ್ತರಿಸಿರುವ ಪದಾರ್ಥಗಳನ್ನು ಹಾಕಿ ಸ್ವಲ್ಪ ಫ್ರೈ ಮಾಡಿದ ಮೇಲೆ ರುಬ್ಬಿದ ಕಾಯಿ, ಧನಿಯಾಪುಡಿ, ಕಾರದಪುಡಿ, ಗರಂ ಮಸಾಲೆ ಹಾಕಿ ಚೆನ್ನಾಗಿ ತಿರುಗಿಸಿ ಕುಕ್ಕರ್ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ.

***

ಚಿಕನ್ ಕೈಮಾ ಬೋಂಡಾ

ಬೇಕಾಗುವ ಪದಾರ್ಥಗಳು:
ಚಿಕನ್ ಕೈಮಾ 1/4 ಕೆ.ಜಿ, ಈರುಳ್ಳಿ 1, ಕಡಲೆ ಹಿಟ್ಟು 4 ಚಮಚ, ಮೈದಾ ಹಿಟ್ಟು 1 ಚಮಚ, ಕಾರ್ನ್‌ ಫ್ಲೋರ್ 1 ಚಮಚ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕಾರದಪುಡಿ 2 ಚಮಚ, ಗರಂ ಮಸಾಲೆ ಸ್ವಲ್ಪ, ಮೆಣಸು ಪುಡಿ, ಕರಿಬೇವು 2 ಕಡ್ಡಿ, ಕೊತ್ತಂಬರಿ ಸೊಪ್ಪು ಸ್ವಲ್ಪ, ಉಪ್ಪು ರುಚಿಗೆ ತಕ್ಕಷ್ಟು, ಕರಿಯಲು ಎಣ್ಣೆ.

ಮಾಡುವ ವಿಧಾನ: ಚಿಕನ್ ಕೈಮಾವನ್ನು ಮಿಕ್ಸಿಯಲ್ಲಿ ಒಂದೆರೆಡು ಸುತ್ತು ರುಬ್ಬಿ ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸಿನಕಾಯಿ, ಕರಿಬೇವು, ಕೊತ್ತಂಬರಿ, ಕಡಲೆಹಿಟ್ಟು, ಮೈದಾಹಿಟ್ಟು, ಕಾರ್ನ್‌ಫ್ಲೋರ್, ಕಾರದಪುಡಿ, ಗರಂಮಸಾಲಾ, ಮೆಣಸಿನಪುಡಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಿ, ನೀರು ಹಾಕದೆ ಚೆನ್ನಾಗಿ ಕಲಸಿ, ಉಂಡೆ ಮಾಡಿ ಕಾದ ಎಣ್ಣೆಗೆ ಹಾಕಿ ಸಣ್ಣ ಉರಿಯಲ್ಲಿ ಕರಿಯಿರಿ.

***

ಚಿಕನ್ ಲಿವರ್‌ ಫ್ರೈ

ಬೇಕಾಗುವ ಪದಾರ್ಥಗಳು:
ಚಿಕನ್ ಲಿವರ್‌ 1/4 ಕೆ.ಜಿ, ಶುಂಠಿ - ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಹಸಿಮೆಣಸಿನ ಕಾಯಿ 4, ಕೊತ್ತಂಬರಿ ಸ್ವಲ್ಪ, ಪುದೀನ ಸೊಪ್ಪು ಸ್ವಲ್ಪ, ಕರಿಬೇವು 1 ಕಡ್ಡಿ, ಧನಿಯಾ ಪುಡಿ 1 ಚಮಚ, ಕಾರದಪುಡಿ 2 ಚಮಚ, ಅರಿಶಿನ ಪುಡಿ ಸ್ವಲ್ಪ, ಗರಂ ಮಸಾಲೆ 1 ಚಮಚ, ಈರುಳ್ಳಿ 2, ಟೊಮೆಟೊ 1, ಸಾಸಿವೆ, ನಿಂಬೆಹಣ್ಣು 1, ಎಣ್ಣೆ, ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಚೆನ್ನಾಗಿ ತೊಳೆದ ಚಿಕನ್ ಲಿವರ್‌ಗೆ ಅರಿಸಿನ ಪುಡಿ ಖಾರದಪುಡಿ, ಧನಿಯಾಪುಡಿ, ಗರಂ ಮಸಾಲೆ, ಶುಂಠಿ- ಬೆಳ್ಳುಳ್ಳಿ ಪೇಸ್ಟ್, ಉಪ್ಪು ಎಲ್ಲವನ್ನು ಸ್ವಲ್ಪ ಹಾಕಿ ಕಲಸಿ ಒಂದು ಗಂಟೆ ರೆಫ್ರಿಜ ರೇಟರ್‌ನಲ್ಲಿಡಿ. ಈರುಳ್ಳಿ, ಕೊತ್ತಂಬರಿ, ಹಸಿಮೆಣಸಿನಕಾಯಿ, ಟೊಮೆಟೊ, ಪುದೀನ ಕತ್ತರಿಸಿಟ್ಟುಕೊಳ್ಳಿ.ಹುರಿಯುವ ಬಾಣಲೆಗೆ

ಎಣ್ಣೆ ಹಾಕಿ, ಕಾದ ನಂತರ ಸಾಸಿವೆ ಸಿಡಿಸಿ, ಕತ್ತರಿಸಿದ ಹಸಿಮೆಣಸಿನಕಾಯಿ, ಕರಿಬೇವು, ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿದ ಮೇಲೆ ಉಪ್ಪು, ಟೊಮೆಟೊ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಪುದೀನ, ದನಿಯಾ ಪುಡಿ, ಕಾರದಪುಡಿ, ಗರಂ ಮಸಾಲೆ, ಲಿವರ್‌ ತುಂಡುಗಳನ್ನು ಹಾಕಿ ಮುಚ್ಚಳ ಮುಚ್ಚಿ ಬೇಯಿಸಿ ಬೆಂದ ನಂತರ ಕೊತ್ತಂಬರಿ ಸೊಪ್ಪು ಮತ್ತು ನಿಂಬೆರಸ ಹಾಕಿ ಸ್ವಲ್ಪ ಬೇಯಿಸಿ ಕೆಳಗಿಳಿಸಿ.

***

ಗಿರಿರಾಜ ಕೋಳಿ ಸಾರು

ಬೇಕಾಗುವ ಸಾಮಗ್ರಿಗಳು:
ಗಿರಿರಾಜ ಕೋಳಿ 1 ಕೆ.ಜಿ, ಶುಂಠಿ ಪೇಸ್ಟ್ 1 ಚಮಚ, ಬೆಳ್ಳುಳ್ಳಿ ಪೇಸ್ಟ್ 1 ಚಮಚ, ಕೊತ್ತಂಬರಿ ಸೊಪ್ಪು ಸ್ವಲ್ಪ, ಪುದೀನ ಸೊಪ್ಪು ಸ್ವಲ್ಪ, ದನಿಯಾ ಪುಡಿ 2 ಚಮಚ, ಕಾರದಪುಡಿ 2 ಚಮಚ, ಅರಿಸಿನ ಪುಡಿ ಸ್ವಲ್ಪ, ಗರಂ ಮಸಾಲೆ 1 ಚಮಚ, ಗಸೆಗಸೆ ಸ್ವಲ್ಪ, ಹುರಿಗಡಲೆ ಸ್ವಲ್ಪ, ಈರುಳ್ಳಿ 2, ಟೊಮೆಟೊ 2, ಕಾಯಿ 1/2 ಹೋಳು, ಸಾಸಿವೆ, ಎಣ್ಣೆ, ತುಪ್ಪ (ಡಾಲ್ಡಾ), ಉಪ್ಪು ರುಚಿಗೆ ತಕ್ಕಷ್ಟು.

ಮಾಡುವ ವಿಧಾನ: ಈರುಳ್ಳಿ ಕಾರಕ್ಕೆ: ಈರುಳ್ಳಿ, ಕೊತ್ತಂಬರಿ, ಪುದೀನ, ಅರಿಸಿನ ಪುಡಿ, ಶುಂಠಿ - ಬೆಳ್ಳುಳ್ಳಿ ಪೇಸ್ಟ್‌ಗೆ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.

ಕಾರ ಮಸಾಲೆಗೆ: ಟೊಮೆಟೊ, ದನಿಯಾಪುಡಿ, ಕಾರದಪುಡಿಗೆ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.

ಕಾಯಿ ಮಸಾಲೆಗೆ: ಕಾಯಿ, ಗರಂ ಮಸಾಲೆ, ಗಸೆಗಸೆ, ಹುರಿಗಡಲೆ, ಕಾಯಿಗೆ ನೀರು ಹಾಕಿ ರುಬ್ಬಿಟ್ಟುಕೊಳ್ಳಿ.

ಕುಕ್ಕರ್‌ಗೆ ಎಣ್ಣೆ ಮತ್ತು ತುಪ್ಪ (ಡಾಲ್ಡಾ) ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ನಂತರ ತೊಳೆದ ಚಿಕನ್ ಹಾಕಿ ಉಪ್ಪನ್ನು ಬೆರೆಸಿ ನಂತರ ಸ್ವಲ್ಪ ಫ್ರೈ ಮಾಡಿದ ಮೇಲೆ ಈರುಳ್ಳಿ ಕಾರ ಮಿಶ್ರಣವನ್ನು ಹಾಕಿ, ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ 2 ವಿಷಲ್ ಕೂಗಿಸಿ, ಮುಚ್ಚಳ ತೆಗೆದು ಕಾರ ಮಸಾಲೆ ಹಾಕಿ ಚೆನ್ನಾಗಿ ಬೇಯಿಸಿ ಮಾಂಸ ಬೆಂದ ಮೇಲೆ ಕಾಯಿ ಮಸಾಲೆ ಹಾಕಿ ಚೆನ್ನಾಗಿ ಕುದಿಸಿ, ಸಾರು ಬೆಂದ ನಂತರ ಬೇಕೆಂದರೆ ಕೊತ್ತಂಬರಿ ಸೊಪ್ಪು ಉದುರಿಸಿ.

***

ಚಿಕನ್ ಗಿಝರ್ಡ್ ಚಾಪ್ಸ್

ಬೇಕಾಗುವ ಪದಾರ್ಥಗಳು:
ಚಿಕನ್ ಗಿಝರ್ಡ್ (ಜಠರ) 1/2 ಕೆ.ಜಿ, ಶುಂಠಿ 2 ಇಂಚು ಉದ್ದದ್ದು, ಬೆಳ್ಳುಳ್ಳಿ 2 ಉಂಡೆ, ಕೊತ್ತಂಬರಿ ಸೊಪ್ಪು ಸ್ವಲ್ಪ, ಪುದೀನ ಸೊಪ್ಪು ಸ್ವಲ್ಪ, ಕರಿಬೇವು 3 ಕಡ್ಡಿ, ದನಿಯಾ ಪುಡಿ 2 ಚಮಚ, ಗಸೆಗಸೆ ಸ್ವಲ್ಪ, ಗರಂ ಮಸಾಲೆ 1 ಚಮಚ, ಈರುಳ್ಳಿ 2, ಟೊಮೆಟೊ 1, ಕಾಯಿ 1/4 ಹೋಳು, ಹಸಿ ಮೆಣಸಿನಕಾಯಿ 8, ತುಪ್ಪ (ಡಾಲ್ಡಾ), ಎಣ್ಣೆ, ಸಾಸಿವೆ, ಉಪ್ಪು.

ಮಾಡುವ ವಿಧಾನ: ಈರುಳ್ಳಿ, ಟೊಮೆಟೊ, ಶುಂಠಿ, ಬೆಳ್ಳುಳ್ಳಿ, ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಪುದೀನ, ಗರಂ ಮಸಾಲೆ, ಗಸೆಗಸೆ, ದನಿಯಾ ಪುಡಿ, ತೆಂಗಿನಕಾಯಿ ಮತ್ತು ಸ್ವಲ್ಪ ನೀರು ಹಾಕಿ ದಪ್ಪದಪ್ಪವಾಗಿ ರುಬ್ಬಿಟ್ಟುಕೊಳ್ಳಿ.

ಫ್ರೈ ಪ್ಯಾನ್‌ಗೆ ಎಣ್ಣೆ ಮತ್ತು ತುಪ್ಪ (ಡಾಲ್ಡಾ) ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಕರಿಬೇವು ಹಾಕಿ ಫ್ರೈ ಆದ ನಂತರ ಕತ್ತರಿಸಿ ತೊಳೆದ ಚಿಕನ್ ಗಿಝರ್ಡ್ ಮತ್ತು ಉಪ್ಪು ಹಾಕಿ, ಫ್ರೈ ಮಾಡಿದ ಮೇಲೆ ರುಬ್ಬಿದ ಮಿಶ್ರಣವನ್ನು ಹಾಕಿ ಮುಚ್ಚಳ ಮುಚ್ಚಿ ಚೆನ್ನಾಗಿ ಬೇಯಿಸಿ.

ಪ್ರತಿಕ್ರಿಯಿಸಿ (+)