ಶನಿವಾರ, ಡಿಸೆಂಬರ್ 14, 2019
21 °C

ನಾವು ‘ಮೆಟ್ರೊ’ ಜೂನಿಯರ್ಸ್!

ಪ್ರಕಾಶ್ ಶೆಟ್ಟಿ Updated:

ಅಕ್ಷರ ಗಾತ್ರ : | |

ನಾವು ‘ಮೆಟ್ರೊ’ ಜೂನಿಯರ್ಸ್!

‘ಈಗ ರೈಲು ಕೆಂಪೇಗೌಡ ನಿಲ್ದಾಣ, ಮೆಜೆಸ್ಟಿಕ್‌ಗೆ ಬರಲಿದೆ. ಬಾಗಿಲು ಎಡ ಭಾಗದಲ್ಲಿ ತೆರೆಯುತ್ತದೆ. ಹಸಿರು ಮಾರ್ಗದ ರೈಲಿಗಾಗಿ ಪ್ರಯಾಣಿಕರು ಇಲ್ಲಿ ಬದಲಾಯಿಸಿ'.

ಗ್ರೀನ್ ರೈಲು ಸಂಚಾರಕ್ಕೆ ಗ್ರೀನ್ ಸಿಗ್ನಲ್ ಬಿದ್ದಾಗಿನಿಂದ ನೇರಳೆ ರೈಲುಗಳಲ್ಲಿ ’ಜೂನಿಯರ್ಸ್’ ಬರಲಾರಂಭಿಸಿದ್ದಾರೆ. ಹೌದು, ಮತ್ತೆ! ನೇರಳೆ ರೈಲಿನ ಸೀನಿಯರ್ ಪ್ರಯಾಣಿಕರು ಜೂನಿಯರ್‌ಗಳನ್ನೆಲ್ಲಾ ಕಾಲೇಜಿನಲ್ಲಿ ಪಿಯುಸಿ ಮೊದಲ ವರ್ಷಕ್ಕೋ, ಎಂಜಿನಿಯರಿಂಗ್‌ಗೆ ಹೊಸತಾಗಿ ಸೇರಿದವರನ್ನೋ ನೋಡುವವರಂತೆ ಸ್ವಲ್ಪ ತಾರತಮ್ಯದಿಂದ ನೋಡುತ್ತಾರೆ ಎಂಬುದು ಕೆಲವರ ಆರೋಪ.

ರೈಲಿನ ಬಾಗಿಲು ತೆರೆದ ತಕ್ಷಣ ಸೀನಿಯರುಗಳು ತಡೆಗೋಡೆಗಳಂತೆ ನಿಂತಿರುವ ಕಾರಣ ಎಲ್ಲಿ ಕಾಲಿಡುವುದೆಂದು ಜೂನಿಯರುಗಳಿಗೆ ಗಲಿಬಿಲಿ. ಆಗ ತಾನೇ ತಯಾರಿಸಿದ ಉಪ್ಪಿನಕಾಯಿಯನ್ನು ಭರಣಿಯಲ್ಲಿ ಒತ್ತಿ ಒತ್ತಿ ತುಂಬಿಡುವ ಹಾಗೆ ಎಂದು ಇಲ್ಲಿ ಖಂಡಿತ ತಾಳೆ ಮಾಡುವಂತಿಲ್ಲ. ಹೆಚ್ಚೆಂದರೆ ‘ರೀ! ಅಲ್ಲಿ ಜಾಗ ಇದೆಯಲ್ರೀ ...ಮುಂದೆ ಹೋಗ್ರೀ...’ ಎಂದು ಇಷ್ಟು ವರ್ಷ ಬಸ್ ಕಂಡಕ್ಟರ್‌ ಬಾಯಿಯಿಂದ ಕೇಳಿದ್ದನ್ನು ಬಾಯಿಪಾಠ ಮಾಡಬಹುದು. ಆದರೆ ಅದರಿಂದ ಯಾವುದೇ ಪ್ರಯೋಜನವಿಲ್ಲ (ಜನ ಕಂಡಕ್ಟರ್ ಮಾತು ಕೇಳಿದರಲ್ವೇ?)

ಒಮ್ಮೆಗೆ ಜಾದೂ ನಡೆದುಹೋದಂತೆ ಗ್ರೀನ್ ಪ್ರಯಾಣಿಕರಿಗೆ ಕಾಲಿಡುವುದಕ್ಕಂತೂ ಒಂದು ಚದರ ಅಡಿ ಜಾಗ ಸಿಕ್ಕೇ ಸಿಗುತ್ತದೆ. ಆ ಸೀಮಿತ ಜಾಗದಲ್ಲಿ ನಿಲ್ಲುವುದೆಂದರೆ ಕೆಲವರಿಗೆ (ದೇಹದ ಸುತ್ತಳತೆ ಜಾಸ್ತಿಯಿರುವವರಿಗೆ ಎಂದು ಓದಿಕೊಳ್ಳಿ) ಅಷ್ಟು ಸುಲಭದ ಕಾರ್ಯವಲ್ಲ.

‘ನಾನೇನೋ ಮೆಟ್ರೊ ಪ್ರಯಾಣ ಬಹಳ ಆರಾಮವಾಗಿರುತ್ತೆಅಂದ್ಕೊಂಡಿದ್ದೆ’ ನನ್ನ ಪಕ್ಕದಲ್ಲಿ ಹೆಣಗಾಡುತ್ತಿದ್ದವರೊಬ್ಬರು ತನ್ನಷ್ಟಕ್ಕೇ ಹೇಳುತ್ತಿದ್ದರು. ನಾನು ಕೇಳಿದೆ, ‘ಮೆಟ್ರೊಗೆ ಹೊಸಬರಾ?’ ‘ಹೂಂ.. ರೀ! ಬಸ್ಸೇ ಪರವಾಗಿಲ್ಲ.... ಇಷ್ಟೊಂದು ಜನ ಬಾಗಿಲಿನಲ್ಲಿ ನಿಂತ್ಕೊಂಡಿರೊಲ್ಲ’ ಅವರು ಹುಬ್ಬುಗಂಟಿಕ್ಕಿದರು. ‘ಇಲ್ಲ, ಇಲ್ಲ ... ಅವರೆಲ್ಲಾ ಬಾಗಿಲಿನಲ್ಲಿ ಹೊಸ ಪ್ರಯಾಣಿಕರ ಸ್ವಾಗತಕ್ಕೆ ನಿಂತ್ಕೊಂಡಿರೋದು.’ ನನ್ನ ಸಮಾಧಾನದ ಮಾತನ್ನು ರಾಯರು ನಂಬಿದಂತಿತ್ತು.

ಅವರು ನನ್ನಲ್ಲಿ ಕೇಳಿದರು. ‘ಓಹ್! ಇಂತಹ ಸ್ವಾಗತ ವ್ಯವ್ಯಸ್ಥೆ ಇರುವ ಮೆಟ್ರೊದಲ್ಲಿ ಸೀನಿಯರ್ ಸಿಟಿಜನ್‌ಗಳಿಗೆ ಪ್ರತ್ಯೇಕ ಸೀಟುಗಳು ಇರಬೇಕಲ್ಲವೇ?’ ನಾನು ‘ಪ್ರಯಾರಿಟಿ’ ಸೀಟುಗಳತ್ತ ಬೊಟ್ಟು ಮಾಡಿ ಹೇಳಿದೆ. ‘ಅದು ಸೀನಿಯರ್ ಸಿಟಿಜನರಿಗೆ ಮೀಸಲಿಟ್ಟ ಸೀಟುಗಳು. ಅಲ್ಲಿ ಯುವಕರು ಯಾರಾದರೂ ಕುಳಿತಿದ್ದರೆ ಸೀಟು ಬಿಟ್ಟುಕೊಡಬಹುದು’ ನಾನು ತಡವರಿಸಿ ಮುಂದುವರಿಸಿದೆ. ‘ಆದರೆ ರಾಯರೇ, ನಿಮ್ಮಂತಹ ಹೇರ್ ಡೈ ಮಾಡಿದವರನ್ನು ಈ ಹುಡುಗರು ಹಿರಿಯ ನಾಗರಿಕರೆಂದು ಗುರುತಿಸುವುದು ಡೌಟು’ ರಾಯರು ಇನ್ನು ಮುಂದೆ ಹೇರ್ ಡೈ ಮಾಡುವ ಕಾರ್ಯಕ್ರಮಕ್ಕೆ ಗುಡ್ ಬೈ ಅನ್ನುವ ಸಾಧ್ಯತೆ ಇದೆ.

ಸುಮ್ಮನೆ ಆ ಕಡೆ ನೋಡಿದರೆ ಒಬ್ಬಾತ ಮನುಷ್ಯ ರೂಪದ ಹಸುವಿನಂತೆ ಏನೋ ಜಗಿಯುತ್ತಿದ್ದ. ಈ ಜೂನಿಯರ್‌ಗೆ ಪಾನ್ ಹಾಕ್ಕೊಂಡು ಮೆಟ್ರೊ ಹತ್ತಬಾರದೆಂಬ ‘ಜನರಲ್ ನಾಲೆಡ್ಜ್’ ಇಲ್ವಾ. ಕುತೂಹಲಕ್ಕೆ ಕೇಳಿದೆ.

‘ಉಗಿಯಬೇಕೆಂದರೆ ಎಲ್ಲಿ ಉಗೀತೀರಾ?’ ಆತ ‘ಪಾನ್’ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸಿದ. ರೇಲು ನಿಲ್ಲುಟ್ಟಲ್ಲ.. ಆವಾಗ ಪ್ಲೇಟ್ ಪಾರಮ್ ಮಟ್ಟು ರೇಲು ನಡುವೆ ಗ್ಯಾಪು ಇಡೆಯಲ್ಲ... ಅಲ್ಲಿ ಉಗುಳಿಡರಾಯಿಟು " (ರೈಲು ನಿಲ್ಲುತ್ತಲ್ಲಾ... ಆವಾಗ ಪ್ಲಾಟ್‌ಫಾರಂ ಮತ್ತು ರೈಲು ನಡುವೆ ಗ್ಯಾಪು ಇದೆಯಲ್ಲ... ಅಲ್ಲಿ ಉಗುಳಿದರಾಯಿತು ಎಂದು ಅರ್ಥ ಮಾಡಿಕೊಳ್ಳಬೇಕು) ಬಾಗಿಲ ಪಕ್ಕದಲ್ಲಿ ಹಾಕಿರುವ ‘ದಯಾಮಾಡಿ ಅಂತರವನ್ನು ಗಮನಿಸಿ’ ಎಂಬ ಮಾಹಿತಿಯನ್ನು ಇವನು ತುಂಬಾ ಗಂಭೀರವಾಗಿ ತೆಗೆದುಕೊಂಡಿದ್ದಾನೆ ಎಂದೆನಿಸಿತು.

‘ಗ್ರೀನ್ ಲೈನ್ ನಿಂದ ಬಂದವರ ಹಾಗೇ ಕಾಣುತ್ತೀರಿ. ಹೇಗಾಗುತ್ತಿದೆ ಮೆಟ್ರೊ ಪ್ರಯಾಣ?’ ಎಂದು ಟೆಕ್ಕಿಯಂತೆ ಕಾಣುತಿದ್ದ ಯುವಕನಲ್ಲಿ ಕೇಳಿದೆ. ‘ಶಿಟ್ ಯಾರ್!’ ಅಂದ. ‘ಯು ಮೀನ್... ಮೆಟ್ರೊ ಈಸ್ ಶಿಟ್?!’ ಎಂದು ನಾನು ಕೇಳಬೇಕಾಯಿತು. ‘ಇಲ್ರೀ, ಸುರಂಗ ಬಂತೂಂದ್ರೆ ನೆಟ್‌ವರ್ಕ್ ಇರೊಲ್ಲ. ಮೊಬೈಲ್ ಚಾಲೂ ಇಲ್ಲದೆ ಒಂದ್ನಿಮಿಷವೂ ಕೂರೋಕೆ ನನ್ನಿಂದ ಆಗಲ್ಲ! ಅದಕ್ಕೇ ಸುರಂಗ ಮಾರ್ಗ ಹೊಕ್ಕಾಗ ನಾನು ಕೋಮಾ ಸ್ಥಿತಿಯಲ್ಲಿರುತ್ತೇನೆ!’

ನನ್ನಲ್ಲಿ ಪರಿಹಾರವಿರಲಿಲ್ಲ. ಮೆಟ್ರೊದಲ್ಲಿ ಮೊಬೈಲ್ ವ್ಯಸನಿಗಳ ಸಂಖ್ಯೆಯೇ ಜಾಸ್ತಿ. ಅಂತಹ ಒಬ್ಬ ವ್ಯಸನಿ ಇದ್ದಕ್ಕಿದ್ದ ಹಾಗೇ ನನ್ನಲ್ಲಿ ಕೇಳಿದ ‘ಟ್ರಿನಿಟಿ ಸರ್ಕಲ್ ಬಂತಾ ಸಾರ್?’ ಟ್ರಿನಿಟಿ ಸರ್ಕಲ್ ದಾಟಿ ರೈಲು ಇಂದಿರಾನಗರ ತಲುಪಿತ್ತು. ಮೊಬೈಲ್‌ ನಲ್ಲಿ ಸಿನಿಮಾ ನೋಡುತ್ತಿದ್ದುದನ್ನು ಗಮನಿಸಿದ ನಾನು ಅವನಿಗೆ ಹೇಳಿದೆ. ‘ ಟ್ರಿನಿಟಿ ಸರ್ಕಲ್ ಬಂದಿಲ್ಲ. ಮುಂದಿನ ಬೈಯ್ಯಪ್ಪನಹಳ್ಳಿ ಸ್ಟೇಷನ್‌ನಲ್ಲಿ ಇಳಿದು ವಾಪಸು ಹೋಗುವ ರೈಲು ಹತ್ತಿ. ನಿಮ್ಮ ಸಿನಿಮಾ ಮುಗಿದಿದ್ದರೆ ಟ್ರಿನಿಟಿ ಸರ್ಕಲ್‌ ನಲ್ಲಿ ಇಳಿಯಬಹುದು’. ಆ ಮೆಟ್ರೊ ಜೂನಿಯರ್‌ಗೆ ನಾನು ಹೇಳಿದ್ದು ತಪ್ಪಲ್ಲ ಎಂದನಿಸಿತೋ ಏನೋ. ‘ಗುಡ್ ಐಡಿಯಾ’ ಅನ್ನಬೇಕೇ!

ಮಹಿಳೆಯೊಬ್ಬರು ಕುಳಿತಿದ್ದ ವ್ಯಕ್ತಿಯಲ್ಲಿ ‘ಸೌಖ್ಯ ಇಲ್ಲ, ದಯವಿಟ್ಟು ಸೀಟು ಕೊಡ್ತೀರಾ?’ ಎಂದಾಗ ಆ ವ್ಯಕ್ತಿ ಯಾವ ತಕರಾರು ಮಾಡಲಿಲ್ಲ. ಆದರೆ ಆ ಮಹಿಳೆ ಕುಳಿತದ್ದೇ ತಡ, ಬ್ಯಾಗ್‌ನಿಂದ ಬುತ್ತಿ ತೆಗೆದು ಅದೇನೋ ತಿನ್ನುವುದಕ್ಕೆ ಆರಂಭಿಸಿಬಿಟ್ಟರು. ಜೂನಿಯರುಗಳಿಗೆ ನನ್ನಂತಹ ಸೀನಿಯರು ತಿಳಿಹೇಳುವುದು ತಪ್ಪಾಗಲಿಕ್ಕಿಲ್ಲ ಎಂಬ ಧೈರ್ಯದಿಂದ ಹೇಳಿಯೇಬಿಟ್ಟೆ. ‘ಮೇಡಂ, ಮೆಟ್ರೊದೊಳಗೆ ತಿನ್ನಬಾರದು’. ಮೇಡ-ಮ್ಮಗೆ ನನ್ನ ಅಧಿಕಪ್ರಸಂಗ ಇಷ್ಟವಾಗಲಿಲ್ಲ. ದುರುಗುಟ್ಟಿ ನೋಡಿದರು. ಥೇಟ್ ಹಾಯುವ ಹೋರಿಯಂತೆ! ‘ಒಳ್ಳೆ ಕತೆಯಾಯ್ತಲ್ರೀ! ನಾನೇನು ಗೋಮಾಂಸ ತಿನ್ನೋ ತರ ಮಾತಾಡ್ತಿದ್ದೀರಲ್ಲ! ಅಲ್ರೀ.. ಮನುಷ್ಯನಿಗೆ ತಿನ್ನುವುದಕ್ಕೂ ಸ್ವಾತಂತ್ರ್ಯ ಇಲ್ಲವೇ? ನಿಮಗೆ.......’ ನನ್ನ ಇಂಗು ತಿಂದ ಮಂಗನಂತಾಗಿದ್ದ ಮುಖವನ್ನು ಎಲ್ಲರೂ ನೋಡಲಾರಂಭಿಸಿದರು. ಅಬ್ಬಾ, ನನ್ನ ಅದೃಷ್ಟ! ನಾನು ಇಳಿಯಬೇಕಾಗಿದ್ದ ನಿಲ್ದಾಣ ಬಂದೇ ಬಿಟ್ಟಿತು.

ಪ್ರತಿಕ್ರಿಯಿಸಿ (+)