ಸೋಮವಾರ, ಡಿಸೆಂಬರ್ 16, 2019
23 °C

ಮನಸ್ಸಿನ ಭಾವಕ್ಕೆ ಬಣ್ಣ ತುಂಬಿ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮನಸ್ಸಿನ ಭಾವಕ್ಕೆ ಬಣ್ಣ ತುಂಬಿ...

ಮನಸ್ಸಿನ ಭಾವನೆಗಳನ್ನು ಚಿತ್ರರೂಪಕ್ಕೆ ಇಳಿಸಿ, ಹಲವು ತುಮುಲಗಳಿಗೆ ಉತ್ತರ ಕಂಡುಕೊಂಡವರು ಕಲಾವಿದೆ ವಿಜಯಾಶ್ರೀ.

ಚಿಕ್ಕಂದಿನಿಂದಲೂ ಬಣ್ಣಗಳ ಮೆರುಗಿಗೆ ಮಾರುಹೋದವರು ಇವರು. ಆದರೆ ಕಲಾಸಕ್ತಿ ಪೋಷಿಸಲು ಸೂಕ್ತ ವೇದಿಕೆಯ ಹುಡುಕಾಟದಲ್ಲಿದ್ದವರಿಗೆ ಸಾಮಾಜಿಕ ಜಾಲತಾಣ ಹಲವು ಅವಕಾಶಗಳನ್ನು ನೀಡಿತು.

ಶಿವಮೊಗ್ಗ ಜಿಲ್ಲೆಯ ಸಾಗರದ ಕಾನುತೋಟದವರಾದ ಇವರಿಗೆ ವರ್ಣಚಿತ್ರಕಲೆಯಲ್ಲಿ ಅಪಾರ ಆಸಕ್ತಿ. ಪ್ರಾಥಮಿಕ ಶಾಲೆಯ ಶಿಕ್ಷಕರಾದ ಸೂರ್ಯನಾರಾಯಣ ನವಿಲೆಕರ್ ಅವರೂ ಚಿತ್ರಕಲೆಯಲ್ಲಿ ಆಸಕ್ತಿಯುಳ್ಳವರಾಗಿದ್ದರು. ಅವರೇ ಇವರ ಕಲಾಸಕ್ತಿಗೆ ಇಂಬು ನೀಡಿದರು.

ಇವರ ತಂದೆ, ತಾಯಿಗೂ ಚಿತ್ರಕಲೆಯ ಆಸಕ್ತಿ ಇದುದ್ದರಿಂದ ಅವರಿಂದಲೇ ಕಲೆಯನ್ನು ಬಳುವಳಿಯಾಗಿ ಪಡೆದಿದ್ದಾರೆ.

‘ಮೂರು ವರ್ಷದವಳಿರುವಾಗಲೇ ಚಿತ್ರಕಲೆಯ ಬಗ್ಗೆ ಅಪಾರ ಒಲವಿತ್ತು. ಚಂದಮಾಮ, ಬಾಲಮಂಗಳ...ಹೀಗೆ ಹಲವು ವಾರಪತ್ರಿಕೆಗಳ ಚಿತ್ರಗಳನ್ನು ಬರೆಯಲು ಪ್ರಯತ್ನಿಸುತ್ತಿದ್ದೆ. ಅದರೆ ಅದನ್ನು ಶಾಸ್ತ್ರೀಯವಾಗಿ ಕಲಿಯಲು ಆಗಿರಲಿಲ್ಲ. ಸರಿಯಾದ ಗುರುಗಳು ಸಿಗಲಿಲ್ಲ.

ನೋಡಿದ ವಸ್ತುಗಳನ್ನೆಲ್ಲ ಚಿತ್ರ ರೂಪಕ್ಕೆ ಇಳಿಸುತ್ತಿದ್ದೆ’ ಎಂದು ಕಲಾಪಯಣ ಆರಂಭಗೊಂಡ ಬಗೆಯನ್ನು ತಿಳಿಸುತ್ತಾರೆ. ಮನಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಇವರು ಪಡೆದಿದ್ದಾರೆ. ಚಿತ್ರಕಲಾ ಪರಿಷತ್ತಿನಲ್ಲಿ ಆರು ತಿಂಗಳು ತರಬೇತಿ ಪಡೆದಿದ್ದಾರೆ. ಪೆನ್ಸಿಲ್ ಶೇಡಿಂಗ್, ಜಲವರ್ಣ, ಅಕ್ರಿಲಿಕ್, ತೈಲ ಮಾಧ್ಯಮ, ಚುಕ್ಕಿ ಚಿತ್ರ ಸೇರಿದಂತೆ ದಾರದಲ್ಲಿ ಚಿತ್ರರಚನೆ ಮಾಡುವ ಕಲೆಯನ್ನು ತಾವಾಗಿಯೇ ಕರಗತ ಮಾಡಿಕೊಂಡಿದ್ದಾರೆ.

ಚುಕ್ಕಿ ಚಿತ್ತಾರ ಎಂಬ ಬ್ಲಾಗ್‌ ಮತ್ತು ಚುಕ್ಕಿ ಚಿತ್ತಾರ ಆರ್ಟ್ಸ್‌ ಎಂಬ ಫೇಸ್‌ಬುಕ್‌ ಪೇಜ್‌ ಇದ್ದು, ಅದನ್ನು ತಮ್ಮ ಚಿತ್ರಗಳ ಪ್ರದರ್ಶನದ ವೇದಿಕೆಯಾಗಿಸಿಕೊಂಡಿದ್ದಾರೆ. ‘ಇದರಿಂದ ಗುಪ್ತಗಾಮಿನಿಯಾಗಿದ್ದ ಕಲೆ ಮುನ್ನೆಲೆಗೆ ಬರಲು ಸಹಾಯವಾಯಿತು’ ಎನ್ನುತ್ತಾರೆ ವಿಜಯಾಶ್ರೀ.

‘ಚಿತ್ತಾರ– ಕನಸುಗಳೊಂದಿಗೆ ಪ್ರಯೋಗ’ ಎಂಬ ಹೆಸರಿನಲ್ಲಿ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವನ್ನು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶಿಸಿದ್ದರು. ರೇವ್ಸ್ ಗ್ಯಾಲರಿಯಲ್ಲಿ ಮತ್ತು ಫೇರ್ ಫೀಲ್ಡ್ ಮ್ಯಾರಿಯೆಟ್ ಹೋಟೆಲ್‌, ಆಕಾಂಕ್ಷ ಗ್ರೂಪ್‌ ನಡೆಸಿದ ಕಾರ್ಯಕ್ರಮ ಸೇರಿದಂತೆ ಒಟ್ಟು ಎಂಟು ಪ್ರದರ್ಶನವನ್ನು ನೀಡಿದ್ದಾರೆ.

‘ವ್ಯಕ್ತಿಚಿತ್ರಗಳನ್ನು ಬರೆಯುವುದು ಸ್ವಲ್ಪ ಕಷ್ಟ ಎನ್ನುತ್ತಾರೆ ಕೆಲವರು. ಆದರೆ ಅದು ನನಗೆ ಸುಲಭ. ಯಾರನ್ನಾದರೂ ನೋಡಿದ ತಕ್ಷಣ ಚಿತ್ರ ಬರೆಯುತ್ತೇನೆ’ ಎನ್ನುತ್ತಾರೆ ಇವರು.

‘ರವಿವರ್ಮ ಅವರ ಬಗ್ಗೆ ತಾಯಿ ಕಥೆ ಹೇಳುತ್ತಿದ್ದರು. ಬಹುಶಃ ಅಂತಹ ಪರಿಸರ ಮನೆಯಲ್ಲಿ ಇದ್ದುದ್ದರಿಂದಲೇ ಕಲಾ ಬೆಳವಣಿಗೆ ಸಾಧ್ಯವಾಯಿತು’ ಎಂದು ಕಲಾ ಬೆಳವಣಿಗೆಗೆ ಸ್ಫೂರ್ತಿಯಾದ ಬಗೆ ತಿಳಿಸುತ್ತಾರೆ.

ಕಲಾವಿದ ಬಿ.ಕೆ. ಶರ್ಮಾ ಅವರ ಕಲಾ ಚಾತುರ್ಯವನ್ನು ನೋಡಿಯೇ ಇವರು ದಾರದ ಮೂಲಕ ಚಿತ್ರ ಬಿಡಿಸುವುದನ್ನು ಕರಗತ ಮಾಡಿಕೊಂಡಿದ್ದಾರೆ. ‘ಸಂಗೀತ ಕಲಿತಿದ್ದೇನೆ.

ಹಿತ್ಯದಲ್ಲಿಯೂ ಆಸಕ್ತಿಯಿದೆ. ಬರವಣಿಗೆಯ ಹವ್ಯಾಸವಿದೆ. ಕೆಲವು ಲೇಖನಗಳು, ಲಲಿತ ಪ್ರಬಂಧಗಳೂ ಪತ್ರಿಕೆಗಳಲ್ಲಿ ಕೂಡ ಪ್ರಕಟವಾಗಿವೆ’ ಎಂದು ತಮ್ಮ ಹವ್ಯಾಸದ ಹಾದಿ ತಿಳಿಸುತ್ತಾರೆ.

ಯೂಟ್ಯೂಬ್‌ಗಳನ್ನು ನೋಡಿ ಚಿತ್ರಕಲೆಯನ್ನು ಕಲಿಯುತ್ತಾರೆ. ಕಲಾಶಿಕ್ಷಕರ ಮಾರ್ಗದರ್ಶನವನ್ನು ಪಡೆಯುತ್ತಾರೆ ಇವರು.  ‘ಹೆಚ್ಚಾಗಿ ಟ್ರಯಲ್ ಅಂಡ್ ಎರರ್.. ಕಲಿಯುತ್ತಾ ಕಲಿಯುತ್ತಾ ಚಿತ್ರ ರಚಿಸುತ್ತೇನೆ’ ಎನ್ನುತ್ತಾರೆ. ಆಸಕ್ತರಿಗೆ ಚಿತ್ರಕಲೆಯ ತರಬೇತಿಯನ್ನು ಇವರು ನೀಡುತ್ತಾರೆ.

ಸಂಪರ್ಕಕ್ಕೆ: 94498 20476

-ಸರಳಾ ಪ್ರಭಾಕರ್‌

ಪ್ರತಿಕ್ರಿಯಿಸಿ (+)