ಸೋಮವಾರ, ಡಿಸೆಂಬರ್ 16, 2019
24 °C
ಬೀದರ್‌ನಲ್ಲಿ ವಧುವರರಿಂದ ಸಮಾಜ ಕಾರ್ಯ

ಮದುವೆಗೆ ಬಂದ ಅತಿಥಿಗಳಿಗೆ 100 ಹೆಲ್ಮೆಟ್, 1000 ಗಿಡ ನೀಡಿದ ವಧುವರರು

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಮದುವೆಗೆ ಬಂದ ಅತಿಥಿಗಳಿಗೆ 100 ಹೆಲ್ಮೆಟ್, 1000 ಗಿಡ ನೀಡಿದ ವಧುವರರು

ಬೆಂಗಳೂರು: ಸಾಮಾನ್ಯವಾಗಿ ಮದುಮಕ್ಕಳಿಗೆ ಅತಿಥಿಗಳು, ಸ್ನೇಹಿತರು ಉಡುಗೊರೆ ಕೊಡುವುದು ವಾಡಿಕೆ. ಆದರೆ ಬೀದರ್‌ನಲ್ಲಿ ಮದುಮಕ್ಕಳೇ ಅತಿಥಿಗಳಿಗೆ ಉಡುಗೊರೆ ಕೊಟ್ಟಿದ್ದಾರೆ. ಅದು ಸಾಮಾನ್ಯ ಗಿಫ್ಟ್ ಅಲ್ಲ. ಜೀವ ಉಳಿಸುವ ಹಾಗೂ ಪರಿಸರ ಕಾಳಜಿ ಮೆರೆಯುವ ಗಿಫ್ಟ್.

ಬೀದರ್ ಜಿಲ್ಲೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಶಿವರಾಜ್ ಹಾಗೂ ಸವಿತಾ ಅವರು ಮದುವೆಗೆ ಬಂದ ಅತಿಥಿಗಳಿಗೆ ಹೆಲ್ಮೆಟ್ ಹಾಗೂ ಗಿಡಗಳನ್ನು ಉಡುಗೊರೆಯಾಗಿ ನೀಡುವ ಮೂಲಕ ಇನ್ನೊಬ್ಬರಿಗೆ ಮಾದರಿಯಾಗಿದ್ದಾರೆ.

ಶಿವರಾಜ್ ಅವರು ಓದಿದ್ದು ಎಸ್‌ಎಸ್‌ಎಲ್‌ಸಿ. ಬೀದರ್‌ನಲ್ಲಿ ಸ್ವಂತ ಡ್ರೈವಿಂಗ್ ಕ್ಲಾಸ್‌ ನಡೆಸುತ್ತಿದ್ದು, ಇವರ ಈ ಕಾರ್ಯಕ್ಕೆ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಮದುವೆ ಸಂದರ್ಭದಲ್ಲಿ ಮದ್ಯಪಾನ, ಸಂಗೀತ ಹೀಗೆ ಇಂತವುಗಳಿಗೆ ದುಂದುವೆಚ್ಚ ಮಾಡುತ್ತಾರೆ. ಹೆಲ್ಮೆಟ್ ಧರಿಸದೆ ಅಪಘಾತಕ್ಕೀಡಾಗಿ ಸಾವನ್ನಪ್ಪಿದವರ ಬಗ್ಗೆ ನಾನು ದಿನನಿತ್ಯ ಕೇಳುತ್ತಲೇ ಇದ್ದೆ. ಇದರ ಬಗ್ಗೆ ಯೋಚಿಸಿ ಹೆಲ್ಮೆಟ್ ನೀಡುವ ನನ್ನ ಉದ್ದೇಶವನ್ನು ವಧುವಿನ ಕಡೆಯವರು ಹಾಗೂ ನನ್ನ ಕುಟುಂಬದವರಿಗೆ ಹೇಳಿದೆ. ನನ್ನ ಈ ಕಾರ್ಯಕ್ಕೆ ಅವರಿಂದಲೂ ಸಮ್ಮತಿ ದೊರಕಿತು.

ಇದಕ್ಕೆ ₹30 ಸಾವಿರದಿಂದ ₹50 ಸಾವಿರದವರೆಗೆ ಖರ್ಚಾಗಿದೆ. ಸಂಗೀತ, ಮದ್ಯಪಾನಕ್ಕೆ ಖರ್ಚುಮಾಡುವ ಹಣವನ್ನು ಇದಕ್ಕೆ ವ್ಯಯಿಸಿದೆ. ಸುಮಾರು 100 ಹೆಲ್ಮೆಟ್ ಹಾಗೂ 1000 ಗಿಡಗಳನ್ನು ಮದುವೆ ಸಂದರ್ಭದಲ್ಲಿ ನೀಡಿದೆ. ನಾವು ಕೊಟ್ಟ 100 ಹೆಲ್ಮೆಟ್ ಗಳಲ್ಲಿ 80 ಮಂದಿ ಅದನ್ನು ಬಳಸಿದರೂ, 1000 ಗಿಡದಲ್ಲಿ 500 ಗಿಡಗಳು ಚಿಗುರಿ ನಿಂತರೂ ಸಮಾಜದಲ್ಲಿ ಅದು ಒಂದು ದೊಡ್ಡ ಬದಲಾವಣೆ ಎನಿಸಲಿದೆ.

ಅಲ್ಲದೇ ಈ ಹಿಂದೆಯೂ ಕೂಡ ನಾನು ವಧುವರರಿಗೆ ಹೆಲ್ಮೆಟ್‌ ಅನ್ನು ಗಿಫ್ಟ್ ಕೊಟ್ಟಿದೆ. ಇದು ಇಬ್ಬರ ಜೀವ ಉಳಿಸಿದೆ. ಖುದ್ದಾಗಿ ಅವರೇ ನನ್ನ ಬಳಿ ಬಂದು ಈ ವಿಚಾರದ ಬಗ್ಗೆ ತಿಳಿಸಿ ಧನ್ಯವಾದ ಹೇಳಿದರು. ನನ್ನ ಈ ಕಾರ್ಯದ ಬಗ್ಗೆ ನನಗೆ ಖುಷಿ ಇದೆ ಎನ್ನುತ್ತಾರೆ ಶಿವರಾಜ್.

ಪ್ರತಿಕ್ರಿಯಿಸಿ (+)