ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಟ್ವಾಳದಲ್ಲಿ ಇರಿತಕ್ಕೊಳಗಾಗಿದ್ದ ಆರ್‌ಎಸ್‌ಎಸ್‌ ಕಾರ್ಯಕರ್ತನನ್ನು ಆಸ್ಪತ್ರೆಗೆ ಸಾಗಿಸಿದ್ದು ಮುಸ್ಲಿಂ

Last Updated 5 ಜುಲೈ 2017, 16:50 IST
ಅಕ್ಷರ ಗಾತ್ರ

ಬಂಟ್ವಾಳ: ತಾಲ್ಲೂಕಿನ ಬಿ.ಸಿ. ರೋಡ್ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್‌ ರಸ್ತೆ ಬಳಿ ಮಂಗಳವಾರ ರಾತ್ರಿ ದುಷ್ಕರ್ಮಿಗಳಿಂದ ಇರಿತಕ್ಕೊಳಗಾಗಿದ್ದ ಶರತ್‌ ಕುಮಾರ್‌ (30) ಅವರನ್ನು ಆಸ್ಪತ್ರೆಗೆ ಸಾಗಿಸಿದ್ದು ಮುಸ್ಲಿಂ ವ್ಯಾಪಾರಿ ಅಬ್ದುಲ್ ರವೂಫ್ ಎಂಬುವರು.

ಇರಿತಕ್ಕೊಳಗಾಗಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶರತ್‌ ಅವರನ್ನು ಹಣ್ಣಿನ ವ್ಯಾಪಾರಿಯಾಗಿರುವ ಅಬ್ದುಲ್ ರವೂಫ್ ತಮ್ಮ ರಿಕ್ಷಾದಲ್ಲಿ ತುಂಬೆ ಫಾದರ್ ಮುಲ್ಲರ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ಬಳಿಕ ಅಲ್ಲಿನ ಆಂಬುಲೆನ್ಸ್ ಮೂಲಕ ಮಂಗಳೂರಿನ ಎ.ಜೆ. ಆಸ್ಪತ್ರೆಗೆ ಸಾಗಿಸಿದ್ದರು.

ಉದಯ ಲಾಂಡ್ರಿ ಮಾಲೀಕ ತನಿಯಪ್ಪ ಮಡಿವಾಳ ಅವರ ಪುತ್ರ, ಆರ್‌ಎಸ್ಎಸ್ ಕಾರ್ಯಕರ್ತ ಶರತ್ ಅವರಿಗೆ ದುಷ್ಕರ್ಮಿಗಳು ಮಂಗಳವಾರ ರಾತ್ರಿ ತಲವಾರಿನಿಂದ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು.

ಲಾಂಡ್ರಿ ಪಕ್ಕದಲ್ಲಿರುವ ಒಟ್ಟು ನಾಲ್ಕು ಅಂಗಡಿಗಳ ಪೈಕಿ, ಸಿಹಿತಿಂಡಿ ಅಂಗಡಿ ಮಾಲೀಕ ಪ್ರವೀಣ, ವಸ್ತ್ರದ ಅಂಗಡಿ ಮಾಲೀಕ, ರಾಜಸ್ಥಾನ ಮೂಲದ ರಾಜೇಶ ಸಿಂಗ್ ಮತ್ತು ಹಣ್ಣಿನ ವ್ಯಾಪಾರಿ ಅಬ್ದುಲ್ ರವೂಫ್ ಪರಸ್ಪರ ಸ್ನೇಹಿತರಾಗಿದ್ದರು. ಎಲ್ಲರೂ ನಿತ್ಯ ರಾತ್ರಿ 9.30ಕ್ಕೆ ಅಂಗಡಿ ಮುಚ್ಚುತ್ತಾರೆ.

ಮಂಗಳವಾರ ಮಾತ್ರ ರಾಜೇಶ ಸಿಂಗ್ ತಮ್ಮ ಮಳಿಗೆಯನ್ನು ರಾತ್ರಿ 8.30ಕ್ಕೆ ಮುಚ್ಚಿ ಮನೆಗೆ ಹೋಗಿದ್ದರು. ಈ ನಡುವೆ ಇಲ್ಲಿನ ಹೊಂಡಮಯ ಸರ್ವೀಸ್‌ ರಸ್ತೆಯಲ್ಲಿ ವಾಹನ ಗುಂಡಿಗೆ ಬಿದ್ದ ಹಾಗೆ ಶಬ್ದ ಕೇಳಿದ ತಕ್ಷಣವೇ ಪ್ರವೀಣ ಅವರು ಲಾಂಡ್ರಿ ಕಡೆಗೆ ಬರುತ್ತಿದ್ದರು. ಈ ಸಂದರ್ಭ ಲಾಂಡ್ರಿಯಿಂದ ಬಂದ ಒಬ್ಬ ಆರೋಪಿ, ಎದುರಿನ ಮೇಲ್ಸೇತುವೆ ಕಡೆಗೆ ತಿರುಗಿ ನಿಂತಿದ್ದ ಬೈಕ್‌ನಲ್ಲಿ ಕುಳಿತು ಮೂವರೊಂದಿಗೆ ಪರಾರಿಯಾದರು ಎಂದು ಪ್ರವೀಣ ಪೊಲೀಸರಿಗೆ ತಿಳಿಸಿದ್ದಾರೆ.

ಪ್ರವೀಣ ಲಾಂಡ್ರಿಗೆ ಬಂದು ನೋಡಿದಾಗ ಶರತ್‌ ಬಟ್ಟೆ ರಾಶಿ ನಡುವೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಕೂಡಲೆ ಅಬ್ದುಲ್ ರವೂಫ್, ಶರತ್‌ ಅವರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.

ಹಲ್ಲೆಯಿಂದ ತಲೆಯ ಹಿಂಬದಿ, ಬೆನ್ನು, ಕೆನ್ನೆ, ಕೊರಳು ಮತ್ತಿತರ ಕಡೆ ತೀವ್ರ ಗಾಯವಾಗಿರುವ ‌ಶರತ್ ಕುಮಾರ್ ಅವರ ರಕ್ತದೊತ್ತಡ ಇಳಿಮುಖವಾಗಿದೆ. ಅವರಿಗೆ ಕಿಡ್ನಿ ಸಮಸ್ಯೆಯೂ ಕಾಣಿಸಿಕೊಂಡಿದೆ. ಈಗಾಗಲೇ 16 ಬಾಟಲಿ ರಕ್ತ ನೀಡಲಾಗಿದ್ದು, ಗುರುವಾರ ಚೇತರಿಕೆ ಕಂಡುಬರಬಹುದು ಎಂದು ವೈದ್ಯರು ಭರವಸೆ ನೀಡಿದ್ದಾರೆ ಎಂದು ಗಾಯಾಳು ಸಂಬಂಧಿಕರು ತಿಳಿಸಿದ್ದಾರೆ.

ಕೇವಲ ಆರ್‌ಎಸ್ಎಸ್ ಪಥಸಂಚಲನ ಮತ್ತಿತರ ಕಾರ್ಯಕ್ರಮಗಳಲ್ಲಿ ಮಾತ್ರ ಭಾಗವಹಿಸುತ್ತಿದ್ದ, ಸೌಮ್ಯ ಸ್ವಭಾವದ ಶರತ್ ಎಲ್ಲರೊಂದಿಗೂ ಅನ್ಯೋನ್ಯತೆ ಹೊಂದಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಂಟ್ವಾಳ ಉದ್ವಿಗ್ನ: ಪೊಲೀಸ್‌ ಸರ್ಪಗಾವಲು
ಮಂಗಳವಾರ ರಾತ್ರಿ ನಡೆದ ಘಟನೆಯಿಂದ ತಾಲ್ಲೂಕಿನಾದ್ಯಂತ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಬಂಟ್ವಾಳದಲ್ಲಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT