ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಗೆಯ ಸುತ್ತ ಮೌಢ್ಯದ ಹುತ್ತ

ಅಕ್ಷರ ಗಾತ್ರ

ಕರ್ನಾಟಕ ಜನರ ಗಮನಸೆಳೆದ ಸಂದರ್ಭವೆಂದರೆ, ಕಾಗೆಯೊಂದು ಮುಖ್ಯಮಂತ್ರಿಗಳು ಬಳಸುವ ಕಾರಿನ ಮೇಲೆ ಕೂತಿದ್ದು. ಕೆಲವರು ಇದನ್ನು ಅವೈಜ್ಞಾನಿಕವಾಗಿ ಅರ್ಥೈಸಿದ್ದು ಮಾತ್ರ ಚರ್ಚೆಗೆ ಗ್ರಾಸವಾಯಿತು. ಕಾರಿನ ಮೇಲೆ ಕಾಗೆ ಕೂತಿದೆ ಎಂದಮೇಲೆ ಏನೋ ಸಂಭವಿಸುತ್ತದೆ ಎಂಬ ವದಂತಿ.

ಈಗಲೂ ಕೆಲವರು ಶಕುನ ನೋಡುವ ಸಂಪ್ರದಾಯವನ್ನು ಪಾಲಿಸುತ್ತಿದ್ದಾರೆ. ಶಕುನ ಶುಭವಾದರೆ ಹೊರಟಂತಹ ಕಾರ್ಯವು ಕೈಗೂಡುತ್ತದೆ. ಶಕುನವು ಅಶುಭವಾಗಿದ್ದಲ್ಲಿ ಆ ಕಾರ್ಯವು ಶುಭಕರ ಆಗುವುದಿಲ್ಲೆಂಬ ಮೌಢ್ಯ.

ಹೊರಗೆ ಹೊರಟಂತಹ ಸಂದರ್ಭದಲ್ಲಿ ಬೆಕ್ಕು ಬಲದಿಂದ ಎಡಕ್ಕೆ ಹೋದರೆ ಅಶುಭವೆಂತಲೂ, ಅದೇ ಬೆಕ್ಕು ಎಡದಿಂದ ಬಲಕ್ಕೆ ಹೋದರೆ ಶುಭ ಸೂಚಕವೆಂದು ಭಾವಿಸಲಾಗುತ್ತದೆ. ಬಲಕ್ಕೆ ಹಾರಿದರೆ ಶುಭ, ಎಡಕ್ಕೆ ಹಾರಿದರೆ ಅಶುಭ. ಅವುಗಳು ತಮ್ಮ ಪಾಲಿನ ತುತ್ತನ್ನು ಹುಡುಕಿಕೊಂಡು ಹೋಗುತ್ತಿರುವಾಗ ಮಾನವ ಸಮಾಜದಲ್ಲಿ ಅವುಗಳಿಗೆ ಶುಭ-ಅಶುಭವೆಂಬ ಕಥೆ ಕಟ್ಟಲಾಗಿದೆ.

ಹಡಪಿಗ (ಕ್ಷೌರಿಕ) ತನ್ನ ಹಡಪವನ್ನು ಕೈಯಲ್ಲಿ ಹಿಡಿದುಕೊಂಡು ತನ್ನ ಕಾಯಕಕ್ಕೆಂದು ನಡೆದಿರುವಾಗ ‘ಹಡಪಿಗನು ಎದುರಿಗೆ ಬಂದುಬಿಟ್ಟ! ಹೊರಟ ಕಾರ್ಯವು ಕೈಗೂಡುವುದಿಲ್ಲ’ ಎಂದು ಶಪಿಸಲಾಗುತ್ತದೆ. ಇದೂ ಅವೈಜ್ಞಾನಿಕ ಆಚರಣೆ. ಒಂದು ಕಾಯಕವನ್ನು (ವೃತ್ತಿಯನ್ನು) ಅವಮಾನಿಸಲಾಗುತ್ತದೆ. ಮುಖದ ಮೇಲೆ ಕೂದಲು ಬೆಳೆದು ಅದನ್ನು ತುಂಬ ಅಚ್ಚುಕಟ್ಟಾಗಿ ಕತ್ತರಿಸಿ ಮುಖಕಾಂತಿಯನ್ನು ಹೆಚ್ಚಿಸುವ ಕಾಯಕವು ಶ್ರೇಷ್ಠವಲ್ಲವೇ? ಒಂದುಪಕ್ಷ ಕ್ಷೌರಿಕನು ಲಭ್ಯವಿಲ್ಲದಿದ್ದಲ್ಲಿ ಮುಖವು ಕಳಾಹೀನ. 

ತನ್ನೊಳಗೆ ಅನಾರೋಗ್ಯಕರವಾದ ಆಲೋಚನೆಗಳನ್ನು ಇಟ್ಟುಕೊಂಡು ಬಹಿರಂಗದಲ್ಲಿ ಮಂಗಲ-ಅಮಂಗಲವನ್ನು ಎಣಿಸುವ ಮಾನವನ ಸಂಕುಚಿತ ಮತಿಗೆ ಏನೆನ್ನಬೇಕು? ಕೆಲವರದು ಕಟ್ಟಿಗೆಯನ್ನು ಕಡಿದು ತಂದು ಮಾರುವ ಕಾಯಕ. ಅಂತಹ ಕಟ್ಟಿಗೆಯ ಹೊರೆಯನ್ನು ಹೊತ್ತುಕೊಂಡು ಎದುರಿಗೆ ಬಂದಾಗಲೂ ಅಪಶಕುನವೆಂದು ಭಾವಿಸಲಾಗುತ್ತದೆ. ಅದರಂತೆ ಎಲ್ಲಿಗೋ ಹೊರಟಂತಹ ಸಂದರ್ಭದಲ್ಲಿ ಹೆಣ (ಕೈವಲ್ಯ) ಎದುರಾದಾಗ ಅದನ್ನು ಶುಭವೆಂದು ಬಗೆಯಲಾಗುತ್ತದೆ. ಕೆಲವರದು ಹಲ್ಲಿಯ ಶಕುನ.

ಕಳೆದ ತಿಂಗಳ 24ರಂದು ಬೆಂಗಳೂರಿನಲ್ಲಿ ಚಲನಚಿತ್ರವೊಂದಕ್ಕೆ ಚಾಲನೆ ನೀಡುವ ಕಾರ್ಯಕ್ರಮವನ್ನು ಮುಗಿಸಿಕೊಂಡು ನಾನು ಚಿತ್ರದುರ್ಗಕ್ಕೆ ಪ್ರಯಾಣಿಸಿದ ಸಂದರ್ಭ. ಬೆಂಗಳೂರಿನ ಜನನಿಬಿಡವಾದ ಹಾಗೂ ಅತಿಯಾದ ಟ್ರಾಫಿಕ್‌ನಿಂದ ಕೂಡಿದ ರಸ್ತೆಯಲ್ಲಿ ನಿಧಾನಗತಿಯಲ್ಲಿ ನಮ್ಮ ವಾಹನ ಚಲಿಸುತ್ತಿತ್ತು.

ಸಂಜೆ 6 ಗಂಟೆಯ ಸಮಯ. ಸಿಗ್ನಲ್‌ಲೈಟ್ ಬಳಿ ನಮ್ಮ ವಾಹನವು ನಿಂತುಕೊಂಡಾಗ ಆಕಸ್ಮಿಕವಾಗಿ ಒಂದು ಕಾಗೆಯು ಬಂದು ನಮ್ಮ ಕಾರಿನ ಮುಂಭಾಗದಲ್ಲಿ ಕುಳಿತುಕೊಂಡಿತು. ನನಗೇನೂ ಅನ್ನಿಸಲಿಲ್ಲ. ಪಕ್ಕದಲ್ಲಿ ಒಂದು ಮಾರುತಿ ವ್ಯಾನ್. ಅದರ ಒಳಗಡೆ ಪ್ರಯಾಣಿಕರು, ಮೇಲೆ ಸರಕುಗಳನ್ನು ಹಾಕಲಾಗಿತ್ತು. ಆ ಸರಕುಗಳಲ್ಲಿ ಏನಾದರೂ ತಿನ್ನುವ ಅಂಶಗಳಿರಬಹುದೆಂದು ನಮ್ಮ ಕಾರಿನ ಮೇಲೆ ಕುಳಿತು ಅದು ಪಕ್ಕದ ಕಾರನ್ನು ಗಮನಿಸುತ್ತಿತ್ತು.

ಆ ಚಾಲಕ ಇದನ್ನು ನೋಡಿ ನಗಲಾರಂಭಿಸಿದ. ನಮ್ಮ ಕಾರಿನೊಳಗಿದ್ದವರಿಂದ ಯಾವುದೇ ಪ್ರತಿಕ್ರಿಯೆ ಇರಲಿಲ್ಲ. ಕೆಲವೇ ಕ್ಷಣದಲ್ಲಿ ಅದು ಆ ಕಾರಿನ ಮೇಲೆ ಕುಳಿತುಕೊಳ್ಳಲು ಹಾರಿತು. ನಮ್ಮ ಕಾರಿನ ಮೇಲೆ ಕುಳಿತದ್ದನ್ನು ನೋಡಿ ನಕ್ಕ ಆ ಚಾಲಕನಿಗೆ ತನ್ನ ಕಾರಿನ ಮೇಲೆ ಕುಳಿತದ್ದನ್ನು ಕಂಡು  ಅಷ್ಟೇ ಕಸಿವಿಸಿ ಆಗಿದ್ದಿರಬಹುದು. ಕೆಲವೇ ಸೆಕೆಂಡುಗಳಲ್ಲಿ ಹಸಿರು ಸಿಗ್ನಲ್. ಅಲ್ಲಿಂದ ಪ್ರಯಾಣ ಮುಂದುವರೆಯಿತು.

ಅಕಸ್ಮಾತಾಗಿ ಅದೇ ದಿನ ಏನಾದರೂ ಅವಘಡ ಸಂಭವಿಸಿದ್ದಿದ್ದರೆ ಕಾರಿನ ಮೇಲೆ ಕಾಗೆ ಕುಳಿತಿದ್ದರಿಂದ ಹೀಗಾಯಿತೆಂದು ಕಲ್ಪಿಸಲಾಗುತ್ತಿತ್ತೇನೋ? ಸದ್ಯ, ಯಾರೂ ಆ ಸನ್ನಿವೇಶದ ಭಾವಚಿತ್ರವನ್ನು ತೆಗೆಯಲಿಲ್ಲ. ಆ ಸಂದರ್ಭವನ್ನು ಪ್ರಚಾರಪಡಿಸಲಿಲ್ಲ. ಕಾದು ನೋಡೋಣ ಏನು ಆಗುತ್ತದೆ? ಎಂದು ಸುಮ್ಮನಾದೆವು. ಏನೂ ಆಗಲಿಲ್ಲ. ಇಂತಹ ಪ್ರಸಂಗ ಜರುಗಿದಾಗ ಕೆಲವರು ಅದಕ್ಕೆ ಏನೆಲ್ಲಾ ಕಥೆ ಕಟ್ಟುತ್ತಾರೆ. ವ್ಯಕ್ತಿಯ ಧೈರ್ಯವನ್ನು ಕುಂದಿಸುತ್ತಾರೆ. ಅಧೈರ್ಯಕ್ಕೆ ಒಳಗಾದ ವ್ಯಕ್ತಿಯನ್ನು ಖಿನ್ನತೆ ಆವರಿಸಬಹುದು.  ಸಂಪ್ರದಾಯವಾದಿಗಳು ಹೆಣೆಯುವ ಕಟ್ಟುಕಥೆಯಿಂದ ಪಾರಾಗಲು ಏನಾದರೊಂದು ಬದಲಾವಣೆಗೆ ಕೆಲವರು ಮುಂದಾಗುತ್ತಾರೆ.

ನಮ್ಮ ಮುಖ್ಯಮಂತ್ರಿಗಳಾದರೂ ಈ ಕಾಗೆ ಕೂತ ಘಟನೆ ನಂತರ ಕಾಕತಾಳೀಯವಾಗಿ ತಮ್ಮ ಕಾರನ್ನು ಬದಲಾಯಿಸಿದರು. ಈ ಸಂಬಂಧ ಅಪಶಕುನವೆಂದು ಕಾರನ್ನು ಬದಲಾಯಿಸಲಾಗಿದೆ ಎಂದು ಅರ್ಥೈಸಲಾಯಿತು. ಮುಖ್ಯಮಂತ್ರಿಗಳಿಂದ ಈ ಸಂಬಂಧ ಒಂದು ಸಮಜಾಯಿಷಿ- ಹೊಸ ಕಾರ್ ಬುಕ್ಕಿಂಗ್ ಮಾಡಲಾಗಿತ್ತು. ಕಾರಣ ಅದನ್ನು ಬಳಸಲಾಗುತ್ತಿದೆ ಎಂಬ ಹೇಳಿಕೆ. ಮುಖ್ಯಮಂತ್ರಿಗಳಿಗೆ ಇಬ್ಬರು ಮಕ್ಕಳು.

ಅದರಲ್ಲಿ ಒಬ್ಬಾತ ರಾಜಕೀಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದ. 2016ರಲ್ಲಿ  ಸ್ನೇಹಿತರ ಸಂಗಡ ವಿದೇಶಕ್ಕೆ ಹೋದ ಸಂದರ್ಭ. ಆರೋಗ್ಯದಲ್ಲಿ ವ್ಯತ್ಯಾಸವಾಗಿ ಅಲ್ಲಿಯೇ ನಿಧನನಾಗುತ್ತಾನೆ. ಈ ಸುದ್ದಿಯು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಯಿತು. ಈ ಘಟನೆ 2016ರ ಜುಲೈ 30ರಂದು ಸಂಭವಿಸಿತು. ಮಗನ ಸಾವಿನಿಂದ ಮುಖ್ಯಮಂತ್ರಿಗಳು ಅತೀವ ಶೋಕ ಅನುಭವಿಸುವಂತಾಯಿತು. ವಿರೋಧಿ ಧುರೀಣರು ಮೊದಲಾಗಿ ಎಲ್ಲರೂ ಶೋಕ ವ್ಯಕ್ತಪಡಿಸುತ್ತ ಸಾಂತ್ವನ ನೀಡುತ್ತಾರೆ.

ಕೆಲ ಸಂಪ್ರದಾಯವಾದಿಗಳು ಮತ್ತು ಜ್ಯೋತಿಷಿಗಳು ಕಾಗೆ ಕೂತಿದ್ದಕ್ಕೂ ಮಗ ಸತ್ತಿದ್ದಕ್ಕೂ ಸಂಬಂಧವನ್ನು ಕಲ್ಪಿಸುತ್ತಾರೆ. ಇದು ಒಂದು ಕಾಕತಾಳೀಯ ಘಟನೆ ಅಷ್ಟೇ. ಎಷ್ಟೋ ಕಾಗೆಗಳು ಮನೆಗಳ ಮೇಲೆ ಕೂತು ಹೋಗಿರುತ್ತವೆ. ಏನೂ ಆಗಿರುವುದಿಲ್ಲ. ಆಕಸ್ಮಿಕವಾಗಿ ಕಾಗೆಯು ಮನೆಯೊಳಗೆ ಬಂದರೆ ಇಡೀ ಮನೆಯನ್ನು ಶುದ್ಧಗೊಳಿಸಲಾಗುತ್ತದೆ. ಶನಿದೇವರ ಕಾಟವೆಂದು ಭಾವಿಸಿ ಅಲ್ಲಿಗೆ ಹೋಗಿ ಹರಕೆ-ನೆರಕೆಗಳನ್ನು ಸಲ್ಲಿಸಿ ಬರುತ್ತಾರೆ.

ರಸ್ತೆಯಲ್ಲಿ ಹೋಗುತ್ತಿರುವಾಗ ಅಕಸ್ಮಾತ್ ಕಾಗೆಯ ರೆಕ್ಕೆಯು ವ್ಯಕ್ತಿಯ ಶರೀರಕ್ಕೆ ತಾಕಿದರೆ ಸಾಕು ಅದಕ್ಕೇನೋ ಬಣ್ಣ ಕಟ್ಟುತ್ತಾರೆ. ಮನೆಯ ಒಳಗಡೆ ಹೋದಾಗ ಕೆಲವರು ಶನಿಯ ದೋಷವಿದೆ. ಬೆಳ್ಳಿಯ ಕಾಗೆಯನ್ನು ಮಾಡಿಸಿ ದಾನ ಮಾಡಬೇಕೆಂದು ಹೇಳುತ್ತಾರೆ. ಈ ಕಾರಣಕ್ಕಾಗಿ ಕೆಲವರು ಕಾಗೆಯನ್ನು ‘ಶೂದ್ರಪಕ್ಷಿ’ ಎಂದು ಕರೆಯುತ್ತಾರೆ.

ತಮ್ಮ ಮನೆಯಲ್ಲಿ ಹಿರಿಯರು ಸತ್ತಂತಹ ಸಂದರ್ಭದಲ್ಲಿ ತಿಥಿಯ ಹೆಸರಿನಲ್ಲಿ ಶ್ರಾದ್ಧ ಮಾಡಲಾಗುತ್ತದೆ. ಅಂದು ಹಿರಿಯರ ಭಾವಚಿತ್ರದ ಮುಂದೆ ಅವರಿಗೆ ಪ್ರಿಯವಾದ ಪದಾರ್ಥಗಳನ್ನು ಮಾಡಿಸಿಟ್ಟು ಪೂಜಿಸಲಾಗುತ್ತದೆ. ಅದನ್ನು ಮನೆಯ ಮೇಲೆ ಇಡಲಾಗುತ್ತದೆ. ಅಲ್ಲಿ ಇಟ್ಟಂತಹ ‘ಎಡೆ’ಯನ್ನು ಕಾಗೆಯ ರೂಪದಲ್ಲಿ ಹಿರಿಯರು ಬಂದು ತಿನ್ನುತ್ತಾರೆಂಬ ಪ್ರತೀತಿ ಇದೆ. ಒಂದುಪಕ್ಷ ಕಾಗೆಯು ಬಂದು ಎಡೆಯನ್ನು ತಿನ್ನದಿದ್ದಲ್ಲಿ ‘ನಮ್ಮಿಂದ ಏನೋ ಅಪಚಾರವಾಗಿದೆ’ ಎಂದು ಭಾವಿಸಲಾಗುತ್ತದೆ. ‘ನಮಗೆ ಮುಂದೇನೋ ತೊಂದರೆ ಆಗುತ್ತದೆ’ ಎಂದು ಕಳವಳಿಸುತ್ತಾರೆ. ಅಲ್ಲಿ ಅಪವಿತ್ರ (ಶೂದ್ರ) ಪಕ್ಷಿಯಾದರೆ, ಇಲ್ಲಿ ಅದೇ ಕಾಗೆಯು ‘ಪವಿತ್ರ ಪಕ್ಷಿ’. ಬಸವಣ್ಣನವರು ಅದನ್ನು ತುಂಬಾ ವಿಭಿನ್ನವಾಗಿ ಅರ್ಥೈಸುತ್ತಾರೆ-

ಕಾಗೆ ಒಂದಗುಳ ಕಂಡಡೆ ಕರೆಯದೆ ತನ್ನ ಬಳಗವನು?
ಕೋಳಿ ಒಂದು ಕುಟುಕ ಕಂಡಡೆ ಕೂಗಿ ಕರೆಯದೆ ತನ್ನ
ಕುಲವನೆಲ್ಲವ?
ಶಿವಭಕ್ತನಾಗಿ ಭಕ್ತಿಪಕ್ಷವಿಲ್ಲದಿದ್ದಡೆ ಕಾಗೆ ಕೋಳಿಯಿಂದ ಕರಕಷ್ಟ
ಕೂಡಲಸಂಗಮದೇವಾ.
ಕರೆದುಣ್ಣುವ ಗುಣವು ಕಾಗೆಯಲ್ಲಿ. ಇದರಿಂದಾಗಿ ಅದು ‘ದಾಸೋಹ ಪಕ್ಷಿ’. ಪ್ರತಿಯೊಂದು ಜೀವಸಂಕುಲವೂ ನಿಸರ್ಗದ ಸೃಷ್ಟಿ. ತಮ್ಮದೇ ಆದ ಶೈಲಿಯಲ್ಲಿ ಅವು ಜೀವನವನ್ನು ನಿರ್ವಹಿಸುತ್ತ ಹೋಗುತ್ತವೆ. ಯಾವ ಜೀವಿಗೂ ಅವಮಾನಿಸಬಾರದು.

ಬಹಿರಂಗದ ಅವೈಜ್ಞಾನಿಕ ಆಚರಣೆಗಳನ್ನು ಕಾನೂನಿನ ಮೂಲಕ ನಿಯಂತ್ರಿಸಬಹುದು. ಆದರೆ, ಅದೆಷ್ಟೋ ಆಚರಣೆಗಳು ಮಾನವನ ಅಂತರಂಗದಲ್ಲಿದ್ದು, ಅವುಗಳಿಗೆ ಅಂಜಿ ನಡೆಯಲಾಗುತ್ತದೆ. ಇಂತಹವುಗಳನ್ನು ಯಾವ ಕಾನೂನು ತಾನೇ ನಿಲ್ಲಿಸುತ್ತದೆ? ಅಮಾನವೀಯ ಆಚರಣೆಗಳ ನಿಗ್ರಹಕ್ಕೆ ಕಠಿಣತರವಾದ ಕಾನೂನು ಬೇಕಾಗುತ್ತದೆ.

ಮಾನವನ ಅಂತರಂಗದಲ್ಲಿ ಮನೆ ಮಾಡಿಕೊಂಡಿರುವ ಶುಭ-ಅಶುಭ ಮತ್ತು ಮಂಗಲ-ಅಮಂಗಲಕರವಾದ ಆಚರಣೆಗಳಿಗೆ ಜಾಗೃತಿಯೊಂದೇ ಪರಿಹಾರ. ಜಾಗೃತಿಯ ಜೀವನ ಅವನದಾದರೆ, ಎಷ್ಟೋ ಮೌಢ್ಯಗಳು ನಿಲ್ಲುತ್ತವೆ. ತನ್ನ ಅಂತರಂಗದಲ್ಲಿರುವ ಮೌಢ್ಯದ ಬೇರನ್ನು ಕಿತ್ತು ಹಾಕಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT