ಉಡುಪಿ ಕೃಷ್ಣಮಠದಲ್ಲಿ ಶಯನೀ ಏಕಾದಶಿ ಸಮಾರಂಭ
ನೃತ್ಯ ಸೇವೆ ಸಲ್ಲಿಸಿದ ಪೇಜಾವರ ಶ್ರೀ

ಉಡುಪಿ: ಶಯನೀ ಏಕಾದಶಿಯ ಪ್ರಯುಕ್ತ ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಕಿರಿಯ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರು ಬುಧವಾರ ಕೃಷ್ಣ ಮಠದಲ್ಲಿ ತುಳಸಿ ತುಂಬಿದ ಹರಿವಾಣವನ್ನು ತಲೆಯ ಮೇಲಿಟ್ಟು ‘ಡಂಗುರವ ಸಾರಿ ಹರಿಯ’ ಎಂಬ ದಾಸರ ಪದಕ್ಕೆ ಹೆಜ್ಜೆ ಹಾಕುವ ಮೂಲಕ ದೇವರಿಗೆ ನೃತ್ಯ ಸೇವೆ ಸಲ್ಲಿಸಿದರು.
ಕೃಷ್ಣ ದೇವರಿಗೆ ರಾತ್ರಿ ಪೂಜೆ ಸಲ್ಲಿಸಿದ ನಂತರ ಸೂರ್ಯವಾದ್ಯ, ನಾದಸ್ವರ, ಸಂಕೀರ್ತನೆ, ಸಂಗೀತ, ಭಾಗವತ ಪುರಾಣಗಳು ಚಂದ್ರಶಾಲೆಯಲ್ಲಿ ನಡೆದವು.
ಆ ನಂತರ ದೇವರ ಎದುರಿನ ಮಂಟಪದಲ್ಲಿ ಉಭಯ ಶ್ರೀಗಳು ದೇವರಿಗೆ ಮಂಗಳಾರತಿ ಮಾಡಿ ತುಳಸಿ ತುಂಬಿದ ಹರಿವಾಣವನ್ನು ತಲೆಯ ಮೇಲಿಟ್ಟುಕೊಂಡು ದಾಸರ ಪದಕ್ಕೆ ನೃತ್ಯ ಮಾಡಿ ಸೇವೆ ಸಲ್ಲಿಸಿದರು. ಆ ನಂತರ ಪ್ರದಕ್ಷಿಣೆ ಹಾಕಿದರು.
ಆಷಾಢ ಮಾಸದ ಶುಕ್ಲ ಏಕಾದಶಿಯಿಂದ ಕಾರ್ತಿಕ ಮಾಸದ ಶುಕ್ಲ ಏಕಾದಶಿಯವರೆಗೆ ಚಾತುರ್ಮಾಸ್ಯದ ಎಂಟು ಏಕಾದಶಿಗಳಂದು ಈ ರೀತಿಯ ಆಚರಣೆ ನಡೆಯುತ್ತದೆ.
ಪ್ರತಿಕ್ರಿಯಿಸಿ (+)