ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗ ವಿಕಾಸ್‌ಗೆ ‘ಹ್ಯಾಟ್ರಿಕ್‌’ ಚಿನ್ನದ ಕನಸು

ಇಂದಿನಿಂದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌
Last Updated 5 ಜುಲೈ 2017, 19:43 IST
ಅಕ್ಷರ ಗಾತ್ರ

ಭುವನೇಶ್ವರ : ಡಿಸ್ಕಸ್‌ ಥ್ರೋ ಸ್ಪರ್ಧೆಯಲ್ಲಿ ಭಾರತದ ಶಕ್ತಿಯಾಗಿರುವ ವಿಕಾಸ್‌ ಗೌಡ ಅವರು 22ನೇ ಆವೃತ್ತಿಯ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ನಲ್ಲಿ ‘ಹ್ಯಾಟ್ರಿಕ್‌’ ಚಿನ್ನದ ಸಾಧನೆ ಮಾಡುವ ಮಹಾದಾಸೆ ಹೊತ್ತಿದ್ದಾರೆ.

ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾಗುವ ಕೂಟದಲ್ಲಿ  45 ವಿವಿಧ ರಾಷ್ಟ್ರಗಳ 800ಕ್ಕೂ ಹೆಚ್ಚು ಅಥ್ಲೀಟ್‌ಗಳು ಪದಕಗಳಿಗಾಗಿ ಪೈಪೋಟಿ ನಡೆಸಲಿದ್ದಾರೆ. 42 ವಿಭಾಗಗಳಲ್ಲಿ ಸ್ಪರ್ಧೆಗಳು ಜರುಗಲಿವೆ. ಕರ್ನಾಟಕದ ವಿಕಾಸ್‌ ಅವರು 2013 ಮತ್ತು 2015ರಲ್ಲಿ  ಚಿನ್ನಕ್ಕೆ ಮುತ್ತಿಕ್ಕಿದ್ದರು.

ಹಾಸನದ 34 ವರ್ಷದ ಅಥ್ಲೀಟ್‌ ವಿಕಾಸ್‌ ಅವರಿಗೆ ಈ ಬಾರಿ ಇರಾನ್‌ನ ಎಹಸಾನ್‌ ಹದಾದಿ ಮತ್ತು ಇರಾಕ್‌ನ ಮುಸ್ತಾಫ ಅಲ್‌ಸಾಮಹ ಅವರಿಂದ ಕಠಿಣ ಸವಾಲು ಎದುರಾಗುವ ಸಾಧ್ಯತೆ ಇದೆ. ಐದು ಚಿನ್ನದ ನಿರೀಕ್ಷೆ: ಪುರುಷರ ಜಾವೆಲಿನ್‌ ಥ್ರೋ, 400 ಮೀಟರ್ಸ್‌ ಓಟ, ಡಿಸ್ಕಸ್‌ ಥ್ರೋ , ಮಹಿಳೆಯರ ಶಾಟ್‌ಪಟ್‌ ಮತ್ತು 4X400 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಭಾರತ ತಂಡ ಚಿನ್ನ ಗೆಲ್ಲುವ ನಿರೀಕ್ಷೆ ಇದೆ.

ಪುರುಷರ ಜಾವೆಲಿನ್‌ ಥ್ರೋ ಸ್ಪರ್ಧೆ ಯಲ್ಲಿ ಆತಿಥೇಯರ ಸವಾಲು ಎತ್ತಿ ಹಿಡಿಯಲಿರುವ ನೀರಜ್‌, ಮೊದಲ ದಿನವೇ ದೇಶಕ್ಕೆ ಚಿನ್ನ ಗೆದ್ದುಕೊಡುವ ಭರವಸೆ ಹೊಂದಿದ್ದಾರೆ. ಜೂನಿಯರ್‌ ವಿಭಾಗದಲ್ಲಿ ವಿಶ್ವ ದಾಖಲೆ ಬರೆದ ಹೆಗ್ಗಳಿಕೆ ಹೊಂದಿರುವ ನೀರಜ್‌ ಅವರು ಚಿನ್ನದ ಹಾದಿಯಲ್ಲಿ ಚೀನಾ ತೈಪೆಯ ಹುವಾಂಗ್‌ ಶಿಗ್‌ ಫೆಂಗ್‌ ಮತ್ತು ಚಾವೊ ಸುನ್‌ ಅವರ ಸವಾಲು ಮೀರಿ ನಿಲ್ಲಬೇಕಿದೆ. ಹುವಾಂಗ್‌ ಅವರು ಹಿಂದಿನ ಆವೃತ್ತಿಯಲ್ಲಿ ಮೊದಲ ಸ್ಥಾನ ಗಳಿಸಿದ್ದರು.

ಮಹಿಳೆಯರ ಜಾವೆಲಿನ್‌ ಥ್ರೋ ಸ್ಪರ್ಧೆಯಲ್ಲಿ ಕಣದಲ್ಲಿರುವ ಅನು ರಾಣಿ ಕೂಡ ಪದಕದ ಮೇಲೆ ಕಣ್ಣಿಟ್ಟಿದ್ದಾರೆ. ಪುರುಷರ 400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲಿ ಮಹಮ್ಮದ್‌ ಅನಾಸ್‌ ಅವರು ಭಾರತದ ಭರವಸೆಯಾಗಿದ್ದಾರೆ. ಮಹಿಳೆಯರ ಶಾಟ್‌ಪಟ್‌ನಲ್ಲಿ ಕಣಕ್ಕಿಳಿಯುತ್ತಿರುವ ಮನ್‌ಪ್ರೀತ್‌ ಕೌರ್‌ ಅವರೂ ಚಿನ್ನದ ಕನಸು ಕಾಣುತ್ತಿದ್ದಾರೆ.

ಪುರುಷರ ಶಾಟ್‌ಪಟ್‌ನಲ್ಲಿ ತೇಜಿಂದರ್‌ ಪಾಲ್‌ ಸಿಂಗ್‌ ತೂರ್‌ ಅವರು ಚಿನ್ನಕ್ಕೆ ಕೊರಳೊಡ್ಡುವ ಉತ್ಸಾಹದಲ್ಲಿದ್ದಾರೆ. ಹೋದ ಆವೃತ್ತಿಯಲ್ಲಿ ಇಂದರ್‌ಜೀತ್‌ ಸಿಂಗ್‌ ಚಿನ್ನ ಜಯಿಸಿದ್ದರು.   ಉದ್ದೀಪನಾ ಮದ್ದು ಸೇವನೆ ಪ್ರಕರಣದಡಿ ನಿಷೇಧ ಶಿಕ್ಷೆಗೆ ಗುರಿಯಾಗಿರುವ ಅವರು ಈ ಬಾರಿ ಕಣಕ್ಕಿಳಿಯುತ್ತಿಲ್ಲ.

ಮಹಿಳೆಯರ 4X400 ಮೀಟರ್ಸ್‌ ಓಟದ ಸ್ಪರ್ಧೆಯಲ್ಲೂ ಭಾರತ ಚಿನ್ನ ಗೆಲ್ಲುವ ನೆಚ್ಚಿನ ತಂಡವಾಗಿದೆ.  ಈ ತಂಡದಲ್ಲಿ ಕರ್ನಾಟಕದ ಎಂ.ಆರ್‌. ಪೂವಮ್ಮ, ಜಿ.ಕೆ. ವಿಜಯಕುಮಾರಿ, ನಿರ್ಮಲಾ, ಜಿಸ್ನಾ ಮ್ಯಾಥ್ಯೂ, ಸರಿತಾ  ಬೆನ್‌ ಗಾಯಕ್ವಾಡ್‌ ಮತ್ತು ದೇವಶ್ರೀ ಮಜುಂದಾರ್‌ ಅವರು ಇದ್ದಾರೆ.

ಮಹಿಳೆಯರ 100 ಮತ್ತು 200 ಮೀಟರ್ಸ್‌ ಓಟದ ಸ್ಪರ್ಧೆಗಳಲ್ಲಿ ಭಾಗವಹಿಸಲಿರುವ ಒಡಿಶಾದ ದ್ಯುತಿ ಚಾಂದ್‌ ಅವರು ತವರಿನ ಅಭಿಮಾನಿಗಳ ಎದುರು ಶ್ರೇಷ್ಠ ಸಾಮರ್ಥ್ಯ ತೋರಲು ಉತ್ಸುಕರಾಗಿದ್ದಾರೆ.

ಪ್ರಮುಖರ ಗೈರು: ಮುಂದಿನ ತಿಂಗಳು ವಿಶ್ವ ಚಾಂಪಿ ಯನ್‌ಷಿಪ್‌  ಆಯೋಜನೆಯಾಗಿರುವ ಕಾರಣ ಅಥ್ಲೆಟಿಕ್ಸ್‌ನಲ್ಲಿ ಏಷ್ಯಾ ಖಂಡದ ಶಕ್ತಿ ಕೇಂದ್ರಗಳೆನಿಸಿರುವ ಚೀನಾ ಮತ್ತು ಕತಾರ್‌ನ ಪ್ರಮುಖ ಸ್ಪರ್ಧಿಗಳೆಲ್ಲರೂ  ಚಾಂಪಿಯನ್‌ಷಿಪ್‌ನಿಂದ ಹಿಂದೆ ಸರಿದಿದ್ದಾರೆ.
ಹೀಗಿದ್ದರೂ ಈ ಬಾರಿ ಚೀನಾದ ಸ್ಪರ್ಧಿಗಳೇ ಪ್ರಾಬಲ್ಯ ಮೆರೆಯುವ ಸಾಧ್ಯತೆ ಇದೆ. ಪಾಕಿಸ್ತಾನ ತಂಡ ಭಾಗಿ: ಪಾಕಿಸ್ತಾನ ತಂಡ ಚಾಂಪಿಯನ್‌ಷಿಪ್‌ ನಲ್ಲಿ ಭಾಗವಹಿಸುವುದು ಖಾತ್ರಿಯಾಗಿದೆ.   ಆರು ಸದಸ್ಯರ ಪಾಕ್‌ ತಂಡಕ್ಕೆ ವೀಸಾ ಸಿಕ್ಕಿದೆ.

ಅಗ್ರ ಮೂರರೊಳಗೆ ಸ್ಥಾನ ಗಳಿಸುವ ಗುರಿ
ಭಾರತ ತಂಡ ಹಿಂದಿನ  ಆವೃತ್ತಿಯಲ್ಲಿ ಪದಕ ಪಟ್ಟಿಯಲ್ಲಿ ಮೂರನೇ ಸ್ಥಾನ ಗಳಿಸಿತ್ತು. ಈ ಬಾರಿ ಭಾರತ ಅಥ್ಲೆಟಿಕ್ಸ್‌ ಫೆಡರೇಷನ್‌ (ಎಎಫ್‌ಐ) 95 ಸದಸ್ಯರ ತಂಡವನ್ನು ಪ್ರಕಟಿಸಿದೆ. ಹೀಗಾಗಿ  ಆತಿಥೇಯರು ಅಗ್ರ ಮೂರರೊಳಗೆ ಸ್ಥಾನ ಗಳಿಸುವ ಗುರಿ ಹೊಂದಿದ್ದಾರೆ. ತಂಡದಲ್ಲಿ 46 ಮಂದಿ ಮಹಿಳೆಯರು ಇದ್ದಾರೆ.

ಚಿನ್ನ ಗೆದ್ದರೆ ನೇರ ಅರ್ಹತೆ
ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆಲ್ಲುವ ಅಥ್ಲೀಟ್‌ಗಳು ಮುಂದಿನ ತಿಂಗಳು ಲಂಡನ್‌ನಲ್ಲಿ ನಡೆಯುವ ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ನೇರ ಅರ್ಹತೆ ಗಳಿಸಲಿದ್ದಾರೆ.

ಕಣದಲ್ಲಿರುವ ಕನ್ನಡಿಗರು..
ಕರ್ನಾಟಕದ ಅಭಿಷೇಕ್‌ ಶೆಟ್ಟಿ (ಡೆಕಥ್ಲಾನ್‌), ಎಂ.ಆರ್‌. ಪೂವಮ್ಮ (400 ಮೀ ಓಟ) ಮತ್ತು  (4X400 ಮೀ. ರಿಲೇ), ಜಿ.ಕೆ. ವಿಜಯಕುಮಾರಿ (4X400 ಮೀ. ರಿಲೇ), ಸಹನಾ ಕುಮಾರಿ (ಹೈ ಜಂಪ್‌), ಜಾಯಲಿನ್‌ ಮುರಳಿ ಲೋಬೊ (ಟ್ರಿಪಲ್‌ ಜಂಪ್‌), ರೀನಾ ಜಾರ್ಜ್‌ (4X100  ಮೀ. ರಿಲೇ) ಅವರೂ ಕಣದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT