ಸೋಮವಾರ, ಡಿಸೆಂಬರ್ 16, 2019
18 °C

ಮೇಕೆದಾಟು: ತಮಿಳುನಾಡು ಮತ್ತೆ ಕ್ಯಾತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೇಕೆದಾಟು: ತಮಿಳುನಾಡು ಮತ್ತೆ ಕ್ಯಾತೆ

ಚೆನ್ನೈ: ಮೇಕೆದಾಟು ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ವಿದ್ಯುತ್‌ಗಾಗಿ ಕಾವೇರಿ ನದಿಗೆ ಅಣೆಕಟ್ಟು ನಿರ್ಮಿಸುವ ಕರ್ನಾಟಕದ ಯೋಜನೆಗೆ ತಮಿಳುನಾಡು  ಮತ್ತೆ ತಕರಾರು ತೆಗೆದಿದೆ.ಯಾವುದೇ ಕಾರಣಕ್ಕೂ ಯೋಜನೆಗೆ ಅನುಮತಿ ನೀಡಬಾರದು ಎಂದು ಮನವಿ ಮಾಡಿ ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಪಳನಿಸ್ವಾಮಿ ಬುಧವಾರ ಕೇಂದ್ರ ಜಲಸಂಪನ್ಮೂಲ ಸಚಿವಾಲಯಕ್ಕೆ ಪತ್ರ ಬರೆದಿದ್ದಾರೆ.‘ಮೇಕೆದಾಟು ಬಹು ಉದ್ದೇಶದ ಯೋಜನೆಯ ವಿಸ್ತೃತ ಯೋಜನಾ ವರದಿಗೆ ತಾಂತ್ರಿಕ ಅನುಮತಿ ನೀಡುವಂತೆ ಮನವಿ ಮಾಡಿ ಕರ್ನಾಟಕ ಸರ್ಕಾರ ಕೇಂದ್ರ ಜಲ ಆಯೋಗಕ್ಕೆ ಮನವಿ ಮಾಡಿರುವ ವಿಚಾರ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಯೋಜನೆಯು ಕಾವೇರಿ ನ್ಯಾಯ ಮಂಡಳಿಯ ಅಂತಿಮ ತೀರ್ಪಿನ ಸಂಬಂಧ ಕೇಂದ್ರ ಸರ್ಕಾರ ಹೊರಡಿಸಿರುವ ಗೆಜೆಟ್‌ ಅಧಿಸೂಚನೆಯ ಉಲ್ಲಂಘನೆಯಾಗಿದೆ’ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾಭಾರತಿ ಅವರಿಗೆ ಬರೆದಿರುವ ಪತ್ರದಲ್ಲಿ ಪಳನಿಸ್ವಾಮಿ ಹೇಳಿದ್ದಾರೆ.‘ಇಂತಹ ಸನ್ನಿವೇಶದಲ್ಲಿ, ಕಾವೇರಿ ಜಲಾನಯನ ಪ್ರದೇಶಗಳಲ್ಲಿರುವ ಎಲ್ಲ ರಾಜ್ಯಗಳು ಒಪ್ಪಿಗೆ ನೀಡುವವರೆಗೆ ಕರ್ನಾಟಕದ ವ್ಯಾಪ್ತಿಗೆ ಬರುವ  ಜಲಾನಯನ ಪ್ರದೇಶದಲ್ಲಿ ಮೇಕೆದಾಟು ಅಥವಾ ಇತರ ಯಾವುದೇ ಯೋಜನೆಗೆ ಅನುಮತಿ ನೀಡದಂತೆ ಕೇಂದ್ರ ಜಲ ಆಯೋಗದ ಅಧಿಕಾರಿಗಳಿಗೆ ಸೂಚಿಸಬೇಕು’ ಎಂದು ಅವರು ಪತ್ರದಲ್ಲಿ ಮನವಿ ಮಾಡಿದ್ದಾರೆ.‘ಈಗಾಗಲೇ, ಕಾವೇರಿ ನಿರ್ವಹಣಾ ಮಂಡಳಿ ಮತ್ತು ಕಾವೇರಿ ನೀರು ನಿಯಂತ್ರಣ ಸಮಿತಿಗಳನ್ನು ರಚಿಸಲಾಗಿದೆ. ಅವುಗಳು ಕಾರ್ಯಾರಂಭವನ್ನೂ ಮಾಡಿವೆ. ಮತ್ತು ಕಾನೂನಾತ್ಮಕ ಉಲ್ಲೇಖಗಳೂ ಅಂತಿಮಗೊಂಡಿವೆ’ ಎಂದು ಅವರು ಪತ್ರದಲ್ಲಿ ಹೇಳಿದ್ದಾರೆ.‘ಕಾವೇರಿ ನದಿ ನೀರು ಹಂಚಿಕೆ ವಿವಾದ ಸಂಪೂರ್ಣವಾಗಿ ಬಗೆಹರಿಯುವವರೆಗೆ, ಕರ್ನಾಟಕ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ಮೇಕೆದಾಟು ಅಥವಾ ಇತರ ಯೋಜನೆಗಳಿಗೆ ಅರಣ್ಯ, ಪರಿಸರ ಸಚಿವಾಲಯ ಸೇರಿದಂತೆ ವಿವಿಧ ಸಚಿವಾಲಯಗಳೂ ಅನುಮತಿ ನೀಡಬಾರದು’ ಎಂದು ಪಳನಿಸ್ವಾಮಿ ಪತ್ರದಲ್ಲಿ ಮನವಿ ಮಾಡಿದ್ದಾರೆ.ಸರ್ವಪಕ್ಷ ಸಭೆಗೆ ಒತ್ತಾಯ: ಈ ಮಧ್ಯೆ, ಕರ್ನಾಟಕದ ಪ್ರಸ್ತಾವಿತ ಯೋಜನೆ ವಿರುದ್ಧವಾಗಿ ನಿರ್ಣಯ ಅಂಗೀಕರಿಸಲು ಸರ್ವಪಕ್ಷಗಳ ಸಭೆ ಕರೆಯುವಂತೆ ಡಿಎಂಕೆ  ಕಾರ್ಯಾಧ್ಯಕ್ಷ ಮತ್ತು ತಮಿಳುನಾಡು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಎಂ.ಕೆ. ಸ್ಟಾಲಿನ್‌ ಅವರು ಎಐಎಡಿಎಂಕೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರತಿಕ್ರಿಯಿಸಿ (+)