ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಜಯದ ಮೇಲೆ ಭಾರತದ ಕಣ್ಣು

ವಿರಾಟ್ ಕೊಹ್ಲಿ ಬಳಗಕ್ಕೆ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳ ವೈಫಲ್ಯದ ಚಿಂತೆ
Last Updated 5 ಜುಲೈ 2017, 19:51 IST
ಅಕ್ಷರ ಗಾತ್ರ

ಕಿಂಗ್ಸ್‌ಟನ್‌, ಜಮೈಕಾ :  ಭಾರತ ಮತ್ತು ವೆಸ್ಟ್ ಇಂಡೀಸ್ ತಂಡ ಗಳ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯ ಗುರುವಾರ ನಡೆಯಲಿದೆ.

ಸರಣಿಯಲ್ಲಿ 2–1ರಿಂದ ಮುನ್ನಡೆ ಸಾಧಿಸಿರುವ ಭಾರತ ಈ ಪಂದ್ಯದಲ್ಲಿ ಜಯ ಸಾಧಿಸಿ ಪ್ರಶಸ್ತಿ ಎತ್ತಿ ಹಿಡಿಯಲು ಪ್ರಯತ್ನಿಸಲಿದೆ. ಕಳೆದ ಪಂದ್ಯದಲ್ಲಿ ಅಚ್ಚರಿಯ ಫಲಿತಾಂಶ ನೀಡಿರುವ ವೆಸ್ಟ್ ಇಂಡೀಸ್‌ಗೆ ಸರಣಿಯಲ್ಲಿ ಸಮಬಲ ಸಾಧಿಸಿ ಸಮಾಧಾನಪಟ್ಟುಕೊಳ್ಳಲು ಈ ಪಂದ್ಯ ಸುವರ್ಣಾವಕಾಶ. ಎರಡೂ ತಂಡಗಳು ಪ್ರತಿಷ್ಠೆ ಉಳಿಸಿಕೊಳ್ಳಲು ಪ್ರಯತ್ನಿಸಲಿರುವುದರಿಂದ ಪಂದ್ಯ ರೋಚಕ ಹಣಾಹಣಿಗೆ ಸಾಕ್ಷಿಯಾಗಲಿದೆ. 

ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು. ಎರಡನೇ ಪಂದ್ಯದಲ್ಲಿ 105 ರನ್‌ಗಳ ಜಯ ಸಾಧಿಸಿದ್ದ ಭಾರತ ಮೂರನೇ ಪಂದ್ಯದಲ್ಲೂ ಆಧಿಪತ್ಯ ಸ್ಥಾಪಿಸಿ 93 ರನ್‌ಗಳಿಂದ ಆತಿಥೇಯರನ್ನು ಮಣಿಸಿತ್ತು. ಆಟದ ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಮರ್ಥ್ಯ ತೋರಿದ ಭಾರತ ಕಳೆದ ಭಾನುವಾರ ನಡೆದ ಪಂದ್ಯದಲ್ಲಿ ನೀರಸವಾಗಿ ಆಡಿತ್ತು.

190 ರನ್‌ಗಳ ಗುರಿಯನ್ನು ಬೆನ್ನತ್ತಲು ಸಾಧ್ಯವಾಗದೆ ಸೋಲು ಕಂಡಿತ್ತು. ಆ ಪಂದ್ಯದಲ್ಲಿ ಭಾರತದ ಪ್ರಬಲ ಬ್ಯಾಟಿಂಗ್ ಶಕ್ತಿ ಕಳೆಗುಂದಿತ್ತು. ಇದು ನಾಯಕ ವಿರಾಟ್ ಕೊಹ್ಲಿ ಅವರ ಆತಂಕಕ್ಕೆ ಕಾರಣವಾಗಿದೆ. ಆದ್ದರಿಂದ ಗುರುವಾರದ ಪಂದ್ಯದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಕೆಲವು ಬದಲಾವಣೆಗಳನ್ನು ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.

ಸರಣಿಯ ಉದ್ದಕ್ಕೂ ಅಜಿಂಕ್ಯ ರಹಾನೆ ಅವರೊಂದಿಗೆ ಉತ್ತಮ ಜೊತೆಯಾಟವಾಡಿದ್ದ ಆರಂಭಿಕ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ನಾಲ್ಕನೇ ಪಂದ್ಯದಲ್ಲಿ ವಿಫಲರಾಗಿದ್ದರು. ಅಜಿಂಕ್ಯ ರಹಾನೆ ಉತ್ತಮ ತಳಪಾಯ ಹಾಕಿಕೊಟ್ಟಿದ್ದರೂ ಅದನ್ನು ಬಳಸಿಕೊಂಡು ಜಯ ಸಾಧಿಸಲು ಇತರ ಬ್ಯಾಟ್ಸ್‌ಮನ್‌ಗಳಿಗೆ  ಸಾಧ್ಯವಾಗಲಿಲ್ಲ.

ಎಂಥ ಒತ್ತಡದಲ್ಲೂ ಪಂದ್ಯವನ್ನು ರೋಚಕವಾಗಿ ಮುಕ್ತಾಯಗೊಳಿಸುವ ಆಟಗಾರ ಎಂಬ ಖ್ಯಾತಿ ಹೊಂದಿರುವ ಮಹೇಂದ್ರ ಸಿಂಗ್‌ ದೋನಿ ಅರ್ಧಶತಕ ಗಳಿಸಿದರೂ ನಿರ್ಣಾಯಕ ಕ್ಷಣದಲ್ಲಿ  ಔಟಾಗಿದ್ದರಿಂದ ಪಂದ್ಯವನ್ನು ತಂಡ ಕೈಚೆಲ್ಲುವಂತಾಗಿತ್ತು. ಕೇವಲ 11 ರನ್‌ಗಳಿಗೆ ಭಾರತ ಸೋಲು ಕಂಡಿತ್ತು. 114 ಎಸೆತಗಳಲ್ಲಿ 54 ರನ್‌ ಗಳಿಸಿದ ದೋನಿ ಅವರ ಇನಿಂಗ್ಸ್‌ನಲ್ಲಿ 70 ಡಾಟ್‌ಬಾಲ್‌ಗಳು ಇದ್ದವು.  ಅಂತಿಮ ಕ್ಷಣಗಳಲ್ಲಿ ರವೀಂದ್ರ ಜಡೇಜ ಅವರಿಗೂ ತಂಡದ ಕೈ ಹಿಡಿಯಲು ಸಾಧ್ಯವಾಗಲಿಲ್ಲ.

ಮೂರು ವರ್ಷಗಳ ನಂತರ ಏಕದಿನ ಪಂದ್ಯ ಆಡಿದ ದಿನೇಶ್ ಕಾರ್ತಿಕ್ ಅವರೂ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ. ಹೀಗಾಗಿ ಅವರಿಗೆ ಕೊನೆಯ ಪಂದ್ಯದಲ್ಲಿ ಅವಕಾಶ ಸಿಗುವುದು ಕಷ್ಟಸಾಧ್ಯ. ಕೇದಾರ್ ಜಾದವ್‌ಗೆ ಸಾಕಷ್ಟು ಅವಕಾಶ ಗಳನ್ನು ನೀಡಿದರೂ ಸದುಪಯೋಗ ಮಾಡಿಕೊಂಡಿಲ್ಲ. ರನ್‌ ಗಳಿಸಲು ಪರದಾಡುತ್ತಿರುವ ಅವರನ್ನು ಅಂತಿಮ ಪಂದ್ಯಕ್ಕೆ ಪರಿಗಣಿಸುವ ಸಾಧ್ಯತೆ ಕಡಿಮೆ.

ಪಕ್ಕೆಲುಬಿನ ನೋವಿಗೆ ಒಳಗಾಗಿದ್ದ ಯುವರಾಜ್ ಸಿಂಗ್ ಗುಣಮುಖರಾಗಿರುವುದು ವಿರಾಟ್‌ ಕೊಹ್ಲಿ ಬಳಗಕ್ಕೆ ಸಮಾಧಾನ ತಂದಿದೆ. 
ಗಾಯಗೊಂಡ ಹುಲಿಗಳು? ನಾಲ್ಕನೇ ಪಂದ್ಯದಲ್ಲಿ ಗಳಿಸಿದ ಜಯ ವೆಸ್ಟ್‌ ಇಂಡೀಸ್‌ ತಂಡದಲ್ಲಿ ಭರವಸೆ ಮೂಡಿಸಿದೆ. ಆದರೆ ಭಾರತ ತಂಡದವರು ಈಗ ಗಾಯಗೊಂಡ ಹುಲಿಗಳಂತೆ ಆಗಿದ್ದಾರೆ.

ಆದ್ದರಿಂದ ಉತ್ತಮ ಆಟವಾಡಿ ಸೋಲಿನ ಕಹಿಯಿಂದ ಹೊರಬರಲು ಪ್ರಯತ್ನಿಸಲಿದ್ದಾರೆ. ಟೂರ್ನಿಯಲ್ಲಿ ವೆಸ್ಟ್‌ ಇಂಡೀಸ್ ಬ್ಯಾಟ್ಸ್‌ಮನ್‌ಗಳಿಗೆ ಉತ್ತಮ ಲಯ ಕಂಡುಕೊಳ್ಳಲು ಸಾಧ್ಯವಾಗಲಿಲ್ಲ. ಕಳೆದ ಪಂದ್ಯದಲ್ಲಿ ನಾಯಕ ಜೇಸನ್ ಹೋಲ್ಡರ್‌ ಐದು ವಿಕೆಟ್‌ ಗಳಿಸಿದ್ದು ಬಿಟ್ಟರೆ ಟೂರ್ನಿಯಲ್ಲಿ ಯಾವ ಆಟಗಾರನಿಂದಲೂ ಉತ್ತಮ ಬೌಲಿಂಗ್‌ ಕಂಡು ಬರಲಿಲ್ಲ. ಅಂತಿಮ ಪಂದ್ಯದಲ್ಲಿ ಆತಿಥೇಯರು ದೌರ್ಬಲ್ಯಗಳನ್ನು ಮೆಟ್ಟಿ ನಿಂತು ಆಡಿದರೆ ಭಾರತದ ಜಯದ ಕನಸಿಗೆ ಭಂಗ ಉಂಟಾಗಲಿದೆ.

ತಂಡಗಳು
ಭಾರತ:
ವಿರಾಟ್ ಕೊಹ್ಲಿ (ನಾಯಕ), ಶಿಖರ್ ಧವನ್‌, ಅಜಿಂಕ್ಯ ರಹಾನೆ, ಯುವರಾಜ್ ಸಿಂಗ್‌, ಮಹೇಂದ್ರ ಸಿಂಗ್ ದೋನಿ (ವಿಕೆಟ್ ಕೀಪರ್‌), ಕೇದಾರ್ ಜಾಧವ್‌, ಹಾರ್ದಿಕ್ ಪಾಂಡ್ಯ, ರವಿಚಂದ್ರನ್ ಅಶ್ವಿನ್‌, ಭುವನೇಶ್ವರ್‌ ಕುಮಾರ್‌, ಉಮೇಶ್ ಯಾದವ್‌, ಕುಲದೀಪ್ ಯಾದವ್‌, ರಿಷಭ್ ಪಂತ್‌, ದಿನೇಶ್ ಕಾರ್ತಿಕ್‌, ಮಹಮ್ಮದ್‌ ಶಮಿ, ರವೀಂದ್ರ ಜಡೇಜ.

ವೆಸ್ಟ್ ಇಂಡೀಸ್‌: ಜೇಸನ್ ಹೋಲ್ಡರ್‌ (ನಾಯಕ), ಸುನಿಲ್ ಆಂಬ್ರಿಸ್‌, ದೇವೇಂದ್ರ ಬಿಶು, ರಾಸ್ಟನ್ ಚೇಸ್‌, ಮಿಗುಯೆಲ್‌ ಕುಮಿನ್ಸ್‌, ಕೈಲ್‌ ಹೋಪ್‌, ಸಾಯ್‌ ಹೋಪ್‌, ಅಲ್ಜರಿ ಜೋಸೆಫ್‌, ಎವಿನ್‌ ಲೂವಿಸ್‌, ಜೇಸನ್‌ ಮೊಹಮ್ಮದ್‌, ಆ್ಯಶ್ಲೆ ನರ್ಸೆ, ರೋವ್ಮನ್‌ ಪೊವೆಲ್‌, ಕೆಸ್ರಿಕ್‌ ವಿಲಿಯಮ್ಸ್‌.
ಪಂದ್ಯ ಆರಂಭ: ಸಂಜೆ 7.30
ನೇರ ಪ್ರಸಾರ: ಟೆನ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT