ಶುಕ್ರವಾರ, ಡಿಸೆಂಬರ್ 6, 2019
20 °C
ರಾಜ್ಯದ ಬಿಜೆಪಿ ಶಾಸಕರು, ಸಂಸದರನ್ನು ಭೇಟಿ ಮಾಡಿ ಮತಯಾಚನೆ

ಎನ್‌ಡಿಎಯೇತರ ಪಕ್ಷಗಳ ಬೆಂಬಲಕ್ಕೆ ಕೋವಿಂದ್ ಸಂತಸ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎನ್‌ಡಿಎಯೇತರ ಪಕ್ಷಗಳ ಬೆಂಬಲಕ್ಕೆ ಕೋವಿಂದ್ ಸಂತಸ

ಬೆಂಗಳೂರು: ರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎಯೇತರ ಪಕ್ಷಗಳೂ ತಮ್ಮನ್ನು ಬೆಂಬಲಿಸುತ್ತಿರುವುದಕ್ಕೆ ಎನ್‌ಡಿಎ ಅಭ್ಯರ್ಥಿ ರಾಮನಾಥ ಕೋವಿಂದ್‌ ಸಂತಸ ವ್ಯಕ್ತಪಡಿಸಿದ್ದಾರೆ.ಇಲ್ಲಿನ ಏಟ್ರಿಯಾ ಹೋಟೆಲ್‌ನಲ್ಲಿ ಬಿಜೆಪಿ ಶಾಸಕರು ಮತ್ತು ಸಂಸದರನ್ನು ಬುಧವಾರ ಭೇಟಿ ಮಾಡಿ ಅವರು ಮಾತನಾಡಿದರು. ಆದರೆ, ಸಭೆಗೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ಇರಲಿಲ್ಲ.ಎನ್‌ಡಿಎ ಒಕ್ಕೂಟದಿಂದ ಹೊರಗೆ ಇರುವ ಜೆಡಿಯು, ತೆಲುಗು ದೇಶಂ ಪಾರ್ಟಿ (ಟಿಡಿಪಿ), ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ತಮ್ಮನ್ನು ಬೆಂಬಲಿಸಿರುವುದು ಒಳ್ಳೆಯ ಬೆಳವಣಿಗೆ ಎಂದು ಬಣ್ಣಿಸಿದರು.ರಾಷ್ಟ್ರಪತಿ ಹುದ್ದೆಗೆ ಆಯ್ಕೆಯಾದರೆ ಪಕ್ಷಾತೀತವಾಗಿ ಕೆಲಸ ಮಾಡುವುದಾಗಿ ಹೇಳಿದರು ಎಂದು ಮೂಲಗಳು ತಿಳಿಸಿವೆ.ರಾಷ್ಟ್ರಪತಿ ಚುನಾವಣೆಗೆ ಹೇಗೆ ಮತದಾನ ಪ್ರಕ್ರಿಯೆ ನಡೆಯುತ್ತದೆ ಮತ್ತು ಮತದ ಮೌಲ್ಯ ಕುರಿತೂ ಕೋವಿಂದ್  ಸಭೆಯಲ್ಲಿ ಮಾಹಿತಿ ನೀಡಿದರು ಎಂದು ತಿಳಿದುಬಂದಿದೆ.

ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ‘ರಾಷ್ಟ್ರಪತಿ ಸ್ಥಾನಕ್ಕೆ ರಾಮನಾಥ ಕೋವಿಂದ್  ಸಮರ್ಥ ಅಭ್ಯರ್ಥಿ. ಅವರು ಸುಲಭವಾಗಿ ಜಯ ಗಳಿಸುತ್ತಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.‘ಚುನಾವಣೆಯ ಹಿಂದಿನ ದಿನವೇ ಎಲ್ಲ ಶಾಸಕರು ಮತ್ತು ಸಂಸದರು ಬೆಂಗಳೂರಿನಲ್ಲಿ ವಾಸ್ತವ್ಯ ಇರಬೇಕು. ಹೇಗೆ ಮತ ಚಲಾಯಿಸಬೇಕು ಎಂಬುದರ ಬಗ್ಗೆ ಅಣಕು ಮತದಾನ ನಡೆಸಲಾಗುವುದು. ಅತ್ಯಂತ ಜಾಗರೂಕತೆಯಿಂದ ಮತದಾನ ಮಾಡಬೇಕು’ ಎಂದು ಯಡಿಯೂರಪ್ಪ ತಿಳಿಸಿದ್ದಾಗಿ ಶಾಸಕರೊಬ್ಬರು ವಿವರಿಸಿದರು.

ಪಕ್ಷೇತರರ ಬೆಂಬಲ: ಈ ಸಂದರ್ಭದಲ್ಲಿ ಬಿಎಸ್‌ಆರ್‌ ಕಾಂಗ್ರೆಸ್ ಶಾಸಕರಾದ ಎಸ್.ತಿಪ್ಪೇಸ್ವಾಮಿ, ಎಚ್.ಟಿ.ಸುರೇಶ್‌ ಬಾಬು ಮತ್ತು ಪಿ. ರಾಜೀವ, ಪಕ್ಷೇತರ ಶಾಸಕ ಬಿ.ನಾಗೇಂದ್ರ ಮತ್ತು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಅವರು ಕೋವಿಂದ್ ಅವರನ್ನು ಭೇಟಿ ಮಾಡಿ ಬೆಂಬಲ ಘೋಷಿಸಿದರು.‘ಪಕ್ಷೇತರ ಶಾಸಕರಾದ ಹಾಲಾಡಿ ಶ್ರೀನಿವಾಸ ಶೆಟ್ಟಿ ಮತ್ತು ಅಶೋಕ ಖೇಣಿ ಅವರೊಂದಿಗೂ ಮಾತನಾಡಿದ್ದೇನೆ. ಪಕ್ಷೇತರ ಶಾಸಕರು ಕೋವಿಂದ್ ಅವರನ್ನು ಬೆಂಬಲಿಸುವುದಾಗಿ ಭರವಸೆ ನೀಡಿದ್ದಾರೆ’ ಎಂದು ಶೆಟ್ಟರ್‌ ತಿಳಿಸಿದರು.

ಪ್ರತಿಕ್ರಿಯಿಸಿ (+)