ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ವನಿತೆಯರಿಗೆ ಸತತ ನಾಲ್ಕನೇ ಜಯ

Last Updated 5 ಜುಲೈ 2017, 19:58 IST
ಅಕ್ಷರ ಗಾತ್ರ

ಡರ್ಬಿ (ಪಿಟಿಐ): ಶ್ರೀಲಂಕಾ ತಂಡವನ್ನು ಮಣಿಸಿದ ಭಾರತ ವನಿತೆಯರು ಮಹಿಳಾ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ಸತತ ನಾಲ್ಕನೇ ಜಯದೊಂದಿಗೆ ಸೆಮಿಫೈನಲ್‌ ಹಾದಿಯನ್ನು ಸುಗಮಗೊಳಿಸಿದರು.

ಇಲ್ಲಿನ ಕೌಂಟಿ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮಿಥಾಲಿರಾಜ್ ನೇತೃತ್ವದ ಭಾರತ ತಂಡ ಎದುರಾಳಿಗಳನ್ನು 16 ರನ್‌ಗಳಿಂದ ಮಣಿಸಿತು. 233 ರನ್‌ಗಳ ಜಯದ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡಕ್ಕೆ ಭಾರತದ ಬೌಲರ್‌ಗಳು ವೇಗ ಮತ್ತು ಸ್ಪಿನ್ ದಾಳಿಯ ಮೂಲಕ ಬಿಸಿ ತಟ್ಟಿಸಿದರು. ಹೀಗಾಗಿ ಲಂಕನ್ನರು 50 ಓವರ್‌ಗಳಲ್ಲಿ 216 ರನ್‌ ಗಳಿಸಿ ಶರಣಾದರು.

ತಂಡದ ಮೊತ್ತ ಕೇವಲ 17 ರನ್‌ಗಳಾಗಿದ್ದಾಗ ಹಾಸಿನಿ ಪೆರೇರ ಅವರ ವಿಕೆಟ್ ಕಬಳಿಸಿ ಜೂಲನ್ ಗೋಸ್ವಾಮಿ ಶ್ರೀಲಂಕಾ ತಂಡಕ್ಕೆ ಆಘಾತ ನೀಡಿದರು. ನಿಪುಣಿ ಹಂಸಿಕಾ ಮತ್ತು ಚಾಮರಿ ಅಟ್ಟಪಟ್ಟು ಎರಡನೇ ವಿಕೆಟ್‌ಗೆ 40 ರನ್ ಸೇರಿಸಿದರು. ಈ ಜೊತೆಯಾಟವನ್ನು ಮುರಿದ ಲೆಗ್ ಸ್ಪಿನ್ನರ್‌ ಪೂನಮ್ ಯಾದವ್‌ ಇಬ್ಬರ ವಿಕೆಟ್ ಕೂಡ ಕಬಳಿಸಿದರು. ನಂತರ ಶಶಿಕಲಾ ಸಿರಿವರ್ಧನೆ ಮತ್ತು ವಿಕೆಟ್ ಕೀಪರ್‌ ದಿಲಾನಿ ಮನೋದರ ಭಾರತ ಪಾಳಯದಲ್ಲಿ ಆತಂಕ ಸೃಷ್ಟಿಸಿದರು.

ನಾಲ್ಕನೇ ವಿಕೆಟ್‌ಗೆ ಇವರಿಬ್ಬರು 60 ರನ್ ಸೇರಿಸಿದರು. ಐದು ಬೌಂಡರಿಗಳೊಂದಿಗೆ 63 ಎಸೆತಗಳಲ್ಲಿ 37 ರನ್‌ ಗಳಿಸಿದ ಸಿರಿವರ್ಧನೆ ಅವರ ವಿಕೆಟ್ ಕಬಳಿಸಿ ಜೂಲನ್ ಗೋಸ್ವಾಮಿ ಪಂದ್ಯಕ್ಕೆ ಮಹತ್ವದ ತಿರುವು ನೀಡಿದರು. ದಿಲಾನಿ ಮನೋದರ ಏಕಾಂಗಿಯಾಗಿ ತಂಡವನ್ನು ಜಯದ ದಡ ಸೇರಿಸಲು ಪ್ರಯತ್ನಿಸಿದರು. ಆದರೆ ಯಾರಿಂದರಲೂ ಅವರಿಗೆ ಉತ್ತಮ ಸಹಕಾರ ಸಿಗಲಿಲ್ಲ. 17 ಎಸೆತಗಳಲ್ಲಿ 42 ರನ್‌ ಬೇಕಾಗಿದ್ದಾಗ ದಿಲಾನಿ ಮನೋದರ (61; 75 ಎ, 6 ಬೌಂ) ಔಟಾದರು. ನಂತರ ಔಪಚಾರಿಕತೆಯನ್ನು ಪೂರ್ತಿಗೊಳಿಸುವುದಷ್ಟೇ ಬಾಕಿ ಉಳಿದಿತ್ತು.

ದೀಪ್ತಿ, ಮಿಥಾಲಿ ಶತಕದ ಮಿಂಚು
ಟಾಸ್‌ ಗೆದ್ದು ಬ್ಯಾಟಿಂಗ್ ಮಾಡಿದ ಭಾರತ ವನಿತೆಯರು ಆರಂಭದಲ್ಲಿ ವಿಕೆಟ್‌ಗಳನ್ನು ಕಳೆದುಕೊಂಡರೂ ನಂತರ ಎದುರಾಳಿ ಬೌಲರ್‌ಗಳ ಬೆವರಿಳಿಸಿದರು. 50 ರನ್‌ ಗಳಿಸುವುದರ ಒಳಗೆ ತಂಡ ಎರಡು ವಿಕೆಟ್ ಕಳೆದುಕೊಂಡಿತ್ತು. ಮೊದಲ ಎರಡು ಪಂದ್ಯಗಳಲ್ಲಿ ಉತ್ತಮ ಬ್ಯಾಟಿಂಗ್ ಮಾಡಿದ್ದ ಸ್ಮೃತಿ ಮಂದಾನ ಈ ಪಂದ್ಯದಲ್ಲಿ ಬೇಗನೇ ಔಟಾದರು. ಮೂರನೇ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಎರಡು ರನ್ ಗಳಿಸಿದ್ದ ಅವರು ಬುಧವಾರ ಎಂಟು ರನ್‌ಗಳಿಗೆ ಔಟಾದರು. ಅವರ ಬೆನ್ನಲ್ಲೇ ಪೂನಮ್‌ ರಾವುತ್ ಕೂಡ ಹೊರನಡೆದರು.

ಈ ಸಂದರ್ಭದಲ್ಲಿ ಒಂದುಗೂಡಿದ ಎಡಗೈ ಬ್ಯಾಟ್ಸ್‌ವುಮನ್‌ ದೀಪ್ತಿ ಶರ್ಮಾ ಮತ್ತು ನಾಯಕಿ ಮಿಥಾಲಿ ರಾಜ್‌ ಇನಿಂಗ್ಸ್‌ ಮುನ್ನಡೆಸಿದರು. ಮೂರನೇ ವಿಕೆಟ್‌ಗೆ ಇವರಿಬ್ಬರು 118 ರನ್ ಸೇರಿಸಿ ಮೊತ್ತವನ್ನು 150ರ ಗಡಿ ದಾಟಿಸಿದರು. 110 ಎಸೆತಗಳಲ್ಲಿ 78 ರನ್ ಗಳಿಸಿದ ದೀಪ್ತಿ ಶರ್ಮಾ 10 ಬೌಂಡರಿ ಗಳಿಸಿದರು. ಮಿಥಾಲಿ ರಾಜ್‌ 78 ಎಸೆತಗಳಲ್ಲಿ 53 ರನ್‌ ಸೇರಿಸಿದರು. ಅವರು ನಾಲ್ಕು ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ್ದರು.

ಎರಡು ಓವರ್‌ಗಳ ಅಂತರದಲ್ಲಿ ಈ ಇಬ್ಬರು ಬ್ಯಾಟ್ಸ್‌ವುಮನ್‌ ಸೇರಿದಂತೆ ಮೂರು ವಿಕೆಟ್ ಕಳೆದುಕೊಂಡರೂ ಅಂತಿಮ ಓವರ್‌ಗಳಲ್ಲಿ ತಂಡದ ಆಟಗಾರ್ತಿಯರು ಶ್ರೀಲಂಕಾ ಬೌಲರ್‌ಗಳನ್ನು ಕಾಡಿದರು. ಮಧ್ಯಮ ಕ್ರಮಾಂಕದ ಹರ್ಮನ್‌ಪ್ರೀತ್ ಕೌರ್‌ ಮತ್ತು ವೇದಾ ಕೃಷ್ಣಮೂರ್ತಿ ಆರನೇ ವಿಕೆಟ್‌ಗೆ  54 ಎಸೆತಗಳಲ್ಲಿ 50 ರನ್ ಸೇರಿಸಿದ ಕಾರಣ ತಂಡ 200ರ ಗಡಿ ದಾಟಿತು. ಶ್ರೀಪಾಲಿ ವೀರಕ್ಕೊಡಿ (28ಕ್ಕೆ3) ಮತ್ತು ಇನೋಕ ರಣವೀರ (55ಕ್ಕೆ2) ಅವರು ಮಿಥಾಲಿ ಬಳಗದ ಮೇಲೆ ಒತ್ತಡ ಹೇರಿದರೂ ಅಂತಿಮ ಹತ್ತು ಓವರ್‌ಗಳಲ್ಲಿ ಬ್ಯಾಟ್ಸ್‌ವುಮನ್‌
ಗಳು 62 ರನ್‌ ಗಳಿಸಿ ಸಮರ್ಥ ಎದುರೇಟು ನೀಡಿದರು.

ಸಂಕ್ಷಿಪ್ತ ಸ್ಕೋರ್‌
ಭಾರತ ವನಿತೆಯರು: 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 232 (ದೀಪ್ತಿ ಶರ್ಮಾ 78, ಮಿಥಾಲಿ ರಾಜ್‌ 53, ಹರ್ಮನ್‌ ಪ್ರೀತ್ ಕೌರ್‌ 20, ವೇದಾ ಕೃಷ್ಣಮೂರ್ತಿ 29;  ಶ್ರೀಪಾಲಿ ವೀರಕ್ಕೊಡಿ 28ಕ್ಕೆ3, ಇನೋಕ ರಣವೀರ 55ಕ್ಕೆ2);

ಶ್ರೀಲಂಕಾ ವನಿತೆಯರು: 50 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 216 (ನಿಪುಣಿ ಹಂಸಿಕಾ 29, ಶಶಿಕಲಾ ಸಿರಿವರ್ಧನೆ 37, ದಿಲಾನಿ ಮನೋದರ 61, ಪ್ರಸಾದನಿ ವೀರಕ್ಕೋಡಿ 21; ಜೂಲನ್ ಗೋಸ್ವಾಮಿ 26ಕ್ಕೆ2, ಪೂನಮ್‌ ಯಾದವ್‌ 23ಕ್ಕೆ2). ಫಲಿತಾಂಶ–ಭಾರತ ವನಿತೆಯರಿಗೆ 16 ರನ್‌ಗಳ ಜಯ. ಪಂದ್ಯಶ್ರೇಷ್ಠ–ದೀಪ್ತಿ ಶರ್ಮಾ (ಭಾರತ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT