ಶನಿವಾರ, ಡಿಸೆಂಬರ್ 14, 2019
20 °C
ವಿಚ್ಛೇದನ ಕೋರಿದ್ದ ಅರ್ಜಿ ಹಿಂದಕ್ಕೆ ಪಡೆದ ದಂಪತಿ

ದೇವಸ್ಥಾನಕ್ಕೆ ಹೋದರು.. ಹೋಟೆಲ್‌ನಲ್ಲಿ ಸಿಹಿ ತಿಂದರು..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದೇವಸ್ಥಾನಕ್ಕೆ ಹೋದರು.. ಹೋಟೆಲ್‌ನಲ್ಲಿ ಸಿಹಿ ತಿಂದರು..

ಪಟ್ನಾ: ಈ ದಂಪತಿ ನಾಲ್ಕು ವರ್ಷಗಳಿಂದ  ಕಿತ್ತಾಡುತ್ತಿದ್ದರು. ಒಟ್ಟಿಗೆ ಬಾಳ್ವೆ ನಡೆಸಲು ಸಾಧ್ಯವೇ ಇಲ್ಲ ಎಂಬ ತೀರ್ಮಾನಕ್ಕೆ ಬಂದರು. ವಿಚ್ಛೇದನಕ್ಕೂ ಅರ್ಜಿ ಸಲ್ಲಿಸಿದರು. ಆದರೆ ಅದೊಂದು ದಿನ ದೇವಸ್ಥಾನಕ್ಕೆ ಹೋದರು... ಹೋಟೆಲ್‌ ಒಂದರಲ್ಲಿ ಸಿಹಿ ತಿಂದರು... ಅಷ್ಟೇ... ಜೊತೆಯಾಗಿಬಿಟ್ಟರು...ಇಂಥದ್ದೊಂದು ಅಪರೂಪದ ಘಟನೆ ನಡೆದಿರುವುದು ಮುಜಾಫರ್‌ಪುರದಲ್ಲಿ. ಅಷ್ಟಕ್ಕೂ ನಾಲ್ಕು ವರ್ಷಗಳ ಈ ಕಿತ್ತಾಟವನ್ನು ಸುಖಾಂತ್ಯಗೊಳಿಸಿದವರು ಅಲ್ಲಿಯ ಕೌಟುಂಬಿಕ ಕೋರ್ಟ್‌ ನ್ಯಾಯಾಧೀಶ ಸತೀಶ್‌ಚಂದ್ರ ಶ್ರೀವತ್ಸ. ವಿಚ್ಛೇದನ ಕೋರಿ ಬರುವ ದಂಪತಿಯನ್ನು ತಮ್ಮದೇ ವಿಭಿನ್ನ ಶೈಲಿಯಲ್ಲಿ ರಾಜಿ ಮಾಡಿಸಿ ಅವರನ್ನು ಒಟ್ಟಿಗೆ ಮಾಡುವಲ್ಲಿ ಪ್ರಸಿದ್ಧಿ ಹೊಂದಿದ್ದಾರೆ ಈ ನ್ಯಾಯಾಧೀಶರು.ಈ ಪ್ರಕರಣದಲ್ಲಿ, ನ್ಯಾಯಾಧೀಶ ಸತೀಶ್‌ಚಂದ್ರ ಅವರು ಸುದೀರ್ಘ ವಾದ, ಪ್ರತಿವಾದ ಆಲಿಸಿದ್ದರು. ಜಪ್ಪಯ್ಯ ಎಂದರೂ ದಂಪತಿ ಹೊಂದಾಣಿಕೆಗೆ ಒಪ್ಪಿಯೇ ಇರಲಿಲ್ಲ. ಇನ್ನೇನು ಆ ಪ್ರಕರಣದ ಅಂತಿಮ ಆದೇಶ ಹೊರಬೀಳಬೇಕಿತ್ತಷ್ಟೇ. ಆ ಆದೇಶಕ್ಕಾಗಿ ದಂಪತಿ ಕಾತರದಿಂದ ಕಾಯುತ್ತಿದ್ದರು.ಆಗ ಅವರಿಬ್ಬರನ್ನೂ ಕಡೆದ ನ್ಯಾಯಾಧೀಶರು, ‘ನೋಡಿ ನಾನು ಆದೇಶ ಹೊರಡಿಸುತ್ತೇನೆ. ಅಷ್ಟರ ಒಳಗೆ ನನ್ನದೊಂದು ಮಾತು ಕೇಳಿ. ಇಬ್ಬರೂ ಒಂದು ದೇವಸ್ಥಾನಕ್ಕೆ ಹೋಗಿ ಬನ್ನಿ. ಅಲ್ಲಿಯೇ ಸಮೀಪದಲ್ಲಿ ಇರುವ ಯಾವುದಾದರೊಂದು ಹೋಟೆಲ್‌ಗೆ ಹೋಗಿ. ಅಲ್ಲಿ ಸಿಹಿ ತಿನ್ನಿ. ನಂತರ ಕೋರ್ಟ್‌ಗೆ ಬನ್ನಿ. ನಿಮ್ಮ ಕೇಸಿನ ಆದೇಶ ನಿಮ್ಮ ಬಳಿ ಇರುತ್ತದೆ’ ಎಂದು ಹೇಳಿ ಮುಂದಿನ ದಿನಾಂಕ ನಿಗದಿ ಮಾಡಿದರು.ಹೇಗಿದ್ದರೂ ಬೇರೆಯಾಗುವುದು ಇದ್ದೇ ಇದೆ. ನ್ಯಾಯಾಧೀಶರು ಹೇಳಿದಂತೆ ಕೇಳದಿದ್ದರೆ ಆದೇಶ ಕೊಡದಿದ್ದರೆ ಕಷ್ಟ ಎಂದುಕೊಂಡ ದಂಪತಿ, ಅವರ ಮಾತಿಗೆ ಒಪ್ಪಿದರು. ದೇವಸ್ಥಾನಕ್ಕೆ ಹೋದರು. ಹೋಟೆಲ್‌ನಲ್ಲಿ ಊಟವನ್ನೂ ಮಾಡಿದರು, ಸಿಹಿಯನ್ನೂ ತಿಂದರು. ಹೀಗೆ ಕೆಲವು ದಿನಗಳನ್ನು ಒಟ್ಟಿಗೆ ಕಳೆದರು. ಒಟ್ಟಿಗೆ ಇದ್ದ ಆ ದಿನಗಳಿಂದಾಗಿ ದಂಪತಿಗೆ ತಾವು ಎಷ್ಟು ದೊಡ್ಡ ತಪ್ಪು ಮಾಡಲು ಹೊರಟಿದ್ದೆವು ಎಂಬ ಅರಿವಾಯಿತು...!ಕೋರ್ಟ್‌ ನೀಡಿದ್ದ ದಿನಾಂಕದಂದು ಇಬ್ಬರೂ ನ್ಯಾಯಾಧೀಶರ ಮುಂದೆ ಬಂದು ತಾವು ತಂದ ಲಿಖಿತ ಹೇಳಿಕೆಯೊಂದನ್ನು ಅವರ ಕೈಗಿತ್ತರು. ಅದರಲ್ಲಿ ಅವರು, ‘ವಿಚ್ಛೇದನ ಪ್ರಕರಣವನ್ನು ಹಿಂದಕ್ಕೆ ಪಡೆಯಲು ಬಯಸಿದ್ದೇವೆ. ಇಬ್ಬರೂ ಒಟ್ಟಿಗೆ ಇರಲು ನಿರ್ಧರಿಸಿದ್ದೇವೆ. ಆದ್ದರಿಂದ ನಮ್ಮ ಅರ್ಜಿಯನ್ನು ದಯವಿಟ್ಟು ವಜಾ ಮಾಡಿ’ ಎಂದು ಕೋರಿದ್ದರು. ಅದನ್ನು ಮಾನ್ಯ ಮಾಡಿದ ನ್ಯಾಯಾಧೀಶರು ಈ ಸಂಬಂಧ ಕಾನೂನು ಪ್ರಕ್ರಿಯೆ ಮುಗಿಸಿ ದಂಪತಿಯನ್ನು ಕಳುಹಿಸಿಕೊಟ್ಟರು.‘ನ್ಯಾಯಾಧೀಶ ಸತೀಶ್‌ಚಂದ್ರ ಅವರು ಇದೇ ರೀತಿ ಹಲವಾರು ಪ್ರಕರಣಗಳಲ್ಲಿ ದಂಪತಿಯನ್ನು ಒಂದುಗೂಡಿಸಿ ಕಳುಹಿಸಿದ್ದಾರೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸುವ ದಂಪತಿಯನ್ನು ಕೌನ್ಸೆಲಿಂಗ್‌ ಮಾಡುವ ಸಂಬಂಧ ತಮ್ಮ ಛೇಂಬರ್‌ಗೆ ಕರೆಸಿಕೊಳ್ಳುತ್ತಾರೆ. ದಂಪತಿ ಮದುವೆಯಾದ ಆರಂಭದಲ್ಲಿ ಕಳೆದಿರುವ ಆನಂದದ ಕ್ಷಣಗಳನ್ನು ನೆನೆಸಿಕೊಳ್ಳುವಂತೆ ಅವರು ಹೇಳುತ್ತಾರೆ. ಹೀಗೆ ಮಾತಿನ ಮೂಲಕವೇ ದಂಪತಿಯ ಮನವೊಲಿಸಿ ಒಟ್ಟಿಗೆ ಬಾಳುವಂತೆ ಮಾಡುತ್ತಾರೆ’ ಎಂದು ಮೂಲಗಳು ತಿಳಿಸಿವೆ.‘ದಂಪತಿಯನ್ನು ಒಟ್ಟಿಗೆ ಮಾಡುವುದು ದೊಡ್ಡ ವಿಷಯವೇನಲ್ಲ’ ಎನ್ನುತ್ತಾರೆ ನ್ಯಾಯಾಧೀಶ ಸತೀಶ್‌ಚಂದ್ರ ಅವರು. ‘ಈಗ ದಂಪತಿ ಚಿಕ್ಕಪುಟ್ಟ ವಿಷಯಕ್ಕೂ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸುತ್ತಾರೆ. ಅವರಿಗೆ ಅಗತ್ಯ ಇರುವ ಕೌನ್ಸೆಲಿಂಗ್‌ ನಾನು ಮಾಡುತ್ತಿದ್ದೇನೆ ಅಷ್ಟೇ’ ಎನ್ನುತ್ತಾರೆ ಅವರು. ಇತ್ತೀಚೆಗೆ ವಿಚ್ಛೇದನ ಕೋರಿ ಬಂದ ಮುಸ್ಲಿಂ ದಂಪತಿಗೆ ಒಟ್ಟಿಗೇ ಈದ್‌ ಆಚರಿಸುವಂತೆ ಹೇಳಿ ಅವರನ್ನು ಒಟ್ಟಿಗೆ ಮಾಡಿದ ‘ಕೀರ್ತಿ’ ಕೂಡ ಈ ನ್ಯಾಯಾಧೀಶರದ್ದು.

ಪ್ರತಿಕ್ರಿಯಿಸಿ (+)