ಬುಧವಾರ, ಡಿಸೆಂಬರ್ 11, 2019
25 °C
ಇಸ್ರೇಲ್‌ಗೆ ಪ್ರಧಾನಿ ಮೋದಿ ಭೇಟಿಯ ಎರಡನೇ ದಿನ

ಐ ಫಾರ್‌ ಐ ಎಂದರೆ ಇಸ್ರೇಲ್‌ಗಾಗಿ ಇಂಡಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

ಐ ಫಾರ್‌ ಐ ಎಂದರೆ ಇಸ್ರೇಲ್‌ಗಾಗಿ ಇಂಡಿಯಾ

ಜೆರುಸಲೇಂ: ‘ಭಾರತದಲ್ಲಿ ತಯಾರಿಸಿ’ ಉಪಕ್ರಮಕ್ಕೆ ಇಸ್ರೇಲ್‌ನ ಅತ್ಯಾಧುನಿಕ ತಂತ್ರಜ್ಞಾನವನ್ನು ಹೇಗೆ ಅಳವಡಿಸಿಕೊಳ್ಳಬಹುದು ಎಂಬ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ ಅಧ್ಯಕ್ಷ ರೂವೆನ್‌ ರಿವ್ಲಿನ್‌ ಅವರೊಂದಿಗೆ ಚರ್ಚೆ ನಡೆಸಿದರು.ಎರಡೂ ದೇಶಗಳ ನಡುವೆ ಉತ್ತಮಗೊಳ್ಳುತ್ತಿರುವ ಸಂಬಂಧವನ್ನು ಉಲ್ಲೇಖಿಸಿದ ಮೋದಿ ಅವರು ‘ಇಂದು ‘ಐ ಟು ಐ’ ಮತ್ತು ‘ಐ ಫಾರ್‌ ಐ’ ಆಗಿದೆ’ ಎಂದು ಹೇಳಿದರು.‘ಐ ಟು ಐ ಮತ್ತು ಐ ಫಾರ್‌ ಐ  ಎಂದು ಹೇಳುವಾಗ ನಾನು ಅದರ ಜನಪ್ರಿಯ ಅರ್ಥವನ್ನು (ಕಣ್ಣಿಗೆ ಕಣ್ಣು ಮತ್ತು ಒಂದು ಕಣ್ಣಿಗೆ ಮತ್ತೊಂದು ಕಣ್ಣು) ಧ್ವನಿಸುತ್ತಿಲ್ಲ. ಐ ಟು ಐ ಎಂದರೆ ಇಸ್ರೇಲ್‌ ಜತೆಗೆ ಭಾರತ ಮತ್ತು ಐ ಫಾರ್‌ ಐ ಎಂದರೆ ಇಸ್ರೇಲ್‌ಗಾಗಿ ಭಾರತ ಎಂದು ಅರ್ಥ’ ಎಂದು ಮೋದಿ ವಿವರಿಸಿದರು.‘ನಮ್ಮಲ್ಲಿ ಹಲವು ಸಮಾನ ಅಂಶಗಳಿವೆ ಮತ್ತು ಹಲವು ಸಮಾನ ಕೆಲಸಗಳನ್ನು ನಾವು ಮಾಡುತ್ತಿದ್ದೇವೆ. ಭಾರತದಲ್ಲಿ ತಯಾರಿಸುವ ಪಾಲುದಾರರಿಗೆ ನೆರವು ನೀಡುವ ನಿಮ್ಮ ಚಿಂತನೆ ನಮಗೆ ಚೆನ್ನಾಗಿ ಅರ್ಥವಾಗಿದೆ’ ಎಂದು ರಿವ್ಲಿನ್‌ ಹೇಳಿದರು.‘ಭಾರತದಲ್ಲಿ ತಯಾರಿಸಿ ಯೋಜನೆಯ ನಿಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕೆ ತರಲು ನಾವು ಸಾಕಷ್ಟು ಶ್ರಮಿಸುತ್ತಿದ್ದೇವೆ’ ಎಂದೂ ಅವರು ತಿಳಿಸಿದರು.ಭಾರತ ಮತ್ತು ಇಸ್ರೇಲ್‌ನ ವಿಶ್ವವಿದ್ಯಾಲಯ ಮತ್ತು ಕೈಗಾರಿಕೆಗಳ ನಡುವೆ ಸಹಕಾರಕ್ಕೆ ಸಮೃದ್ಧ ಅವಕಾಶಗಳಿವೆ ಎಂದು ಇಸ್ರೇಲ್‌ ಅಧ್ಯಕ್ಷರು ಹೇಳಿದರು.ಅಮೋಘ ಸ್ವಾಗತಕ್ಕೆ ಅಪರಿಮಿತ ಆನಂದ: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಸ್ರೇಲ್‌ನಲ್ಲಿ ಸಿಕ್ಕಿದ ಅಭೂತಪೂರ್ವ ಸ್ವಾಗತ ಇಲ್ಲಿನ ಭಾರತೀಯ ಸಮುದಾಯದ ಸಂಭ್ರಮ ಮತ್ತು ಹೆಮ್ಮೆಗೆ ಕಾರಣವಾಗಿದೆ.ಅಮೆರಿಕದ ಅಧ್ಯಕ್ಷರಿಗೆ ಕೂಡ ಇಂತಹ ಸ್ವಾಗತ ಸಿಕ್ಕಿರಲಿಲ್ಲ ಎಂದು ಅವರು ಹೇಳಿದ್ದಾರೆ.ಭಾರತದ ನಾಲ್ಕು ಭೌಗೋಳಿಕ ಪ್ರದೇಶಗಳಿಂದ (ಮುಂಬೈ ವಲಯ,  ಕೇರಳ, ಕೋಲ್ಕತ್ತ ಮತ್ತು ಮಣಿಪುರ ಹಾಗೂ ಮಿಜೋರಾಂ) ಬಂದ ಸುಮಾರು 8,000 ಸಾವಿರ ಯೆಹೂದಿಗಳು ಇಸ್ರೇಲ್‌ನಲ್ಲಿದ್ದಾರೆ.‘ನಾನು 16ನೇ ವಯಸ್ಸಿನಲ್ಲಿ ಭಾರತದಿಂದ ವಲಸೆ ಬಂದೆ. ಆಗ ಎರಡೂ ದೇಶಗಳ ನಡುವೆ ರಾಜತಾಂತ್ರಿಕ ಸಂಬಂಧ ಇರಲಿಲ್ಲ ಎಂಬುದನ್ನು ತಿಳಿದು ಬೇಸರಗೊಂಡಿದ್ದೆ. ಸಣ್ಣವನಾಗಿರುವಾಗ ಅದರಿಂದಾಗುವ ಪರಿಣಾಮಗಳ ಬಗ್ಗೆ ಗೊತ್ತಿರಲಿಲ್ಲ’ ಎಂದು ಬಸ್‌ ಚಾಲಕರಾಗಿರುವ ಡೇವಿನ್‌ ನಗಾನಿ ಹೇಳಿದ್ದಾರೆ.‘ಭಾರತೀಯರು ಯೆಹೂದಿಗಳ ವಿರುದ್ಧವಾಗಿ ಇಲ್ಲ ಎಂಬುದನ್ನು ಇಲ್ಲಿನ ಜನ ಅರ್ಥಮಾಡಿಕೊಳ್ಳುತ್ತಾರೆ ಎಂದು ಆಶಿಸುತ್ತಿದ್ದೆ. ಮೋದಿ ಅವರಿಗೆ ಸಿಕ್ಕಿದ ಆತಿಥ್ಯ ಮತ್ತು ಸ್ವಾಗತವನ್ನು ಕಂಡು ನಿಜಕ್ಕೂ ಸಂತೋಷ ಮತ್ತು ಹೆಮ್ಮೆಯಾಗುತ್ತಿದೆ’ ಎಂದು ಅವರು ಹೇಳಿದ್ದಾರೆ.‘ನನಗೆ ನೆನಪಿರುವಂತೆ, ಬೇರೆ ಯಾವ ನಾಯಕನನ್ನೂ ಇಷ್ಟೊಂದು ಆತ್ಮೀಯವಾಗಿ ಇಲ್ಲಿ ಬರಮಾಡಿಕೊಳ್ಳಲಾಗಿಲ್ಲ. ಇಸ್ರೇಲ್‌ ನಾಯಕರು ಅಮೆರಿಕದ ನಾಯಕನನ್ನೂ ಇಷ್ಟೊಂದು ಪ್ರೀತಿಯಿಂದ ಅಪ್ಪಿದ್ದನ್ನು ನೋಡಿಲ್ಲ’ ಎಂದು ನಗಾನಿ ತಿಳಿಸಿದರು.ಭಾರತೀಯ ಸಮುದಾಯದ ಇತರರು ಕೂಡ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಭಾರತೀಯ ಸಮುದಾಯವನ್ನು ಉದ್ದೇಶಿಸಿ ಮೋದಿ ಅವರು ಮಾತನಾಡಲಿದ್ದು, ಅದರಲ್ಲಿ ಭಾಗವಹಿಸುವುದಕ್ಕಾಗಿ ಬಹುತೇಕರು ಕೆಲಸಕ್ಕೆ ರಜೆ ಹಾಕಿದ್ದಾರೆ. ಆರು ಸಾವಿರಕ್ಕೂ ಹೆಚ್ಚು ಜನರು ಮೋದಿ ಮಾತಿಗೆ ಕಿವಿಯಾಗಲಿದ್ದಾರೆ.ಮೋದಿ ಯೋಗದಿಂದ ನೆತನ್ಯಾಹುಗೆ ಸ್ಫೂರ್ತಿ

‘ಪ್ರಧಾನಿ ಮೋದಿ ಅವರು ಯೋಗದ ಬಗ್ಗೆ ಹೊಂದಿರುವ ಉತ್ಸಾಹದಿಂದ ಸ್ಫೂರ್ತಿಗೊಂಡಿದ್ದೇನೆ’ ಎಂದು ಬೆಂಜಾಮಿನ್‌ ನೆತನ್ಯಾಹು ಹೇಳಿದರು.

ಎರಡೂ ದೇಶಗಳ ನಡುವಣ ನಂಟನ್ನು ಕೆಲವು ಯೋಗಾಸನಗಳಿಗೆ ಹೋಲಿಸಿ ಅವರು ಮಾತನಾಡಿದರು. ಯೋಗಾಭ್ಯಾಸ ಆರಂಭಿಸಲು ಬಯಸುವುದಾಗಿಯೂ ಅವರು ಹೇಳಿದರು.‘ಆರಂಭಿಕ ಆಸನಗಳನ್ನು ಮಾಡುವಂತೆ ಮೋದಿ ಅವರು ನನಗೆ ಸಲಹೆ ನೀಡಿದ್ದಾರೆ. ಆರಂಭಿಕ ಆಸನಗಳಿಂದಲೇ ನಾನು ಆರಂಭಿಸಲಿದ್ದೇನೆ. ಬೆಳಗ್ಗೆ ದೇಹವನ್ನು ಸಡಿಲಗೊಳಿಸುವ ತಾಡಾಸನ ಮಾಡುವಾಗ ಮೊದಲಿಗೆ ನಾನು ತಲೆಯನ್ನು ಬಲಕ್ಕೆ ತಿರುಗಿಸುತ್ತೇನೆ. ಆಗ ನನಗೆ ಕಾಣುವ ಮೊದಲ ಪ್ರಜಾತಂತ್ರ ದೇಶವೇ ಭಾರತ.‘ಹಾಗೆಯೇ ಮೋದಿ ಅವರು ವಶಿಷ್ಠಾಸನ ಮಾಡಿ ತಲೆ ಬಲಕ್ಕೆ ತಿರುಗಿಸಿದರೆ ಅವರಿಗೆ ಕಾಣ ಸಿಗುವ ಮೊದಲ ಪ್ರಜಾತಂತ್ರ ದೇಶ ಇಸ್ರೇಲ್‌. ಭಾರತ ಮತ್ತು ಇಸ್ರೇಲ್‌ ಎರಡು ಸಹೋದರ ಪ್ರಜಾತಂತ್ರಗಳು’ ಎಂದು ನೆತನ್ಯಾಹು ಹೇಳಿದರು.  ಜೂನ್‌ 21 ಅಂತರರಾಷ್ಟ್ರೀಯ ಯೋಗ ದಿನ ಎಂದು ವಿಶ್ವಸಂಸ್ಥೆ ಘೋಷಿಸುವಲ್ಲಿ ಮೋದಿ  ಮಹತ್ವದ ಪಾತ್ರ ವಹಿಸಿದ್ದರು.ಯೆಹೂದಿಗಳ ಕಥೆ ಹೇಳುವ ಶಾಸನಗಳ ಪ್ರತಿಕೃತಿ ಕಾಣಿಕೆ

ಪ್ರಧಾನಿ ನರೇಂದ್ರ ಮೋದಿ ಅವರು ಯೆಹೂದಿಗಳಿಗೆ ಸಂಬಂಧಿಸಿದ ಕೇರಳದಲ್ಲಿ ಲಭ್ಯವಾದ ಪ್ರಾಚೀನ ಶಾಸನಗಳ  ತಾಮ್ರದ ಪ್ರತಿಕೃತಿ ಮತ್ತು ಕರಕುಶಲ ವಸ್ತುಗಳನ್ನು ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಅವರಿಗೆ ಕಾಣಿಕೆಯಾಗಿ ನೀಡಿದ್ದಾರೆ.

ಎರಡು ಪ್ರತ್ಯೇಕ ಗಾಜಿನ ಪೆಟ್ಟಿಗೆಯಲ್ಲಿ ತಲಾ ಮೂರು ತಾಮ್ರ ಫಲಕಗಳಿರುವ ಸ್ಮರಣಿಕೆಗಳು ನೂರಾರು ವರ್ಷಗಳ ಹಿಂದೆ ಭಾರತಕ್ಕೆ ಬಂದು ನೆಲೆಸಿದ ಯೆಹೂದಿಗಳ ಇತಿಹಾಸ ಸಾರುತ್ತವೆ. ನೆತನ್ಯಾಹು ನಿವಾಸಕ್ಕೆ ತೆರಳಿದ ಸಂದರ್ಭದಲ್ಲಿ ಮೋದಿ ಈ ಸ್ಮರಣಿಕೆಗಳನ್ನು ನೀಡಿದರು. 9–10 ನೇ ಶತಮಾನದ ಶಾಸನಗಳ ಪ್ರತಿಕೃತಿಯಾಗಿರುವ ಈ ತಾಮ್ರ ಶಾಸನಗಳನ್ನು  ತಿರುವಲ್ಲದ  ಸಿರಿಯನ್‌ ಚರ್ಚ್‌ ಮಾರ್ಗದರ್ಶನದಲ್ಲಿ ಕೊಚ್ಚಿಯ ಮಟ್ಟನಚೇರಿಯಲ್ಲಿ  ಕೆತ್ತಲಾಗಿದೆ.

ಮುಂಬೈ ದಾಳಿ ವೇಳೆ ತೆಗೆದ ಮೋಶೆ ಚಿತ್ರಮೋಶೆಗೆ ಭಾರತದಲ್ಲಿ ನೆಲೆಸುವಾಸೆ

ಮುಂಬೈ ಮೇಲೆ 2008ರಲ್ಲಿ ನಡೆದ ಉಗ್ರರ ದಾಳಿಯಲ್ಲಿ ಕೂದಲೆಳೆಯ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾದ  ಇಸ್ರೇಲ್‌ನ ಯೆಹೂದಿ ಬಾಲಕ ಹಾಗೂ ಆತನ ಆರೈಕೆ ಮಾಡುತ್ತಿದ್ದ ಮನೆಗೆಲಸದಾಕೆಯನ್ನು ಪ್ರಧಾನಿ ಮೋದಿ ಬುಧವಾರ ಇಲ್ಲಿ ಭೇಟಿಯಾದರು.

11 ಹರೆಯದ ಬಾಲಕ  ಮೋಶೆ ಹೋಲ್ಟ್ಜ್‌ ಬರ್ಗ್ ಭಾರತಕ್ಕೆ ಮರಳಿ ಮುಂಬೈನಲ್ಲಿ ನೆಲೆಸುವ ಮನದ ಇಂಗಿತವನ್ನು  ಪ್ರಧಾನಿ ಮೋದಿ ಅವರ ಎದುರು ಬಿಚ್ಚಿಟ್ಟಿದ್ದಾನೆ.

9 ವರ್ಷಗಳ ಹಿಂದೆ ಮುಂಬೈ ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೋಶೆ ಕೇವಲ ಎರಡು ವರ್ಷದ ಹಸುಳೆ. ದಾಳಿಯಲ್ಲಿ ಆತ ತನ್ನ ತಂದೆ, ತಾಯಿಯನ್ನು ಕಳೆದುಕೊಂಡಿದ್ದ. ಆದರೆ, ಆ ಕರಾಳ ನೆನಪು ಆತನಿಗಿಲ್ಲ.ಮೋಶೆ ಪೋಷಕರಾದ ಹೋಲ್ಟ್ಜ್‌ ಬರ್ಗ್ ಅವರ ಮುಂಬೈ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತದ ಸಾಂಡ್ರಾ ಸ್ಯಾಮುವೆಲ್  ದಾಳಿಯ ವೇಳೆ  ಹಸುಳೆ ಮೋಶೆಯ ಪ್ರಾಣ ಉಳಿಸಿ  ಇಸ್ರೇಲ್‌ಗೆ ಕರೆದೊಯ್ದಿದ್ದರು.ಟೆಲ್‌ ಅವೀವ್‌ ಬಳಿ ಇರುವ ಅಫುಲಾದಲ್ಲಿ  ಅಜ್ಜ ರಬ್ಬಿ ಶಿಮೋನ್‌ ಮತ್ತು ಅಜ್ಜಿ ಯೆಹುಡಿಟ್‌ ರೋಸನ್‌ಬರ್ಗ್‌ ಮಡಿಲು ಸೇರಿಸಿದ್ದಳು. ಹಿಂದಿಯಲ್ಲಿ ಸ್ವಾಗತಿಸಿದ ಇಸ್ರೇಲ್‌ ಬಾಲಕ: ‘ಆಪ್‌ ಕಾ ಸ್ವಾಗತ್‌ ಹೈ ಹಮಾರೆ ದೇಶ್‌ ಮೇ’ (ನಿಮಗೆ ನಮ್ಮ ದೇಶಕ್ಕೆ ಸ್ವಾಗತ) ಎಂದು ಮೋಶೆ ಹಿಂದಿಯಲ್ಲಿ ಮೋದಿ ಅವರನ್ನು ಸ್ವಾಗತಿಸಿದ.  ‘ಭಾರತದ ನೆನಪಾಗುತ್ತಿದೆ’ ಎಂದು ಭಾವುಕನಾದ ಮೋಶೆಯನ್ನು ಮೋದಿ ಪ್ರೀತಿಯಿಂದ ಬಿಗಿದಪ್ಪಿದರು.‘ನೀನು ಮತ್ತು ನಿನ್ನ ಕುಟುಂಬ ಭಾರತಕ್ಕೆ ಬರುವುದಾದರೆ ಸದಾ ಸ್ವಾಗತ.  ಅಲ್ಲಿಯೇ ನೆಲೆಸುವುದಾದರೆ ದೀರ್ಘಕಾಲೀನ ವೀಸಾ ನೀಡಲೂ ಸಿದ್ಧ. ನಿನಗೆ ಬೇಕು ಎನಿಸಿದಾಗ ಭಾರತಕ್ಕೆ ಬಾ. ನಿನಗೆ ಇಷ್ಟವಾದ ಜಾಗದಲ್ಲಿ ಬೇಕೆಂದಷ್ಟು ದಿನ ಮುಕ್ತವಾಗಿ ತಿರುಗಾಡು. ನೀನು ಸ್ವತಂತ್ರ’ ಎಂದು ಮೋದಿ ಆತನ ಮೈದಡವಿದರು.‘ಪ್ರೀತಿಯ ಮೋದಿ, ನೀವೆಂದರೆ ನನಗೆ ತುಂಬಾ ಇಷ್ಟ. ಭಾರತೀಯರನ್ನು ನಾನು ಜೀವಕ್ಕಿಂತ ಹೆಚ್ಚು  ಪ್ರೀತಿಸುತ್ತೇನೆ. ಸದ್ಯ ನಾನು   ಅಫುಲಾದ ಅಜ್ಜ, ಅಜ್ಜಿಯ ಮನೆಯಲ್ಲಿದ್ದೇನೆ. ಮುಂಬೈನ ನರಿಮನ್‌ ಮನೆ (ಚಾಬಡ್‌ ಹೌಸ್‌) ನೆನಪಾಗುತ್ತದೆ. ಮುಂಬೈಗೆ ಹಾರಲು ಮನಸ್ಸು ಹಾತೊರೆಯುತ್ತಿದೆ. ದೊಡ್ಡವನಾದ ಮೇಲೆ ಅಲ್ಲಿಯೇ ನೆಲೆಸುವ ಹಂಬಲವಿದೆ’ ಎಂದು ಮೋಶೆ ಹೇಳಿದ.*

ಇಸ್ರೇಲ್‌ ಅಧ್ಯಕ್ಷರು ಎಲ್ಲ ಶಿಷ್ಟಾಚಾರ ಬದಿಗೊತ್ತಿ ನನ್ನನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ. ಇದು ಭಾರತದ ಜನರಿಗೆ ಅವರು ನೀಡಿದ ಗೌರವ.

ನರೇಂದ್ರ ಮೋದಿ, ಪ್ರಧಾನಿ

*


ಇಸ್ರೇಲ್‌ನ ಜನರು ಭಾರತದಲ್ಲಿ ಹೂಡಿಕೆ ಮಾಡಲು ದಾರಿಗಳನ್ನು ಹುಡುಕುತ್ತಿದ್ದಾರೆ. ಜತೆಯಾಗಿ ಹಲವು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಬಯಸಿದ್ದಾರೆ.

ರೂವೆನ್‌ ರಿವ್ಲಿನ್‌, ಇಸ್ರೇಲ್‌ ಅಧ್ಯಕ್ಷ

ಪ್ರತಿಕ್ರಿಯಿಸಿ (+)