ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಎಸ್‌ಟಿಪಿ ಘಟಕಗಳಿಗೆ ನಾಳೆ ಚಾಲನೆ

ಚಿಕ್ಕಬಾಣಾವರ, ನಾಗಸಂದ್ರ, ರಾಜಾ ಕೆನಾಲ್‌ನಲ್ಲಿ ₹244 ಕೋಟಿ ವೆಚ್ಚದಲ್ಲಿ ಸ್ಥಾಪನೆ
Last Updated 5 ಜುಲೈ 2017, 20:28 IST
ಅಕ್ಷರ ಗಾತ್ರ

ಬೆಂಗಳೂರು: ಜಲಮಂಡಳಿಯು ಚಿಕ್ಕಬಾಣಾವರ, ನಾಗಸಂದ್ರ ಹಾಗೂ ರಾಜಾ ಕೆನಾಲ್‌ನಲ್ಲಿ ನಿರ್ಮಿಸಿರುವ 6.5 ಕೋಟಿ ಲೀಟರ್‌ ಸಾಮರ್ಥ್ಯದ ತ್ಯಾಜ್ಯ ನೀರಿನ ಸಂಸ್ಕರಣಾ ಘಟಕಗಳ (ಎಸ್‌ಟಿಪಿ) ಉದ್ಘಾಟನೆ ಗೆದ್ದಲಹಳ್ಳಿಯ ರಾಜಾ ಕೆನಾಲ್‌ ಎಸ್‌ಟಿಪಿ ಆವರಣದಲ್ಲಿ ಇದೇ 7ರಂದು ನಡೆಯಲಿದೆ.

ಮಂಡಳಿಯು ಮೊದಲನೇ ಹಂತದ ಯೋಜನೆಯಡಿ ವೃಷಭಾವತಿ, ಕೋರಮಂಗಲ ಮತ್ತು ಚಲ್ಲಘಟ್ಟ ಕಣಿವೆಗಳಲ್ಲಿ 30 ಕೋಟಿ ಲೀಟರ್‌ ಸಾಮರ್ಥ್ಯದ ಎರಡು ಎಸ್‌ಟಿಪಿಗಳನ್ನು 1974ರಲ್ಲಿ ಆರಂಭಿಸಲಾಗಿತ್ತು. ಕಾಲಾನಂತರದಲ್ಲಿ ಒಟ್ಟು 14 ಎಸ್‌ಟಿಪಿಗಳ ನಿರ್ಮಾಣದೊಂದಿಗೆ ಈ ಸಾಮರ್ಥ್ಯವನ್ನು 721 ಕೋಟಿ ಲೀಟರ್‌ಗೆ ಹೆಚ್ಚಿಸಲಾಯಿತು. ಈಗ ಮೂರು ಘಟಕಗಳ ಕಾರ್ಯಾರಂಭದಿಂದ ತ್ಯಾಜ್ಯ ನೀರಿನ ಸಂಸ್ಕರಣೆ ಸಾಮರ್ಥ್ಯ 84.6 ಕೋಟಿ ಲೀಟರ್‌ಗೆ ಏರಲಿದೆ.

ನಾಗಸಂದ್ರ ಎಸ್‌ಟಿಪಿ 2 ಕೋಟಿ ಲೀಟರ್‌ ಸಾಮರ್ಥ್ಯ ಹೊಂದಿದೆ. ಜೈಕಾ ಅನುದಾನದೊಂದಿಗೆ ₹66.6 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಈ ಘಟಕಕ್ಕೆ ಪೀಣ್ಯ 2ನೇ ಹಂತ, ರಾಜಗೋಪಾಲನಗರ, ಮಯೂರನಗರ,  ಅಶ್ವಪುರ, ನೆಲಗೆದರನಹಳ್ಳಿ, ಗೃಹಲಕ್ಷ್ಮಿ ಲೇಔಟ್‌, ಎಚ್‌ಎಂಟಿ ಬಡಾವಣೆ, ರುಕ್ಮಿಣಿ ನಗರ ಹಾಗೂ ಬಾಗಲಗುಂಟೆ ಪ್ರದೇಶದಿಂದ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ತರಲಾಗುತ್ತದೆ. ಈ ಘಟಕವು ಎಸ್‌ಬಿಆರ್‌ ತಂತ್ರಜ್ಞಾನದಿಂದ ಕೂಡಿದೆ. ಅಂತಿಮವಾಗಿ ತಿಪ್ಪಗೊಂಡನಹಳ್ಳಿ ಅಚ್ಚುಕಟ್ಟು ಪ್ರದೇಶಕ್ಕೆ ನಾಲೆ ಮುಖಾಂತರ ಸಂಸ್ಕರಿಸಿದ ನೀರು ಸೇರುತ್ತದೆ.

4 ಕೋಟಿ ಲೀಟರ್‌ ಸಾಮರ್ಥ್ಯದ ರಾಜಾಕೆನಾಲ್‌ನ ಘಟಕಕ್ಕೆ ₹132 ಕೋಟಿ ವೆಚ್ಚ ಮಾಡಲಾಗಿದೆ. ಇಲ್ಲಿ ಸಂಪಿಗೆಹಳ್ಳಿ, ಜಕ್ಕೂರು, ಎಂಸಿಇಎಚ್‌ಎಸ್‌ ಬಡಾವಣೆ, ನಾಗವಾರ, ಸಹಕಾರನಗರ, ಅಮೃತನಗರ, ಕೊಡಿಗೇಹಳ್ಳಿ, ಅಮೃತಹಳ್ಳಿ, ಕಾಫಿ ಬೋರ್ಡ್‌ ಬಡಾವಣೆ, ವಿದ್ಯಾರಣ್ಯಪುರ, ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಲಾಗುತ್ತದೆ. ಬಳಿಕ ನೀರನ್ನು ರಾಜಕಾಲುವೆಗೆ ಹರಿಸಲಾಗುತ್ತದೆ.

ಚಿಕ್ಕಬಾಣಾವರದಲ್ಲಿ ನಿರ್ಮಿಸಿರುವ 50 ಲಕ್ಷ ಲೀಟರ್‌ ಸಾಮರ್ಥ್ಯದ ಘಟಕಕ್ಕೆ ₹46 ಕೋಟಿ ವೆಚ್ಚ ಮಾಡಲಾಗಿದೆ. ಇದಕ್ಕೆ ಜೈಕಾ ಅನುದಾನ ಸಿಕ್ಕಿದೆ. 2 ವರ್ಷ 9 ತಿಂಗಳಲ್ಲಿ ಈ ಘಟಕ ಪೂರ್ಣಗೊಳಿಸಲಾಗಿದೆ. ಈ ಘಟಕಕ್ಕೆ ಸಿಂಗಪುರ ಬಡಾವಣೆ, ಕುವೆಂಪುನಗರ, ಎಂ.ಸಿ. ಪಾಳ್ಯದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ನೀರನ್ನು ಗುರುತ್ವಾಕರ್ಷಣೆ ಮೂಲಕ ತರಲಾಗುತ್ತದೆ. ಸಂಸ್ಕರಿಸಿದ ನೀರನ್ನು ಚಿಕ್ಕಬಾಣಾವರ ಕೆರೆಗೆ ಬಿಡಲಾಗುತ್ತದೆ.
ಮಂಡಳಿಯು ತ್ಯಾಜ್ಯ ನೀರು ಉತ್ಪಾದನೆ ಪ್ರಮಾಣವನ್ನು ಆಧರಿಸಿ ಹೆಚ್ಚುವರಿ 33.6 ಕೋಟಿ ಲೀಟರ್‌ ಸಾಮರ್ಥ್ಯದ 10 ಘಟಕಗಳ ಕಾಮಗಾರಿಯನ್ನು 2013–14ರಲ್ಲಿ ಕೈಗೆತ್ತಿಕೊಂಡಿತ್ತು. ಈ ಎಲ್ಲ ಯೋಜನೆಗಳು 2018ರ ಅಂತ್ಯದೊಳಗೆ ಪೂರ್ಣಗೊಳ್ಳಲಿವೆ.

ರಾಜ್ಯ ಸರ್ಕಾರದ ಮೆಗಾಸಿಟಿ ಯೋಜನೆಯಡಿ ₹1209 ಕೋಟಿ ವೆಚ್ಚದಲ್ಲಿ 44 ಕೋಟಿ ಲೀಟರ್‌ ಸಾಮರ್ಥ್ಯದ 4 ಎಸ್‌ಟಿಪಿಗಳನ್ನು, ಅಮೃತ್‌ ಯೋಜನೆಯಡಿ ₹129 ಕೋಟಿ ವೆಚ್ಚದಲ್ಲಿ 7.5 ಕೋಟಿ ಲೀಟರ್‌ನ 5 ಎಸ್‌ಟಿಪಿಗಳ ನಿರ್ಮಾಣ ಕೈಗೆತ್ತಿಕೊಳ್ಳಲಾಗಿದೆ. ಈ ಎಲ್ಲ ಘಟಕಗಳು 2020ರ ವೇಳೆಗೆ ಪೂರ್ಣಗೊಳ್ಳಲಿವೆ. ಆಗ ತ್ಯಾಜ್ಯ ನೀರಿನ ಸಂಸ್ಕರಣೆ ಪ್ರಮಾಣ 157 ಕೋಟಿ ಲೀಟರ್‌ಗೆ ಏರಲಿದೆ ಎಂದು ಜಲಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT