ಸೋಮವಾರ, ಡಿಸೆಂಬರ್ 16, 2019
26 °C

‘ರೇರಾ’ ಕಾಯ್ದೆಗೆ ಸರ್ಕಾರದ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ರೇರಾ’ ಕಾಯ್ದೆಗೆ ಸರ್ಕಾರದ ಒಪ್ಪಿಗೆ

ಬೆಂಗಳೂರು: ನಿವೇಶನ, ಫ್ಲ್ಯಾಟ್ ಖರೀದಿಸುವವರ ರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಿಯಲ್ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯನ್ನು (ರೇರಾ) ರಾಜ್ಯದಲ್ಲಿಯೂ ಜಾರಿಗೊಳಿಸಲು ಸರ್ಕಾರ ನಿರ್ಧರಿಸಿದೆ.ಇನ್ನೆರಡು ದಿನಗಳಲ್ಲಿ ಈ ಕಾಯ್ದೆಗೆ ಪೂರಕವಾದ ನಿಯಮಗಳು ರಾಜ್ಯದಲ್ಲಿ ಜಾರಿಯಾಗಲಿದ್ದು, ರಿಯಲ್‌ ಎಸ್ಟೇಟ್‌ ಹೆಸರಿನಲ್ಲಿ ನಡೆಯುತ್ತಿರುವ ವಂಚನೆ, ಲೂಟಿಗೆ ಕಡಿವಾಣ ಬೀಳಲಿದೆ. ರಾಜ್ಯ ಸರ್ಕಾರ ತನ್ನ ವಿವೇಚನಾ ಅಧಿಕಾರ ಬಳಸಿ  ಎರಡು ಪ್ರಮುಖ ಬದಲಾವಣೆಗಳೊಂದಿಗೆ ನಿಯಮ ರೂಪಿಸಿದೆ.ಚಾಲ್ತಿಯಲ್ಲಿರುವ ಯೋಜನೆಗಳಲ್ಲಿ  ಶೇ 60ರಷ್ಟು ಫ್ಲ್ಯಾಟ್, ನಿವೇಶನ ಅಥವಾ ವಿಲ್ಲಾಗಳನ್ನು ಖರೀದಿದಾರರಿಗೆ ಕ್ರಯಪತ್ರ ಮಾಡಿಕೊಟ್ಟಿರುವ ರಿಯಲ್ ಎಸ್ಟೇಟ್ ಸಂಸ್ಥೆ, ಗೃಹ ನಿರ್ಮಾಣ ಸಹಕಾರ ಸಂಘ, ಖಾಸಗಿ ಗೃಹ ನಿರ್ಮಾಣ ಕಂಪೆನಿಗಳು ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗೃಹ ಮಂಡಳಿ, ನಗರಾಭಿವೃದ್ಧಿ ಪ್ರಾಧಿಕಾರಗಳ ಯೋಜನೆಗಳಿಗೆ ರೇರಾ ನಿಯಮ ಅನ್ವಯಿಸುವುದಿಲ್ಲ.ಆರಂಭದ ಹಂತದಲ್ಲಿರುವ ಎಲ್ಲ ಯೋಜನೆಗಳು ಇನ್ನು ಮುಂದೆ ರೇರಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲೇಬೇಕಾಗುತ್ತದೆ.  ಇಲ್ಲದಿದ್ದರೆ ಜೈಲು ಶಿಕ್ಷೆ ಮತ್ತು ದಂಡ   ಪಾವತಿಸಬೇಕಾಗುತ್ತದೆ.ಆಯಾ ಭಾಗದ ಮಾರ್ಗಸೂಚಿ ದರ  ಆಧರಿಸಿ ಫ್ಲ್ಯಾಟ್ ಅಥವಾ ನಿವೇಶನದ ಮೌಲ್ಯವನ್ನು  ನಿಗದಿ ಮಾಡಬೇಕು ಎಂದು ನಿಯಮ ವಿಧಿಸಲಾಗಿದೆ.ಬುಧವಾರ ನಡೆದ ಸಚಿವ ಸಂಪುಟ ಸಭೆ ಬಳಿಕ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಕಾನೂನು ಮತ್ತು ಸಂಸದೀಯ ಸಚಿವ ಟಿ.ಬಿ. ಜಯಚಂದ್ರ, ಕೇಂದ್ರ ಸರ್ಕಾರದ ಕಾಯ್ದೆಯನ್ನು ಯಥಾವತ್ತಾಗಿ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ಇನ್ನೆರಡು ದಿನಗಳಲ್ಲಿ ಅಧಿಸೂಚನೆ ಹೊರಬೀಳಲಿದ್ದು, ಅಂದಿನಿಂದಲೇ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ ಕೂಡ ಅಸ್ತಿತ್ವಕ್ಕೆ ಬರಲಿದೆ ಎಂದು ತಿಳಿಸಿದರು.ಕೈಗಾರಿಕಾ ನಿವೇಶನ ನಿಯಮ ಬದಲು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದಿಂದ (ಕೆಎಸ್‌ಎಸ್ಐಡಿಸಿ) 99 ವರ್ಷ ಗುತ್ತಿಗೆ ಆಧಾರದ ಮೇಲೆ ಹಂಚಿಕೆ ಮಾಡುತ್ತಿದ್ದ ಕೈಗಾರಿಕಾ ನಿವೇಶನದ ನಿಯಮವನ್ನು  ಬದಲಾಯಿಸಲು ಸರ್ಕಾರ ತೀರ್ಮಾನಿಸಿದೆ.ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ  ಎರಡು ಎಕರೆಯೊಳಗೆ ಹಂಚಿಕೆ ಮಾಡುವ ಭೂಮಿ ಅಥವಾ ನಿವೇಶನವನ್ನು 10 ವರ್ಷ ಭೋಗ್ಯ ಕಮ್‌ ಕ್ರಯದ ಆಧಾರದ ಮೇಲೆ ನೀಡಲಾಗುತ್ತದೆ.ಸಚಿವ ಸಂಪುಟ ಸಭೆಯ ಪ್ರಮುಖ ನಿರ್ಣಯಗಳು

* ಇದೇ ತಿಂಗಳಿನಿಂದ ವಾರದ ಐದು ದಿನ 1ರಿಂದ 10ನೇ ತರಗತಿವರೆಗಿನ ಶಾಲಾ ಮಕ್ಕಳಿಗೆ ಹಾಲು ವಿತರಿಸಲು ತೀರ್ಮಾನ.

* ಕ್ಷೀರಭಾಗ್ಯ ಯೋಜನೆಯಡಿ ರಾಯಚೂರು ಮತ್ತು ಮೈಸೂರು ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಸುವಾಸಿತ ಹಾಲು ವಿತರಣೆ.

* ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ‘ಮಾತೃಪೂರ್ಣ’ ಯೋಜನೆ ಅನುಷ್ಠಾನಕ್ಕಾಗಿ ₹202 ಕೋಟಿ ಅನುದಾನ.

* ದಾವಣಗೆರೆ, ಕನಕಪುರ, ತುಮಕೂರು, ವಿಜಯಪುರ, ಕೋಲಾರದಲ್ಲಿ ತಲಾ ₹25 ಕೋಟಿ ವೆಚ್ಚದಲ್ಲಿ ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ.

* ಬಳ್ಳಾರಿಯ ವಿಮ್ಸ್‌ ಮತ್ತು ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ತಲಾ ₹150 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ.

* ಬಿಸಿಯೂಟ ತಯಾರಿಸುವ ಮುಖ್ಯ ಅಡುಗೆಯವರು ಹಾಗೂ ಸಹಾಯಕರಿಗೆ   ಗೌರವಧನ ₹200 ಹೆಚ್ಚಳ.

* ರೇಷ್ಮೆ ನೂಲು ಬಿಚ್ಚಾಣಿಕೆ ನಡೆಸುವ 4,470 ಸಹಕಾರ ಸಂಘಗಳಿಗೆ ₹3 ಲಕ್ಷದವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಲು ಸಮ್ಮತಿ.

* ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕೌಶಲ ಅಭಿವೃದ್ಧಿ ಹೆಚ್ಚಿಸಲು ರಾಜ್ಯದ 18 ಸರ್ಕಾರಿ ಪ್ರಥಮ ದರ್ಜೆ  ಕಾಲೇಜುಗಳಲ್ಲಿ ನೂತನ ಯೋಜನೆ.

* ಚೆನ್ನೈ–ಬೆಂಗಳೂರು–ಚಿತ್ರದುರ್ಗ ಕಾರಿಡಾರ್‌ ಮಧ್ಯೆ ಇರುವ ತುಮಕೂರಿನ ವಸಂತ ನರಸಾಪುರದಲ್ಲಿ ‘ನಾಡ್‌ ಸೆಂಟರ್‌’ ಸ್ಥಾಪನೆಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳಲು ₹400 ಕೋಟಿ ಅನುದಾನ.

* ರಾಜ್ಯದ 206 ಸಮುದಾಯ ಆರೋಗ್ಯ ಕೇಂದ್ರ ಹಾಗೂ 2,353 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ‘ಇ–ಹಾಸ್ಪಿಟಲ್‌’ ಆರಂಭಿಸಲು ನಿರ್ಧಾರ.

* ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಬೆಳ್ಳೂರು ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಲು ಒಪ್ಪಿಗೆ.2500 ಗ್ರಾ. ಪಂ. ವ್ಯಾಪ್ತಿಯಲ್ಲಿ ವೈ–ಫೈ

ನಗರ ಪ್ರದೇಶಗಳಲ್ಲಿ ಲಭ್ಯವಾಗುತ್ತಿದ್ದ ವೈ–ಫೈ ಸೌಲಭ್ಯ ಇನ್ನು ಮುಂದೆ ರಾಜ್ಯದ 2,500 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಸಿಗಲಿದೆ. ಗ್ರಾಮ ಪಂಚಾಯಿತಿ ಕೇಂದ್ರದಿಂದ1 ಚ.ಮೀ ಸುತ್ತಳತೆಯಲ್ಲಿ ಒಬ್ಬ ವ್ಯಕ್ತಿ ಒಂದು ದಿನಕ್ಕೆ 30 ನಿಮಿಷ ಬಳಕೆ ಅಥವಾ 100 ಎಂ.ಬಿ. ಡೇಟಾವನ್ನು ಡೌನ್‌ಲೋಡ್‌ ಮಾಡಿಕೊಳ್ಳಲು ಅವಕಾಶ ಸಿಗಲಿದೆ.

ಪ್ರತಿಕ್ರಿಯಿಸಿ (+)