ಸೋಮವಾರ, ಡಿಸೆಂಬರ್ 16, 2019
26 °C
ಭಾರತ–ಇಸ್ರೇಲ್‌ ಬಂಧಕ್ಕೆ ಪ್ರಧಾನಿಗಳಾದ ಮೋದಿ–ನೆತನ್ಯಾಹು ಭಾವುಕ ಬಣ್ಣನೆ

ಸ್ವರ್ಗದ ನಂಟಿಗೆ ಭುವಿಯ ಬೆಸುಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಸ್ವರ್ಗದ ನಂಟಿಗೆ ಭುವಿಯ ಬೆಸುಗೆ

ಜೆರುಸಲೇಂ: ಭಾರತ ಮತ್ತು ಇಸ್ರೇಲ್‌ ದೇಶಗಳು ತಮ್ಮ ನಡುವಣ ಸಂಬಂಧವನ್ನು ‘ರಕ್ಷಣಾ ಪಾಲುದಾರಿಕೆ’ಯ ಮಟ್ಟಕ್ಕೆ ಏರಿಸಿವೆ. ಹೆಚ್ಚುತ್ತಿರುವ ತೀವ್ರಗಾಮಿ ಚಿಂತನೆ ಮತ್ತು ಭಯೋತ್ಪಾದನೆಯ ವಿರುದ್ಧ ‘ಜತೆಯಾಗಿ ಮತ್ತಷ್ಟು ಕೆಲಸ’ ಮಾಡಲು ಎರಡೂ ದೇಶಗಳು ಶಪಥ ಮಾಡಿವೆ.ಭಯೋತ್ಪಾದಕರಿಗೆ ಹಣಕಾಸು ನೆರವು ಮತ್ತು ಉಗ್ರರಿಗೆ ಆಶ್ರಯ ತಾಣಗಳನ್ನು ಒದಗಿಸುವವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುವುದಕ್ಕೂ ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಅವರು ನಿರ್ಧರಿಸಿದರು.ಭಯೋತ್ಪಾದನೆಯ ಬೆದರಿಕೆ, ರಕ್ಷಣೆ ಮತ್ತು ಸುರಕ್ಷತೆಯ ಕ್ಷೇತ್ರದಲ್ಲಿ ಸಹಕಾರ, ನೀರು, ಕೃಷಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ನೆರವು ಮತ್ತು ಪಶ್ಚಿಮ ಏಷ್ಯಾ ಸಂಬಂಧಗಳು ಇಬ್ಬರು ಮುಖಂಡರ ಮಾತುಕತೆಯ ತಿರುಳಾಗಿದ್ದವು.ವಿಸ್ತೃತವಾದ ಮಾತುಕತೆಗಳ ನಂತರ ಏಳು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ. ಎರಡೂ ದೇಶಗಳ ಸಂಬಂಧದ ಬಗ್ಗೆ ನೆತನ್ಯಾಹು ಅವರು ಭಾವನಾತ್ಮಕವಾಗಿ ಮಾತನಾಡಿದರು. ‘ನಮ್ಮದು ಸ್ವರ್ಗದಲ್ಲಿಯೇ ನಿಶ್ಚಿತಾರ್ಥವಾದ ಸಂಬಂಧ. ಭೂಮಿಯಲ್ಲಿ ಅದನ್ನು ನಾವು ಜಾರಿಗೆ ತರುತ್ತಿದ್ದೇವೆ’ ಎಂದು ನೆತನ್ಯಾಹು ಅವರು ಮೋದಿ ಜತೆಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.‘ಎರಡೂ ದೇಶಗಳ ಸಮಾನ ಆದ್ಯತೆಗಳು ಮತ್ತು ನಮ್ಮ ಜನರ ಸುದೀರ್ಘ ಬಾಂಧವ್ಯ ಪ್ರತಿಫಲಿತ ಆಗುವ ರೀತಿಯಲ್ಲಿ ಸಂಬಂಧವನ್ನು ವೃದ್ಧಿಸುವುದು ನಮ್ಮ ಗುರಿ’ ಎಂದು ಮೋದಿ ಹೇಳಿದರು.‘ಎರಡೂ ದೇಶಗಳು ಸಂಕೀರ್ಣ ಭೌಗೋಳಿಕತೆಯನ್ನು ಹೊಂದಿವೆ. ಸುರಕ್ಷಾ ಬೆದರಿಕೆಗಳು ಮತ್ತು ಪ್ರಾದೇಶಿಕ ಶಾಂತಿ ಮತ್ತು ಸುರಕ್ಷತೆಯ ಭೀತಿಯನ್ನೂ ಹೊಂದಿವೆ. ಭಯೋತ್ಪಾದನೆಯ ಭಾಗವಾಗಿ ಹರಡಲಾದ ಹಿಂಸೆ ಮತ್ತು ದ್ವೇಷಕ್ಕೆ ಭಾರತ ನೇರವಾಗಿ ಬಲಿಪಶುವಾಗಿದೆ’ ಎಂದು ಮೋದಿ ವಿವರಿಸಿದರು.ಮುಂಬೈ ಮೇಲೆ 2008ರಲ್ಲಿ ನಡೆದ (26/11) ಉಗ್ರರ ದಾಳಿಯನ್ನು ‘ಘೋರ’  ಎಂದು ನೆತನ್ಯಾಹು ಬಣ್ಣಿಸಿದರು. ಭಯೋತ್ಪಾದನೆ ಮತ್ತು ಅದಕ್ಕೆ ನೀಡಲಾಗುವ ನೆರವಿನ ಮಾತುಕತೆ ಉದ್ದಕ್ಕೂ ಪ್ರಸ್ತಾಪವಾಯಿತು. ಆದರೆ ಯಾವುದೇ ದೇಶದ ಹೆಸರು ಉಲ್ಲೇಖವಾಗಲಿಲ್ಲ. ಭಾರತಕ್ಕೆ ಸಂಬಂಧಿಸಿದಂತೆ ಅದು ಪಾಕಿಸ್ತಾನವೇ ಆಗಿದೆ

ಎಂಬುದು ಸ್ಪಷ್ಟ.ದೆಹಲಿ, ಮುಂಬೈನಿಂದ ನೇರ ವಿಮಾನ ಸೇವೆ

ಇಸ್ರೇಲ್‌ನಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಭಾರತದಿಂದ ಇಸ್ರೇಲ್‌ಗೆ ವಲಸೆ ಬಂದಿರುವವರು, ಸೇವಾ ಮನೋಭಾವದಿಂದ ದುಡಿದು ಇಸ್ರೇಲಿಗರ ಹೃದಯ ಗೆದ್ದಿದ್ದಾರೆ. ಇದು ಭಾರತೀಯರ ಸೇವೆ ಮತ್ತು ಶೌರ್ಯದ ಪ್ರತೀಕ’ ಎಂದು ಬಣ್ಣಿಸಿದರು.

‘ಇಸ್ರೇಲ್‌ ಸೇನೆಯಲ್ಲಿ ಕಡ್ಡಾಯ ಸೇವೆ ಸಲ್ಲಿಸಿರುವ ಭಾರತೀಯರಿಗೆ, ಸಾಗರೋತ್ತರ ಭಾರತೀಯ ನಾಗರಿಕ ಚೀಟಿ ನೀಡುವಲ್ಲಿ ತಾಂತ್ರಿಕ ತೊಡಕುಗಳಿದ್ದವು. ಅದನ್ನು ಈಗ ನಿವಾರಿಸಲಾಗುತ್ತದೆ. ಜತೆಗೆ, ದೆಹಲಿ ಮತ್ತು ಮುಂಬೈನಿಂದ ಇಸ್ರೇಲ್‌ನ ಟೆಲ್ ಅವಿವಾಗೆ ನೇರ ವಿಮಾನ ಸೇವೆ ಆರಂಭಿಸಲಾಗುತ್ತದೆ’ ಎಂದು ಘೋಷಿಸಿದರು.ಏಳು ಒಪ್ಪಂದಗಳು

1. ಕೈಗಾರಿಕಾ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ತಾಂತ್ರಿಕ ಆವಿಷ್ಕಾರ ನಿಧಿ ಸ್ಥಾಪನೆ: ₹ 260 ಕೋಟಿ ನಿಧಿಯ ಆರಂಭಿಕ ಠೇವಣಿ: ಎರಡೂ ದೇಶಗಳ ವಿಜ್ಞಾನಿಗಳು ಮತ್ತು ಸಂಶೋಧಕರಿಗೆ ಜಂಟಿ ಆವಿಷ್ಕಾರಕ್ಕೆ ಅವಕಾಶ

2. ದ್ವಿಪಕ್ಷೀಯ ವಾಣಿಜ್ಯ ಮತ್ತು ಬಂಡವಾಳ ಹೂಡಿಕೆ3–4. ನೀರಿನ ಸಂರಕ್ಷಣೆ ಮತ್ತು ನೀರಿನ ಸದುಪಯೋಗ ಸಂಬಂಧ ಎರಡು ಒಪ್ಪಂದಗಳು: ನೀರಿನ ಸಂರಕ್ಷಣೆ ಮತ್ತು ಸದ್ಬಳಕೆ ತಂತ್ರಜ್ಞಾನಗಳಲ್ಲಿ ಇಸ್ರೇಲ್‌ ಮೇಲುಗೈ ಸಾಧಿಸಿದೆ5. ಕೃಷಿ ಸಹಕಾರ: ಕೃಷಿ ಕ್ಷೇತ್ರದಲ್ಲಿನ ತಂತ್ರಜ್ಞಾನಗಳ ಹಂಚಿಕೆ, ಹೊಸ ತಂತ್ರಜ್ಞಾನ–ವಿಧಾನಗಳ ಸಂಶೋಧನೆ: ಭಾರತ–ಇಸ್ರೇಲ್ ಅಭಿವೃದ್ಧಿ ನಿಗಮ ಸ್ಥಾಪನೆ: 2018–2020ರವರೆಗೆ ಈ ನಿಗಮ ಕಾರ್ಯನಿರ್ವಹಣೆ6. ಅಣು ಗಡಿಯಾರ ತಂತ್ರಜ್ಞಾನ ಸಹಕಾರ7. ಸಣ್ಣ ಉಪಗ್ರಹಗಳ ಚಾಲಕ ಶಕ್ತಿ ಕ್ಷೇತ್ರದಲ್ಲಿ ತಂತ್ರಜ್ಞಾನ ಹಂಚಿಕೆ ಮತ್ತು ಹೊಸ ಆವಿಷ್ಕಾರ ಒಪ್ಪಂದ

ಪ್ರತಿಕ್ರಿಯಿಸಿ (+)