ಶುಕ್ರವಾರ, ಡಿಸೆಂಬರ್ 13, 2019
20 °C

ಪುರಸಭೆ ಕಚೇರಿಗೆ ಡಿಸಿ ದಿಢೀರ್‌ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುರಸಭೆ ಕಚೇರಿಗೆ ಡಿಸಿ ದಿಢೀರ್‌ ಭೇಟಿ

ಶಿಕಾರಿಪುರ: ಪಟ್ಟಣದ ಪುರಸಭೆ ಕಚೇರಿಗೆ ಮಂಗಳವಾರ ಜಿಲ್ಲಾಧಿಕಾರಿ ಡಾ.ಎಂ.ಲೋಕೇಶ್‌ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಸರ್ಕಾರದ ಅನುದಾನದ ಕಾಮಗಾರಿಗಳ ಬಗ್ಗೆ, ಸಿಬ್ಬಂದಿ ಹಾಗೂ ಪೌರಕಾರ್ಮಿಕರ ಹಾಜರಾತಿ, ಸ್ವಚ್ಛತಾ ಕಾರ್ಯ, ನೀರು ಸರಬರಾಜು ಹಾಗೂ ಕಂದಾಯ ವಿಭಾಗ ಸೇರಿದಂತೆ ವಿವಿಧ ವಿಭಾಗಗಳ ಸಿಬ್ಬಂದಿ ಕಾರ್ಯ ವೈಖರಿ ಪರಿಶೀಲನೆ ನಡೆಸುವ ಜತೆ ಪೌರಕಾರ್ಮಿಕರ ಸಮಸ್ಯೆಯನ್ನು ಜಿಲ್ಲಾಧಿಕಾರಿ ಆಲಿಸಿದರು.

‘ಸರ್ಕಾರ ಶೌಚಾಲಯ ನಿರ್ಮಾಣ ಕಾಮಗಾರಿಗೆ ಹೆಚ್ಚು ಆದ್ಯತೆ ನೀಡುತ್ತಿದ್ದು, ಇಲ್ಲಿಯೂ ಆದ್ಯತೆ ನೀಡಬೇಕು. ಸಾರ್ವಜನಿಕ ಸಮಸ್ಯೆಗಳನ್ನು ಆನ್‌ಲೈನ್‌ ಮೂಲಕ ಅಪ್‌ಲೋಡ್‌ ಮಾಡಬೇಕು’ ಎಂದು ಮುಖ್ಯಾಧಿಕಾರಿಗೆ ಸೂಚಿಸಿದರು.

ಪುರಸಭೆ ವ್ಯಾಪ್ತಿಯ ಓವರ್‌ಟ್ಯಾಂಕ್‌ ವ್ಯಾಪ್ತಿಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಮನೆ ನಿರ್ಮಾಣ ಮಾಡಿಕೊಳ್ಳಲಾಗಿದೆ. ಅದನ್ನು ತೆರವುಗೊಳಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಮನವಿ ನೀಡಿದರೂ ಕ್ರಮಕೈಗೊಂಡಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಯು.ಬಿ. ವಿಜಯಕುಮಾರ್‌ ದೂರಿದರು. ಪುರಸಭೆ ಭೂಮಿ ಒತ್ತುವರಿ ಬಗ್ಗೆ ಸರ್ವೆ ಕಾರ್ಯ ನಡೆಸಿ ಕ್ರಮಕೈಗೊಳ್ಳ ಬೇಕು ಎಂದು ಮುಖ್ಯಾಧಿಕಾರಿ ಬಾಲಾಜಿ ರಾವ್‌ಗೆ ಜಿಲ್ಲಾಧಿಕಾರಿ ಆದೇಶಿಸಿದರು.  

ಪುರಸಭೆ ಸದಸ್ಯ ಬಿ. ಯಲ್ಲಪ್ಪ ಮಾತನಾಡಿ, ‘ಎಸ್‌ಟಿಪಿ ಯೋಜನೆಯಲ್ಲಿ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು ವಾಸಿಸುವ ವಾರ್ಡ್‌ ಗಳ ಅಭಿವೃದ್ಧಿ ನೀಡುವ ಕೋಟ್ಯಂತರ ರೂಪಾಯಿ ಅನುದಾನವನ್ನು ಸಾಮಾನ್ಯ ಸಭೆಯಲ್ಲಿ ಯಾವುದೇ ಚರ್ಚೆ ನಡೆಸದೇ ಸಾಮಾನ್ಯ ವಾರ್ಡ್‌ಗಳ ಅಭಿವೃದ್ಧಿಗಾಗಿ ಬಳಸಿಕೊಂಡಿದ್ದಾರೆ’ ಎಂದು  ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಪುರಸಭೆ ಅಧ್ಯಕ್ಷರ ಮಗ ಬಸ್‌ನಿಲ್ದಾಣ ಸಮೀಪ ಬೇರೊಬ್ಬರ ಭೂಮಿಯಲ್ಲಿ ಕಟ್ಟಡ ನಿರ್ಮಾಣ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮುಖ್ಯಾಧಿಕಾರಿಗೆ ದೂರು ನೀಡಿದರೂ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಜೀನಳ್ಳಿ ದೊಡ್ಡಪ್ಪ ಆರೋಪಿಸಿದರು.

ಖಾಸಗಿ ವ್ಯಕ್ತಿಗಳ ಭೂಮಿ ಒತ್ತುವರಿ ಪುರಸಭೆ ವ್ಯಾಪ್ತಿಗೆ ಬರುವುದಿಲ್ಲ. ನ್ಯಾಯಾಲಯದಲ್ಲಿ ಒತ್ತುವರಿಯಾದ ಭೂಮಿಯ ಮಾಲೀಕ ಮೊಕದ್ದಮೆ ದಾಖಲಿಸಲಿ’ ಎಂದರು.  

ತಹಶೀಲ್ದಾರ್‌ ಬಿ. ಶಿವಕುಮಾರ್‌, ಜಿಲ್ಲಾ ನಗರಾಭಿವೃದ್ಧಿ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಶ್ರೀಕಂಠಸ್ವಾಮಿ, ಸಹಾಯಕ ಎಂಜಿನಿಯರ್‌ ಮಂಜುನಾಥ್‌, ರಾಜಸ್ವ ನಿರೀಕ್ಷಕ ಮಂಜುನಾಥ್, ಪುರಸಭೆ ಅಧ್ಯಕ್ಷೆ ರೂಪಕಲಾ ಹೆಗಡೆ, ನಾಮನಿರ್ದೇಶಿತ ಸದಸ್ಯ ಬಡಗಿ ಪಾಲಾಕ್ಷ,  ಯುವ ಕಾಂಗ್ರೆಸ್ ಅಧ್ಯಕ್ಷ ಉಳ್ಳಿ ದರ್ಶನ್‌ ಇದ್ದರು.

ತಲೆ ತಿರುಗಿ ಬಿದ್ದ ಸಿಬ್ಬಂದಿ: ವೈದ್ಯರಾದ ಜಿಲ್ಲಾಧಿಕಾರಿ

ಪುರಸಭೆ ವಿವಿಧ ವಿಭಾಗದ ಸಿಬ್ಬಂದಿ ಬಳಿ ಮಾಹಿತಿ ಪಡೆಯುತ್ತಿದ್ದ ಸಂದರ್ಭದಲ್ಲಿ ಕಂದಾಯ ವಿಭಾಗ ಸಿಬ್ಬಂದಿ ಮಧುಸೂದನ್‌ ಪಿಳ್ಳೆ ತಲೆ ತಿರುಗಿ ಬಿದ್ದರು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ. ಲೋಕೇಶ್‌ ಅವರು ಪಿಳ್ಳೆ ಅವರ ಕೈ ಹಿಡಿದು ನಾಡಿ ಮಿಡಿತವನ್ನು ಪರೀಕ್ಷಿಸಿ ತನಗೆ ನೀಡಿದ ಎಳನೀರನ್ನು ಕುಡಿಸಿದರು. ‘ಟೆನ್ಶನ್‌ ತೆಗೆದುಕೊಳ್ಳಬೇಡಿ ವಿಶ್ರಾಂತಿ ಪಡೆಯಿರಿ’ ಎಂದು ಸಲಹೆ ನೀಡಿದರು.

ಪ್ರತಿಕ್ರಿಯಿಸಿ (+)