ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

63 ಕಂದಾಯ ಗ್ರಾಮಕ್ಕಾಗಿ ಪ್ರಸ್ತಾವ

Last Updated 6 ಜುಲೈ 2017, 5:32 IST
ಅಕ್ಷರ ಗಾತ್ರ

ರಾಯಚೂರು: ಜಿಲ್ಲೆಯಲ್ಲಿ ಅನೇಕ ತಾಂಡಾ, ದೊಡ್ಡಿ ಹಾಗೂ ಹಟ್ಟಿಗಳು ದಾಖಲೆ ರಹಿತ ಪ್ರದೇಶಗಳಾಗಿ ಉಳಿದು ಸರ್ಕಾರಿ ಸೌಲಭ್ಯದಿಂದ ವಂಚಿತಗೊಂಡಿವೆ. ಈ ಬಗ್ಗೆ ಈಚೆಗೆ ಸಮೀಕ್ಷೆ ಕೈಗೊಂಡಿದ್ದ ಜಿಲ್ಲಾಡಳಿತ 63 ಜನವಸತಿ ಪ್ರದೇಶಗಳು ಕಂದಾಯ ಗ್ರಾಮ ಅರ್ಹತೆ ಹೊಂದಿವೆ ಎಂದು ಪಟ್ಟಿ ಸಿದ್ಧಪಡಿಸಿ ಕಂದಾಯ ಇಲಾಖೆಗೆ ಪ್ರಸ್ತಾವ
ಸಲ್ಲಿಸಿದೆ.

ಜಿಲ್ಲಾಡಳಿತದಿಂದ ಈ ಹಿಂದೆ ಕೈಗೊಂಡಿದ್ದ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ತಾಂಡಾ, ದೊಡ್ಡಿ ಹಾಗೂ ಹಟ್ಟಿಗಳು ಸೇರಿದಂತೆ 139 ದಾಖಲೆ ರಹಿತ ಜನ ವಸತಿ ಪ್ರದೇಶಗಳಿವೆ ಎಂದು ಗುರುತಿಸಲಾಗಿತ್ತು. ಜಿಲ್ಲಾಡಳಿತದ ಪ್ರಸ್ತಾವನೆ ಮೇರೆಗೆ ಕಂದಾಯ ಇಲಾಖೆ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಮಾರ್ಪಡಿಸಲು ಕ್ರಮಕೈಗೊಂಡಿದೆ.

ಅರ್ಧಕ್ಕಿಂತ ಅಧಿಕ ಜನವಸತಿ ಪ್ರದೇಶಗಳು ಸರ್ಕಾರ ನಿಗದಿಪಡಿಸಿರುವ ಮಾನದಂಡಗಳ ಪ್ರಕಾರ ಕಂದಾಯ ಗ್ರಾಮಗಳಾಗುವ ಅರ್ಹತೆ ಹೊಂದಿಲ್ಲ. ಇದರಿಂದಾಗಿ ಅರ್ಹತೆಯಿಲ್ಲದ ಜನವಸತಿ ಪ್ರದೇಶಗಳ ಅಭಿವೃದ್ಧಿಯು ತೊಡಕಿನ ವಿಷಯವಾಗಿ ಪರಿಣಮಿಸಿದೆ.

ಕಂದಾಯ ಗ್ರಾಮಗಳಾಗಿ ಪರಿವರ್ತನೆ ಹೊಂದುವ ಪ್ರದೇಶಗಳಿಗೆ ಮಾತ್ರ ಅಭಿವೃದ್ಧಿಗಾಗಿ ಸರ್ಕಾರದಿಂದ ನೇರವಾಗಿ ಅನುದಾನ ದೊರೆಯಲಿದೆ. ವಿವಿಧ ಯೋಜನೆಗಳಡಿ ಸೌಲಭ್ಯಗಳು ಪಡೆಯಲು ಅನುಕೂಲವಾಗಲಿದೆ.

ಆದರೆ, ಸರ್ಕಾರದ ಮಾನದಂಡಗಳ ಪ್ರಕಾರ ಅರ್ಹತೆಯಿಲ್ಲದ ನೂರಾರು ಪ್ರದೇಶಗಳಲ್ಲಿರುವ ಜನರು ಎದುರಿಸುತ್ತಿರುವ ಸಮಸ್ಯೆಗೆ ಪರಿಹಾರ ಇಲ್ಲದಂತಾಗುತ್ತಿದೆ. ಈ ಪ್ರದೇಶಗಳಲ್ಲಿ ಕನಿಷ್ಠ ಮೂಲಸೌಕರ್ಯಗಳು ಕೂಡ ಇಲ್ಲವಾಗಿವೆ. ಸಾರಿಗೆ ಸೌಕರ್ಯ ಹೊಂದಲು ರಸ್ತೆಯೂ ಇಲ್ಲ. ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿರುವ ಜನರ ಜೀವನಮಟ್ಟ ಸುಧಾರಣೆ, ಉತ್ತಮ ಆರೋಗ್ಯ, ಶೈಕ್ಷಣಿಕ ಹಾಗೂ ಆರ್ಥಿಕ ಅಭಿವೃದ್ಧಿಯಾಗುವುದು ಅಸಾಧ್ಯ.

ಸಮೀಕ್ಷೆಗೆ ಸೂಚನೆ: ಈಚೆಗೆ ಜಿಲ್ಲೆಗೆ ಭೇಟಿ ನೀಡಿದ್ದ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಕಲ್ಯಾಣ ಸಮಿತಿ ಅಧ್ಯಕ್ಷ ಶಿವಮೂರ್ತಿ ಅವರು ಪ್ರಗತಿ ಪರಿಶೀಲನಾ ಸಭೆ ನಡೆಸಿ ಜಿಲ್ಲೆಯ ದಾಖಲೆ ರಹಿತ ಜನವಸತಿ ಪ್ರದೇಶಗಳ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ.

‘ಜಿಲ್ಲೆಯಲ್ಲಿ ಅಂದಾಜು 200 ಜನವಸತಿ ಪ್ರದೇಶಗಳಿವೆ ಎನ್ನುವ ವರದಿ ಇದೆ. ಜಿಲ್ಲಾಡಳಿತದಿಂದ ಸಂಪೂರ್ಣವಾಗಿ ಸಮೀಕ್ಷೆ ನಡೆಸಿ 50 ಕುಟುಂಬಗಳು ಅಥವಾ 150 ಜನಸಂಖ್ಯೆ ಹೊಂದಿರುವ ಜನವಸತಿ ಪ್ರದೇಶಗಳ ಪಟ್ಟಿ ಸಂಗ್ರಹಿಸಲು ಸೂಚಿಸಲಾಗಿದೆ’ ಎಂದಿದ್ದರು.

‘ಕರ್ನಾಟಕ ಭೂಸುಧಾರಣೆ ತಿದ್ದುಪಡಿ ಮಸೂದೆ ಪ್ರಕಾರ ಖಾಸಗಿ ಜಾಗ, ಅರಣ್ಯ ಪ್ರದೇಶ, ಕಂದಾಯ ಭೂಮಿಗಳಲ್ಲಿ ವಾಸಿಸುವ ಜನರಿಗೆ ನಿವೇಶನ ಹಕ್ಕು ದೊರಕಿಸಿ ವಾಸಿಸುವನೆ ನೆಲೆದೊಡೆಯನನ್ನಾಗಿ ಮಾಡಲಾತ್ತದೆ. ಈ ಮಸೂದೆಗೆ ಸರ್ಕಾರದ ಅನುಮೋದನೆ ಪಡೆಯಲಾಗಿದ್ದು, ರಾಷ್ಟ್ರಪತಿ ಅಂಕಿತ ಪಡೆಯಲು ಪ್ರಯತ್ನಿಸಲಾಗುವುದು’ ಎಂದು ಹೇಳಿದ್ದರು. ಜಿಲ್ಲಾಡಳಿತ ಕಳುಹಿಸಿದ ಪ್ರಸ್ತಾವನೆಯಿಂದ ಹೊರಗೊಳಿಸಿದ ಜಿಲ್ಲೆಯ ಜನವಸತಿ ಪ್ರದೇಶಗಳು ಮೂಲ ಸೌಲಭ್ಯ ಹೊಂದುವುದಕ್ಕೆ ಈ ಮಸೂದೆ ಆಶಾಕಿರಣವಾಗಿದೆ.

ಅಂತಿಮ ಅಧಿಸೂಚನೆ ಹಂತದಲ್ಲಿ
ಜಿಲ್ಲೆಯಲ್ಲಿನ ತಾಂಡಾ, ದೊಡ್ಡಿ, ಹಟ್ಟಿಗಳು ಸೇರಿದಂತೆ ಒಟ್ಟು 63 ದಾಖಲೆ ರಹಿತ ಜನವಸತಿ ಪ್ರದೇಶಗಳು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಸಲ್ಲಿಸಿರುವ ಪ್ರಸ್ತಾವನೆ ಅಂತಿಮ ಅಧಿಸೂಚನೆ ಹಂತದಲ್ಲಿದೆ. ಕಂದಾಯ ಇಲಾಖೆಯ ಅಧಿಸೂಚನೆಯಾದರೆ 63 ಜನವಸತಿ ಪ್ರದೇಶಗಳಿಗೆ ಕಂದಾಯ ಗ್ರಾಮಗಳ ಸೌಕರ್ಯ ಕಲ್ಪಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್‌ ಹೇಳಿದರು.

ಸರ್ಕಾರದ ಮಾನದಂಡ ಪ್ರಕಾರ ಅರ್ಹತೆ ಹೊಂದಿರುವ 64 ದಾಖಲೆ ರಹಿತ ಜನವಸತಿ ಪ್ರದೇಶಗಳಲ್ಲಿ 63 ಪ್ರದೇಶಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಲು ಕೋರಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಆದರೆ, ನಗರ ಪ್ರದೇಶ ವ್ಯಾಪ್ತಿಯ ಗ್ರಾಮಗಳಿಗೆ ಅನ್ವಯಿಸಲ್ಲ.

ಸಮೀಕ್ಷೆ ವಿವರ
139 ಹಿಂದಿನ ಸಮೀಕ್ಷೆಯಂತೆ ದಾಖಲೆ ರಹಿತ  ಜನವಸತಿ ಪ್ರದೇಶಗಳು

200 ದಾಖಲೆ ರಹಿತ ಪ್ರದೇಶಗಳ ಈಚೆಗೆ ಮಾಡಿರುವ ಅಂದಾಜು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT