ಭಾನುವಾರ, ಡಿಸೆಂಬರ್ 8, 2019
21 °C

₹2.50 ಲಕ್ಷ ಖರ್ಚಾದರೂ ಸಿಗದ ನ್ಯಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

₹2.50 ಲಕ್ಷ ಖರ್ಚಾದರೂ ಸಿಗದ ನ್ಯಾಯ

ಸೇಡಂ: ‘ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ಹಂಗನಳ್ಳಿ ಮತ್ತು ನೃಪತುಂಗ ನಗರದ ರೈತರು ನ್ಯಾಯ ದೊರಕಿಸಿಕೊಡುವಂತೆ ಕುಳಿತಿರುವ ಅನಿರ್ಧಿಷ್ಟಾವಧಿ ಧರಣಿಯ  ವೆಚ್ಚ ಅಂದಾಜು ₹2.50 ಲಕ್ಷ ಖರ್ಚಾದರೂ ಸಹ ಸರ್ಕಾರದಿಂದ ಯಾವುದೇ ನ್ಯಾಯ ಇದುವರೆಗೂ ಸಿಕ್ಕಿಲ್ಲ’ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.

ಧರಣಿ ಕುಳಿತವರಲ್ಲಿ ಸರ್ಕಾರದ ವಿರುದ್ಧ ಬೇಸರದ ನುಡಿಗಳು ವ್ಯಕ್ತವಾಗುತ್ತಿದ್ದು, ಅನಿರ್ಧಿಷ್ಟಾವಧಿ ಧರಣಿ ದಿನಗಳೆದಂತೆ ಬದಲಾವಣೆ ಪಡೆದುಕೊಳ್ಳುತ್ತಿದೆ. ಧರಣಿ ಕುಳಿತ ಆರಂಭದಿಂದ ಇಲ್ಲಿಯವರೆಗೆ ರೈತರಿಂದ ಸುಮಾರು ₹2.50 ಲಕ್ಷಕ್ಕಿಂತಲೂ ಅಧಿಕ ಖರ್ಚಾಗಿದೆ ಎನ್ನಲಾಗುತ್ತಿದ್ದು, ದೈನಿಕ ಖರ್ಚಿನ ವೆಚ್ಚಗಳು ದಿನದಿನಕ್ಕೆ ಹೆಚ್ಚುತ್ತಿದೆ.

‘ವಿವಿಧ ಕಾಗದ ಪತ್ರಗಳ ಸಂಗ್ರಹಕ್ಕಾಗಿ ಕಚೇರಿಗಳಿಗೆ ಅಲೆದಾಟಕ್ಕೆ ಸುಮಾರು 20 ಸಾವಿರ ಖರ್ಚಾಗಿದೆ. ಪಡೆದಿರುವ ಕಾಗದಪತ್ರಗಳನ್ನು ಜೆರಾಕ್ಸ್ ಪ್ರತಿಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಸಲ್ಲಿಸುವುದಕ್ಕೆ ಸುಮಾರು ₹10 ಸಾವಿರ ಖರ್ಚಾಗಿದೆ. ಅಲ್ಲದೆ, ಹಲವು ಬಾರಿ ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ಸುಮಾರು ₹20 ಸಾವಿರ ಖರ್ಚಾಗಿದೆ. ಕಾನೂನು ಹಾಗೂ ಕಂದಾಯ ಖಾತೆ ಸಚಿವರ ಜೊತೆ ಚರ್ಚಿಸಿದಾಗ ಬಗೆಹರಿಸುವ ಭರವಸೆಯನ್ನು ನೀಡಿದ್ದರು. ಆದರೆ, ಇಲ್ಲಿಯವರೆಗೆ ಯಾವುದೇ ರೀತಿಯಲ್ಲಿ ಪ್ರತಿಕ್ರಿಯೆ ಬಂದಿಲ್ಲ’ ಎಂದು ರೈತರು ದೂರುತ್ತಾರೆ.

‘ಕೇವಲ ಒಂದು ಶಾಮಿಯಾನದಲ್ಲಿ ಆರಂಭಗೊಂಡ ನಮ್ಮ ಅನಿರ್ಧಿಷ್ಟಾವಧಿ ಧರಣಿ ದಿನಗಳೆದಂತೆ ವಿವಿಧ ಹಂತಗಳನ್ನು ಪಡೆದುಕೊಳ್ಳುತ್ತಾ ಕಾಯಂ ಆಗಿ ಟೆಂಟ್‌ನಲ್ಲಿ ಮಲಗುವ ಪರಿಸ್ಥಿತಿ ಬಂದೊದಗಿದೆ. ದಿನಕ್ಕೆ ₹800 ಗಳನ್ನು ಮೂರು ತಿಂಗಳ ಕಾಲ ಸುಮಾರು ₹72 ಸಾವಿರ ಬಾಡಿಗೆ ಹಣವನ್ನು ನೀಡಿದ್ದೇವೆ. ಮೂರು ತಿಂಗಳ ನಂತರ ಅದೇ ಶಾಮಿಯಾನವನ್ನು ₹12 ಸಾವಿರ ಕೊಟ್ಟು ಖರೀದಿ ಮಾಡಿದ್ದೇವೆ’ ಎಂದು ಧರಣಿ ನಿರತ ಚಂದ್ರಶೇಖರ ಕಟ್ಟಿಮನಿ ವಿವರಿಸುತ್ತಾರೆ.

‘ಶಾಮಿಯಾನದ ಹಾಕಿದ ಸ್ಥಳದಲ್ಲಿ ನಾಲ್ಕು ಮಂಚಗಳನ್ನು ಹಾಕಲಾಗಿತ್ತು.  ನಾಲ್ಕು ಮಂಚಗಳ ಪ್ರತಿದಿನ ಬಾಡಿಗೆ ₹400ರಂತೆ ಮೂರು ತಿಂಗಳವರೆಗೆ ಅಂದರೆ ₹36 ಸಾವಿರ ನೀಡುತ್ತಾ ಬಂದಿದ್ದೇವೆ. ನಂತರ ಎಲ್ಲಾ ಮಂಚಗಳನ್ನು ₹3,600 ಕೊಟ್ಟು ಖರೀದಿಸಿದ್ದೇವೆ. ಅಲ್ಲದೆ, ತಾಡಪತ್ರಿ ಖರೀದಿಗಾಗಿ ₹1,500 ಸೇರಿದಂತೆ ಸುಮಾರು ₹20 ಸಾವಿರ ಖರ್ಚಾಗಿವೆ. ಕಳೆದ ವರ್ಷ ಸೇಡಂ ಬಂದ್‌ ಮಾಡಿದಾಗ ₹20 ಸಾವಿರ ಖರ್ಚಾಗಿತ್ತು. ಸೇಡಂನ ಪ್ರತಿಯೊಬ್ಬ ನಾಗರಿಕರು ನಮ್ಮ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ್ದು, ನಮಗೆ ಸಂತಸ ತಂದಿದೆ’ ಎಂದು ಧರಣಿನಿರತ ಅಶೋಕ ಶೀಲವಂತ ಹೇಳುತ್ತಾರೆ.

‘ಇಲ್ಲಿಯವರೆಗೆ ಸುಮಾರು ₹2.50 ಲಕ್ಷ ಖರ್ಚಾದರೂ ಸಹ ನಮಗೆ ನ್ಯಾಯ ಸಿಕ್ಕಿಲ್ಲ. ಪ್ರತಿದಿನ ವ್ಯಕ್ತಿಗೆ ಏನಿಲ್ಲವೆಂದರೂ ₹150 ವೆಚ್ಚ ತಗುಲುತ್ತಿದೆ. ಹಣ ಖರ್ಚಾದರೂ ಸಹ ನ್ಯಾಯ ಸಿಗುತ್ತಿಲ್ಲ. ಮುಂದಿನ ದಿನಗಳಲ್ಲಿ ದಿನದ ಖರ್ಚನ್ನು ಭರಿಸುವುದಾದರೂ ಹೇಗೆ ಎಂಬುದು  ಕಾಡುತ್ತಿದೆ’ ಎಂದು ರೈತರು ದುಃಖ ತೋಡಿಕೊಂಡಿದ್ದಾರೆ.

ಪತ್ರಿಕೆಗಳ ಖರೀದಿಗೆ ₹20 ಸಾವಿರ ವೆಚ್ಚ !

ಸೇಡಂ : ಪಟ್ಟಣದ ಉಪವಿಭಾಗಾಧಿಕಾರಿ ಕಚೇರಿ ಎದುರು ಅನಿರ್ಧಿಷ್ಟಾವಧಿ ಧರಣಿ ಕುಳಿತಿರುವ ರೈತರು ದಿನವೂ ಪತ್ರಿಕೆಗಳ ಖರೀದಿಗಾಗಿಯೇ ಇದುವರೆಗೆ ಸುಮಾರು ₹20 ಸಾವಿರಕ್ಕೂ ಅಧಿಕ ಹಣವನ್ನು ಖರ್ಚು ಮಾಡಿದ್ದಾರೆ.

ಕನ್ನಡ, ಉರ್ದು ಹಾಗೂ ಇಂಗ್ಲಿಷ್ ಪತ್ರಿಕೆಗಗಳನ್ನು ಖರೀದಿ ಮಾಡುವ ರೈತರು ದಿನ ಯಾವ ಪತ್ರಿಕೆಗಳಲ್ಲಿ ನಮ್ಮ ಸುದ್ದಿ ಬಂದಿದೆ ಎಂದು ಗುರುತಿಸಿ ಅದನ್ನು ಕತ್ತರಿಸಿ ಸಂಗ್ರಹಿಸಿದ್ದಾರೆ. ಕನ್ನಡದ ಎಲ್ಲಾ ಪತ್ರಿಕೆಗಳನ್ನು ದಿನನಿತ್ಯ ಖರೀದಿ ಮಾಡುವ ರೈತರು, ಪತ್ರಿಕೆ ಓದುವುದನ್ನೆ ಹವ್ಯಾಸಿಯನ್ನಾಗಿ ಮಾಡಿಕೊಂಡಿದ್ದಾರೆ.

ಅಂಕಿ ಅಂಶಗಳು

₹20 ಸಾವಿರ –ಕಾಗದ ಪತ್ರಗಳ ಸಿದ್ಧಪಡಿಕೆ ಹಾಗೂ ಝರಾಕ್ಸ್

₹20 ಸಾವಿರ – ಹಲವು ಬಾರಿ ಸಂಘಟನೆಗಳ ಪದಾಧಿಗಳ ಜೊತೆ ರೈತರು ಬೆಂಗಳೂರಿಗೆ ಹೋಗಿದ್ದು

₹72ಸಾವಿರ – ಮೂರು ತಿಂಗಳ ಕಾಲ ಶಾಮಿಯಾನಕ್ಕೆ ನೀಡಿದ ಬಾಡಿಗೆ

₹12,600  ಮೂರು ತಿಂಗಳ ನಂತರ ಶಾಮಿಯಾನ ಖರೀದಿ

₹36ಸಾವಿರ ಮೂರು ತಿಂಗಳವರೆಗೆ ನಾಲ್ಕು ಮಂಚದ ಬಾಡಿಗೆ

₹3,600 ಮೂರು ತಿಂಗಳ ನಂತರ ಮಂಚದ ಖರೀದಿ

₹20ಸಾವಿರ ಸೇಡಂ ಬಂದ್ ಕರೆ ನೀಡಿದಾಗ ತಗುಲಿದ ವೆಚ್ಚ

₹1,500 ತಾಡಪತ್ರಿ ಖರೀದಿಗಾಗಿ

₹20ಸಾವಿರ ಇನ್ನಿತರ ಖರ್ಚು ವೆಚ್ಚ

* *  

ರಾಜಶ್ರೀ ಸಿಮೆಂಟ್ ಕಂಪೆನಿ ಭೂಮಿ ಖರೀದಿಯ ಸಮಯಲ್ಲಿ ರೈತರಿಗೆ ಅನ್ಯಾಯ ಮಾಡಿದೆ. ಆದ್ದರಿಂದ ನ್ಯಾಯ ಸಿಗುವವರೆಗೂ ಧರಣಿ ಕೈಬಿಡುವುದಿಲ್ಲ

ಅಶೋಕ ಶೀಲವಂತ,

ಧರಣಿ ನಿರತ

 

ಪ್ರತಿಕ್ರಿಯಿಸಿ (+)