ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನಧಿಕೃತ ವಹಿವಾಟಿಗೆ ವಿದಾಯದ ನಿರೀಕ್ಷೆ

Last Updated 6 ಜುಲೈ 2017, 6:21 IST
ಅಕ್ಷರ ಗಾತ್ರ

ವಿಜಯಪುರ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯವಸ್ಥೆ ಜುಲೈ 1ರಿಂದ ಜಾರಿಗೊಳ್ಳುತ್ತಿದ್ದಂತೆ, ಅನಧಿಕೃತ ವಹಿ ವಾಟುದಾರರಿಗೆ ಚಳಿ ಆರಂಭಗೊಂಡಿದೆ.
ಸೆಕೆಂಡ್ಸ್‌ ವಹಿವಾಟಿನಿಂದ ನಿತ್ಯ ಸಹಸ್ರ, ಸಹಸ್ರ ರೂಪಾಯಿಯನ್ನು ಲಾಭದ ರೂಪದಲ್ಲಿ ಕೊಳ್ಳೆ ಹೊಡೆಯು ತ್ತಿದ್ದ ಬಹುತೇಕ ವ್ಯಾಪಾರಿಗಳು, ಇನ್ಮುಂದೆ ಅನಿವಾರ್ಯವಾಗಿ ಜಿಎಸ್‌ಟಿ ವ್ಯವಸ್ಥೆಯಡಿ ಕಾರ್ಯ ನಿರ್ವಹಿಸಬೇಕಿದೆ. ನಿಗದಿತ ಮೊತ್ತದ ತೆರಿಗೆ ಪಾವತಿಸಲೇ ಬೇಕಿದೆ. ಇದು ಜಿಎಸ್‌ಟಿಯ ಪ್ರಭಾವ.

‘ಇದುವರೆಗೂ ಲಾಭಕೋರ ವ್ಯಾಪಾರಿಗಳು ತೆರಿಗೆ ಪಾವತಿಸುತ್ತಿರಲಿಲ್ಲ. ಗ್ರಾಹಕರ ಬಳಿ ತೆರಿಗೆ ಹೆಸರಿನಲ್ಲಿ ಸುಲಿಯುವುದನ್ನು ನಿಲ್ಲಿಸುತ್ತಿರಲಿಲ್ಲ. ವ್ಯಾಪಾರಿಯ ಲಾಭಕೋರತನ ಒಂದೆಡೆ ದೇಶಕ್ಕೆ ನಷ್ಟವುಂಟು ಮಾಡುತ್ತಿದ್ದರೆ, ಇನ್ನೊಂದೆಡೆ ಗ್ರಾಹಕನ ಜೇಬಿಗೆ ಭಾರಿ ಕತ್ತರಿ ಹಾಕುತ್ತಿತ್ತು.

ಇದೀಗ ಜಾರಿಗೊಂಡಿರುವ ಜಿಎಸ್‌ಟಿ ತೆರಿಗೆ ಪದ್ಧತಿಯಲ್ಲಿ ವಂಚನೆಯ ಅವಕಾಶಗಳು ಬಹಳಷ್ಟು ಕ್ಷೀಣಿಸಿವೆ. ವ್ಯವಸ್ಥೆಯಡಿ ಏನಾದರೂ ಲೋಪ ಗಮನಕ್ಕೆ ಬರುತ್ತಿದ್ದಂತೆ, ಸರಿಪಡಿಸಿ ಸೋರಿಕೆ ತಡೆಗಟ್ಟಲು ವಾಣಿಜ್ಯ ತೆರಿಗೆ ಇಲಾಖೆ ಕಠಿಣ ಕ್ರಮ ತೆಗೆದುಕೊಳ್ಳಲಿದೆ’ ಎಂದು ಹೆಸರು ಬಹಿರಂಗಪಡಿಸಲಿಚ್ಚಿಸದ ಅಧಿಕಾರಿ ಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

4% ತೆರಿಗೆ ಹೆಚ್ಚಳ: ‘ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ಈ ಹಿಂದೆ 14% ವ್ಯಾಟ್‌ ಇತ್ತು. ಇದರ ಜತೆಗೆ ಎಕ್ಸೈಸ್‌ ಡ್ಯೂಟಿ... ಇನ್ನಿತರೆ ಸುಂಕ ಸೇರಿ ಒಟ್ಟು 24% ತೆರಿಗೆ ಬೀಳುತ್ತಿತ್ತು. ಇದೀಗ ಜಿಎಸ್‌ಟಿಯಡಿ 28% ಗರಿಷ್ಠ ತೆರಿಗೆ ನಿಗದಿಯಾಗಿದೆ. ಹಿಂದಿದ್ದ ತೆರಿಗೆಗೂ ಈಗಿನ ತೆರಿಗೆಗೂ 4% ಹೆಚ್ಚಳವಾಗಿದ್ದು, ಆರಂಭದ ದಿನ ಗಳಲ್ಲಿ ಉದ್ಯಮದ ಮೇಲೆ ಕೊಂಚ ಹೊಡೆತ ಬೀಳಲಿದೆ. ವಹಿವಾಟಿಗೂ ಹಿನ್ನಡೆಯಾಗಲಿದೆ’ ಎಂದು ವಿಜಯ ಪುರದ ಭಾರತ್ ಎಲೆಕ್ಟ್ರಾನಿಕ್ಸ್‌ ಅಂಗಡಿ ಮಾಲೀಕ ವಿಶಾಲ್‌ ಜೈನ್‌ ಹೇಳಿದರು.

‘ಬೃಹತ್‌ ಕಂಪೆನಿಗಳು ಸಹ ನೂತನ ವ್ಯವಸ್ಥೆಗೆ ಹೊಂದಿಕೊಳ್ಳಲಿವೆ. ಇದೀಗ ಆಷಾಢ ಮಾಸವಿದೆ. ವಹಿವಾಟು ಕೊಂಚ ಡಲ್ಲು. ಶ್ರಾವಣ ಆರಂಭದ ಬೆನ್ನಿಗೆ ಸಾಲು ಸಾಲು ಹಬ್ಬಗಳು ಬರಲಿವೆ. ಗ್ರಾಹಕರನ್ನು ಸೆಳೆಯಲು ಜಿಎಸ್‌ಟಿಯಡಿ ಹೆಚ್ಚಿರುವ ತೆರಿಗೆ ಮೊತ್ತವನ್ನು ಕಂಪೆನಿಗಳೇ ಭರಿಸಲು ಮುಂದಾಗುತ್ತವೆ.

ತಾವು ಪ್ರತಿ ವರ್ಷ ಗಳಿಸುವ ಲಾಂಭಾಂಶದ ಒಂದಂಶವನ್ನು ಗ್ರಾಹಕ ವಲಯಕ್ಕೆ ಕೊಡುಗೆ ನೀಡಲು ಹಲ ರಿಯಾಯಿತಿ ಘೋಷಿಸುವುದರಿಂದ, ಗ್ರಾಹಕ ವಲಯವೂ ಸಹ ಶ್ರಾವಣ ಮಾಸ ದಿಂದ ಸಹಜ ಖರೀದಿಗೆ ಇಳಿಯುತ್ತದೆ.

ಅಲ್ಲಿಯವರೆಗೂ ಅಗತ್ಯವಿದ್ದವರಷ್ಟೇ ಬಂದು ಎಲೆಕ್ಟ್ರಾನಿಕ್ಸ್‌ ವಸ್ತುಗಳನ್ನು ಖರೀದಿಸುತ್ತಾರೆ. ನಾವೂ ಸಹ ಈ ಹಿಂದಿನ ಎಂಆರ್‌ಪಿ ಬೆಲೆಗೆ ಮಾರಾಟ ನಡೆಸುತ್ತೇವೆ. ಇದರಿಂದ ನಮಗೂ ನಷ್ಟ ವಾಗಲ್ಲ. ಗ್ರಾಹಕರಿಗೂ ಹೆಚ್ಚಿನ ಹೊರೆ ಯಾಗಲ್ಲ’ ಎಂದು ಜೈನ್‌ ತಿಳಿಸಿದರು.

ಬೈಕ್‌ ಬೆಲೆಯಲ್ಲಿ ಇಳಿಕೆ: ‘ಮೇ–ಜೂನ್‌ನಲ್ಲಿ ಜಿಎಸ್‌ಟಿ ತೆರಿಗೆ ಏರಿಳಿತದ ಚರ್ಚೆಯ ನಡುವೆಯೂ ವಹಿವಾಟು ಸಹಜವಾಗಿ ನಡೆದಿದೆ. ನಮ್ಮ ಶೋ ರೂಂ ನಿಂದ ಮಾಸಿಕ ಸರಾಸರಿ 650ರಿಂದ 700 ಬೈಕ್‌ಗಳು ಮಾರಾಟವಾಗು ತ್ತಿದ್ದವು. ಆದರೆ ಜೂನ್‌ನಲ್ಲಿ 777 ದ್ವಿಚಕ್ರ ವಾಹನ ಮಾರಾಟವಾಗಿವೆ.

ಜಿಎಸ್‌ಟಿ ಜಿಜ್ಞಾಸೆ ಗ್ರಾಹಕರಿಗೆ ಯಾವುದೇ ರೀತಿಯ ಪರಿಣಾಮ ಬೀರಿಲ್ಲ’ ಎಂದು ಪಾಟೀಲ ಹೋಂಡಾ ಶೋ ರೂಂನ ಸಿಬ್ಬಂದಿ ಸಂಗನಗೌಡ ಬಿರಾದಾರ ತಿಳಿಸಿದರು.
‘ಜುಲೈ 1ರಿಂದ ತೆರಿಗೆ ಇಳಿಕೆಯಾ ಗಿದೆ. ಇದರ ಬೆನ್ನಿಗೆ ಪೆಟ್ರೋಲ್‌ ಬೆಲೆಯೂ ಇಳಿಕೆಯಾಗಿದೆ.

ಆಷಾಢ ಮಾಸವಾದರೂ ಖರೀದಿಸುವವರ ಸಂಖ್ಯೆ ಯಥಾಸ್ಥಿತಿಯಲ್ಲಿದೆ. ಶ್ರಾವಣದಲ್ಲಿ ಸಾಲು ಸಾಲು ಹಬ್ಬಗಳು ಬರಲಿವೆ. ಈ ಸಂದರ್ಭ ಬೈಕ್‌ ಕಂಪೆನಿಗಳು ಸಹ ದರ ಕಡಿತ ಮಾಡುವ ಮೂಲಕ ಗ್ರಾಹಕರನ್ನು ತನ್ನತ್ತ ಆಕರ್ಷಿಸಲಿವೆ. ವಹಿವಾಟು ಪ್ರಮಾಣವೂ ಹೆಚ್ಚಾಗಲಿದೆ’ ಎಂದು ಅವರು ಹೇಳಿದರು. 

* * 

ಜಿಎಸ್‌ಟಿ ವ್ಯಾಪ್ತಿಗೆ ಎಲ್ಲ ವರ್ತಕರು ಬರಲೇಬೇಕಿದೆ. ಚಿಲ್ಲರೆ ವರ್ತಕರು ನೂತನ ಪದ್ಧತಿ ಅಳ ವಡಿಸಿಕೊಳ್ಳದಿದ್ದರೆ, ಹೋಲ್‌ ಸೇಲ್‌ ನಲ್ಲಿ ಸರಕು ಸಿಗುವುದು ಕಷ್ಟವಾಗಲಿದೆ
ಕೆ.ಪ್ರಕಾಶ
ಉಪ ಆಯುಕ್ತ, ವಾಣಿಜ್ಯ ತೆರಿಗೆ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT