ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯಲ್ಲಿ 33 ಮದ್ಯದಂಗಡಿಗಳಿಗೆ ಬೀಗ

Last Updated 6 ಜುಲೈ 2017, 6:27 IST
ಅಕ್ಷರ ಗಾತ್ರ

ಗದಗ: ಸುಪ್ರೀಂಕೋರ್ಟ್‌ ಆದೇಶದ ಅನ್ವಯ ಜಿಲ್ಲೆಯ 134 ಮದ್ಯದಂಗಡಿಗಳ ಪೈಕಿ ಹೆದ್ದಾರಿಗೆ ಹೊಂದಿಕೊಂಡು 500 ಮೀಟರ್‌ ವ್ಯಾಪ್ತಿಯೊಳಗಿದ್ದ 33 ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 220 ಮೀಟರ್‌ ವ್ಯಾಪ್ತಿಯೊಳಗಿದ್ದ 10 ಮದ್ಯದಂಗಡಿಗಳು ಬಾಗಿಲು ಮುಚ್ಚಿವೆ. 76 ಮದ್ಯದಂಗಡಿಗಳ ಮಾಲೀಕರು ಪರವಾನಗಿ ನವೀಕರಣ ಮಾಡಿಕೊಂಡಿದ್ದಾರೆ.

ಗದಗ–ಬೆಟಗೇರಿ ಅವಳಿ ನಗರದ ವ್ಯಾಪ್ತಿಯಲ್ಲಿ 52 ಮದ್ಯದಂಗಡಿಗಳಿವೆ. ಇದರಲ್ಲಿ ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡು 500 ಮೀಟರ್‌ ವ್ಯಾಪ್ತಿಯೊಳಗಿದ್ದ 17 ಮದ್ಯದಂಗಡಿಗಳು ಬಾಗಿಲು ಮುಚ್ಚಿವೆ. ನಗರದೊಳಗೆ ಹಾದು ಹೋಗುವ ರಾಜ್ಯ ಹೆದ್ದಾರಿಗಳನ್ನು ಸರ್ಕಾರ ಡಿನೋಟಿಫೈ ಮಾಡಿದ್ದರಿಂದ ಗದಗ ನಗರದೊಳಗಿನ 25ಕ್ಕೂ ಹೆಚ್ಚು ಮದ್ಯದಂಗಡಿಗಳಿಗೆ ಯಾವುದೇ ಆತಂಕ ಎದುರಾಗಿಲ್ಲ. ಇಲ್ಲಿ ಎಂದಿನಂತೆ ಗ್ರಾಹಕರ ದಟ್ಟಣೆ ಮುಂದುವರಿದಿದೆ. ನಗರದ ಹೊಸ ಬಸ್‌ ನಿಲ್ದಾಣದ ಸಮೀಪದಲ್ಲಿದ್ದ ಶಿವಾನಿ ಇನ್‌ ಮತ್ತು ಮೌರ್ಯ ಬಾರ್‌ ಗಳು ಬಾಗಿಲು ಮುಚ್ಚಿವೆ.

ನರಗುಂದ ಪಟ್ಟಣದ ಮೂಲಕ ರಾಷ್ಟ್ರೀಯ ಹೆದ್ದಾರಿ 218 ಹಾದು ಹೋಗಿದ್ದು, ಇದರಿಂದ 500 ಮೀಟರ್‌ ಅಂತರದೊಳಗಿದ್ದ 15 ಮದ್ಯದಂಗಡಿಗಳನ್ನು ಬಂದ್‌ ಮಾಡಲಾಗಿದೆ. ಪರ ವಾನಗಿ ನವೀಕರಣಗೊಳ್ಳದ ಕಾರಣಕ್ಕೆ ಇನ್ನುಳಿದ 2 ಮದ್ಯದಂಗಡಿಗಳೂ ಬಂದ್‌ ಆಗಿದ್ದು, ಸದ್ಯ ನರಗುಂದ ಪಟ್ಟಣ ವ್ಯಾಪ್ತಿ ಯಲ್ಲಿ ಎಲ್ಲ ಮದ್ಯದಂಗಡಿಗಳು ಬಾಗಿಲು ಮುಚ್ಚಿದಂತಾಗಿವೆ.

‘ಜಿಲ್ಲೆಯಲ್ಲಿ ಎಂ.ಎಸ್‌.ಐ.ಎಲ್‌ ಸೇರಿ ಒಟ್ಟು 134 ಮದ್ಯದಂಗಡಿಗಳಿವೆ. ಇದ ರಲ್ಲಿ ಹೆದ್ದಾರಿಗೆ ಹೊಂದಿಕೊಂಡ 500 ಮೀ ವ್ಯಾಪ್ತಿಯೊಳಗಿದ್ದ ಅಂಗಡಿಗಳನ್ನು ತೆರವುಗೊಳಿಸುವಂತೆ ಅಬಕಾರಿ ಇಲಾಖೆ ಏಪ್ರಿಲ್‌ನಲ್ಲೇ ನೊಟೀಸ್‌ ನೀಡಿತ್ತು. ಆದರೆ, ಬಹುತೇಕ ಮಾಲೀಕರು ಜೂನ್‌ 30ರ ವರೆಗೆ ಅದನ್ನು ಪಾಲಿಸಿರಲಿಲ್ಲ. ಜೂನ್‌ 30ರ ಮಧ್ಯರಾತ್ರಿಯೇ ಸಿಬ್ಬಂದಿ ಸ್ಥಳಕ್ಕೆ ತೆರಳಿ, ಸ್ಥಳಾಂತರವಾಗದ  ಮದ್ಯದಂಗಡಿ ಗಳ ಬಾಗಿಲು ಮುಚ್ಚಿಸಿದ್ದಾರೆ. ಬಂದ್‌ ಆಗಿರುವ ಬಾರ್‌ಗಳು ಬಾಗಿಲು ತೆರೆಯ ದಂತೆ ಇಲಾಖೆ ನಿಗಾ ವಹಿಸಿದೆ’ ಎಂದು ಅಬಕಾರಿ ಇಲಾಖೆ ಅಧಿಕಾರಿ  ಶ್ರೀನಾಥ್‌ ಮಾಹಿತಿ ನೀಡಿದರು. 

‘ಪಟ್ಟಣ ಹಾಗೂ ನಗರದೊಳಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಡಿನೋಟಿಫೈ ಮಾಡುವಂತೆ ರಾಜ್ಯದ ಸರ್ಕಾರ ಮಾಡಿರುವ ಮನವಿಗೆ ಕೇಂದ್ರ ಸ್ಪಂದಿಸಬಹುದು, ಅನುಮತಿ ಲಭಿಸಿದರೆ ಶೀಘ್ರದಲ್ಲೇ ಮತ್ತೆ ಬಾಗಿಲು ತೆರೆಯುತ್ತೇವೆ. ಹೀಗಾಗಿ, ಬಾರ್‌ನಲ್ಲಿ ಕೆಲಸ ಮಾಡುವ ಹುಡುಗರಿಗೆ ತಾತ್ಕಾಲಿಕ ರಜೆ ನೀಡಿ ಊರಿಗೆ ಕಳುಹಿಸಲಾಗಿದೆ. ಕೆಲವರಿಗೆ ಇಲ್ಲೇ ಉಳಿಯಲು ವ್ಯವಸ್ಥೆ ಮಾಡಲಾಗಿದೆ’ ಎಂದು ರಾಷ್ಟ್ರೀಯ ಹೆದ್ದಾರಿ 63ಕ್ಕೆ ಹೊಂದಿಕೊಂಡ ನಗರದ ಮುಳಗುಂದ ನಾಕಾ ಸಮೀಪದ ಬಾರ್‌ ಮಾಲೀಕರೊಬ್ಬರು ತಿಳಿಸಿದರು.

‘ಸದ್ಯ ಒಂದು ವಾರ  ವೇತನ ಸಹಿತ ರಜೆ ಕೊಟ್ಟಿದ್ದಾರೆ. ಊರಿಗೆ ಬೇಕಿದ್ದರೆ ಹೋಗಿ ಬನ್ನಿ ಎಂದಿದ್ದಾರೆ. ಕೆಲಸ ಕಳೆದುಕೊಳ್ಳುವ ಆತಂಕ ಇದೆ. ಹೀಗಾಗಿ ಊರಿಗೆ ಹೋಗಿಲ್ಲ, ನಗರದಲ್ಲೇ ಉಳಿದು ಕೊಂಡಿದ್ದೇನೆ’ ಎಂದು ನಗರದ ಬಾರ್‌ ನಲ್ಲಿ ಕೆಲಸ ಮಾಡುತ್ತಿದ್ದ ದಕ್ಷಿಣ ಕನ್ನಡದ ಚಿದಾನಂದ ಹೇಳಿದರು.

ಈಗಾಗಲೇ ಬಾಗಿಲು ಮುಚ್ಚಿರುವ ಮದ್ಯದಂಗಡಿಗಳಲ್ಲದೇ, 25 ಅಂಗಡಿಗಳು ಪರವಾನಗಿ ನವೀಕರಣ ಸಮಸ್ಯೆ ಎದುರಿಸುತ್ತಿವೆ. ಕೆಲವು ಬಾರ್‌ ಮಾಲೀ ಕರು  ಸರ್ಕಾರ, ನಗರದೊಳಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಯನ್ನು ಡಿನೋಟಿಫೈ ಮಾಡುತ್ತದೆ ಎನ್ನುವ ಆಶಾ ಭಾವನೆ ಹೊಂದಿದ್ದಾರೆ.

ಇನ್ನು ಕೆಲವರು ಈಗಾಗಲೇ 500 ಮೀ. ವ್ಯಾಪ್ತಿಗಿಂತ ಹೊರಗೆ ಸ್ಥಳಾಂತರ ಮಾಡಿಕೊಂಡು ಪರವಾನಗಿ ನವೀಕರಿಸಿಕೊಳ್ಳುವ ಕುರಿತು ಯೋಚಿಸುತ್ತಿದ್ದಾರೆ. ಜಿಲ್ಲೆಯಲ್ಲಿ ರೋಣ, ನರಗುಂದ, ಶಿರಹಟ್ಟಿ, ಮುಂಡರಗಿ, ಗಜೇಂದ್ರಗಡ, ಲಕ್ಷ್ಮೇಶ್ವರದ ಪಟ್ಟಣ ವ್ಯಾಪ್ತಿ 500 ಮೀ.ಗಿಂತ ಹೆಚ್ಚಿಲ್ಲ. ಇಲ್ಲಿಂದ ಸ್ಥಳಾಂತರಗೊಳ್ಳುವ ಮದ್ಯದ ಅಂಗಡಿಗಳು ನೇರವಾಗಿ ಜನವಸತಿ ಪ್ರದೇಶಗಳ ಮಧ್ಯಕ್ಕೆ ಹೋಗುತ್ತವೆ.

* * 

ಗದಗ ಮತ್ತು ನರಗುಂದದ  63 ಮತ್ತು 218  ರಾಷ್ಟ್ರೀಯ ಹೆದ್ದಾರಿ 500 ಮೀಟರ್‌ ವ್ಯಾಪ್ತಿಯಲ್ಲಿನ 33 ಮದ್ಯದಂಗಡಿಗಳನ್ನು ಬಂದ್‌ ಮಾಡಲಾಗಿದೆ
ಶ್ರೀನಾಥ್‌
ಅಬಕಾರಿ ಇಲಾಖೆ ಅಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT