ಶನಿವಾರ, ಡಿಸೆಂಬರ್ 14, 2019
25 °C

ವರ್ಷಧಾರೆ: ಕಂಗೊಳಿಸುತ್ತಿರುವ ಪಶ್ಚಿಮ ಘಟ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವರ್ಷಧಾರೆ: ಕಂಗೊಳಿಸುತ್ತಿರುವ ಪಶ್ಚಿಮ ಘಟ್ಟ

ಖಾನಾಪುರ: ತಾಲ್ಲೂಕಿನ ಪಶ್ಚಿಮ ಘಟ್ಟದ ಅರಣ್ಯಪ್ರದೇಶದಲ್ಲಿ ಸುರಿಯುತ್ತಿ ರುವ ಮಳೆಯಿಂದಾಗಿ ಕಣಕುಂಬಿ, ಚಿಗುಳೆ, ಮಾನ, ಸಡಾ, ಚಿಕಲೆ, ಅಮಟೆ, ಪಾರವಾಡ ಮತ್ತು ಸುತ್ತಲಿನ ಕಾಡಿನಲ್ಲಿ ಮಂಜು ಆವರಿಸಿ ಹೃನ್ಮನಗಳಿಗೆ ಮುದ ನೀಡುತ್ತಿದೆ.

ಆಗಾಗ ಬೀಸುವ ಜೋರಾದ ತಣ್ಣನೆಯ ಗಾಳಿ, ಕೆಲವೊಮ್ಮೆ ಸಣ್ಣ, ಕೆಲವೊಮ್ಮೆ ದಪ್ಪ ಹನಿಗಳಿಂದ ಉದುರುವ ಮಳೆ, ಕಣ್ಣು ಹಾಯಿಸಿದ ಲ್ಲೆಲ್ಲ ಗೋಚರಿಸುವ ಹಚ್ಚ ಹಸಿರಿನ ಬೆಟ್ಟಗಳು, ಈಗ ತಾನೆ ಚಿಗುರೊಡೆಯುತ್ತಿರುವ ಹುಲ್ಲು, ಭೂದೇವಿಗೆ ಹಸಿರು ಬಣ್ಣದ ಸೀರೆಯನ್ನು ಉಡಿಸಿದಂತೆ ಕಾಣುವ ಭತ್ತದ ಗದ್ದೆಗಳು ತಾಲ್ಲೂಕಿನ ಘಟ್ಟ ಪ್ರದೇಶ ನವವಧುವಿನ ಹಾಗೆ ಕಂಗೊಳಿಸುವಂತೆ ಮಾಡಿವೆ.

ಗೋವಾ ರಾಜಧಾನಿ ಪಣಜಿಯಿಂದ ಚೋರ್ಲಾ ಮಾರ್ಗವಾಗಿ, ಮೋಲೆಂ, ಲೋಂಡಾ ಮಾರ್ಗವಾಗಿ, ಅನಮೋಡ ಹೆಮ್ಮಡಗಾ ಮಾರ್ಗವಾಗಿ ಬೆಳಗಾವಿಯತ್ತ ಸಾಗುವ ಹೆದ್ದಾರಿಗಳ ಇಕ್ಕೆಲಗಳಲ್ಲಿ ಕಾಣುವ ನಿಸರ್ಗದತ್ತ ಸೌಂದರ್ಯ ನೋಡುಗರ ಕಣ್ಣಿಗೆ ಅಕ್ಷರಶಃ ಹಬ್ಬವಾದಂತಾಗಿದೆ.

ಈ ಮಾರ್ಗಗಳಲ್ಲಿ ನಿರ್ಮಾಣ ಗೊಂಡಿರುವ ಸಣ್ಣ ಪುಟ್ಟ ಜಲಪಾತಗಳು ಶುಭ್ರ ವರ್ಣದ ನೀರನ್ನು ಮೇಲಿನಿಂದ ಕೆಳಗೆ ಚಿಮ್ಮಿಸಿ ಸಂಭ್ರಮಿಸುವ ನೋಟ ಹಕ್ಕಿಗಳ ಮತ್ತು ಜುಳು ಜುಳು ನೀರಿನ ನಿನಾದ ವರ್ಣನಾತೀತ.

ವರ್ಷದ ಕೆಲವೇ ತಿಂಗಳುಗಳ ಕಾಲ ಕಾಣಸಿಗುವ ಈ ನಿಸರ್ಗದತ್ತ ಹಾಗೂ ನಯನಮನೋಹರ ದೃಶ್ಯಗಳನ್ನು ತಮ್ಮ ಕಣ್ಣುಗಳಲ್ಲಿ ತುಂಬಿಸಿಕೊಳ್ಳಲು ಚಾರಣಿ ಗರು ತಾಲ್ಲೂಕಿನ ಕಣಕುಂಬಿ ಅರಣ್ಯ ಪ್ರದೇಶದತ್ತ ದಾಪುಗಾಲು ಹಾಕುತ್ತಿದ್ದಾರೆ.

ಒಟ್ಟಾರೆ ಸೃಷ್ಟಿಯ ವಿಸ್ಮಯವನ್ನು ಅನುಭವಿಸಲು ಪ್ರವಾಸಿಗರು ಸಜ್ಜಾಗಿದ್ದು, ಪರಿಸರಪ್ರಿಯರನ್ನು ಕೈಬೀಸಿ ಕರೆಯುವ ಪಶ್ಚಿಮ ಘಟ್ಟದ ತಣ್ಣನೆಯ ವಾತಾವರಣ ದಣಿದ ಮೈಮನಗಳಿಗೆ ಮುದ ನೀಡುತ್ತಿರುವುದು ಸತ್ಯ.

 

ಪ್ರತಿಕ್ರಿಯಿಸಿ (+)