ಶನಿವಾರ, ಡಿಸೆಂಬರ್ 7, 2019
24 °C

ಹಳ್ಳಿಗೊಬ್ಬ ಪೊಲೀಸ್‌: ಬೀಟ್ ವ್ಯವಸ್ಥೆ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಳ್ಳಿಗೊಬ್ಬ ಪೊಲೀಸ್‌: ಬೀಟ್ ವ್ಯವಸ್ಥೆ ಆರಂಭ

ಅಜ್ಜಂಪುರ: ಪ್ರತಿ ಹಳ್ಳಿಗೊಬ್ಬ ಪೊಲೀಸ್ ಕಾನ್ಸ್‌ಟೆಬಲ್‌ ನಿಯೋಜಿಸುವ ಬೀಟ್ ಪೊಲೀಸ್ ವ್ಯವಸ್ಥೆಯನ್ನು ದೇಶದಲ್ಲಿಯೇ ಪ್ರಥಮ ಬಾರಿಗೆ ರಾಜ್ಯದಲ್ಲಿ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಹೇಳಿದರು. 

ಪಟ್ಟಣ ಸಮೀಪ ಶಿವನಿ ಗ್ರಾಮದಲ್ಲಿ ಬುಧವಾರ ನಡೆದ ಜನಸಂಪರ್ಕ ಸಭೆಯಲ್ಲಿ ಅವರು ಮಾತನಾಡಿ, ‘ಬೀಟ್ ಪೊಲೀಸ್ ಸಿಬ್ಬಂದಿಯ ಮೊಬೈಲ್ ಸಂಖ್ಯೆಯನ್ನು ಆಯಾ ಗ್ರಾಮದ ಎಲ್ಲರೂ ಪಡೆಯಬಹುದಾಗಿದ್ದು, ತಮ್ಮ ಸಮಸ್ಯೆ, ದೂರು ಹಾಗೂ ಗ್ರಾಮದಲ್ಲಿ ನಡೆಯುವ ಕಾನೂನು ಬಾಹಿರ ಚಟುವಟಿಕೆಗಳನ್ನು ಬೀಟ್ ಪೊಲೀಸರಿಗೆ ತಿಳಿಸಿ, ಸಮಸ್ಯೆಯನ್ನು ಪರಿಹರಿಸಿಕೊಳ್ಳಬಹುದು. ಇದರಿಂದ ದೂರುದಾರರು ಪೊಲೀಸ್‌ ಠಾಣೆ ಅಥವಾ ತಾಲ್ಲೂಕು, ಜಿಲ್ಲಾ ಪೊಲೀಸ್ ಕಚೇರಿಗಳಿಗೆ ಅಲೆಯುವುದು ತಪ್ಪುತ್ತದೆ’ ಎಂದರು.

ಪ್ರತೀ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನ್ಯಾಯ-ಅನ್ಯಾಯ ಗುರುತಿಸುವ 50 ಜನರ ‘ಸಿಟಿಜನ್ ಕಮಿಟಿ’ ಅಸ್ಥಿತ್ವಕ್ಕೆ ಬರಲಿದ್ದು, ಸಮಿತಿ ಸ್ಥಾಪನೆಯಲ್ಲಿ ಪೊಲೀಸ್ ಠಾಣಾಧಿಕಾರಿ, ಮಾದರಿ ವ್ಯಕ್ತಿತ್ವ ಹೊಂದಿರುವ ಎಲ್ಲಾ ಜಾತಿ, ಸಮುದಾಯದ ಮುಖಂಡರು ಹಾಗೂ ಮಹಿಳೆಯರಿಗೂ ಅವಕಾಶ ಕಲ್ಪಿಸಲಾಗಿದೆ’ ಎಂದರು.

‘ಮನೆ-ಮನಸ್ಸುಗಳ ನೆಮ್ಮದಿ ನಾಶ, ಜಗಳ-ಅಶಾಂತಿಗೆ ಕಾರಣ ಆಗಬಲ್ಲ ಅಕ್ರಮ ಮದ್ಯ ಮಾರಾಟ ತಡೆಗೆ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದು, ಜನಸಾಮಾನ್ಯರು, ಪರವಾನಗಿ ಇಲ್ಲದೇ ಮನೆ-ಗೂಡಂಗಡಿಗಳಲ್ಲಿ ಮಾರಾಟ ಮಾಡುವವರ ಮಾಹಿತಿ ನೀಡಿದರೆ ಅಕ್ರಮ ಮದ್ಯ ಮಾರಾಟವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದಾಗಿದೆ. ಇದಕ್ಕೆ ಪ್ರತೀ ಗ್ರಾಮಸ್ಥರು ಸಹಕರಿಸಬೇಕು’ ಎಂದರು.

ಸಮುದಾಯ ಭವನ, ದೇವಸ್ಥಾನ, ಶಾಲಾ-ಕಾಲೇಜು ನಿರ್ಮಾಣ, ಆಶ್ರಯ ಮನೆಗಳ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳ ನೇತೃತ್ವದ ಮರಳು ಟಾಸ್ಕ್ ಪೋರ್ಸ್‌ಗೆ ತಹಶೀಲ್ದಾರ್ ಮೂಲಕ ಅರ್ಜಿ ಸಲ್ಲಿಸಿ ಕಾನೂನು ಪ್ರಕಾರ ಪಡೆಯುವಂತೆ ಸೂಚಿಸಿದರು.

ಗಾಂಜಾ ಮಾರಾಟ ಬೆಳೆಗಾರರ ವಿರುದ್ಧ ಕ್ರಮಕ್ಕೆ ಆಗ್ರಹ :

ಇಲ್ಲಿನ ಮದ್ಯದಂಗಡಿಗಳಲ್ಲಿ ಎಂಆರ್‌ಪಿ ಬೆಲೆಗಿಂತ ₹5-10ಕ್ಕೆ ಮಾರಾಟ ಮಾಡಲಾಗುತ್ತಿದ್ದು, ಬಿಲ್ ನೀಡುವಂತೆ ಕೇಳಿದರೂ, ನೀಡುತ್ತಿಲ್ಲ. ಗ್ರಾಹಕರನ್ನು ವಂಚಿಸುತ್ತಿರುವ ಮದ್ಯದಂಗಡಿ ಮಾಲೀಕರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು.

ಬುಕ್ಕಾಂಬುಧಿ ಗ್ರಾಮದ ಸಮೀಪದ ಮಾಕನಹಳ್ಳಿ ಗ್ರಾಮದಲ್ಲಿ ಗಾಂಜಾ ಬೆಳೆಯುತ್ತಿದ್ದು, ಜನರು ಹಣ-ಆರೋಗ್ಯ ಹಾಳುಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತಮ್ಮ ಇಲಾಖೆಗೆ ಮಾಹಿತಿ ನೀಡಿದ್ದರೂ ಪ್ರಯೋಜನ ಆಗಿಲ್ಲ. ಈ ಬಗ್ಗೆ ಗಮನ ಹರಿಸುವಂತೆ ಗ್ರಾಮದ ಕಲ್ಲಂದರ್ ಸಾಬ್ ಮನವಿ ಮಾಡಿದರು.

ಇವುಗಳಲ್ಲದೇ ಶಾಲಾ-ಕಾಲೇಜು ಬಳಿ ಮದ್ಯ ಸೇವಿಸಿ, ಕಿಟಕಿ ಗಾಜು ಹೊಡೆಯುತ್ತಿರುವ ಕಿಡಿಗೇಡಿಗಳಿಗೆ ಬುದ್ಧಿ ಕಲಿಸುವಂತೆ, ಬಸ್ ನಿಲ್ದಾಣ ಬಳಿಯೇ ಐಪಿಎಲ್ ಸೇರಿದಂತೆ ಇತರ  ಜೂಜಾಟ ತಡೆಯುವಂತೆ, ಸಿವಿಲ್ ನ್ಯಾಯಾಲಯದಲ್ಲಿ ಕಟ್ಲೆಯಿದ್ದರೂ, ನನ್ನ ವಿರುದ್ಧ ಹಗೆ ಸಾಧಿಸುತ್ತಿರುವವರಿಂದ ರಕ್ಷಣೆ ನೀಡುವಂತೆ, ಪೊಲೀಸ್ ಠಾಣೆ ಸಿಬ್ಬಂದಿ ಸಾರ್ವಜನಿಕರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ತಪ್ಪಿಸುವಂತೆ ಅನೇಕರು ಮನವಿ ಮಾಡಿದರು.

ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ಗ್ರಾಮಗಳ ಗ್ರಾಮಸ್ಥರು ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಎಸ್‍ಪಿ, ಜಿಲ್ಲಾಧಿಕಾರಿಗಳೊಂದಿಗೆ ಇದೇ ಗ್ರಾಮದಲ್ಲಿ ಮತ್ತೊಮ್ಮೆ ಜನಸಂಪರ್ಕ ಸಭೆ ನಡೆಸಲಾಗುವುದು ಎಂದರು. ಶಿವನಿ ಉಪಠಾಣೆಯ ಸಿಬ್ಬಂದಿ ರಂಗೇಗೌಡರ ಉತ್ತಮ ಸೇವೆಯನ್ನು ಗ್ರಾಮಸ್ಥರು ಮುಕ್ತವಾಗಿ ಹೇಳಿದಾಗ, ಎಸ್‍ಪಿ ಅಣ್ಣಾಮಲೈ ₹5,000 ಬಹುಮಾನ ನೀಡುವುದಾಗಿ ಘೋಷಿಸಿದರು.

ಉಪ ಅಧೀಕ್ಷಕ ತಿರುಮಲೇಶ್, ಜಿಲ್ಲಾ ಪಂಚಾಯಿತಿ ಸದಸ್ಯೆ ಶಶಿಕಲಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಕ್ಕಮ್ಮ, ಡಾ.ಮಹೇಶ್, ಮುಖಂಡ ರಾಜಪ್ಪ, ಪ್ರಾಂಶುಪಾಲ ರಾಜೇಶ್, ಮುಖ್ಯ ಶಿಕ್ಷಕ ದೇವೇಂದ್ರಪ್ಪ ಇದ್ದರು. ಸುಮಾರು 800ಕ್ಕೂ ಅಧಿಕ ಜನರು ಪಾಲ್ಗೊಂಡಿದ್ದರು.

ಪ್ರತಿಕ್ರಿಯಿಸಿ (+)