ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸ್ತೆ ಕುಸಿತ, ದೊಡ್ಡ ಹೊಂಡ ನಿರ್ಮಾಣ

Last Updated 6 ಜುಲೈ 2017, 7:38 IST
ಅಕ್ಷರ ಗಾತ್ರ

ಉಪ್ಪಿನಂಗಡಿ: ಕೋಡಿಂಬಾಡಿ-ಪುತ್ತೂರು ಮಧ್ಯೆ ನಡೆಯುತ್ತಿರುವ ರಸ್ತೆ ವಿಸ್ತಾರ ಕಾಮಗಾರಿ ಕಳಪೆಯಿಂದ ಕೂಡಿದೆ. ಕಾಮಗಾರಿ ಇನ್ನೂ ಅಪೂರ್ಣ ಹಂತದಲ್ಲಿರುವಾಗಲೇ ಪಳ್ಳತ್ತಾರು ಎಂಬಲ್ಲಿ ರಸ್ತೆ ಕುಸಿದಿದ್ದು, ಹೊಂಡ ನಿರ್ಮಾಣ ಆಗಿದೆ. ಇದರಿಂದಾಗಿ ಪುತ್ತೂರು ಕುಡಿಯುವ ನೀರು ಸರಬರಾಜು ವ್ಯವಸ್ಥೆ ಸ್ಥಗಿತಗೊಂಡಿದೆ ಎಂದು ದೂರುಗಳು ಕೇಳಿ ಬರುತ್ತಿವೆ.

ಕೋಡಿಂಬಾಡಿಯಲ್ಲಿ ಡಾಂಬರೀಕರಣ, ರಸ್ತೆ ವಿಸ್ತಾರ ಕಾಮಗಾರಿ ನಡೆಯುತ್ತಿದ್ದು, ಅಪೂರ್ಣ ಸ್ಥಿತಿಯಲ್ಲಿದೆ. ಆದರೆ ರಸ್ತೆ ಕುಸಿಯಲು ಆರಂಭವಾಗಿದೆ. ಈಗಾಗಲೇ ಕೆಲ ದಿನಗಳ ಹಿಂದೆ ಬಾರಿಕೆ ಎಂಬಲ್ಲಿ ರಸ್ತೆ ಕುಸಿದಿದ್ದು, ಇದೀಗ ಪಳ್ಳತ್ತಾರು ಎಂಬಲ್ಲಿ ರಸ್ತೆ ಕುಸಿದಿದ್ದು, ಗುಂಡಿ ಬಿದ್ದು ಅಪಾಯ ಎದುರಾಗಿದೆ. ವಾಹನ ಚಾಲಕರು ಈ ರಸ್ತೆಯಲ್ಲಿ ಸಂಚರಿಸಲು ಆತಂಕ ಎದುರಿಸುವಂತಾಗಿದೆ.

ಈ ಮೊದಲು ಐದೂವರೆ ಮೀಟರ್ ಇದ್ದ ರಸ್ತೆಯನ್ನು ಇದೀಗ ಏಳೂವರೆ ಮೀಟರ್‌ಗೆ ವಿಸ್ತರಿಸಲಾಗಿದೆ. ಕೆಲವು ಕಡೆ ರಸ್ತೆಯ ಬದಿ ಗದ್ದೆ, ತೋಟಗಳಿದ್ದುದರಿಂದ ಇಲ್ಲಿ ಅಗಲಗೊಳಿಸುವ ಸಂದರ್ಭ ಮಣ್ಣು ಹಾಕಿ ರಸ್ತೆಯನ್ನು ಎತ್ತರಿಸಲಾಗಿದೆ.

ಪಳ್ಳತ್ತಾರುವಿನಲ್ಲಿ ರಸ್ತೆಯ ಬದಿ ಗದ್ದೆ ಇದ್ದುದರಿಂದ ಸುಮಾರು 15 ಅಡಿಯಷ್ಟು ಮಣ್ಣು ಹಾಕಿ ಎತ್ತರಿಸಿ, ಅದಕ್ಕೆ ಡಾಂಬರು ಕಾಮಗಾರಿ ನಡೆಸಲಾಗಿತ್ತು. ಆದರೆ ಹಾಕಿದ ಮಣ್ಣನ್ನು ಹೈಡ್ರೋಲಿಕ್ ರೋಲಿಂಗ್ ಬಳಸಿ ಸರಿಯಾಗಿ ಕುಳ್ಳಿರಿಸದಿದ್ದ ಕಾರಣ, ಮಳೆಗಾಲದಲ್ಲಿ ರಸ್ತೆ ಕುಸಿತಕ್ಕೆ ಆರಂಭವಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

ಚರಂಡಿ ನಿರ್ಮಾಣ ಆಗಿಲ್ಲ: ಈ ಕಾಮಗಾರಿಯು ಇನ್ನೂ ಅಪೂರ್ಣ ಹಂತದಲ್ಲಿದ್ದು, ಮಳೆಗಾಲ ಆರಂಭವಾಗಿ ತಿಂಗಳು ಕಳೆದರೂ ಕೋಡಿಂಬಾಡಿ ಪೇಟೆಯಲ್ಲೇ ಇನ್ನೂ ಚರಂಡಿ ಕಾಮಗಾರಿಯಾಗಲೀ, ಫುಟ್‌ಪಾತ್ ನಿರ್ಮಾಣ ಕಾಮಗಾರಿಯೇ ಆಗಿಲ್ಲ. ಚರಂಡಿ ಕಾಮಗಾರಿ ಆಗದಿರುವುದರಿಂದ ಈಗ ಮಾರ್ಗದ ಮೇಲೆಯೇ ನೀರು ಹರಿದು ಹೋಗುವಂತಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ನೀರು ಸರಬರಾಜು  ಸ್ಥಗಿತ
ರಸ್ತೆ ಕುಸಿತದಿಂದಾಗಿ ಪುತ್ತೂರು ನಗರಕ್ಕೆ ನೀರು ಸರಬರಾಜು ಮಾಡುವ ಮುಖ್ಯ ಪೈಪ್‌ಗೆ ಹಾನಿಯಾಗಿದೆ. ಹೀಗಾಗಿ ಮಂಗಳವಾರದಿಂದ ನೀರು ಸರಬರಾಜು ಸ್ಥಗಿತಗೊಂಡಿದೆ. ಬುಧವಾರವೂ ಪೈಪ್‌ಲೈನ್ ದುರಸ್ತಿ ಕಾರ್ಯ ನಡೆದಿದ್ದು, ಆ ತನಕ ಪುತ್ತೂರು ನಗರಸಭಾ ವ್ಯಾಪ್ತಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ ಎಂದು ಪುತ್ತೂರು ನಗರಸಭೆ ನೀರು ಸರಬರಾಜು ವ್ಯವಸ್ಥಾಪಕ ವಸಂತ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT