ಸೋಮವಾರ, ಡಿಸೆಂಬರ್ 16, 2019
25 °C

ಕರಾವಳಿಯಲ್ಲಿ ಬಗೆಹರಿಯದ ಗೊಂದಲ

ವಿ.ಎಸ್. ಸುಬ್ರಹ್ಮಣ್ಯ Updated:

ಅಕ್ಷರ ಗಾತ್ರ : | |

ಕರಾವಳಿಯಲ್ಲಿ ಬಗೆಹರಿಯದ ಗೊಂದಲ

ಮಂಗಳೂರು: ಕರಾವಳಿಯಲ್ಲಿ ಜನಪ್ರಿ ಯವಾಗಿರುವ ಕಂಬಳ ಕ್ರೀಡೆಗೆ ಅವಕಾಶ ಕಲ್ಪಿಸಲು ‘ಪ್ರಾಣಿಹಿಂಸೆ ತಡೆ ಕಾಯ್ದೆ– 1960’ಕ್ಕೆ ತಿದ್ದುಪಡಿ ತರುವ ಸಂಬಂಧ ರಾಜ್ಯ ಸರ್ಕಾರ ಹೊರಡಿಸಿದ್ದ ಸುಗ್ರೀವಾ ಜ್ಞೆಗೆ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅಂಕಿತ ಹಾಕಿರುವುದು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಹರ್ಷೋದ್ಘಾರಕ್ಕೆ ಕಾರಣವಾಗಿತ್ತು. ಆದರೆ, ಇದೀಗ ಕಂಬಳ ನಡೆಸಲು ಇರುವ ಅಡ್ಡಿಗಳನ್ನು ಶಾಶ್ವತ ವಾಗಿ ನಿವಾರಿಸಲು ವಿಧಾನಮಂಡಲ ಅಂಗೀಕರಿಸಿದ್ದ ಮಸೂದೆ ಯಾವಾಗ ಜಾರಿಗೆ ಬರಲಿದೆ ಎಂಬ ಪ್ರಶ್ನೆಗಳು ಕಂಬಳ ಪ್ರಿಯರನ್ನು ಕಾಡತೊಡಗಿವೆ.

ಸುದೀರ್ಘ ಹೋರಾಟದ ಬಳಿಕವೂ ಮಸೂದೆಗೆ ಒಪ್ಪಿಗೆ ದೊರೆಯದೇ ಸುಗ್ರೀವಾಜ್ಞೆಗೆ ಅಂಕಿತ ದೊರೆತಿರುವು ದಕ್ಕೆ ಕಂಬಳ ಸಮಿತಿಯ ಪ್ರಮುಖರು, ಕಂಬಳ ಸಂಘಟಕರು, ಕಂಬಳದ ಪರ ಹೋರಾಟ ನಡೆಸುತ್ತಿರುವವರು ಒಲ್ಲದ ಮನಸ್ಸಿನಿಂದಲೇ ಸಮಾಧಾನಪಟ್ಟು ಕೊಂಡಿದ್ದಾರೆ. ಕಂಬಳ ನಡೆಯದಂತೆ ನ್ಯಾಯಾಲಯದಿಂದ ಆದೇಶ ತಂದಿದ್ದ ಪ್ರಾಣಿ ದಯಾ ಸಂಘಟನೆ (ಪೇಟಾ) ಸುಗ್ರೀವಾಜ್ಞೆ ವಿರುದ್ಧವೂ ಮತ್ತೆ ಕಾನೂನು ಹೋರಾಟ ಆರಂಭಿಸ ಬಹುದು ಎಂಬ ಆತಂಕ ಅವರನ್ನು ಕಾಡುತ್ತಿದೆ. ಸುಗ್ರೀವಾಜ್ಞೆಗೆ ಅಂಕಿತ ದೊರೆತಿರುವುದಕ್ಕೆ ವಿಜಯೋತ್ಸವ ಆಚರಿಸಿದ ಬೆನ್ನಲ್ಲೇ ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ಸಿದ್ಧತೆ ಮಾಡುವ ಕುರಿತು ಅವರು ಯೋಚಿಸುತ್ತಿದ್ದಾರೆ.

ಈ ಕುರಿತು ‘ಪ್ರಜಾವಾಣಿ’ ಜೊತೆ ಮಾತನಾಡಿದ ಹಿರಿಯ ಕಂಬಳ ಸಂಘಟಕ ಗುಣಪಾಲ ಕಡಂಬ, ‘ಕಂಬಳಕ್ಕೆ ಅವಕಾಶ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ರೂಪಿಸಿದ್ದ ಸುಗ್ರೀವಾಜ್ಞೆ ಮತ್ತು ತಿದ್ದುಪಡಿ ಮಸೂದೆ ಎರಡೂ ಕೇಂದ್ರ ಸರ್ಕಾರದ ಮುಂದೆ ಇದ್ದವು. ತಿದ್ದುಪಡಿ ಮಸೂದೆಯಲ್ಲಿ ಇದ್ದ ಲೋಪವನ್ನು ಸರಿಪಡಿಸಿ ಸಚಿವ ಸಂಪುಟದ ಒಪ್ಪಿಗೆ ಪಡೆದು ಕೇಂದ್ರ ಗೃಹ ಇಲಾಖೆಗೆ ಕಳುಹಿಸಲಾಗಿತ್ತು.

ಮಸೂದೆಗೆ ರಾಷ್ಟ್ರಪತಿಯವರ ಅಂಕಿತ ದೊರಕಿಸುವ ಪ್ರಯತ್ನದಲ್ಲಿ ಇರುವುದಾಗಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಭರವಸೆ ನೀಡಿದ್ದರು. ಆದರೆ, ಈಗ ಮಸೂದೆಯ ಬದಲಿಗೆ ಸುಗ್ರೀವಾಜ್ಞೆಗೆ ಅಂಕಿತ ದೊರಕಿದೆ. ಇದರಿಂದ ನಾವು ಅರ್ಧದಷ್ಟು ತೃಪ್ತಿಪಟ್ಟುಕೊಳ್ಳು ವಂತಾಗಿದೆ’ ಎಂದರು.

‘ನನ್ನ ಪ್ರಕಾರ ಈ ಬೆಳವಣಿಗೆಗೆ ಈಗಲೇ ನಾವು ಪ್ರತಿಕ್ರಿಯೆ ನೀಡುವುದು ಸರಿಯಲ್ಲ. ತಿದ್ದುಪಡಿ ಮಸೂದೆಯ ಈಗಿನ ಸ್ಥಿತಿಯನ್ನು ತಿಳಿದುಕೊಂಡು ಅದಕ್ಕೆ ಒಪ್ಪಿಗೆ ಪಡೆಯುವ ಪ್ರಯತ್ನ ಮುಂದುವರಿಸಬೇಕು. ಇನ್ನೊಂದೆಡೆ ಪೇಟಾ ಸಂಘಟನೆ ಸುಗ್ರೀವಾಜ್ಞೆಯ ವಿರುದ್ಧವೂ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವುದಾಗಿ ಹೇಳಿಕೆ ನೀಡಿದೆ. ಇದರಿಂದ ಮತ್ತೆ ಕಂಬಳಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಈ ಬಗೆಯ ತೊಡಕುಗಳನ್ನು ನಿವಾರಿಸಲು ಕಾನೂನು ಹೋರಾಟಕ್ಕೆ ಸಜ್ಜಾಗಬೇಕಿದೆ. ಎಲ್ಲಕ್ಕಿಂತಲೂ ಮುಖ್ಯವಾಗಿ ತಿದ್ದುಪಡಿ ಮಸೂದೆಯ ಜಾರಿಯ ವಿಚಾರದಲ್ಲಿ ಗೊಂದಲದ ಸ್ಥಿತಿ ಇದೆ. ಅದು ಬಗೆಹರಿದರೆ ಎಲ್ಲವೂ ಸುಸೂತ್ರವಾಗಿ ನಡೆಯುತ್ತದೆ’ ಎಂದು ಹೇಳಿದರು.

‘ತಿದ್ದುಪಡಿ ಮಸೂದೆಯೇ ಒಪ್ಪಿಗೆ ಪಡೆಯುತ್ತದೆ ಎಂಬುದು ನಮ್ಮ ನಿರೀಕ್ಷೆಯಾಗಿತ್ತು. ಆದರೆ, ಆರು ತಿಂಗಳ ಕಾಲಾವಧಿ ಹೊಂದಿರುವ ಸುಗ್ರೀವಾಜ್ಞೆಗೆ ಒಪ್ಪಿಗೆ ದೊರೆತಿದೆ. ಇದು ನಮಗೆ ಸರಿಯಾಗಿ ಅರ್ಥವೇ ಆಗುತ್ತಿಲ್ಲ’ ಎಂದು ಮತ್ತೊಬ್ಬ ಕಂಬಳ ಸಂಘಟಕ ಭಾಸ್ಕರ ಕೋಟ್ಯಾನ್‌ ಪ್ರತಿಕ್ರಿಯಿಸಿದರು.

ದಕ್ಷಿಣ ಕನ್ನಡ ಕಂಬಳ ಸಮಿತಿ ಅಧ್ಯಕ್ಷ ಬಾರ್ಕೂರು ಶಾಂತಾರಾಮ ಶೆಟ್ಟಿ ಅವರನ್ನು ಈ ಕುರಿತು ಮಾತನಾಡಿಸಿದಾಗ, ‘ತಿದ್ದುಪಡಿ ಮಸೂದೆಯಲ್ಲಿ ಕೆಲವು ಲೋಪಗಳನ್ನು ಕೇಂದ್ರ ಕಾನೂನು ಸಚಿವಾಲಯ ಗುರುತಿಸಿತ್ತು. ಈ ಬಗ್ಗೆ ತಿದ್ದುಪಡಿಗೆ ಸೂಚಿಸಿತ್ತು. ಸಚಿವ ಸಂಪುಟ ಸಭೆಯಲ್ಲಿ ತಿದ್ದುಪಡಿ ನಿರ್ಣಯವನ್ನು ಅಂಗೀಕರಿಸಿ, ಕೇಂದ್ರಕ್ಕೆ ರವಾನಿಸಲಾಗಿತ್ತು. ಆದರೆ, ಪುನಃ ವಿಧಾನಮಂಡಲದಲ್ಲೇ ತಿದ್ದುಪಡಿ ಅಗತ್ಯವೆಂದು ಕೇಂದ್ರ ಕಾನೂನು ಸಚಿವಾಲಯ ಹೇಳಿದೆ. ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲದ ಕಾರಣ ಗೊಂದಲ ಉಂಟಾಗಿದೆ. ಸುಗ್ರೀವಾಜ್ಞೆಯ ಜಾರಿಗೆ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದರು.

‘ಸುಗ್ರೀವಾಜ್ಞೆಯನ್ನು ಯಾವಾಗ ಹೊರಡಿಸಬೇಕು ಎಂಬುದು ರಾಜ್ಯ ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ. ಆಗಸ್ಟ್‌ ವೇಳೆಗೆ ಸುಗ್ರೀವಾಜ್ಞೆ ಜಾರಿಗೆ ಬಂದರೆ ಫೆಬ್ರುವರಿ ಅಂತ್ಯದವರೆಗೂ ಕಾಲಾವಕಾಶ ಇರುತ್ತದೆ. ವಿಧಾನ ಮಂಡಲದ ಚಳಿಗಾಲದ ಅಧಿವೇಶ ನದಲ್ಲಿ ತಿದ್ದುಪಡಿ ಮಸೂದೆಯನ್ನು ಅಂಗೀಕರಿಸಬಹುದು. ಕಾಯ್ದೆಗೆ ತಿದ್ದು ಪಡಿಗೆ ಪೂರಕವಾಗಿ ರಚಿಸುವ ನಿಯಮ ಗಳು ಕಂಬಳದ ಸ್ವರೂಪವನ್ನು ನಿರ್ಧರಿ ಸುತ್ತವೆ. ಈ ವಿಚಾರದಲ್ಲಿ ಗೊಂದಲ ಆಗದಂತೆ ಎಚ್ಚರ ವಹಿಸುವುದು ಅಗತ್ಯ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)