ಶನಿವಾರ, ಡಿಸೆಂಬರ್ 7, 2019
25 °C

ಲಾಲೂ ಬಿಹಾರದ ವಾದ್ರಾ ಎಂದ ಬಿಜೆಪಿ ನಾಯಕ ಸುಶೀಲ್ ಮೋದಿ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಲಾಲೂ ಬಿಹಾರದ ವಾದ್ರಾ ಎಂದ ಬಿಜೆಪಿ ನಾಯಕ ಸುಶೀಲ್ ಮೋದಿ

ನವದೆಹಲಿ: ಆರ್‌ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರು ಬಿಹಾರದ ರಾಬರ್ಟ್ ವಾದ್ರಾ ಎಂದು ಬಿಹಾರದ ಬಿಜೆಪಿ ನಾಯಕ ಸುಶೀಲ್ ಮೋದಿ ಟೀಕಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಾಲೂ ಅವರ ಕುಟುಂಬದ ಆಸ್ತಿ ವಿವರಗಳನ್ನು ಕಳೆದ 90 ದಿನಗಳಿಂದ ಬಿಡುಗಡೆ ಮಾಡುತ್ತಿದ್ದೇನೆ. ಕಳೆದ 12 ವರ್ಷಗಳಲ್ಲಿ ಅವರು 125 ಕಡೆ ಅಕ್ರಮವಾಗಿ ಭೂಸ್ವಾಧೀನ ಮಾಡಿಕೊಂಡಿದ್ದು, ಬಿಹಾರದ ರಾಬರ್ಟ್‌ ವಾದ್ರಾ ಆಗಿಹೋಗಿದ್ದಾರೆ’ ಎಂದು ಹೇಳಿದ್ದಾರೆ.

2004 – 2009ರ ಅವಧಿಯಲ್ಲಿ ರೈಲ್ವೆ ಸಚಿವರಾಗಿದ್ದಾಗ, 2000 – 2005ರಲ್ಲಿ ಪತ್ನಿ ರಾಬ್ರಿ ದೇವಿ ಬಿಹಾರದ ಮುಖ್ಯಮಂತ್ರಿಯಾಗಿದ್ದಾಗ ಲಾಲೂ ಅವರು 125 ಕಡೆ ಅಕ್ರಮವಾಗಿ ಭೂಸ್ವಾಧೀನ ಮಾಡಿದ್ದಾರೆ ಎಂದು ಸುಶೀಲ್ ಆರೋಪಿಸಿದ್ದಾರೆ.

ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಬಿಹಾರದ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್ ಮತ್ತು ಅವರ ಸಹೋದರ, ಆರೋಗ್ಯ ಸಚಿವ ತೇಜ್ ಪ್ರತಾಪ್ ಯಾದವ್ ವಿರುದ್ಧ ಕ್ರಮ ಕೈಗೊಳ್ಳಬೇಕು. ತೇಜಸ್ವಿ ಅವರಿಗೆ ಸಂಬಂಧಿಸಿದ ಮೂರು ಕಡೆ ಇರುವ ಆಸ್ತಿಯನ್ನು ತನಿಖಾ ಸಂಸ್ಥೆಗಳು ಮುಟ್ಟುಗೋಲು ಹಾಕಿಕೊಂಡಿವೆ. ಹೀಗಾಗಿ ಅವರನ್ನು ಹುದ್ದೆಯಿಂದ ಕೈಬಿಡಬೇಕು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಸುಶೀಲ್ ಆಗ್ರಹಿಸಿದ್ದಾರೆ. ಕಾಂಗ್ರೆಸ್‌ ಅಧ್ಯಕ್ಷ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್‌ ವಾದ್ರಾ ಹರಿಯಾಣದಲ್ಲಿ ಅಕ್ರಮವಾಗಿ ಭೂಸ್ವಾಧೀನ ಮಾಡಿಕೊಂಡ ಆರೋಪ ಎದುರಿಸುತ್ತಿದ್ದಾರೆ.

ಲಾಲೂ ಅವರ ಮಕ್ಕಳ ರಾಜಕೀಯ ಭವಿಷ್ಯವನ್ನು ಕಾಪಾಡುವಂತೆ ಮನವಿ ಮಾಡಲು ಆರ್‌ಜೆಡಿಯ ಹಿರಿಯ ನಾಯಕರಿಬ್ಬರು ಕೇಂದ್ರದ ಇಬ್ಬರು ಸಚಿವರನ್ನು ಭೇಟಿಯಾಗಿದ್ದಾರೆ ಎಂದೂ ಸುಶೀಲ್ ಹೇಳಿದ್ದಾರೆ. ಆದರೆ, ಆರ್‌ಜೆಡಿ ನಾಯಕರ ಮತ್ತು ಸಚಿವರ ಹೆಸರನ್ನು ಅವರು ಬಹಿರಂಗಪಡಿಸಿಲ್ಲ.

ಪ್ರತಿಕ್ರಿಯಿಸಿ (+)