ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್‌ ಅಭ್ಯರ್ಥಿ ರೇಣುಕಾ ಜಯಭೇರಿ

Last Updated 6 ಜುಲೈ 2017, 9:08 IST
ಅಕ್ಷರ ಗಾತ್ರ

ಮದ್ದೂರು: ತೀವ್ರ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದ್ದ ತಾಲ್ಲೂಕಿನ ಕೊಪ್ಪ ಜಿಲ್ಲಾ ಪಂಚಾಯಿತಿ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ರೇಣುಕಾ ರಾಮಕೃಷ್ಣ ಜಯಭೇರಿ ಬಾರಿಸಿದರು. ಪಟ್ಟಣದ ಎಚ್‌.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಬುಧವಾರ ನಡೆದ ಮತದಾನ ಪ್ರಕ್ರಿಯೆಯಲ್ಲಿ ಚಲಾಯಿಸಿದ 21,876 ಮತಗಳಲ್ಲಿ ರೇಣುಕಾ ಅವರು 12,023  ಮತ ಪಡೆದರೆ, ಕಾಂಗ್ರೆಸ್‌ ಅಭ್ಯರ್ಥಿ ಕಲಾವತಿ ಪ್ರಕಾಶ್‌ 9,339 ಮತ ಪಡೆದು ಪರಾಭವಗೊಂಡರು.

ಬಿಜೆಪಿ ಅಭ್ಯರ್ಥಿ ಪುಟ್ಟಮ್ಮ 302 ಮತ ಪಡೆದು ಠೇವಣಿ ಕಳೆದುಕೊಂಡಿದ್ದಾರೆ. ಪಕ್ಷೇತರ ಅಭ್ಯರ್ಥಿ ಶ್ರೀಮತಿ ನಾಗರಾಜು 125 ಮತ ಪಡೆದಿದ್ದು, ಒಟ್ಟು 87 ಮತ ನೋಟಾ ವಿಭಾಗಕ್ಕೆ ಚಲಾವಣೆಯಾಗಿವೆ.

ವಿಜಯೋತ್ಸವ: ಫಲಿತಾಂಶ ಪ್ರಕಟಗೊಳ್ಳುತ್ತಿದ್ದಂತೆ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಜೆಡಿಎಸ್‌ ಕಾರ್ಯಕರ್ತರು ವಿಜಯೋತ್ಸವ ಆಚರಿಸಿದರು. ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ವಿಜಯೋತ್ಸವದಲ್ಲಿ ಪಾಲ್ಗೊಂಡ ಶಾಸಕ ಡಿ.ಸಿ.ತಮ್ಮಣ್ಣ, ‘ಕೊಪ್ಪ ಜಿ.ಪಂ ಉಪಚುನಾವಣೆ ಗೆಲುವು ಎಲ್ಲ ಶಾಸಕರ, ಮುಖಂಡರ ಒಗ್ಗಟ್ಟಿನ ಫಲ. ಈ ಮೂಲಕ  ಪಕ್ಷ ವಿರೋಧಿಗಳಿಗೆ ಸ್ಪಷ್ಟ ಉತ್ತರ ನೀಡಿದ್ದೇವೆ. ಈ ಚುನಾವಣೆ 2018ರ ವಿಧಾನಸಭಾ ಚುನಾವಣೆಗೆ ವಿಜಯದ ಸೂಚನೆ ನೀಡಿದೆ’ ಎಂದರು.

ವಿಧಾನ ಪರಿಷತ್‌ ಸದಸ್ಯ ಅಪ್ಪಾಜಿಗೌಡ ಮಾತನಾಡಿ, ‘ನಾನು ಎಂಬ ಅಹಂಕಾರದಲ್ಲಿ ಮೆರೆಯುತ್ತಿದ್ದ ವರಿಗೆ ಈ ಚುನಾವಣೆ ತಕ್ಕ ಉತ್ತರ ನೀಡಿದೆ. ಈ ಗೆಲುವು ಜೆಡಿಎಸ್ ವರಿಷ್ಠರಿಗೆ ಹಾಗೂ ನಮಗೆ ಹೊಸ ಶಕ್ತಿ ತಂದಿದ್ದು, ಕೊಪ್ಪ ಹೋಬಳಿ ಮತದಾರರರನ್ನು ನಾವು ಎಂದಿಗೂ ಮರೆಯುವುದಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಮರಿಹೆಗಡೆ, ತಾಲ್ಲೂಕು ಪಂಚಾಯಿತಿ ಸದಸ್ಯ ಮೋಹನ್, ಆಬಲವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ, ಮುಖಂಡರಾದ ತಮ್ಮಣ್ಣನಾಯಕ್,  ರಾಮಚಂದ್ರ, ಚಿಕ್ಕೋನಹಳ್ಳಿ ತಮ್ಮಯ್ಯ, ಹೊಸಗಾವಿ ಪುಟ್ಟಸ್ವಾಮಿ, ಮಾದನಾಯಕನಹಳ್ಳಿ ರಾಜಣ್ಣ ಇದ್ದರು.

ಚುನಾವಣೆಗೆ ಸಿಆರ್‌ಎಸ್‌ರಿಂದ ಹಫ್ತಾ ವಸೂಲಿ’
ಮದ್ದೂರು:‘ಕೊಪ್ಪ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಶಾಸಕ ಚಲುವರಾಯಸ್ವಾಮಿ ತಾಲ್ಲೂಕಿನ ಅಧಿಕಾರಿಗಳಿಂದ, ಗುತ್ತಿಗೆದಾರರಿಂದ ಹಫ್ತಾ ವಸೂಲಿ ಮಾಡಿದ್ದರು. ಆದರೆ, ಅವರ ದುರಂಹಕಾರಕ್ಕೆ ಕೊಪ್ಪ ಮತದಾರರು ತಕ್ಕ ಪಾಠ ಕಲಿಸಿದ್ದಾರೆ’ ಎಂದು ಮಾಜಿ ಶಾಸಕ ಕೆ.ಸುರೇಶ ಗೌಡ ಆರೋಪಿಸಿದರು. ಪಟ್ಟಣದಲ್ಲಿ ತಮ್ಮ ಬೆಂಬಲಿಗರೊಂದಿಗೆ ವಿಜಯೋತ್ಸವ ಆಚರಿಸಿ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

‘ನಾಗಮಂಗಲ ಹಾಗೂ ಮದ್ದೂರು ತಾಲ್ಲೂಕಿನ ಅಧಿಕಾರಿಗಳನ್ನು ಹೆದರಿಸಿ ಈ ಚುನಾವಣೆಗೆ ಹಣ ವಸೂಲಿ ಮಾಡಿದ್ದರು. ಒಬ್ಬ ಎಂಜಿನಿಯರ್ ಅನ್ನು ವರ್ಗಾವಣೆ ಮಾಡುವುದಿಲ್ಲ ಎಂದು ಹೇಳಿ ಅವರ ಬಳಿ ₹ 3 ಲಕ್ಷ ಪಡೆದಿದ್ದರು. ಹೀಗೆ ಅಧಿಕಾರಿಗಳು, ಗುತ್ತಿಗೆದಾರರಿಂದ ಹಣ ಪಡೆದು ಈ ಚುನಾವಣೆಯಲ್ಲಿ ಕೋಟಿಗಟ್ಟಲೆ ಹಣ ಚೆಲ್ಲಿದ್ದಾರೆ’ ಎಂದು ಆರೋಪಿಸಿದರು.

‘ಈ ಚುನಾವಣೆಯು ಮುಂದಿನ 2018ರ ಚುನಾವಣೆಗೆ ದಿಕ್ಸೂಚಿಯಾಗಲಿದ್ದು, ಜನರು ಅಲ್ಲಿಯೂ ಅಹಂಕಾರಿ ಚಲುವರಾಯಸ್ವಾಮಿ ಅವರನ್ನು ಸೋಲಿಸಿ ಮನೆಗೆ ಕಳುವಹಿಸುವುದು ನಿಶ್ಚಿತವಾಗಿದೆ’ ಎಂದರು. ಮುಖಂಡರಾದ ಆಬಲವಾಡಿ ಸುರೇಶ್‌, ಹೊಸಗಾವಿ ಪುಟ್ಟಸ್ವಾಮಿ  ಗೋಷ್ಠಿಯಲ್ಲಿದ್ದರು.

28ನೇ ವಾರ್ಡ್‌: ಜೆಡಿಎಸ್‌   ತೆಕ್ಕೆಗೆ
ಮಂಡ್ಯ: ನಗರಸಭೆಯ 28ನೇ ವಾರ್ಡಿನ ಉಪ ಚುನಾವಣೆಯಲ್ಲಿ  ಜೆಡಿಎಸ್‌ ಅಭ್ಯರ್ಥಿ ಡಿ.ಎಸ್. ರಾಜು ಜಯಗಳಿಸಿದರು. ಬುಧವಾರ ತಾಲ್ಲೂಕು ಕಚೇರಿ ಆವರಣದಲ್ಲಿ ಮತ ಎಣಿಕೆ ಕಾರ್ಯ ನಡೆಯಿತು. ನಗರಸಭೆ ಮಾಜಿ ಅಧ್ಯಕ್ಷ ಬಿ. ಸಿದ್ದರಾಜು ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಜುಲೈ 2 ರಂದು ಚುನಾವಣೆ ನಡೆದಿತ್ತು.

ಜೆಡಿಎಸ್‌ ಅಭ್ಯರ್ಥಿ ಡಿ.ಎಸ್. ರಾಜು 1,153 ಮತ ಪಡೆದು ಜಯಗಳಿಸಿದರು. ಸಮೀಪದ ಕಾಂಗ್ರೆಸ್‌ ಪ್ರತಿಸ್ಪರ್ಧಿ ದೇವಯ್ಯ ಉ. ಪಾಪಣ್ಣ ಅವರು 946 ಹಾಗೂ ಬಿಜೆಪಿಯ ಸಿ. ತಾಯಮ್ಮ 79 ಮತ ಪಡೆದು ಸೋಲು ಅನುಭವಿಸಿದರು. ಫಲಿತಾಂಶ ಪ್ರಕಟವಾಗುತ್ತಿದ್ದಂತೆ ಜೆಡಿಎಸ್‌ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು.

ಚಟ್ಟಂಗೆರೆ ಗ್ರಾ.ಪಂ; ಯಶೋಧರ ಆಯ್ಕೆ
ಕೆ.ಆರ್.ಪೇಟೆ ತಾಲ್ಲೂಕಿನ ಶೀಳನೆರೆ ಹೋಬಳಿ ತೆಂಡೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಟ್ಟಂಗೆರೆ ಗ್ರಾಮದ ಸದಸ್ಯತ್ವ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಯಶೋಧರ ಜಯ ಗಳಿಸಿದ್ದಾರೆ. ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ಬುಧವಾರ ತಹಶೀಲ್ದಾರ್ ಕೆ.ರತ್ನಾ ಅವರ ನೇತೃತ್ವದಲ್ಲಿ ಮತಗಳ ಏಣಿಕೆ ನಡೆಯಿತು.

ವಿಜೇತ ಅಭ್ಯರ್ಥಿ ಯಶೋಧರ 424 ಮತಗಳನ್ನು ಪಡೆಯುವ ಮೂಲಕ ಸಮೀಪದ  ಸ್ಪರ್ಧಿ ಮಂಜೇಗೌಡ (349) ಅವರನ್ನು  75 ಮತಗಳ ಅಂತರದಿಂದ ಸೋಲಿಸಿದರು.
ಕಣದಲ್ಲಿದ್ದ ಸಿ.ವೆಂಕಟೇಶ್ 112 ಮತ, ಅಣ್ಣಯ್ಯ 4 ಮತಗಳನ್ನು ಪಡೆದರೆ, 22 ಮತಗಳು ತಿರಸ್ಕೃತಗೊಂಡವು ಎಂದು ಚುನಾವಣಾಧಿಕಾರಿ ಲೇಪಾಕ್ಷಿಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT