ಶುಕ್ರವಾರ, ಡಿಸೆಂಬರ್ 13, 2019
17 °C

ಗ್ರಾಮ ಸ್ವರಾಜ್ಯದ ಕನಸು ಅನುಷ್ಠಾನಗೊಳ್ಳಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರಾಮ ಸ್ವರಾಜ್ಯದ ಕನಸು ಅನುಷ್ಠಾನಗೊಳ್ಳಲಿ

ಕೋಲಾರ: ‘ಮಹಾತ್ಮ ಗಾಂಧೀಜಿಯ ಗ್ರಾಮ ಸ್ವರಾಜ್ಯದ ಕನಸು ಸಂಪೂರ್ಣ ಅನುಷ್ಠಾನಕ್ಕೆ ಬರಬೇಕು’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿ ಸದಸ್ಯ ಎಸ್.ಜಿ. ನಂಜಯ್ಯಮಠ ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಹಾಗೂ ಸ್ವಚ್ಛ ಭಾರತ್‌ ಮಿಷನ್ ಸಹಯೋಗದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಆಯೋಜಿಸಿದ್ದ ಶೌಚಾಲಯಕ್ಕಾಗಿ ಸಮರ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ‘ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡಬೇಕೆಂಬ ಉದ್ದೇಶದಿಂದ ರಾಜ್ಯ ಸರ್ಕಾರ ಗ್ರಾಮೀಣಾಭಿದ್ಧಿ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತಿದೆ’ ಎಂದರು.

‘ಸರ್ಕಾರ ಕೃಷಿ, ತೋಟಗಾರಿಕೆ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಂಡಿದೆ. ಕುರಿದೊಡ್ಡಿ, ದನದ ಕೊಟ್ಟಿಗೆ, ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ನೀಡುವುದು, ಕೃಷಿ ಹೊಂಡ ನಿರ್ಮಾಣ ಸೌಲಭ್ಯವನ್ನು ರೈತಾಪಿ ವರ್ಗಕ್ಕೆ ನೀಡಿದೆ. ಗ್ರಾಮೀಣ ಭಾಗದ ಜನ ಈ ಸವಲತ್ತುಗಳ ಸದುಪಯೋಗ ಪಡೆದು ಅಭಿವೃದ್ಧಿ ಪಥದತ್ತ ಸಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಗ್ರಾಮೀಣಾಭಿವೃದ್ಧಿ ಇಲಾಖೆಯು ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಹೆಚ್ಚಿನ ಅಧಿಕಾರ ನೀಡಿದ್ದು, ಅವರು 5 ವರ್ಷಗಳ ಕಾಲ ನಿರ್ಭಯವಾಗಿ ಆಡಳಿತ ನಡೆಸಬಹುದು. ಅಧಿಕಾರ ವಿಕೇಂದ್ರೀಕರಣ, ಪಂಚಾಯಿತಿಗಳಿಗೆ ಹೆಚ್ಚಿನ ಅಧಿಕಾರ ನೀಡುವ ಮೂಲಕ ನಗರ ಮತ್ತು ಪಟ್ಟಣದ ಕಚೇರಿಗಳಿಗೆ ಜನರ ಅಲೆದಾಟ ತಪ್ಪಿಸಲಾಗಿದೆ. ಹಲವು ಯೋಜನೆಗಳಲ್ಲಿ ಸಾಕಷ್ಟು ಮಾರ್ಪಾಡು ಮಾಡಲಾಗಿದೆ’ ಎಂದು ತಿಳಿಸಿದರು.

ಹಣಕಾಸಿನ ಕೊರತೆಯಿಲ್ಲ: ಶೌಚಾಲಯಗಳ ನಿರ್ಮಾಣಕ್ಕೆ ಸರ್ಕಾರದಲ್ಲಿ ಹಣಕಾಸಿನ ಕೊರತೆಯಿಲ್ಲ. ಪ್ರತಿ ಶೌಚಾಲಯ ನಿರ್ಮಾಣಕ್ಕೆ ₹ 12 ಸಾವಿರದಿಂದ ₹ 15 ಸಾವಿರದವರೆಗೆ  ಪ್ರೋತ್ಸಾಹಧನ ನೀಡುತ್ತಿದೆ. ಈ ಯೋಜನೆಯ ಸದುಪಯೋಗ ಪಡೆಯುವಂತೆ ಸ್ವಸಹಾಯ ಸಂಘಗಳ ಸದಸ್ಯರು ಜನರಲ್ಲಿ ಜಾಗೃತಿ ಮೂಡಿಸಬೇಕು’ ಎಂದು ತಿಳಿಸಿದರು.

‘ಶೌಚಾಲಯ ನಿರ್ಮಿಸಲು ಜನ ಹಿಂಜರಿಯುತ್ತಾರೆ. ಶ್ರೀಮಂತರ ಮನೆಗಳಲ್ಲೇ ಶೌಚಾಲಯಗಳಿಲ್ಲ. ಮೂಢನಂಬಿಕೆ ಇದಕ್ಕೆ ಮುಖ್ಯ ಕಾರಣ. ಆರೋಗ್ಯದ ನೆಲೆಗಟ್ಟಿನಿಂದ ಮೂಢ ನಂಬಿಕೆ ಹೋಗಲಾಡಿಸಿ ನಾಗರಿಕ ಮತ್ತು ಸುಸಂಸ್ಕೃತ ನಾಡು ನಿರ್ಮಿಸುವುದು ಪ್ರತಿಯೊಬ್ಬರ ಜವಾಬ್ದಾರಿ’ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸ್ವ-ಸಹಾಯ ಸಂಘಗಳ ಸದಸ್ಯರಿಗೆ ಶೌಚಾಲಯ ನಿರ್ಮಾಣ, ಬಳಕೆ ಮತ್ತು ಮಹತ್ವ ಕುರಿತು ಸಂಪನ್ಮೂಲ ವ್ಯಕ್ತಿಗಳು ಅರಿವು ಮೂಡಿಸಿದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ. ಕಾವೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಭಾಸ್ಕರ್ ಭಾಗವಹಿಸಿದ್ದರು.

55 ಲಕ್ಷ ಶೌಚಾಲಯ ನಿರ್ಮಾಣ ಗುರಿ

‘ರಾಜ್ಯದಲ್ಲಿ 4 ವರ್ಷಗಳ ಹಿಂದೆ ಶೌಚಾಲಯಗಳ ನಿರ್ಮಾಣ ಪ್ರಮಾಣ ಶೇ 30ರಷ್ಟಿತ್ತು. ಈಗ ಶೌಚಾಲಯಗಳ ನಿರ್ಮಾಣದಲ್ಲಿ ಶೇ 70ರಷ್ಟು ಪ್ರಗತಿ ಸಾಧಿಸಲಾಗಿದೆ. ಶೇ 100ರಷ್ಟು ಗುರಿ ಸಾಧಿಸುವ ಮೂಲಕ ಕರ್ನಾಟಕವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯವಾಗಿ ಮಾಡಬೇಕು’ ಎಂದು ಸಲಹೆ ನೀಡಿದರು.

‘55 ಲಕ್ಷ ಶೌಚಾಲಯಗಳ ನಿರ್ಮಾಣ ಗುರಿಯಲ್ಲಿ 27 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕೋಲಾರ ಜಿಲ್ಲೆಯಲ್ಲಿ 78 ಸಾವಿರ ಶೌಚಾಲಯಗಳ ಕೊರತೆ ಇದ್ದು, ಆ.2ರೊಳಗೆ ಸಂಪೂರ್ಣವಾಗಿ ಶೌಚಾಲಯಗಳನ್ನು ನಿರ್ಮಿಸಿ ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಮಾಡುವ ಗುರಿ ಇದೆ. ಇದಕ್ಕೆ ಅಧಿಕಾರಿಗಳು ಹಾಗೂ ಸಾರ್ವಜನಿಕರ ಸಹಕಾರ ಅತ್ಯಗತ್ಯ’ ಎಂದು ವಿವರಿಸಿದರು.

‘ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ನೀಡುವ ಆರ್ಥಿಕ ಸೌಲಭ್ಯವನ್ನು ಸದ್ಬಳಕೆ ಮಾಡಿಕೊಂಡು ಜಿಲ್ಲೆಯನ್ನು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯಾಗಿ ಪರಿವರ್ತಿಸಿ ಮಾದರಿಯಾಗಿ ಮಾಡಲು ಅಂಗನವಾಡಿ ಮತ್ತು ಸ್ವಸಹಾಯ ಸಂಘಗಳ ಸದಸ್ಯರು ಅಧಿಕಾರಿಗಳ ಜತೆ ಕೈಜೋಡಿಸಬೇಕು’ ಎಂದು ಮನವಿ ಮಾಡಿದರು.

ಶೌಚಾಲಯ ನಿರ್ಮಾಣ ರಾಜ್ಯದ ಸ್ಥಿತಿಗತಿ

55 ಪ್ರಸಕ್ತ ಸಾಲಿನಲ್ಲಿ ನಿರ್ಮಾಣದ ಗುರಿ

27 ಇದುವರೆಗಿನ ನಿರ್ಮಾಣ ಪ್ರಗತಿ

78 ನಿರ್ಮಾಣಕ್ಕೆ ಬಾಕಿ ಇರುವುದು

 

* * 

ಪ್ರಸಕ್ತ ಸಾಲಿನಲ್ಲಿ ಇನ್ನು 10 ಜಿಲ್ಲೆಗಳು ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಗಳೆಂದು ಘೋಷಣೆಯಾಗಲಿವೆ.  ಈ ಪೈಕಿ ಕೋಲಾರವೂ ಸೇರಿದೆ

ಎಸ್.ಜಿ. ನಂಜಯ್ಯಮಠ

ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾಮಗಾರಿಗಳ ಭೌತಿಕ ಪರಿಶೀಲನಾ ಸಮಿತಿ ಸದಸ್ಯ

ಪ್ರತಿಕ್ರಿಯಿಸಿ (+)